ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರೂ ರಾಜ್ಯದ ಅಭಿವೃದ್ದಿಯಲ್ಲಿ ಹಿಂದೆ ಬಿದ್ದಿದೆ, ಭ್ರಷ್ಟಾಚಾರ ದಿಂದ ತುಂಬಿ ತುಳುಕುತ್ತಿದೆ, ಜನರ ನಿರೀಕ್ಷೆಗಳು ಹುಸಿಯಾಗಿವೆ, ಚುನಾವಣೆ ಸಂದರ್ಭದಲ್ಲಿ ಬಿಡುಗಡೆಗೊಳಿಸಿದ ಪ್ರಣಾಳಿಕೆಯಲ್ಲಿ ಹೇಳಲಾದ ಭರವಸೆಗಳು ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿವೆ: ಸಿದ್ದು
ಮುಧೋಳ(ಮಾ.01): ನುಡಿದಂತೆ ನಡೆದ ಕಾಂಗ್ರೆಸ್ ಪಕ್ಷದ ಮೇಲೆ ತಾವೆಲ್ಲರೂ ವಿಶ್ವಾಸವಿಟ್ಟು ಗೆಲ್ಲಿಸಿ ಮತ್ತೆ ಅಧಿಕಾರಕ್ಕೆ ತಂದರೆ ಗೃಹ ಜ್ಯೋತಿ ಯೋಜನೆಯಡಿ ಪ್ರತಿ ಮನೆಗೂ ಪ್ರತಿ ತಿಂಗಳು 200 ಯುನಿಟ್ ಉಚಿತ ವಿದ್ಯುತ್ ನೀಡಲಾಗುವುದು, ಗೃಹಲಕ್ಷ್ಮೀ ಯೋಜನೆಯಡಿ ಕುಟುಂಬದ ಮಹಿಳೆಗೆ ಪ್ರತಿ ತಿಂಗಳು ರು.2 ಸಾವಿರ ನೀಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದರು.
ಸೋಮವಾರ ಸಂಜೆ ಸ್ಥಳೀಯ ವೀರಶೈವ ಕಲ್ಯಾಣ ಮಂಟಪದ ಹೊರಾಂಗಣದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ನ್ನು ಬಿಡುಗಡೆಗೊಳಿಸಿ ಮಾತನಾಡಿ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರೂ ರಾಜ್ಯದ ಅಭಿವೃದ್ದಿಯಲ್ಲಿ ಹಿಂದೆ ಬಿದ್ದಿದೆ, ಭ್ರಷ್ಟಾಚಾರ ದಿಂದ ತುಂಬಿ ತುಳುಕುತ್ತಿದೆ, ಜನರ ನಿರೀಕ್ಷೆಗಳು ಹುಸಿಯಾಗಿವೆ, ಚುನಾವಣೆ ಸಂದರ್ಭದಲ್ಲಿ ಬಿಡುಗಡೆಗೊಳಿಸಿದ ಪ್ರಣಾಳಿಕೆಯಲ್ಲಿ ಹೇಳಲಾದ ಭರವಸೆಗಳು ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿವೆ ಇದರಿಂದ ರಾಜ್ಯದ ಜನರು ಬೇಸತ್ತು ಹೋಗಿದ್ದಾರೆ ಹೀಗಾಗಿ ಮತದಾರರು ಬದಲಾವಣೆಯನ್ನು ಬಯಸಿದ್ದಾರೆಂದು ಹೇಳಿದರು.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಕೆಡವಿದ್ದು ಬಿಎಸ್‌ವೈ: ಅನ್ನ ಹಳಸಿತ್ತು; ನಾಯಿ ಕಾದಿತ್ತು ಎಂದ ಸಿದ್ದರಾಮಯ್ಯ
ಮುಧೋಳ ವಿಧಾನಸಭಾ ಮತಕ್ಷೇತ್ರದಲ್ಲಿ ಸ್ಪರ್ಧಿಸಲು ಪಕ್ಷವು ಯಾರಿಗಾದರೂ ಟಿಕೇಟ್ ನೀಡಲಿ ಅವರನ್ನು ಗೆಲ್ಲಿಸಿ ಅಧಿಕಾರಕ್ಕೆ ತರುವ ಕೆಲಸ ತಮ್ಮದಾಗಬೇಕು, ಟಿಕೇಟ್ ಆಕಾಂಕ್ಷಿಗಳು ಎಲ್ಲ ರಿತೀಯ ಭಿನ್ನಾಭಿಪ್ರಾಯವನ್ನು ಬಿಟ್ಟು ಒಗ್ಗಟ್ಟಾಗಿ ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಪ್ರಮಾಣ ಮಾಡಿದ್ದಾರೆ ಅದರಂತೆ ತಾವೂ ಕೂಡಾ ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಶ್ರಮಿಸಬೇಕೆಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.
ಮಾಜಿ ಸಚಿವರಾದ ಎಮ್.ಬಿ.ಪಾಟೀಲ, ಎಸ್.ಆರ್.ಪಾಟೀಲ, ಅಜಯಕುಮಾರ ಸರನಾಯಕ, ಸತೀಶ ಜಾರಕಿಹೊಳಿ, ಜಮೀರ ಅಹ್ಮದಖಾನ್ ಮಾತನಾಡಿ ಈ ಚುನಾವಣೆಯಲ್ಲಿ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ, ಸಿದ್ದರಾಮಯ್ಯನವೇ ನಮ್ಮ ಮುಖ್ಯಮಂತ್ರಿಗಳಾಗಲಿದ್ದಾರೆ ಇದರಲ್ಲಿ ಯಾವುದೇ ಸಂಶಯವಿಲ್ಲವೆಂದರು, ಮುಧೋಳ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ದೂಳಿಪಟವಾಗಲಿದೆ, ಕಾಂಗ್ರೆಸ್ ಅಭ್ಯರ್ಥಿ ಯಾರೇ ಇರಲಿ ಅವರನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಮಾಜಿ ಸಚಿವ ಆರ್.ಬಿ.ತಿಮ್ಮಾಪೂರ ಮಾತನಾಡಿ ನಿರೀಕ್ಷೆಯಂತೆ ಕ್ಷೇತ್ರದ ಅಭಿವೃದ್ದಿಯಾಗಿಲ್ಲ, ಕ್ಷೇತ್ರದ ಮತ್ತು ರಾಜ್ಯದ ಅಭಿವೃದ್ದಿಯಾಗಬೇಕಾದರೆ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು ಅದಕ್ಕಾಗಿ ತಾವುಗಳು ಕಾಂಗ್ರೆಸ್ ಪಕ್ಷದ ಸಂಘಟನೆಗೊಳಿಸಬೇಕೆಂದರು.
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಸತೀಶ ಬಂಡಿವಡ್ಡರ ಮಾತನಾಡಿ ನಾನು ಯಾವುದೇ ಅಧಿಕಾರದಲ್ಲಿ ಇಲ್ಲದಿದ್ದರೂ ಬಂಡಿವಡ್ಡರ ಪೌಂಡೇಶನ್ ವತಿಯಿಂದ ಸಾಕಷ್ಟುಜನಪರ ಕೆಲಸ ಮಾಡುತ್ತಿದ್ದೇನೆ, ಕಳೆದ ಚುನಾವಣೆಯಲ್ಲಿ ಕಡಿಮೆ ಮತಗಳ ಅಂತರದಿಂದ ನಾನು ಸೋಲನ್ನು ಅನುಭವಿಸಿದ್ದೇನೆಂದು ಹೇಳಿದರು.
ಸಿದ್ದರಾಮಯ್ಯಗೆ ಸೋಲಿನ ಭಯ ಕಾಡುತ್ತಿದೆ: ಸಚಿವ ಅಶೋಕ್ ವ್ಯಂಗ್ಯ
ಇದೆ ಸಂದರ್ಭದಲ್ಲಿ ವಿವಿಧ ಪಕ್ಷದ ಕಾರ್ಯಕರ್ತರು ಮಾಜಿ ಸಿಎಂ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಮಾಜಿ ಸಚಿವರಾದ ಎಂ.ಬಿ.ಪಾಟೀಲ, ಸತೀಶ ಜಾರಕಿಹೊಳಿ, ಎಸ್.ಆರ್.ಪಾಟೀಲ, ಅಜಯಕುಮಾರ ಸರನಾಯಕ, ಜಮೀರ್ ಅಹ್ಮದ್‌ಖಾನ್, ಹೆಚ್.ವೈ.ಮೇಟಿ, ಉಮಾಶ್ರೀ, ಶಾಸಕ ಆನಂದ ನ್ಯಾಮಗೌಡ, ಮಾಜಿ ಶಾಸಕರಾದ ಎಸ್.ಜಿ.ನಂಜಯ್ಯನಮಠ, ಜೆ.ಟಿ.ಪಾಟೀಲ, ವಿಜಯಾನಂದ ಕಾಶಪ್ಪನವರ, ಕಾಂಗ್ರೆಸ್ ಮುಖಂಡರಾದ ವೀಣಾ ಕಾಶಪ್ಪನವರ, ಧರೆಪ್ಪ ಸಾಂಗ್ಲೀಕರ, ಅಶೋಕ ಕಿವಡಿ, ಉದಯಕುಮಾರ ಸಾರವಾಡ, ದಾನೇಶ ತಡಸಲೂರ, ಎಸ್.ಎಸ್. ಮಲಘಾಣ, ದಯಾನಂದ ಪಾಟೀಲ, ಸಂಜಯ ನಾಯಕ, ರಾಜೂಗೌಡ ಪಾಟೀಲ, ಹೆಚ್.ಎ.ಕಡಪಟ್ಟಿ, ಕಾಶಿನಾಥ ಹುಡೇದ, ಪ್ರಕಾಶ ರಾಠೋಡ ಸೇರಿದಂತೆ ಇತರರು ವೇದಿಕೆ ಮೇಲೆ ಉಪಸ್ಥಿತರಿದ್ದರು.
