ಮೇಲ್ಮನೆ ಕುತೂಹಲಕ್ಕೆ ತಿರುವು: ದಿಲ್ಲಿಗೆ ಪ್ರತ್ಯೇಕ ಪಟ್ಟಿ ನೀಡಿದ ಸಿದ್ದು, ಡಿಕೆಶಿ..!
ಹಿಂದುಳಿದ ವರ್ಗಗಳಿಂದ ಯತೀಂದ್ರ ಸಿದ್ದರಾಮಯ್ಯ ಮತ್ತು ಪರಿಶಿಷ್ಟರಿಂದ ಕಾರ್ಯಾಧ್ಯಕ್ಷ ವಸಂತಕುಮಾರ ಅವರ ಹೆಸರು ಮಾತ್ರ ಸಹಮತದಿಂದ ಸೂಚಿತವಾಗಿವೆ. ಹೀಗಾಗಿ ಇವರಿಬ್ಬರಿಗೆ ಟಿಕೆಟ್ ಖಚಿತ. ಉಳಿದಂತೆ ಇನ್ಯಾವ ವರ್ಗಗಳ ಬಗ್ಗೆಯೂ ಒಮ್ಮತ ಮೂಡಿಲ್ಲ. ಇದರಿಂದಾಗಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರು ಪ್ರತ್ಯೇಕ ಪಟ್ಟಿಯನ್ನು ಹೈಕಮಾಂಡ್‌ಗೆ ನೀಡಿದ್ದಾರೆ ಎನ್ನಲಾಗಿದೆ.
ಬೆಂಗಳೂರು(ಮೇ.31): ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲು ಸಾಧ್ಯವಿರುವ ಏಳು ಮಂದಿಯ ಆಯ್ಕೆ ವಿಚಾರ ಈಗ ಕ್ಲೈಮಾಕ್ಸ್ ಹಂತ ಮುಟ್ಟಿದೆ. ಚೆಂಡು ಈಗ ಹೈಕಮಾಂಡ್ ಅಂಗಳದಲ್ಲಿದೆ.
ಏಕೆಂದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೆಲ ವರ್ಗಕ್ಕೆ ಮಾತ್ರ ಒಮ್ಮತದ ಅಭ್ಯರ್ಥಿ ಸೂಚಿಸಿದ್ದು, ಉಳಿದ ವರ್ಗಗಳ ವಿಚಾರದಲ್ಲಿ ಇಬ್ಬರೂ ಪ್ರತ್ಯೇಕ ಪಟ್ಟಿಯನ್ನು ಹೈಕಮಾಂಡ್‌ಗೆ ಸಲ್ಲಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ವಿಧಾನ ಪರಿಷತ್ ಚುನಾವಣೆ 2024: ಕೊನೆಗೂ 20 ಕಾಂಗ್ರೆಸ್ ಅಭ್ಯರ್ಥಿಗಳ ಶಾರ್ಟ್‌ಲಿಸ್ಟ್ ಫೈನಲ್..!
ಪರಿಣಾಮ- ಅಂತಿಮ ಆಯ್ಕೆ ಹೊಣೆಯೀಗ ಹೈಕಮಾಂಡ್ ಹೆಗಲೇರಿದೆ.
ಮೂಲಗಳ ಪ್ರಕಾರ, ಹಿಂದುಳಿದ ವರ್ಗಗಳಿಂದ ಯತೀಂದ್ರ ಸಿದ್ದರಾಮಯ್ಯ ಮತ್ತು ಪರಿಶಿಷ್ಟರಿಂದ ಕಾರ್ಯಾಧ್ಯಕ್ಷ ವಸಂತಕುಮಾರ ಅವರ ಹೆಸರು ಮಾತ್ರ ಸಹಮತದಿಂದ ಸೂಚಿತವಾಗಿವೆ. ಹೀಗಾಗಿ ಇವರಿಬ್ಬರಿಗೆ ಟಿಕೆಟ್ ಖಚಿತ. ಉಳಿದಂತೆ ಇನ್ಯಾವ ವರ್ಗಗಳ ಬಗ್ಗೆಯೂ ಒಮ್ಮತ ಮೂಡಿಲ್ಲ. ಇದರಿಂದಾಗಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರು ಪ್ರತ್ಯೇಕ ಪಟ್ಟಿಯನ್ನು ಹೈಕಮಾಂಡ್‌ಗೆ ನೀಡಿದ್ದಾರೆ ಎನ್ನಲಾಗಿದೆ.
ಮೂಲಗಳ ಪ್ರಕಾರ, ಒಕ್ಕಲಿಗ ಕೋಟಾದ ಅಡಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆ. ಗೋವಿಂದರಾಜು ಅವರ ಹೆಸರು ಸೂಚಿಸಿದ್ದಾರೆ. ಇದೇ ವೇಳೆ ಉಪ ಮುಖ್ಯಮಂತ್ರಿ ಶಿವಕುಮಾರ್ ಅವರು ವಿನಯ ಕಾರ್ತಿಕ್ ಪರ ನಿಂತಿದ್ದಾರೆ. ಈ ಪೈಪೋಟಿಯಲ್ಲಿ ಹೈಕಮಾಂಡ್‌ನಿಂದ ಚಿಕ್ಕಮಗಳೂರಿನ ಯುವ ನಾಯಕ ಡಿ.ಎಂ. ಸಂದೀಪ್ ಹೆಸರು ಕೂಡ ಮುಂಚೂಣಿಗೆ ಬಂದಿದೆ. ಹೀಗಾಗಿ ಅಂತಿಮ ತೀರ್ಮಾನವನ್ನು ಹೈಕಮಾಂಡ್ ತೆಗೆದುಕೊಳ್ಳಬೇಕಿದೆ.
ಇನ್ನೂ ಮುಸ್ಲಿಂ ಕೋಟಾ ಅಡಿಯಲ್ಲಿ ಸಚಿವ ಜಮೀರ್ ಅಹ್ಮದ್ ಅವರ ಕೋರಿಕೆಯ ಮೇರೆಗೆ ಮುಖ್ಯಮಂತ್ರಿಯವರು ಇಸ್ಮಾಯಿಲ್ ತಮಟಗಾರ ಹೆಸರನ್ನು ಸೂಚಿಸಿದ್ದರೆ, ಡಿ.ಕೆ. ಶಿವಕುಮಾರ್ ಅವರು ಆಘಾ ಸುಲ್ತಾನ್ ಅಥವಾ ಸಿರಾಜ್ ಶೇಖ್ ಹೆಸರು ಹೇಳಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಇತರೆ ಮುಸ್ಲಿಂ ನಾಯಕರು ಮಹಮ್ಮದ್ ಸೌದಾಗರ್ ಅವರ ಹೆಸರು ಸೂಚಿಸಿದ್ದಾರೆ ಎನ್ನಲಾಗುತ್ತಿದೆ.
ವಿಧಾನ ಪರಿಷತ್ ಚುನಾವಣೆ 2024: ಹಿರಿಯರನ್ನ ಕೇಳದೆ ಮೇಲ್ಮನೆ ಅಭ್ಯರ್ಥಿ ಆಯ್ಕೆ, ಪರಂ ಗರಂ..!
ಕುತೂಹಲಕಾರಿ ಸಂಗತಿಯೆಂದರೆ ಕ್ರಿಶ್ಚಿಯನ್ ಸಮುದಾಯದಿಂದ ಸಿಎಂ ಹಾಗೂ ಡಿಸಿಎಂ ಅವರು ಐವಾನ್ ಡಿಸೋಜಾ ಹೆಸರು ಸೂಚಿಸಿದ್ದಾರೆ. ಆದರೆ, ಹೈಕಮಾಂಡ್ ಈ ಹೆಸರಿನ ಬಗ್ಗೆ ಸಮಾಧಾನ ಹೊಂದಿಲ್ಲ. ಹೀಗಾಗಿ ಸೂಕ್ತ ವ್ಯಕ್ತಿಯ ಹುಡುಕಾಟದಲ್ಲಿದೆ ಎನ್ನಲಾಗಿದೆ. ಮಹಿಳೆಯರಲ್ಲಿ ಪದ್ಮಾವತಿ, ಕಮಲಾಕ್ಷಿ ರಾಮಣ್ಣ, ಬಲ್ಕೀಸ್ ಬಾನು, ಮೆಟಿಲ್ಡಾ ಅವರ ಹೆಸರು ಕೇಳಿ ಬರುತ್ತಿದೆ. ಹೀಗಾಗಿ ಹೈಕಮಾಂಡ್ ಈ ಬಗ್ಗೆ ಒಮ್ಮತ ಮೂಡಿಸಿ ಅಭ್ಯರ್ಥಿ ಹೆಸರು ಅಖೈರುಗೊಳಿಸಬೇಕಿದೆ.
ಬೋಸರಾಜು ಪರ ತೀವ್ರ ಲಾಬಿ
ಕುತೂಹಲಕಾರಿ ಸಂಗತಿಯೆಂದರೆ, ಸಚಿವ ಎನ್.ಎಸ್. ಬೋಸರಾಜು ಅವರ ಆಯ್ಕೆ ಇನ್ನೂ ಖಚಿತಗೊಂಡಿಲ್ಲ. ರಾಯಚೂರಿನ ವಸಂತಕುಮಾರ್ ಅವರಿಗೆ ಟಿಕೆಟ್ ನೀಡುವುದು ಬಹುತೇಕ ಖಚಿತವಾಗಿರುವ ಹಿನ್ನೆಲೆಯಲ್ಲಿ ಅದೇ ಜಿಲ್ಲೆಯ ಬೋಸರಾಜು ಅವರಿಗೆ ಮತ್ತೆ ಅವಕಾಶ ನೀಡುವ ಬಗ್ಗೆ ರಾಜ್ಯ ನಾಯಕತ್ವ ಅಷ್ಟೇನೂ ಆಸಕ್ತಿ ತೋರಿಲ್ಲ. ಹೀಗಾಗಿ ಅವರ ಆಯ್ಕೆ ಕಠಿಣವಾಗಿ ಪರಿಣಮಿಸಿದೆ. ಆದರೆ, ಬೋಸರಾಜು ಅವರ ಅವರ ಪುತ್ರ ರವಿ ಬೋಸರಾಜು ಹಾಗೂ ಯುವ ಸಚಿವರು ಹೈಕಮಾಂಡ್ ಮಟ್ಟದಲ್ಲಿ ತೀವ್ರ ಲಾಬಿ ನಡೆಸಿದ್ದಾರೆ. ಈ ಲಾಬಿ ಫಲ ನೀಡಿದರೆ ಬೋಸರಾಜು ಪಟ್ಟಿ ಸೇರಬಹುದು. ಇಲ್ಲದೇ ಹೋದರೆ ಅವರಿಗೆ ಕೊಕ್ ದೊರೆತರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ.