ಪಿಡಿಒ ಪ್ರಶ್ನೆಪತ್ರಿಕೆ ಸೋರಿಕೆ ಆಗಿಲ್ಲ, ಆದರೂ ವರದಿ ಬಳಿಕ ಕ್ರಮ: ಸಿದ್ದರಾಮಯ್ಯ
12 ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲಿಸಿರುವ ಘಟನೆ ಸಂಬಂಧ ಕೆಪಿಎಸ್‌ಸಿ ರಚಿಸಿರುವ ಉಪಸಮಿತಿ ಸಲ್ಲಿಸಲಿರುವ ಅಂತಿಮ ವರದಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸುವರ್ಣ ವಿಧಾನಪರಿಷತ್ (ಡಿ.13): ನ.17ರಂದು ಕಲ್ಯಾಣ ಕರ್ನಾಟಕ ಭಾಗದ 97 ಪಂಚಾಯತಿ ಅಧಿಕಾರಿಗಳ ಹುದ್ದೆ ನೇಮಕಾತಿಗೆ ಸಿಂಧನೂರಿನಲ್ಲಿ ನಡೆದ ಪರೀಕ್ಷಾ ಕೇಂದ್ರದಲ್ಲಿ ಗೊಂದಲ, ಪ್ರತಿಭಟನೆ, 12 ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲಿಸಿರುವ ಘಟನೆ ಸಂಬಂಧ ಕೆಪಿಎಸ್‌ಸಿ ರಚಿಸಿರುವ ಉಪಸಮಿತಿ ಸಲ್ಲಿಸಲಿರುವ ಅಂತಿಮ ವರದಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಬಿಜೆಪಿಯ ಶಶೀಲ್ ಜಿ.ನಮೋಶಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ.
ಆದರೆ ಕೆಲ ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಬೇರೆ ವಿದ್ಯಾರ್ಥಿಗಳನ್ನು ಪ್ರಚೋದಿಸಿದ, ಪ್ರತಿಭಟನೆ ಮಾಡಿದ 12 ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ. ಪ್ರಶ್ನೆ ಪತ್ರಿಕೆ ನೀಡುವಲ್ಲಿ ವಿಳಂಬ ಸಹ ಆಗಿಲ್ಲ. ಉಪಸಮಿತಿ ಸಲ್ಲಿಸಲಿರುವ ವರದಿಯಲ್ಲಿ ಯಾರಿಗಾದರೂ ಅನ್ಯಾಯವಾಗಿದ್ದಲ್ಲಿ ಅವರಿಗೆ ನ್ಯಾಯ ಒದಗಿಸಲಾಗುವುದು ಎಂದರು. ಇದಕ್ಕೂ ಮುನ್ನ ಶಶೀಲ್ ನಮೋಶಿ ಮಾತನಾಡಿ, ಅರ್ಧ ಗಂಟೆ ತಡವಾಗಿ ಪರೀಕ್ಷಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ನೀಡಲಾಗಿದೆ. ಸೀಲು ಒಡೆದ ಸ್ಥಿತಿಯಲ್ಲಿದ್ದ ಲಕೋಟೆಯಲ್ಲಿದ್ದ ಪ್ರಶ್ನೆ ಪತ್ರಿಕೆಯನ್ನು ವಿತರಿಸಲಾಗಿದೆ. ವಿದ್ಯಾರ್ಥಿಗಳ ಸಮ್ಮುಖದಲ್ಲಿ ಲಕೋಟೆಯ ಸೀಲು ತೆಗೆದಿಲ್ಲ ಎಂದು ಹೇಳಿದರು.
ಬೆಳಗಾವಿ ಮಹಾಗೆ ಸೇರಬೇಕೆಂಬ ಬಾಲಿಶ ಹೇಳಿಕೆ ಸಹಿಸಲ್ಲ: ಗಡಿ ವಿಚಾರದಲ್ಲಿ ಮಹಾಜನ್ ಆಯೋಗದ ವರದಿಯೇ ಅಂತಿಮ. ಅದನ್ನು ಬಿಟ್ಟು ಪದೇ ಪದೆ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂಬ ಬಾಲಿಶ ಹೇಳಿಕೆಗಳನ್ನು ನೀಡಿದರೆ ಸಹಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ಮಹಾಜನ್ ಆಯೋಗದ ವರದಿಯೇ ಅಂತಿಮ ಎಂದು ಹೇಳಿದ್ದೇನೆ. ಹೀಗಿದ್ದರೂ ಕೆಲವರು ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಹೇಳಿಕೆ ನೀಡುತ್ತಿದ್ದಾರೆ. ಇಂಥ ಹೇಳಿಕೆಗಳು ಮೂರ್ಖತನ. ಅಂಥ ಬಾಲಿಶ ಹೇಳಿಕೆಗಳನ್ನು ಸಹಿಸುವುದಿಲ್ಲ ಎಂದು ಹೇಳಿದರು. ಈ ಮೂಲಕ ಬೆಳಗಾವಿ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಬೇಕು. ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂಬ ಹೇಳಿಕೆ ನೀಡುತ್ತಿರುವವರಿಗೆ ಎಚ್ಚರಿಕೆ ಸಂದೇಶ ರವಾನಿಸಿದರು.
ಸಿಎಂ ಸಿದ್ದರಾಮಯ್ಯ ನಡೆ ಗುಲಾಮಗಿರಿಯ ಸಂಕೇತ: ಸಿ.ಟಿ.ರವಿ ವಾಗ್ದಾಳಿ
ಬಸವಣ್ಣ ಪರಿಕಲ್ಪನೆಯಲ್ಲಿ ಸರ್ಕಾರ ಆಡಳಿತ: ಸಮಾಜದಲ್ಲಿನ ಅಸಮಾನತೆ, ಜಾತಿ ವ್ಯವಸ್ಥೆ ತೊಲಗಿಸಿ, ಸಮ ಸಮಾಜ ನಿರ್ಮಾಣ ಮಾಡಬೇಕೆಂಬ ವಿಶ್ವಗುರು ಬಸವಣ್ಣನವರ ಪರಿಕಲ್ಪನೆಯಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಸುವರ್ಣ ವಿಧಾನಸೌಧದ ಆವರಣದಲ್ಲಿ ಅನುಭವ ಮಂಟಪದ ತೈಲವರ್ಣ ಚಿತ್ರ ಅನಾವರಣಗೊಳಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಸದನದಲ್ಲಿ ನಡೆದ ಚರ್ಚೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಅನುಭವ ಮಂಟಪದ ಮಾದರಿಯ ತೈಲ ವರ್ಣ ಚಿತ್ರವನ್ನು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಅನಾವರಣಗೊಳಿಸುವ ಅವಕಾಶ ದೊರೆತಿದ್ದು ನನ್ನ ಸೌಭಾಗ್ಯವಾಗಿದ್ದು, ಬೆಂಗಳೂರಿನ ವಿಧಾನಸೌಧದಲ್ಲಿಯೂ ಅನುಭವ ಮಂಟಪದ ಬೃಹತ್ ತೈಲವರ್ಣ ಚಿತ್ರ ಅನಾವರಣಗೊಳಿಸಬೇಕಾಗಿದೆ ಎಂದು ಹೇಳಿದರು.