ಸಿಎಂ ಸಿದ್ದರಾಮಯ್ಯ ನಡೆ ಗುಲಾಮಗಿರಿಯ ಸಂಕೇತ: ಸಿ.ಟಿ.ರವಿ ವಾಗ್ದಾಳಿ
ಕೇರಳದ ವಯನಾಡಿನಲ್ಲಿ ಮನೆ ಕಟ್ಟಿಸಿಕೊಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆ ರಾಜಕೀಯ ಗುಲಾಮಗಿರಿಯ ಸಂಕೇತ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ.
ಚಿಕ್ಕಮಗಳೂರು (ಡಿ.13): ಕೇರಳದ ವಯನಾಡಿನಲ್ಲಿ ಮನೆ ಕಟ್ಟಿಸಿಕೊಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆ ರಾಜಕೀಯ ಗುಲಾಮಗಿರಿಯ ಸಂಕೇತ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರು ಕೇರಳದ ವಯನಾಡಿನಲ್ಲಿ 100 ಮನೆ ಕಟ್ಟಿಸಿ ಕೊಡುತ್ತೇವೆಂದು ಪತ್ರ ಬರೆದಿರುವುದಕ್ಕೆ ಪ್ರತಿಕ್ರಿಯಿಸಿ, ಇಡೀ ಅಖಂಡ ಭಾರತ ಒಂದು ಮಾಡುವ ಇಡೀ ವಿಶ್ವವೇ ಒಂದು ಮನೆ ಎಂಬ ಉದಾತ್ತ ಮನೋಭಾವನೆ ವಾರಸ್ದಾರರು ನಾವು. ಅಕ್ಕಪಕ್ಕದವರಿಗೆ ಸಹಾಯ ಮಾಡುವುದು ತಪ್ಪಲ್ಲ. ಆದರೆ, ಇಲ್ಲಿಯ ರೈತರನ್ನು ಕಡೆಗಣಿಸಿದ್ದಾರೆ.
ರೈತರಿಗೆ ಪರಿಹಾರ ಕೊಟ್ಟಿಲ್ಲ, ವಯನಾಡಿನ ಜನರಿಗೆ ಸಹಾಯ ಮಾಡಲು ಹೊರಟಿರುವುದು ರಾಜಕೀಯ ಗುಲಾಮ ಗಿರಿಯ ಸಂಕೇತ ಎಂದು ಆರೋಪಿಸಿದರು. ರಾಹುಲ್ ಹಾಗೂ ಪ್ರಿಯಾಂಕ ಗಾಂಧಿ ಪ್ರತಿನಿಧಿಸುವ ಕ್ಷೇತ್ರ ಎಂದು ಒಂದು ಕ್ಷೇತ್ರಕ್ಕೆ ಸಹಾಯ ಮಾಡುವುದು ರಾಜ್ಯದ ತೆರಿಗೆ ಹಣ ಅಲ್ಲಿಗೆ ವಿನಿಯೋಗಿಸುವುದು ರಾಜಕೀಯ ಗುಲಾಮಗಿರಿ ಪ್ರತೀಕವಾಗಲಿದೆ, ಅದನ್ನು ವಿರೋಧಿಸುತ್ತೇವೆ ಎಂದರು. ಕನ್ನಡಿಗರ ಕಷ್ಟಕ್ಕೆ ಸ್ಪಂದಿಸದೆ ಕನ್ನಡಿಗರ ತೆರಿಗೆ ಹಣವನ್ನು ಅಲ್ಲಿ ವಿನಿಯೋಗಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.
ಇಸ್ಕಾನ್ ಪ್ರಮುಖರ ಬಂಧನಕ್ಕೆ ತೀವ್ರ ಕಿಡಿ: ನೆರೆ ರಾಷ್ಟ್ರ ಬಾಂಗ್ಲಾದೇಶದಲ್ಲಿ ಮತಾಂಧ ಮಸಲ್ಮಾನರ ಒತ್ತಡಕ್ಕೆ ಮಣಿದು ಅಲ್ಲಿನ ಸರ್ಕಾರ ಇಸ್ಕಾನ್ ಸಂಸ್ಥೆಯ ಮುಖ್ಯಸ್ಥ ಚಿನ್ಮಯ ಪ್ರಭು ಅವರನ್ನು ಬಂಧಿಸಿದೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಆರೋಪಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಾಂಗ್ಲಾದೇಶದಲ್ಲಿನ ವಿದ್ಯಮಾನಗಳು ಕಳವಳಕಾರಿಯಾಗಿವೆ. ಚಿನ್ಮಯ ಪ್ರಭು ಅವರನ್ನು ದೇಶದ್ರೋಹಿ ಚಟುವಟಿಕೆ ನಡೆಸುತ್ತಿದ್ದ ಆರೋಪದಲ್ಲಿ ಬಂಧಿಸಲಾಗಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಹಿಂಸಾಚಾರದ ವಿರುದ್ಧ ಧ್ವನಿಯೆತ್ತಿ ಪ್ರತಿಭಟನೆ ನಡೆಸಿದ್ದೇ ಅವರಿಗೆ ಪ್ರಮಾದವಾಗಿದೆ ಎಂದು ಹೇಳಿದರು.
ಪಂಚಮಸಾಲಿ ಮೀಸಲಾತಿ ಬಿಜೆಪಿ ನಾಟಕ: ಸಿಎಂ ಸಿದ್ದರಾಮಯ್ಯ ವಾಗ್ದಾಳಿ
ಇಸ್ಕಾನ್ ಒಂದು ಜಾಗತಿಕ ಸಂಸ್ಥೆಯಾಗಿದ್ದು, ಭಯೋತ್ಪಾದನಾ ಚಟುವಟಿಕೆಗಳಲ್ಲಿ ಅದೆಂದೂ ಭಾಗಿಯಾಗಿಲ್ಲ. ಕೋವಿಡ್ ಸಮಯದಲ್ಲಿ ಜಾತಿ ಧರ್ಮಗಳೆನ್ನದೆ ಎಲ್ಲರಿಗೂ ನೆರವಾಗಿರುವ ಶ್ರೇಯಸ್ಸು ಇಸ್ಕಾನ್ ಸಂಸ್ಥೆಯದ್ದಾಗಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಹಿಂಸಾಚಾರವನ್ನು ಕೇಂದ್ರ ಸರ್ಕಾರವು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪ್ರಸ್ತಾಪಿಸಬೇಕಿದೆ ಎಂದು ತಿಳಿಸಿದರು. ಇದೇ ವೇಳೆ ಸರ್ಕಾರಿ ಆಸ್ಪತ್ರೆಗಳ ವೈದ್ಯಕೀಯ ಸೇವೆ ದರ ಹೆಚ್ಚಳ ಮಾಡಿರುವುದಕ್ಕೆ ಕಿಡಿಕಾರಿದ ಅವರು, ಗ್ಯಾರಂಟಿಗಳ ಪರಿಣಾಮ ದರ, ತೆರಿಗೆ ಹೆಚ್ಚಳ, ತಿನ್ನುವ ಅನ್ನಕ್ಕೂ ಕಲ್ಲು ಹಾಕಲಾಗಿದೆ. ಆಸ್ಪತ್ರೆ ಸೇವೆಗಳ ದರ ಹೆಚ್ಚಳ ಮಾಡಲಾಗಿದೆ. ಪೋಸ್ಟ್ ಮಾರ್ಟಂಗೂ ದರ ನಿಗದಿ ಮಾಡಲಿ, ಅದೊಂದು ಯಾಕೆ ಉಳಿಸಿಕೊಳ್ಳಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.