ಪೇಸಿಎಂ ಕಾಂಗ್ರೆಸ್ಸಿನ ಕಾರ್ಬನ್‌ ಕಾಪಿ. ಇದೀಗ ಇವರು ಪೇಸಿಎಸ್‌ ಅಂತ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ, ವಿಪ ಸದಸ್ಯ ಜಗದೀಶ ಶೆಟ್ಟರ್‌ ಬಿಜೆಪಿಗೆ ಟಾಂಗ್‌ ಕೊಟ್ಟರು.

ಹುಬ್ಬಳ್ಳಿ (ಆ.13) :  ಪೇಸಿಎಂ ಕಾಂಗ್ರೆಸ್ಸಿನ ಕಾರ್ಬನ್‌ ಕಾಪಿ. ಇದೀಗ ಇವರು ಪೇಸಿಎಸ್‌ ಅಂತ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ, ವಿಪ ಸದಸ್ಯ ಜಗದೀಶ ಶೆಟ್ಟರ್‌ ಬಿಜೆಪಿಗೆ ಟಾಂಗ್‌ ಕೊಟ್ಟರು.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪೇಸಿಎಂ ಕಾಂಗ್ರೆಸ್ಸಿನವರು ಈ ಹಿಂದೆಯೇ ಮಾಡಿದ್ದರು. ಬಿಜೆಪಿ ಅದನ್ನೀಗ ಕಾಪಿ ಮಾಡುತ್ತಿದೆ. ಪೇಸಿಎಂ ಅವತ್ತಿಗೆ ಲೇಟೆಸ್ಟ್‌ ಆಗಿತ್ತು. ಈಗ ಪೇಸಿಎಂ ಅಥವಾ ಪೇಸಿಎಸ್‌ಗೆ ಅರ್ಥವೇ ಇಲ್ಲ. ಜನ ಅದನ್ನು ನಂಬಲ್ಲ ಎಂದರು.

ಬಿಜೆಪಿ ಸರ್ಕಾರ ಬಂದ ನಾಲ್ಕು ವರ್ಷಗಳ ಬಳಿಕ ಅಭಿಯಾನ ಆರಂಭವಾಗಿತ್ತು. ಆದರೆ ಕಾಂಗ್ರೆಸ್‌ ಬಂದ ಮೂರು ತಿಂಗಳಲ್ಲಿ ಬಿಜೆಪಿಯವರು ಮಾಡುತ್ತಾರೆ ಅಂದರೆ ಅದಕ್ಕೆ ಅರ್ಥ ಇಲ್ಲ. ಬಿಜೆಪಿಯಲ್ಲಿದ್ದಾಗ ಎಲ್ಲ ವಿಷಯಗಳನ್ನು ನಾನು ಕೋರ್‌ ಕಮಿಟಿಯಲ್ಲಿ ಹೇಳಿದ್ದೆ. ಹೊರಗಡೆ ಹೇಳುವುದಕ್ಕೆ ಆಗದ ವಿಷಯವನ್ನು ಹೇಳಿದ್ದೆ. ಆದರೆ ಅವರು ತಿಳಿದುಕೊಳ್ಳಲಿಲ್ಲ ಎಂದರು.

ಬಿಜೆಪಿ ಲೀಡರ್‌ಲೆಸ್‌ ಪಾರ್ಟಿ: ಜಗದೀಶ್‌ ಶೆಟ್ಟರ್‌

ಬಿಜೆಪಿ ಸರ್ಕಾರದ ರಾಡಿ:

ಬೊಮ್ಮಾಯಿ ಅವರಿದ್ದಾಗ ಬೇಕಾಬಿಟ್ಟಿಕಾಮಗಾರಿ ಮಂಜೂರು ಮಾಡಿದ್ದಾರೆ. ಇದಕ್ಕೆ ಹಣಕಾಸು ಇಲಾಖೆಯ ಒಪ್ಪಿಗೆ ಇರಲಿಲ್ಲ. ಕಾಂಗ್ರೆಸ್‌ ಸರ್ಕಾರ ಬಂದು ಮೂರು ತಿಂಗಳಾಗಿದೆ ಅಷ್ಟೇ. ಸರ್ಕಾರ ಬಂದು ಮೂರೇ ತಿಂಗಳಿಗೆ ಗುತ್ತಿಗೆದಾರರು ಬಿಲ್‌ ಜಾರಿ ಮಾಡುವಂತೆ ಹಠ ಹಿಡಿದಿದ್ದಾರೆ. ಗುತ್ತಿಗೆದಾರರ ಬಿಲ್‌ ಬಾಕಿ ಇರುವುದು ಕಳೆದ ಸರ್ಕಾರದ್ದು. ಈಗ ಕಾಂಗ್ರೆಸ್‌ ಸರ್ಕಾರದ ಮೇಲೆ ಆಪಾದನೆ ಮಾಡುವುದು ದುರುದ್ದೇಶ. ಇದರಲ್ಲಿ ಯಾವುದೇ ಸತ್ಯಾಂಶ ಇಲ್ಲ. ಈಗ ಇರುವ ಪೆಂಡಿಂಗ್‌ ಬಿಲ್‌ಗಳೆಲ್ಲ ಬಿಜೆಪಿ ಸರ್ಕಾರದಲ್ಲಿನ ರಾಡಿ. ಸಿದ್ದರಾಮಯ್ಯ ಸರ್ಕಾರದಲ್ಲಿ ಯಾವುದೇ ಕಾಮಗಾರಿ ಬಾಕಿ ಇಲ್ಲ. ಬಿಜೆಪಿ ಸರ್ಕಾರದ ರಾಡಿನೇ ಇದೆಲ್ಲ ಎಂದು ಶೆಟ್ಟರ್‌ ವಾಗ್ದಾಳಿ ನಡೆಸಿದರು.

ನನಗೆ ಟಾಸ್‌್ಕ ಕೊಟ್ಟಿಲ್ಲ:

ಲೋಕಸಭೆ ಚುನಾವಣೆಗೆ ಸಂಬಂಧಪಟ್ಟಂತೆ ನನಗೆ ಪಕ್ಷ ಯಾವುದೇ ಟಾಸ್‌್ಕ ನೀಡಿಲ್ಲ. ದೆಹಲಿ ಸಭೆಗೆ ನಾನೂ ಹೋಗಿದ್ದೆ. ಖುದ್ದು ರಾಹುಲ್‌ ಗಾಂಧಿ ಅವರೇ ಮೂರು ಗಂಟೆ ನಮ್ಮ ಜೊತೆ ಚರ್ಚೆ ಮಾಡಿದ್ದರು. ಲೋಕಸಭೆಯಲ್ಲಿ ಹೇಗೆ ನಾವು ಗೆಲ್ಲಬೇಕು ಎನ್ನುವುದರ ಬಗ್ಗೆ ಚರ್ಚೆ ಆಯಿತು. ಗ್ಯಾರಂಟಿ ಅನುಷ್ಠಾನದ ಬಗ್ಗೆಯೂ ಚರ್ಚೆ ಆಗಿದೆ. ರಾಜ್ಯ ರಾಜಕಾರಣದ ಬಗ್ಗೆ ಅವಲೋಕನ ಮಾಡಿ ರಾಹುಲ್‌ ಗಾಂಧಿ ತಿಳಿದುಕೊಂಡಿದ್ದಾರೆ. ಎಲ್ಲರದ್ದೂ ಒಂದೇ ಉದ್ದೇಶ, ಲೋಕಸಭೆಯಲ್ಲಿ ನಾವು 15ರಿಂದ 20 ಸೀಟ್‌ ಗೆಲ್ಲಬೇಕು ಎನ್ನುವುದು ಎಂದರು.

ನಾನು ಕಾಂಗ್ರೆಸ್‌ ಪಕ್ಷಕ್ಕೆ ಸೇರುವಾಗ ಯಾವುದೇ ಕಂಡೀಷನ್‌ ಹಾಕಿಲ್ಲ. ನಾನು ನನಗೆ ಸೀಟ್‌ ಬೇಕು ಎನ್ನುವ ಯಾವ ಬೇಡಿಕೆಯನ್ನೂ ಇಟ್ಟಿಲ್ಲ. ಬಿಜೆಪಿಯ ಮಾಜಿ ಸಚಿವ ಶಂಕರ ಪಾಟೀಲ್‌ ಮುನೇನಕೊಪ್ಪ ಬಗ್ಗೆ ಚರ್ಚೆ ಆಗಿಲ್ಲ ಎಂದು ಶೆಟ್ಟರ್‌ ಸ್ಪಷ್ಟಪಡಿಸಿದರು.

ಲೋಕಸಭೆ: ರಾಜ್ಯದಲ್ಲಿ 15-20 ಸ್ಥಾನಗಳಲ್ಲಿ ಕಾಂಗ್ರೆಸ್‌ ಗೆಲುವು​: ಜಗದೀಶ್‌ ಶೆಟ್ಟರ್‌

ಲೀಡರ್‌ಲೆಸ್‌ ಪಾರ್ಟಿ:

ಬಿಜೆಪಿ ದಿನದಿಂದ ದಿನಕ್ಕೆ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಬಿಜೆಪಿ ಲೀಡರ್‌ಲೆಸ್‌ ಪಾರ್ಟಿ ಆಗಿದೆ. ಮೂರು ತಿಂಗಳಾದರೂ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಲಾಗುತ್ತಿಲ್ಲ. ಬಿಜೆಪಿಯ ದಯನೀಯ ಪರಿಸ್ಥಿತಿ ಬಗ್ಗೆಯೂ ಚರ್ಚೆ ಆಗಿದೆ ಎಂದರು.