ಭ್ರಷ್ಟಾಚಾರ ಆರೋಪಕ್ಕೆ ತಿರುಗೇಟು; ಕಾಂಗ್ರೆಸ್‌ ವಿರುದ್ಧ ಬಿಜೆಪಿ ತ್ರಿವಳಿ ಅಸ್ತ್ರ ರಾಹುಲ್‌ ಭೇಟಿ ವೇಳೆ ಪೋಸ್ಟರ್‌ ಪ್ರಚಾರ ಕಾಂಗ್ರೆಸ್‌ ಅವಧಿಯ ಭ್ರಷ್ಟಾಚಾರ ಬಿಂಬಿಸುವ ಭಿತ್ತಿಪತ್ರಗಳನ್ನು ಅಳವಡಿಸಿ ಟಾಂಗ್‌ ನೀಡಲು ಚಿಂತನೆ ಸಿದ್ದು ಸರ್ಕಾರದ ಅಕ್ರಮ ತನಿಖೆ ಸಂಭವ

ಬೆಂಗಳೂರು (ಸೆ.26) : ಪ್ರತಿಪಕ್ಷ ಕಾಂಗ್ರೆಸ್‌ ರಾಜ್ಯ ಸರ್ಕಾರದ ವಿರುದ್ಧ ನಡೆಸುತ್ತಿರುವ ಅಭಿಯಾನಕ್ಕೆ ತಿರುಗೇಟು ನೀಡುವ ಸಂಬಂಧ ಆಡಳಿತಾರೂಢ ಬಿಜೆಪಿ ಏಕಕಾಲದಲ್ಲಿ ಮೂರು ರೀತಿಯ ತಂತ್ರಗಳನ್ನು ಹೆಣೆಯುತ್ತಿದೆ.

ನಾನು ಲಾ ಓದಿದ್ದೇನೆ, ಬೊಮ್ಮಾಯಿ ಲಾ ಓದಿಲ್ಲ, ಬೆದರಿಕೆಗೆ ಬಗ್ಗಲ್ಲ: ಸಿದ್ದರಾಮಯ್ಯ

ಕಳೆದ ಕೆಲವು ದಿನಗಳಿಂದ ಕಾಂಗ್ರೆಸ್‌ ಪಕ್ಷ ನಡೆಸುತ್ತಿರುವ ಅಭಿಯಾನದಿಂದ ಬಿಜೆಪಿ ನಾಯಕರಿಗೆ ತೀವ್ರ ಇರುಸು ಮುರುಸಾಗಿದೆ. ಪಕ್ಷದ ವರಿಷ್ಠರು ಕೂಡ ಇದನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಹೀಗಾಗಿಯೇ ರಾಜ್ಯ ನಾಯಕರೊಂದಿಗೆ ಮಾತನಾಡಿ ಕಾಂಗ್ರೆಸ್‌ ಅಭಿಯಾನಕ್ಕೆ ಪ್ರತಿತಂತ್ರ ರೂಪಿಸುವಂತೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ವರಿಷ್ಠರ ಸೂಚನೆ ಬೆನ್ನಲ್ಲೇ ರಾಜ್ಯ ಬಿಜೆಪಿ ನಾಯಕರು ಕಾರ್ಯಪ್ರವೃತ್ತವಾಗಿದ್ದು, ಕಾಂಗ್ರೆಸ್‌ ಪಕ್ಷಕ್ಕೆ ಎದಿರೇಟು ನೀಡಲು ಸಜ್ಜಾಗುತ್ತಿದ್ದಾರೆ. ರಾಹುಲ್‌ ಗಾಂಧಿ ಅವರು ರಾಜ್ಯಕ್ಕೆ ಆಗಮಿಸುವ ವೇಳೆ ರಾಜ್ಯ ಕಾಂಗ್ರೆಸ್‌ ನಾಯಕರು ಮಾಡಿದ ರೀತಿಯಲ್ಲೇ ಪೋಸ್ಟರ್‌ಗಳು, ಹೋರ್ಡಿಂಗ್‌್ಸ, ಮಾಧ್ಯಮಗಳಲ್ಲಿ ಜಾಹೀರಾತು ನೀಡುವ ಬಗ್ಗೆ ಬಿಜೆಪಿ ನಾಯಕರು ಚಿಂತನೆ ಮಾಡುತ್ತಿದ್ದಾರೆ ಎನ್ನಲಾಗಿದೆ.

ಕಳೆದ ಹಲವು ದಿನಗಳಿಂದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರೇ ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿರುವುದರಿಂದ ಅವರ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಹಗರಣಗಳಿಗೆ ತನಿಖೆಯ ಬಿಸಿ ಮುಟ್ಟಿಸಲು ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮುಂದಾಳತ್ವದಲ್ಲಿ ಕಸರತ್ತು ನಡೆದಿದೆ. ಅದರಲ್ಲೂ ಬೊಮ್ಮಾಯಿ ಅವರು ಅಧಿವೇಶನದ ಕೊನೆಯ ದಿನವಾದ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಪ್ರಸ್ತಾಪಿಸಿದ್ದ ಅರ್ಕಾವತಿ ಬಡಾವಣೆಯ ರೀಡೂ ಹಗರಣದ ವಿಚಾರಣೆ ಮಾಡಿ ನ್ಯಾಯಮೂರ್ತಿ ಕೆಂಪಣ್ಣ ಆಯೋಗ ನೀಡಿರುವ ವರದಿಯನ್ನು ಮುಂದಿಟ್ಟುಕೊಂಡು ತನಿಖೆಗೆ ಆದೇಶಿಸುವ ಬಗ್ಗೆ ಪಕ್ಷದ ಮುಖಂಡರು ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದರ ಜೊತೆಗೆ ಕಾಂಗ್ರೆಸ್ಸಿನ ಪೋಸ್ಟರ್‌ ಅಭಿಯಾನಕ್ಕೆ ಅಭಿವೃದ್ಧಿ ರಾಜಕಾರಣದ ಮೂಲಕವೂ ತಿರುಗೇಟು ನೀಡಲು ಬಿಜೆಪಿ ನಾಯಕರು ಮುಂದಾಗುತ್ತಿದ್ದಾರೆ. ಪಕ್ಷದ ನಾಯಕರು ಸಭೆ- ಸಮಾರಂಭಗಳಲ್ಲಿ ಹಾಗೂ ಸಮಾವೇಶಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಯಕ್ರಮಗಳನ್ನು ಹೆಚ್ಚು ಪ್ರಸ್ತಾಪಿಸಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಪೇಸಿಎಂ ಪೋಸ್ಟರ್‌: ಸಿಸಿಟೀವಿ ದೃಶ್ಯ ಆಧರಿಸಿ ಐವರು ಕಾಂಗ್ರೆಸ್‌ ಕಾರ‍್ಯಕರ್ತರ ಸೆರೆ

ಏನಿದು ತ್ರಿವಳಿ ಅಸ್ತ್ರ?

  •  ಭಾರತ್‌ ಜೋಡೋ ಕಾರ್ಯಕ್ರಮದ ಅಂಗವಾಗಿ ಕಾಂಗ್ರೆಸ್‌ ಪಕ್ಷದ ‘ಯುವರಾಜ’ ರಾಹುಲ್‌ ಗಾಂಧಿ ಕರ್ನಾಟಕಕ್ಕೆ ಆಗಮಿಸುವ ವೇಳೆ ಆ ಪಕ್ಷದ ಭ್ರಷ್ಟಾಚಾರ ಬಿಂಬಿಸುವ ಪೋಸ್ಟರ್‌ಗಳ ಮೂಲಕ ಸ್ವಾಗತಿಸುವುದು.
  • ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಹಗರಣಗಳನ್ನು ತನಿಖೆಗೆ ಒಪ್ಪಿಸುವುದು.
  •  ರಾಜ್ಯ ಮತ್ತು ಕೇಂದ್ರ ಸರ್ಕಾರದ ಜನಪರ ಕಾರ್ಯಕ್ರಮಗಳ ಬಗ್ಗೆ ಹೆಚ್ಚು ಹೆಚ್ಚು ಜನರಿಗೆ ತಿಳಿಸುವ ಮೂಲಕ ಕಾಂಗ್ರೆಸ್‌ ಪಕ್ಷಕ್ಕೆ ಟಕ್ಕರ್‌ ನೀಡುವುದು.

ಕಾಂಗ್ರೆಸ್‌ ವಿರುದ್ಧ ಕಾನೂನು ಕ್ರಮ

‘ಪೇ-ಸಿಎಂ’ ಎಂಬುದು ಕಾಂಗ್ರೆಸ್ಸಿನ ಕೊಳಕು ರಾಜಕಾರಣದ ಭಾಗ. ಇದು ಕಾಂಗ್ರೆಸ್ಸಿನ ನೈತಿಕತೆಯ ಅಧಃಪತನ. ಭ್ರಷ್ಟಾಚಾರದ ಆರೋಪ ಮಾಡುವುದಾದರೆ ದಾಖಲೆ ಕೊಡಬೇಕು. ನೇರಾನೇರ ಮಾತನಾಡಬೇಕು. ತನಿಖೆ ಆಗಬೇಕು. ಸುಮ್ಮನೆ ಏನೇನೋ ಮಾತನಾಡುವುದು ಹತಾಶೆಯ ಗುಣ. ಈ ಅಭಿಯಾನದ ಸಂಬಂಧ ಕಾನೂನು ಕ್ರಮ ಕೈಗೊಳ್ಳಲಾಗುವುದು.

- ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ

ನನಗೆ ಲಾ ಗೊತ್ತು, ಸಿಎಂಗೆ ಗೊತ್ತಿಲ್ಲ

ನಾನು ಕಾನೂನು ಓದಿದ್ದೇನೆ. ಬೊಮ್ಮಾಯಿ ಎಂಜಿನಿಯರಿಂಗ್‌ ವಿದ್ಯಾರ್ಥಿ, ಅವರು ಕಾನೂನು ಓದಿಲ್ಲ. ಹಾಗೆಲ್ಲಾ ಕ್ರಮ ಕೈಗೊಳ್ಳಲು ಬರುವುದಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯ, ಪ್ರತಿಭಟನೆ, ಚಳವಳಿ ಮಾಡುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಇಂತಹ ಬೆದರಿಕೆಗೆ ಹೆದರಲ್ಲ. ಕಾನೂನು ನಮಗೂ ಗೊತ್ತಿದೆ. ಕ್ರಮ ತೆಗೆದುಕೊಂಡರೆ ನಾವು ಸುಮ್ಮನೆ ಇರುತ್ತೀವಾ?

- - ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ