ನಾನು ಲಾ ಓದಿದ್ದೇನೆ, ಬೊಮ್ಮಾಯಿ ಲಾ ಓದಿಲ್ಲ, ಬೆದರಿಕೆಗೆ ಬಗ್ಗಲ್ಲ: ಸಿದ್ದರಾಮಯ್ಯ
ನಾನು ಲಾ ಓದಿದ್ದೇನೆ. ಆದರೆ, ಬೊಮ್ಮಾಯಿಯವರು ಲಾ ಓದಿಲ್ಲ. ಕಾನೂನು ಕ್ರಮ ತೆಗೆದುಕೊಂಡರೆ ನಾವು ಸುಮ್ಮನೆ ಇರುತ್ತೀವಾ?. ಹಾಗೆಲ್ಲಾ ಕ್ರಮ ತೆಗೆದುಕೊಳ್ಳಲು ಬರುವುದಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯ, ಪ್ರತಿಭಟನೆ, ಚಳವಳಿ ಮಾಡುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.
ಚಿಕ್ಕಬಳ್ಳಾಪುರ (ಸೆ.25): ‘ನಾನು ಲಾ ಓದಿದ್ದೇನೆ. ಆದರೆ, ಬೊಮ್ಮಾಯಿಯವರು ಲಾ ಓದಿಲ್ಲ. ಕಾನೂನು ಕ್ರಮ ತೆಗೆದುಕೊಂಡರೆ ನಾವು ಸುಮ್ಮನೆ ಇರುತ್ತೀವಾ?. ಹಾಗೆಲ್ಲಾ ಕ್ರಮ ತೆಗೆದುಕೊಳ್ಳಲು ಬರುವುದಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯ, ಪ್ರತಿಭಟನೆ, ಚಳವಳಿ ಮಾಡುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಬೊಮ್ಮಾಯಿಗೆ ತಿರುಗೇಟು ನೀಡಿದ್ದಾರೆ. ಗೌರಿಬಿದನೂರಲ್ಲಿ ಶನಿವಾರ ಸಾಂಸ್ಕೃತಿಕ ಚಿಂತಕ ಪ್ರೊ.ಬಿ.ಗಂಗಾಧರಮೂರ್ತಿ ಅವರ ನುಡಿನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರ ಜತೆ ಅವರು ಮಾತನಾಡಿದರು.
‘ಪೇಸಿಎಂ’ ಅಭಿಯಾನದ ವಿರುದ್ದ ಕಾಂಗ್ರೆಸ್ ನಾಯಕರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವುದಾಗಿ ಬೊಮ್ಮಾಯಿ ನೀಡಿರುವ ಎಚ್ಚರಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ‘ನಾನು ಲಾ ಓದಿದ್ದೇನೆ. ಇಂತಹ ಬೆದರಿಕೆಗಳಿಗೆಲ್ಲಾ ಹೆದರುವವನಲ್ಲ. ಕಾನೂನು ನಮಗೂ ಗೊತ್ತಿದೆ’ ಎಂದು ಟಾಂಗ್ ನೀಡಿದರು. ರಾಜ್ಯದಲ್ಲಿ 40 ಪರ್ಸೆಂಟ್ ಕಮೀಷನ್ ಇದೆ ಅಂತ ಹೇಳಿದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ವಿರುದ್ದ ಅವರು ಕಾನೂನು ಕ್ರಮ ತಗೊಂಡರಾ?. ಇವರ ಬಣ್ಣ ಬಯಲಾಗುತ್ತದೆ ಎಂಬ ಭಯದಿಂದ ಕೆಂಪಣ್ಣ ಮೇಲೆ ಕಾನೂನು ಕ್ರಮ ಕೈಗೊಂಡಿಲ್ಲ.
PayCM Posters: ಇಂದು ಪೇಸಿಎಂ ಪೋಸ್ಟರ್ ಅಂಟಿಸ್ತೀವಿ: ಡಿಕೆಶಿ, ಸಿದ್ದು ಸವಾಲ್
ಬಿಜೆಪಿ ಸರ್ಕಾರ ತಪ್ಪಿತಸ್ಥ ಆಗಿರುವುದರಿಂದ ಯಾವುದಕ್ಕೂ ತನಿಖೆ ಮಾಡದೇ ಪಲಾಯನ ಮಾಡುತ್ತಿದೆ. ಈ ಸರ್ಕಾರದಲ್ಲಿ ವ್ಯಾಪಕವಾಗಿ ಭ್ರಷ್ಟಾಚಾರ ನಡೆದಿದೆ. ನಾನು ಮಂಗಳವಾರವೇ ಅಧಿವೇಶನದಲ್ಲಿ 40% ಕಮೀಷನ್ ಬಗ್ಗೆ ಚರ್ಚೆ ಆಗಬೇಕೆಂದು ಒತ್ತಾಯಿಸಿದೆ. ಆದರೆ, ಅದು ಚರ್ಚೆಗೆ ಬಾರದ ರೀತಿಯಲ್ಲಿ ನೋಡಿಕೊಂಡರು. ಅಧಿವೇಶನದಲ್ಲಿ ಕೂಡ ಚರ್ಚೆಗೆ ಅವಕಾಶ ಕೊಡಲಿಲ್ಲ ಎಂದು ಆರೋಪಿಸಿದರು. 2018ರಲ್ಲಿ ಪ್ರಧಾನಿ ಮೋದಿ ಬಂದು ಸಿದ್ದರಾಮಯ್ಯ ಸರ್ಕಾರ 10% ಸರ್ಕಾರ ಅಂತ ಕರೆದರು. ಅದಕ್ಕೆ ಏನೆಂದು ಕರೆಯಬೇಕು ಎಂದು ಮರು ಪ್ರಶ್ನಿಸಿದರು.
ಜಾತಿಯಿಂದ ಯಾರೂ ದೊಡ್ಡವರಾಗಲು ಸಾಧ್ಯವಿಲ್ಲ: ಜಾತಿ ಎನ್ನುವುದು ಬಹಳ ಅಪಾಯಕಾರಿ. ಜಾತಿಯಿಂದಲೇ ಯಾರು ದೊಡ್ಡವರು, ಬುದ್ಧಿವಂತರು ಅಥವಾ ಜ್ಞಾನಿ ಆಗಲು ಸಾಧ್ಯವಿಲ್ಲ. ಸೂಕ್ತ ಅವಕಾಶ, ಪ್ರೋತ್ಸಾಹ ಸಿಕ್ಕರೆ ಯಾರು ಬೇಕಾದರೂ ವಿದ್ಯಾವಂತರು, ಜ್ಞಾನಿಗಳಾಗಬಹುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದರು. ಜಿಲ್ಲೆಯ ಗೌರಿಬಿದನೂರಿನ ಡಾ.ಬಿ.ಆರ್.ಅಂಬೇಡ್ಕರ್ ಸಮಾನತಾ ಸೌಧದಲ್ಲಿ ಶನಿವಾರ ಇತ್ತೀಚೆಗೆ ಆಗಲಿದ ನಾಡಿನ ಹಿರಿಯ ಸಾಂಸ್ಕೃತಿಕ ಚಿಂತಕ ಹಾಗೂ ಸಾಹಿತಿ ಪ್ರೊ.ಬಿ.ಗಂಗಾಧರಮೂರ್ತಿ ರವರಿಗೆ ಅವಿಭಜಿತ ಕೋಲಾರ ಜಿಲ್ಲೆ ಜನಪರ ವೇದಿಕೆ ಏರ್ಪಡಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜ್ಞಾನ ವಂಶಪಾರ್ಯಂಪರ್ಯವಲ್ಲ: ಕೆಲವು ಮಂದಿ ಬುದ್ಧಿ, ಜ್ಞಾನ ಬೆಳೆಯುವುದು ವಂಶಪರಂಪರೆಯಿಂದಾಗಿ ಎಂದು ದಾರಿ ತಪ್ಪಿಸುತ್ತಾರೆ. ಹಾಗೆ ಆಗಿದ್ದರೆ ಅಂಬೇಡ್ಕರ್ ಅಷ್ಟೊಂದು ಮೇಧಾವಿ ಆಗಲಿಕ್ಕೆ , ವಾಲ್ಮೀಕಿ ರಾಮಾಯಣ, ವ್ಯಾಸರು ಮಹಾಭಾರತ ಬರೆಯಲು ಸಾಧ್ಯವಾಗುತ್ತಿತ್ತೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಸತ್ಯ ಸಂಗತಿಗಳನ್ನು ಮರೆಮಾಚಲು ಮೇಲ್ವರ್ಗದ ಜನತೆ ಇತಿಹಾಸ ತಿರುಚುವ ಕೆಲಸಕ್ಕೆ ಆಗಲೇ ಮುಂದಾಗಿದ್ದರು. ಈಗಲೂ ಅದೇ ಕೆಲಸ ಮುಂದುವರೆದಿದೆ. ಆ ಕಾರಣಕ್ಕೆ ಅಂಬೇಡ್ಕರ್ ಸಂವಿಧಾನ ರಚನಾ ಸಮಿತಿ ಅಧ್ಯಕ್ಷರಾಗಿದ್ದರೂ ಕೂಡ ಸಂವಿಧಾನ ಶಿಲ್ಪಿ ಎಂಬ ಪದ ಪಠ್ಯಪುಸ್ತಕದಿಂದ ಕೈ ಬಿಟ್ಟರು ಎಂದು ಬಿಜೆಪಿ ವಿರುದ್ದ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.