ಮುಂಬರುವ ರಾಜ್ಯಸಭಾ ಚುನಾವಣೆಗೆ ಪಕ್ಷದ 10 ಅಭ್ಯರ್ಥಿಗಳ ಹೆಸರು ಪ್ರಕಟವಾದ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ದೊಡ್ಡಮಟ್ಟದಲ್ಲಿ ಅಪಸ್ವರ ಕೇಳಿಬಂದಿದೆ. ದಶಕಗಳಿಂದ ಪಕ್ಷಕ್ಕೆ ನಿಷ್ಟಾವಂತರಾಗಿದ್ದವರಿಗೆ ಮಣೆ ಹಾಕಲಾಗಿದೆ ಎಂದು ಹಲವು ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನವದೆಹಲಿ (ಮೇ.31): ಮುಂಬರುವ ರಾಜ್ಯಸಭಾ ಚುನಾವಣೆಗೆ ಪಕ್ಷದ 10 ಅಭ್ಯರ್ಥಿಗಳ ಹೆಸರು ಪ್ರಕಟವಾದ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ದೊಡ್ಡಮಟ್ಟದಲ್ಲಿ ಅಪಸ್ವರ ಕೇಳಿಬಂದಿದೆ. ದಶಕಗಳಿಂದ ಪಕ್ಷಕ್ಕೆ ನಿಷ್ಟಾವಂತರಾಗಿದ್ದವರಿಗೆ ಮಣೆ ಹಾಕಲಾಗಿದೆ ಎಂದು ಹಲವು ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಪಕ್ಷ ಆಡಳಿತವಿರುವ ರಾಜಸ್ಥಾನದಲ್ಲಿ ಎಲ್ಲಾ 3 ಸ್ಥಾನಗಳನ್ನೂ ಹೊರ ರಾಜ್ಯದವರಿಗೆ ನೀಡಿರುವುದಕ್ಕೂ ಕೂಡಾ ಸ್ಥಳೀಯ ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸೋಮವಾರ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್‌ ವಕ್ತಾರ ಪವನ್‌ ಖೇರಾ ‘ಬಹುಷಃ ನನ್ನ ತಪಸ್ಸಿನಲ್ಲಿ ಏನೋ ಕಡಿಮೆಯಾಗಿರಬಹುದು’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ, ಇನ್ನು ಮಾಜಿ ನಟಿ ನಗ್ಮಾ ಪ್ರತಿಕ್ರಿಯಿಸಿ, ‘2003-04ರಲ್ಲಿ ಪಕ್ಷ ಅಧಿಕಾರದಲ್ಲಿ ಇಲ್ಲದಿದ್ದ ವೇಳೆಯಲ್ಲಿ ನಾನು ಕಾಂಗ್ರೆಸ್‌ ಸೇರಿದ್ದೆ. ಆಗ ಸ್ವತಃ ಸೋನಿಯಾ ಗಾಂಧಿ ಅವರೇ ರಾಜ್ಯಸಭೆ ಸ್ಥಾನ ನೀಡುವ ಭರವಸೆ ನೀಡಿದ್ದರು. ಆದರೆ 18 ವರ್ಷಗಳ ನನ್ನ ತಪಸ್ಸು ಇಮ್ರಾನ್‌ ಅವರ (ಮಹಾರಾಷ್ಟ್ರದಿಂದ ಟಿಕೆಟ್‌ ಪಡೆದ ಇಮ್ರಾನ್‌) ಮುಂದೆ ಕುಸಿದು ಬಿತ್ತು’ ಎಂದಿದ್ದಾರೆ.

Rajya Sabha Election: ಬಿಜೆಪಿಗೆ ಒಕ್ಕಲಿಗರ ಸೆಳೆಯಲು ಜಗ್ಗೇಶ್‌ ರಾಜ್ಯಸಭೆಗೆ ಆಯ್ಕೆ?

ಮತ್ತೊಬ್ಬ ಕಾಂಗ್ರೆಸ್‌ ನಾಯಕ ಆಚಾರ್ಯ ಪ್ರಮೋದ್‌ ಕೃಷ್ಣಂ ‘ಪ್ರತಿಭೆಗಳನ್ನು ಹತ್ತಿಕ್ಕುವುದು ಆತ್ಮಹತ್ಯೆಯ ನಡೆ. ಸಲ್ಮಾನ್‌ ಖುರ್ಷಿದ್‌, ತಾರಿಖ್‌ ಅನ್ವರ್‌, ಗುಲಾಂ ನಬಿ ಆಜಾದ್‌ ಅವರ 40 ವರ್ಷಗಳ ತಪಸ್ಸು ಕೂಡಾ ಹುತಾತ್ಮವಾಗಿದೆ’ ಎಂದು ವ್ಯಂಗ್ಯವಾಡಿದ್ದಾರೆ. ಇನ್ನು ರಾಜಸ್ಥಾನದ ಎಲ್ಲಾ ಮೂರು ಸ್ಥಾನಗಳನ್ನು ಹೊರ ರಾಜ್ಯದವರಿಗೆ ನೀಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಕಾಂಗ್ರೆಸ್‌, ಹಾಲಿ ಪಕ್ಷೇತರ ಸದಸ್ಯ ಸನ್ಯಂ ಲೋಧಾ, ಯಾವ ಕಾರಣಕ್ಕಾಗಿ ರಾಜ್ಯದ ಕಾಂಗ್ರೆಸ ನಾಯಕರನ್ನು ಬಿಟ್ಟು ಅನ್ಯರಾಜ್ಯದವರಿಗೆ ನೀಡಲಾಗಿದೆ ಎಂಬುದನ್ನು ಪಕ್ಷ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕಾಂಗ್ರೆಸ್‌ ಬೆಂಬಲ ಕೋರಿದ ಜೆಡಿಎಸ್‌ನ ಕುಪೇಂದ್ರ ರೆಡ್ಡಿ: ಜೆಡಿಎಸ್‌ ಬೆಂಬಲದೊಂದಿಗೆ ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿರುವ ರಾಜ್ಯಸಭೆ ಮಾಜಿ ಸದಸ್ಯ ಕುಪೇಂದ್ರ ರೆಡ್ಡಿ ಅವರು ಭಾನುವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌ ಅವರನ್ನು ಭೇಟಿ ಮಾಡಿ ಬೆಂಬಲ ಕೋರಿದ್ದಾರೆ. ಭಾನುವಾರ ಸದಾಶಿವನಗರದ ಶಿವಕುಮಾರ್‌ ನಿವಾಸದಲ್ಲಿ ಈ ಬಗ್ಗೆ ವಿಸ್ತೃತ ಚರ್ಚೆ ನಡೆಸಿದ್ದು, ಶಿವಕುಮಾರ್‌ ಅವರು ರಾಜ್ಯಸಭೆ ಚುನಾವಣೆ ಬಗ್ಗೆ ಅಂತಿಮವಾಗಿ ಹೈಕಮಾಂಡ್‌ ನಿರ್ಧಾರ ಮಾಡಲಿದೆ. ಹೈಕಮಾಂಡ್‌ ಸೂಚನೆ ನೀಡಿದರೆ ಬೆಂಬಲಿಸುವುದಾಗಿ ಹೇಳಿ ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕರ್ನಾಟಕ ರಾಜ್ಯಸಭಾ ಎಲೆಕ್ಷನ್: ಬಿಜೆಪಿ ಘೋಷಿಸಿದ ಬೆನ್ನಲ್ಲೇ ಕಾಂಗ್ರೆಸ್‌ನಿಂದಲೂಅಭ್ಯರ್ಥಿ ಹೆಸರು ಪ್ರಕಟ

ಕುಪೇಂದ್ರರೆಡ್ಡಿ ಅವರು ಕಾಂಗ್ರೆಸ್‌ ಪಕ್ಷವು ಒಂದೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ತನ್ನ ಅಭ್ಯರ್ಥಿಯ ಗೆಲುವಿನ ಬಳಿಕ ಉಳಿದ ಹೆಚ್ಚುವರಿ ಮತಗಳನ್ನು ತಮಗೆ ನೀಡುವಂತೆ ಮನವಿ ಮಾಡಿದ್ದಾರೆ. ಜೆಡಿಎಸ್‌ ಅಧಿಕೃತ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ ಮತ ನೀಡಲು ಸಾಧ್ಯವಾಗದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿಯೂ ಕುಪೇಂದ್ರರೆಡ್ಡಿ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ, ಈ ಬಗ್ಗೆ ಶಿವಕುಮಾರ್‌ ಅವರು, ‘ಪಕ್ಷದ ನಾಯಕರು ಹಾಗೂ ಹೈಕಮಾಂಡ್‌ ಜತೆ ಚರ್ಚಿಸಿ ಪಕ್ಷದ ನಿರ್ಧಾರ ಪ್ರಕಟಿಸಲಾಗುವುದು. ಯಾವುದೇ ಖಚಿತ ಭರವಸೆಯನ್ನು ಈ ಕ್ಷಣದಲ್ಲೇ ನೀಡಲು ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ತಿಳಿದುಬಂದಿದೆ.