* ಕರ್ನಾಟಕ ರಾಜ್ಯಸಭಾ ಚುನಾವಣೆ 2022* ಬಿಜೆಪಿ ಘೋಷಿಸಿದ ಬೆನ್ನಲ್ಲೇ ಕಾಂಗ್ರೆಸ್‌ನಿಂದೂ ಅಭ್ಯರ್ಥಿ ಹೆಸರು ಪ್ರಕಟ* ವಿರೋಧದ ಮಧ್ಯೆ ಮತ್ತೊಮ್ಮೆ ಅವಕಾಶ ಕೊಟ್ಟ ಕಾಂಗ್ರೆಸ್ ಹೈಕಮಾಂಡ್

ಬೆಂಗಳೂರು, (ಮೇ.29): ಕರ್ನಾಟಕ ರಾಜ್ಯಸಭಾ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಇದರ ಬೆನ್ನಲ್ಲೇ ಇದೀಗ ಕಾಂಗ್ರೆಸ್‌ ಸಹ ಒಂದು ಸ್ಥಾನಕ್ಕೆ ತನ್ನ ಅಭ್ಯರ್ಥಿ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಿದೆ.

ಕರ್ನಾಟಕ ರಾಜ್ಯಸಭೆಗೆ ಜೈರಾಮ್ ರಮೇಶ್ ಅವರಿಗೆ ಮತ್ತೊಮ್ಮೆ ಅವಕಾಶ ನೀಡಲಾಗಿದೆ. ಹಲವರ ವಿರೋಧದ ನಡುವೆ ಕಾಂಗ್ರೆಸ್ ಹೈಕಮಾಂಡ್ ಜೈರಾಮ್ ರಮೇಶ್ ಅವರಿಗೆ ಮಣೆ ಹಾಕಿದೆ.

Scroll to load tweet…

ರಾಜ್ಯಸಭೆಗೆ ರಾಜ್ಯದಿಂದ ಜೈರಾಮ್‌ ರಮೇಶ್‌ ಅವರನ್ನು ಪುನಾರಾಯ್ಕೆಯ ತೀರ್ಮಾನದ ವಿರುದ್ಧ ಕೆಪಿಸಿಸಿ ಹಿರಿಯ ನಾಯಕರಾದ ಮಾಜಿ ಸಭಾಪತಿ ವಿ.ಆರ್‌.ಸುದರ್ಶನ್‌ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. 

ಕರ್ನಾಟಕ ರಾಜ್ಯಸಭಾ ಎಲೆಕ್ಷನ್‌ಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ, ಜಗ್ಗೇಶ್ ಅಚ್ಚರಿ ಆಯ್ಕೆ

ಜೈರಾಮ್ ರಮೇಶ್ 2016ರಲ್ಲಿ ಕರ್ನಾಟಕದಿಂದಲೇ ರಾಜ್ಯಸಭೆಯ ಸದಸ್ಯರಾಗಿ ಆಯ್ಕೆಯಾಗಿದ್ದರು. ಈಗ ಜೈರಾಮ್ ರಮೇಶ್ ಅವರೇ ಮತ್ತೊಮ್ಮೆ ಕರ್ನಾಟಕದಿಂದ ಕಾಂಗ್ರೆಸ್ ಅಭ್ಯರ್ಥಿಯಾಗ್ತಿದ್ದಾರೆ. ಇದಕ್ಕೂ ಮೊದಲು ಜೈರಾಮ್ ರಮೇಶ್ ಅವರು ಪ್ರತ್ಯೇಕವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿ ಮಾತುಕತೆ ನಡೆಸಿದ್ದರು.

ಕಾಂಗ್ರೆಸ್‌ ಒಂದು ಸ್ಥಾನದಲ್ಲಿ ಸುಲಭ ಜಯ ಸಾಧಿಸಲಿದೆ. ಇನ್ನು ಬಿಜೆಪಿಯಿಂದ ಇಬ್ಬರನ್ನು ಕಣಕ್ಕಿಳಿಸಿದೆ. ನಟ ಜಗ್ಗೇಶ್ ಅವರಿಗೆ ಬಿಜೆಪಿ ಹೈಕಮಾಂಡ್ ಮಣೆ ಹಾಕಿದ್ರೆ, ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರಿಗೆ ಮತ್ತೊಮ್ಮೆ ಅವಕಾಶ ಕೊಡಲಾಗಿದೆ. 

ಜೂನ್ 10ರಂದು ಕರ್ನಾಟಕ ಸೇರಿದಂತೆ 15 ರಾಜ್ಯಗಳಲ್ಲಿನ 57 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಉತ್ತರ ಪ್ರದೇಶವೊಂದರಲ್ಲೇ 11 ಸ್ಥಾನಗಳಿವೆ. ತಮಿಳುನಾಡು ಮತ್ತು ಮಹಾರಾಷ್ಟ್ರದಲ್ಲಿ 6 ಸ್ಥಾನಗಳಿವೆ. ಬಿಹಾರದಲ್ಲಿ 5, ಕರ್ನಾಟಕ, ಆಂಧ್ರಪ್ರದೇಶ ಮತ್ತು ರಾಜಸ್ಥಾನದಲ್ಲಿ 4 ಸ್ಥಾನಗಳು ತೆರವಾಗಿದ್ದು, ಚುನಾವಣೆ ನಡೆಯಲಿದೆ. ಈ 57 ಸ್ಥಾನಗಳ ಪೈಕಿ ಕಾಂಗ್ರೆಸ್ 8 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿದೆ.