ಯಾರಿದು ‘ಪಟ ಪಟ ಪಾರ್ವತಿ?’ ಯಾರಾದರೂ ಸೆಲಿಬ್ರಿಟಿ ಎಂದುಕೊಂಡಿರಾ? ಹಾಗೇನಾದರೂ ಅಂದುಕೊಂಡರೆ ಅದು ತಪ್ಪು. ‘ಪಟ ಪಟ ಪಾರ್ವತಿ’ ಯಾವುದೇ ಸೆಲಿಬ್ರಿಟಿ ಅಲ್ಲ; ಬಿಜೆಪಿಯ ಸ್ಟಾರ್‌ ಪ್ರಚಾರಕಿಯೂ ಅಲ್ಲ. ಶೆಟ್ಟರ್‌ ಆರು ಸಲ ಶಾಸಕರಾದರೂ ಏನು ಕೆಲಸ ಮಾಡಿಲ್ಲ ಎಂದು ಟೀಕಿಸುವವರಿಗೆ ಶೆಟ್ಟರ್‌ ಬೆಂಬಲಿಗರು ಕಾರ್ಟೂನ್‌ ವಿಡಿಯೋ ಮೂಲಕ ನೀಡುತ್ತಿರುವ ಪ್ರತ್ಯುತ್ತರ ಇದು.

ಶಿವಾನಂದ ಗೊಂಬಿ

 ಹುಬ್ಬಳ್ಳಿ (ಜ.19) : ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಪ್ರಚಾರಕ್ಕೆ ‘ಪಟ ಪಟ ಪಾರ್ವತಿ’ ಬಂದಿದ್ದಾಳೆ. ಶೆಟ್ಟರ್‌ ತಮ್ಮ ಕ್ಷೇತ್ರದಲ್ಲಿ ಮಾಡಿರುವ ಕೆಲಸಗಳ ಬಗ್ಗೆ ಅಬ್ಬರದ ಪ್ರಚಾರ ನಡೆಸುತ್ತಿದ್ದಾಳೆ!

ಯಾರಿದು ‘ಪಟ ಪಟ ಪಾರ್ವತಿ?’ ಯಾರಾದರೂ ಸೆಲಿಬ್ರಿಟಿ ಎಂದುಕೊಂಡಿರಾ? ಹಾಗೇನಾದರೂ ಅಂದುಕೊಂಡರೆ ಅದು ತಪ್ಪು. ‘ಪಟ ಪಟ ಪಾರ್ವತಿ’ ಯಾವುದೇ ಸೆಲಿಬ್ರಿಟಿ ಅಲ್ಲ; ಬಿಜೆಪಿಯ ಸ್ಟಾರ್‌ ಪ್ರಚಾರಕಿಯೂ ಅಲ್ಲ. ಶೆಟ್ಟರ್‌ ಆರು ಸಲ ಶಾಸಕರಾದರೂ ಏನು ಕೆಲಸ ಮಾಡಿಲ್ಲ ಎಂದು ಟೀಕಿಸುವವರಿಗೆ ಶೆಟ್ಟರ್‌ ಬೆಂಬಲಿಗರು ಕಾರ್ಟೂನ್‌ ವಿಡಿಯೋ ಮೂಲಕ ನೀಡುತ್ತಿರುವ ಪ್ರತ್ಯುತ್ತರ ಇದು.

ಹುಬ್ಬಳ್ಳಿಯಲ್ಲಿ ಯುವ ಜನೋತ್ಸವ ಸಂಭ್ರಮ: ಮೋದಿ ಕಾರ್ಯಕ್ರಮದ ವೇದಿಕೆಯಲ್ಲಿ ಶೆಟ್ಟರ್‌ಗೆ ಇಲ್ವಾ ಅವಕಾಶ?

ಚುನಾವಣೆ ಹತ್ತಿರ ಬರುತ್ತಿದ್ದಂತೆ ಎಲ್ಲ ಪಕ್ಷಗಳು ಅಬ್ಬರದ ಪ್ರಚಾರದಲ್ಲಿ ತೊಡಗುತ್ತಿವೆ. ಅಭ್ಯರ್ಥಿಗಳು ಸಾಮಾಜಿಕ ಜಾಲತಾಣ, ಸಣ್ಣ ಸಣ್ಣ ವಿಡಿಯೋ ಹೀಗೆ ಬಗೆ ಬಗೆಯ ಟೆಕ್ನಿಕ್‌ ಬಳಸಿ ಪ್ರಚಾರ ನಡೆಸುತ್ತಿದ್ದಾರೆ. ಇದೀಗ ಶೆಟ್ಟರ್‌ ಅವರ ಬೆಂಬಲಿಗರು ಕೂಡ ತಾವೇನು ಕಮ್ಮಿಯೆನ್ನುವಂತೆ ಪಟ ಪಟ ಪಾರ್ವತಿಯ ಪಾತ್ರವನ್ನು ಸೃಷ್ಟಿಸಿ ಚಿಕ್ಕದಾದ ವಿಡಿಯೋ ಮಾಡಿದ್ದಾರೆ. ಇಬ್ಬರ ಸಂಭಾಷಣೆ ಇರುವ ಈ ವಿಡಿಯೋದಲ್ಲಿ ಶೆಟ್ಟರ್‌ ಅವರು ಮಾಡಿರುವ ಕೆಲಸ, ಅದರಿಂದ ಜನರಿಗೆ ಆಗಿರುವ ಅನುಕೂಲದ ಬಗ್ಗೆ ವಿವರಣೆ ಇದೆ. ಈ ವಿವರಣೆಯನ್ನೂ ನೀಡುವುದೇ ಪಟ ಪಟ ಪಾರ್ವತಿ ಎನ್ನುವ ಪಾತ್ರಧಾರಿ. ಸದ್ಯಕ್ಕೆ ಬಿಆರ್‌ಟಿಎಸ್‌ ಸಾರಿಗೆ ವ್ಯವಸ್ಥೆ ಬಗ್ಗೆಯೇ ಮೊದಲ ವಿಡಿಯೋ ಬಂದಿದೆ.

ಬಿಆರ್‌ಟಿಎಸ್‌ ಯಾವ ರೀತಿ ಜನರಿಗೆ ಅನುಕೂಲವಾಗಿದೆ ಎಂಬುದರ ಬಗ್ಗೆ ಮಾಹಿತಿ ಈ ವಿಡಿಯೋದಲ್ಲಿದೆ. ಪಾರ್ವತಿ ಎಂಬ ಪಾತ್ರ ಈ ವಿವರಣೆಯನ್ನು ನೀಡುತ್ತಾ ಸಾಗಿದೆ. ಒಂದು ನಿಮಿಷದ ವಿಡಿಯೋ ನೋಡಲು ಖುಷಿ ಕೊಡುತ್ತಿದೆ. ಜತೆಗೆ ಕೆಲಸದ ಬಗ್ಗೆ ಮಾಹಿತಿ ನೀಡುತ್ತಿದೆ. ಇದು ಜನರಿಗೆ ಮುದ ನೀಡುವಂತಾಗಿದೆ. ಬಿಆರ್‌ಟಿಎಸ್‌ನಿಂದ ಏನು ಉಪಯೋಗ ಎಂದು ಟೀಕಿಸುವವರಿಗೂ ಇದು ಪ್ರತ್ಯುತ್ತರವೆಂಬಂತಾಗಿದೆ. ಇದೀಗ ಸಿಕ್ಕಾಪಟ್ಟೆವೈರಲ್‌ ಆಗಿದೆ. ಆದರೆ ಈ ಬಗ್ಗೆ ಸ್ವತಃ ಶೆಟ್ಟರ್‌ ಅವರಿಗೆ ಗೊತ್ತಿಲ್ಲ. ಅವರ ಬೆಂಬಲಿಗರು ಮಾಡಿದ್ದಾರೆ. ಅವರ ಮೊಬೈಲ್‌ಗೆ ಈ ವಿಡಿಯೋ ಹೋದಾಗಲೇ ಈ ಬಗ್ಗೆ ಅವರಿಗೆ ಗೊತ್ತಾಗಿದೆ.

ಸದ್ಯಕ್ಕೆ ಮೊದಲ ವಿಡಿಯೋ ಬಂದಿದ್ದು, ಇದೇ ರೀತಿ ಮುಂಬರುವ ದಿನಗಳಲ್ಲಿ ಶೆಟ್ಟರ್‌ ಮಾಡಿರುವ ಕೆಲಸಗಳ ಬಗ್ಗೆ ಒಂದೊಂದು ನಿಮಿಷದ ವಿಡಿಯೋಗಳು ಹೊರಬರಲಿವೆ ಎಂದು ಅವರ ಬೆಂಬಲಿಗ ಗುಂಪು ತಿಳಿಸುತ್ತದೆ. ಇದೇ ಮೊದಲ ಬಾರಿಗೆ ಸೆಂಟ್ರಲ್‌ ಕ್ಷೇತ್ರದಲ್ಲಿ ಪ್ರಚಾರಕ್ಕೆ ಈ ರೀತಿ ಹೈಟೆಕ್‌ ಟಚ್‌ ನೀಡಿದಂತಾಗಿದೆ. ಜತೆಗೆ ಸಾಮಾಜಿಕ ಜಾಲತಾಣದಲ್ಲೂ ಅವರ ಅಭಿಮಾನಿಗಳು ಹಂಚಿಕೊಂಡಿದ್ದಾರೆ.

ಅಧಿವೇಶನದಲ್ಲಿ ಸೈಲೆಂಟ್ ಆಗಿದ್ದವರು ಇಲ್ಲಿ ರಾಜಕೀಯ ಮಾಡುತ್ತಿದ್ದಾರೆ: ಸಿದ್ದರಾಮಯ್ಯ ವಿರುದ್ಧ ಶೆಟ್ಟರ್ ಕಿಡಿ

ಪಟ ಪಟ ಪಾರ್ವತಿ ವಿಡಿಯೋ ಬಗ್ಗೆ ನನಗೆ ಗೊತ್ತಿಲ್ಲ. ನನ್ನ ಮೊಬೈಲ್‌ಗೂ ಈ ವಿಡಿಯೋ ಬಂದಿದೆ. ನೋಡಿ ನನಗೆ ಅಚ್ಚರಿಯಾಯಿತು. ನಮ್ಮ ಅಭಿಮಾನಿಗಳ್ಯಾರೋ ಮಾಡಿರಬಹುದು.

ಜಗದೀಶ ಶೆಟ್ಟರ್‌, ಮಾಜಿ ಸಿಎಂ