Asianet Suvarna News Asianet Suvarna News

ವಿಭಜನೆಯಾಗಲಿದೆಯೇ ಕೆಸಿಆರ್‌ ಅವರ ತೆಲಂಗಾಣ ರಾಷ್ಟ್ರ ಸಮಿತಿ?

ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ಅವರು ತಮ್ಮ ಪಕ್ಷದ ಹೆಸರನ್ನು ತೆಲಂಗಾಣ ರಾಷ್ಟ್ರ ಸಮಿತಿಯ ಬದಲು ಭಾರತ್‌ ರಾಷ್ಟ್ರ ಸಮಿತಿ (ಬಿಆರ್‌ಎಸ್‌) ಆಗಿ ಬದಲಾವಣೆ ಮಾಡಿದ್ದಾರೆ. ರಾಷ್ಟ್ರೀಯ ಪಕ್ಷವಾಗಿ ರೂಪಿಸುವ ನಿಟ್ಟಿನಲ್ಲಿ ಈ ಪ್ರಯತ್ನ ಮಾಡಿದ್ದರೂ, ಇದು ಟಿಆರ್‌ಎಸ್‌ ವಿಭಜನೆಗೆ ಕಾರಣವಾಗಬಹುದು ಎಂದು ಅಂದಾಜು ಮಾಡಲಾಗಿದೆ.
 

Partition in TRS  Daughter Kavita did not attend the launch of KCR national party san
Author
First Published Oct 6, 2022, 3:57 PM IST

ಹೈದರಾಬಾದ್‌ (ಅ.6): ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ (ಕೆಸಿಆರ್) ಬುಧವಾರ ತಮ್ಮ ಹಳೆಯ ಪಕ್ಷವಾದ ಟಿಆರ್‌ಎಸ್ ಅನ್ನು ಮರುನಾಮಕರಣ ಮಾಡಿ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಎಂದು ಘೋಷಣೆ ಮಾಡಿದ್ದಾರೆ. ಆ ಮೂಲಕ ಟಿಆರ್‌ಎಸ್‌ಅನ್ನು ರಾಷ್ಟ್ರಮಟ್ಟದಲ್ಲಿ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡಲಾಗಿದೆ. ಆದರೆ, ಇದನ್ನು ಸ್ವಪಕ್ಷೀಯರಿಂದಲೇ ವಿರೋಧ ವ್ಯಕ್ತವಾಗಿದೆ. ಕೆಲವು ನಾಯಕರು ಈಗಾಗಲೇ ಭಿನ್ನಾಭಿಪ್ರಾಯಗಳನ್ನು ಹೊರಹಾಕುತ್ತಿದ್ದಾರೆ. ಇನ್ನೊಂದೆಡೆ, ಟಿಆರ್‌ಎಸ್‌ಅನ್ನು ರಾಷ್ಟ್ರಮಟ್ಟದ ಪಕ್ಷವನ್ನಾಗಿ ಘೋಷಣೆ ಮಾಡುವ ಅದ್ದೂರಿ ಕಾರ್ಯಕ್ರಮದಲ್ಲಿ ಕೆಸಿ ಚಂದ್ರಶೇಖರ್‌ ರಾವ್‌ ಅವರ ಸ್ವಂತ ಪುತ್ರಿ ಹಾಗೂ ಪಕ್ಷದ ಹಿರಿಯ ನಾಯಕಿ ಕೆ.ಕವಿತಾ ಗೈರು ಹಾಜರಾಗಿದ್ದಾರೆ.  ಇದರ ಬೆನ್ನಲ್ಲಿಯೇ ಟಿಆರ್‌ಎಸ್‌ ವಿಭಜನೆ ಆಗಬಹುದು ಎನ್ನುವ ಊಹಾಪೋಹಗಳು ಜೋರಾಗಿ ಎದ್ದಿವೆ. ಕೆಸಿ ಚಂದ್ರಶೇಖರ್‌ ರಾವ್‌ ಬಹಳ ಮಹತ್ವಾಕಾಂಕ್ಷೆಯೊಂದಿಗೆ ಪಕ್ಷವನ್ನು ರಾಷ್ಟ್ರೀಯ ಪಕ್ಷವನ್ನಾಗಿ ಘೋಷಣೆ ಮಾಡಿದ್ದರೂ, ತಮ್ಮ ಸ್ವಂತ ಮಗಳೇ ಈ ಕಾರ್ಯಕ್ರಮಕ್ಕೆ ಹಾಜರಾಗದೇ ಇರುವುದು, ತೆಲಂಗಾಣ ರಾಷ್ಟ್ರ ಸಮಿತಿ ವಿಭಜನೆಯಾಗಬಹುದು ಎನ್ನುವ ಸೂಚನೆ ಎಂದು ತೆಲಂಗಾಣದಲ್ಲಿ ಚರ್ಚೆ ಮಾಡಲಾಗುತ್ತಿದೆ.

ಹೈಪ್ರೊಫೈಲ್ ಕಾರ್ಯಕ್ರಮದಿಂದ ಕವಿತಾ (Kalvakuntla Kavitha) ನಾಪತ್ತೆಯಾಗಿದ್ದಲ್ಲದೆ, ಮುಂಬರುವ ಮುನುಗೋಡು ಉಪಚುನಾವಣೆಯ ಟಿಆರ್‌ಎಸ್ ಉಸ್ತುವಾರಿ ಪಟ್ಟಿಯಲ್ಲೂ ಅವರ ಹೆಸರು ನಾಪತ್ತೆಯಾಗಿದೆ. ಕೆಸಿಆರ್ ಮನೆಯಲ್ಲಿಯೇ ಎಲ್ಲವೂ ಸರಿ ಹೋಗುತ್ತಿಲ್ಲ ಎಂಬುದು ಈ ಎಲ್ಲ ಚಟುವಟಿಕೆಗಳಿಂದ ಸ್ಪಷ್ಟವಾಗಿದೆ.

ರಾಷ್ಟ್ರೀಯ ಪಕ್ಷವಾಗಲು ಕೆಸಿಆರ್ ಮೊದಲ ಹೆಜ್ಜೆ : ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ (Telangana CM K Chandrashekhar Rao) ಬುಧವಾರ ಟಿಆರ್‌ಎಸ್ ಹೆಸರನ್ನು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಎಂದು ಬದಲಾಯಿಸಿದರು, 2024 ರ ಚುನಾವಣೆಯ (2024 Loksabha Election) ಮೊದಲು ರಾಷ್ಟ್ರೀಯ ಪಕ್ಷವಾಗುವತ್ತ ಮೊದಲ ಹೆಜ್ಜೆ ಇಟ್ಟಿದ್ದಾರೆ.  ಈ ವರ್ಷದ ಜೂನ್‌ನಲ್ಲಿ, ಕೆಸಿಆರ್ ಅವರು ಟಿಆರ್‌ಎಸ್ ನಾಯಕರೊಂದಿಗೆ ರಾಷ್ಟ್ರೀಯ ಪಕ್ಷವನ್ನು ರಚಿಸುವ ಆಲೋಚನೆಯನ್ನು ಚರ್ಚಿಸಿದ್ದರು. ಆದರೆ, ಆಗ ಹೊಸ ಪಕ್ಷದ ವಿಚಾರದಲ್ಲಿ ಅಂತಿಮ ನಿರ್ಧಾರ ಕೈಗೊಂಡಿರಲಿಲ್ಲ. ಆ ಸಮಯದಲ್ಲಿ ಟಿಆರ್‌ಎಸ್ ಮೂಲಗಳು 'ಭಾರತ್ ರಾಷ್ಟ್ರೀಯ ಸಮಿತಿ' (ಬಿಆರ್‌ಎಸ್), 'ಉಜ್ವಲ್ ಭಾರತ್ ಪಾರ್ಟಿ' ಮತ್ತು 'ನಯಾ ಭಾರತ್ ಪಾರ್ಟಿ' ಮುಂತಾದ ಕೆಲವು ಹೆಸರುಗಳು ಹೊಸ ಪಕ್ಷಕ್ಕೆ ಚರ್ಚೆಯಾಗುತ್ತಿದ್ದವು ಎಂದು ಹೇಳಲಾಗಿದೆ.

ನಾಳೆ ಕೆಸಿಆರ್‌ ಹೊಸ ರಾಷ್ಟ್ರೀಯ ಪಕ್ಷ ಅನಾವರಣ, ಸ್ಥಳೀಯರಿಗೆ ಮದ್ಯದ ಬಾಟಲಿ, ಕೋಳಿ ನೀಡಿದ ಟಿಆರ್‌ಎಸ್‌ ನಾಯಕ!

2022ರ ಅಕ್ಟೋಬರ್ 5 ರ ಬುಧವಾರದಂದು ರಾಷ್ಟ್ರೀಯ ಪಕ್ಷ 'ಭಾರತ್ ರಾಷ್ಟ್ರ ಸಮಿತಿ' ಪ್ರಾರಂಭಕ್ಕಾಗಿ ಟಿಆರ್‌ಎಸ್ (TRS) ನಾಯಕರು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ತೆಲಂಗಾಣ ಭವನದಲ್ಲಿ ಪಾಲ್ಗೊಂಡಿದ್ದರು. ಸಂಸದರು, ಶಾಸಕರು ಮತ್ತು ಎಂಎಲ್‌ಸಿಗಳು ಎಲ್ಲರೂ ಹಾಜರಿದ್ದರು, ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪುತ್ರಿ ಮತ್ತು ಟಿಆರ್‌ಎಸ್ ಎಂಎಲ್‌ಸಿ ಕಲ್ವಕುಂಟ್ಲ ಕವಿತಾ ಅವರು ಮಾತ್ರವೇ ನಾಪತ್ತೆಯಾಗಿದ್ದರು. ಮೊನ್ನೆಯಷ್ಟೇ ಕಲ್ವಕುಂಟ್ಲ ಕವಿತಾ ಅವರು ದಸರಾ ಸಂದರ್ಭದಲ್ಲಿ ತಮ್ಮ ಮನೆಯಲ್ಲಿ ನಡೆದ ಪೂಜೆಯ ಕುರಿತು ಟ್ವೀಟ್ ಮಾಡಿದ್ದರು. ಟಿಆರ್‌ಎಸ್‌ನ ರಾಷ್ಟ್ರೀಯ ಪಕ್ಷ ಅನಾವರಣ ಮಾಡುವ ಕಾರ್ಯಕ್ರಮವನ್ನು ತಪ್ಪಿಸಿಕೊಂಡಿದ್ದು ಮಾತ್ರವಲ್ಲ, ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟ ಆಗುವವರೆಗೂ ಈ ಬಗ್ಗೆ ಟ್ವೀಟ್‌ ಮಾಡಿರಲಿಲ್ಲ.

ಹೈದರಾಬಾದ್‌ನಲ್ಲಿ ಕೆಸಿಆರ್‌, ಎಚ್‌ಡಿಕೆ ಮಹತ್ವದ ಮಾತುಕತೆ

ಈ ಮಧ್ಯೆ ರಾಷ್ಟ್ರೀಯ ಪಕ್ಷ ಸ್ಥಾಪನೆಯಾಗುವ ಮುನ್ನವೇ ಕೆಸಿಆರ್ ಅವರ ಕುಟುಂಬದಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂದು ಬಿಜೆಪಿ ಹೇಳಿಕೊಂಡಿದೆ. ಬಿಜೆಪಿ ವಕ್ತಾರ ಎನ್‌ವಿ ಸುಭಾಷ್‌, ದೆಹಲಿಯ ಅಬಕಾರಿ ಹಗರಣ ಕೂಡ ಕವಿತಾ ಕಾರ್ಯಕ್ರಮದಿಂದ ಹೊರಗುಳಿಯಲು ಪ್ರಮುಖ ಕಾರಣ ಎಂದಿದ್ದಾರೆ. “ದೆಹಲಿ ಮದ್ಯದ ವಿವಾದದಲ್ಲಿ ಅವರ ಹೆಸರು ಸಿಕ್ಕಿಹಾಕಿಕೊಂಡಿರುವುದರಿಂದ, ಬಹುಶಃ ಸಿಎಂ ಕೆಸಿಆರ್ ಅವರ ಉಪಸ್ಥಿತಿಯು ರಾಷ್ಟ್ರೀಯ ಪಕ್ಷದ ಭವಿಷ್ಯವನ್ನು ಕುಂಠಿತಗೊಳಿಸುತ್ತದೆ ಎಂದು ಭಾವಿಸಿದ್ದರು. ಕವಿತಾ ಅವರು ರಾಷ್ಟ್ರೀಯ ಪಕ್ಷದಲ್ಲಿ ದೊಡ್ಡ ಪಾತ್ರವನ್ನು ನಿರೀಕ್ಷಿಸುವ ಸಾಧ್ಯತೆಯಿದೆ ಎಂದು ಸುಭಾಷ್ ಹೇಳಿದ್ದಾರೆ.

Follow Us:
Download App:
  • android
  • ios