ರಾಷ್ಟ್ರೀಯ ಪಕ್ಷ ಘೋಷಣೆಗೆ ತೆಲಂಗಾಣ ಸಿಎಂ ಸನ್ನದ್ಧ, ರಾಷ್ಟ್ರ ರಾಜಕಾರಣದ ಆಗುಹೋಗುಗಳ ಬಗ್ಗೆ ಚರ್ಚೆ

ಹೈದರಾಬಾದ್‌(ಸೆ.12): ಹೊಸ ರಾಷ್ಟ್ರಮಟ್ಟದ ಪಕ್ಷ ಸ್ಥಾಪನೆ ಘೋಷಣೆ ಮಾಡಿರುವ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್‌ (ಕೆಸಿಆರ್‌) ಹಾಗೂ ಅವರ ಪುತ್ರರೂ ಆದ ತೆಲಂಗಾಣ ಸಚಿವ ಕೆ.ಟಿ. ರಾಮರಾವ್‌ ಅವರನ್ನು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್‌ ಮುಂದಾಳು ಎಚ್‌.ಡಿ.ಕುಮಾರಸ್ವಾಮಿ ಭಾನುವಾರ ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದರು.

ಈ ಭೇಟಿ ಸಲುವಾಗಿ ಶನಿವಾರವೇ ಹೈದರಾಬಾದ್‌ಗೆ ಆಗಮಿಸಿದ್ದ ಕುಮಾರಸ್ವಾಮಿ ಅವರು, ಭಾನುವಾರ ಕೆಸಿಆರ್‌ ಜತೆ ಸಮಾಲೋಚನೆ ನಡೆಸಿದರು. ಕೆಸಿಆರ ಹೊಸ ರಾಷ್ಟ್ರೀಯ ಪಕ್ಷ ಘೋಷಣೆ ಈ ಹಿನ್ನೆಲೆಯಲ್ಲಿ ಇಬ್ಬರೂ ನಾಯಕರ ಮಾತುಕತೆ ಮಹತ್ವ ಪಡೆದುಕೊಂಡಿದೆ.

PM ಹುದ್ದೆ ಮೇಲೆ ಕಣ್ಣಿಟ್ಟು KCR ಹೊಸ ರಾಷ್ಟ್ರೀಯ ಪಕ್ಷ ಘೋಷಣೆ..? ಕರ್ನಾಟಕ, ಗುಜರಾತ್‌ನಲ್ಲಿ ಸ್ಪರ್ಧೆ..!

ಈ ಬಗ್ಗೆ ಟ್ವೀಟ್‌ ಮಾಡಿರುವ ಕುಮಾರಸ್ವಾಮಿ, ‘ನಾವು ಕರ್ನಾಟಕ-ತೆಲಂಗಾಣ ಕುರಿತ ವಿಚಾರಗಳು, ರಾಷ್ಟ್ರೀಯ ವಿಚಾರಗಳ ಚರ್ಚೆ ನಡೆಸಿದೆವು. ಇದಲ್ಲದೆ ಕೆಟಿಆರ್‌ ಜತೆಗಿನ ಸಭೆಯೂ ಖುಷಿ ನೀಡಿದೆ’ ಎಂದಿದ್ದಾರೆ.
ಇದೇ ವೇಳೆ, ಕರ್ನಾಟಕ-ತೆಲಂಗಾಣದ ಅಭಿವೃದ್ಧಿ, ರಾಷ್ಟ್ರ ರಾಜಕಾರಣದಲ್ಲಿ ಪ್ರಾದೇಶಿಕ ಪಕ್ಷಗಳ ಪಾತ್ರ, ಪ್ರತಿಪಕ್ಷಗಳಲ್ಲಿ ಒಗ್ಗಟ್ಟು ಮೂಡಿಸಲು ಕೆಸಿಆರ್‌ ವಹಿಸುತ್ತಿರುವ ಪಾತ್ರ ಹಾಗೂ ಇನ್ನಿತರೆ ರಾಜಕೀಯ ಪಕ್ಷಗಳ ಹೊಣೆಗಾರಿಕೆ ಕುರಿತು ಇಬ್ಬರೂ ಮಾತುಕತೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹಾಗೂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಲು ಈ ಹಿಂದೆ ಕೆಸಿಆರ್‌ ಬೆಂಗಳೂರಿಗೆ ಆಗಮಿಸಿದ್ದರು. ಇದೀಗ ಕುಮಾರಸ್ವಾಮಿ ಅವರು ಹೈದರಾಬಾದ್‌ಗೆ ಆಗಮಿಸಿ ಮಾತುಕತೆ ನಡೆಸಿದ್ದಾರೆ.