‘ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಜಾರಿ ವೇಳೆ ಸಣ್ಣ ಪುಟ್ಟ ವ್ಯತ್ಯಾಸ ಬಂದರೂ ಸರಿದೂಗಿಸಿಕೊಂಡು ಹೋಗಬೇಕು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ನೇತೃತ್ವದಲ್ಲಿ ಶನಿವಾರ ನಡೆದ ಕಾಂಗ್ರೆಸ್‌ ದಲಿತ ಸಚಿವರು, ಶಾಸಕರ ಸಭೆಯಲ್ಲಿ ನಿರ್ಣಯ ಮಾಡಲಾಗಿದೆ.

 ಬೆಂಗಳೂರು : ‘ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಜಾರಿ ವೇಳೆ ಸಣ್ಣ ಪುಟ್ಟ ವ್ಯತ್ಯಾಸ ಬಂದರೂ ಸರಿದೂಗಿಸಿಕೊಂಡು ಹೋಗಬೇಕು. ಯಾವುದೇ ಸಂಘರ್ಷ ಉಂಟಾಗದಂತೆ ಒಳ ಮೀಸಲಾತಿ ಜಾರಿಗೆ ಸಹಕರಿಸಬೇಕು’ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ನೇತೃತ್ವದಲ್ಲಿ ಶನಿವಾರ ನಡೆದ ಕಾಂಗ್ರೆಸ್‌ ದಲಿತ ಸಚಿವರು, ಶಾಸಕರ ಸಭೆಯಲ್ಲಿ ನಿರ್ಣಯ ಮಾಡಲಾಗಿದೆ.

ನ್ಯಾ.ನಾಗಮೋಹನ್‌ ದಾಸ್ ನೇತೃತ್ವದ ಏಕಸದಸ್ಯ ಆಯೋಗ ಆ.4 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವರದಿ ಸಲ್ಲಿಸಲಿದೆ. ವರದಿ ಸಲ್ಲಿಕೆಯಾದ ಬಳಿಕ ಮತ್ತೊಮ್ಮೆ ಸಭೆ ಸೇರಿ ಚರ್ಚಿಸಿ ನಂತರ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ತೀರ್ಮಾನಿಸಲಾಗಿದೆ.

ಒಳ ಮೀಸಲಾತಿ ಜಾರಿ ವೇಳೆ ಯಾವುದೇ ವ್ಯತ್ಯಾಸಗಳು ಬಂದರೂ ಸರಿದೂಗಿಸಿಕೊಂಡು ಹೋಗಬೇಕು. ಯಾವುದೇ ಸಂಘರ್ಷ ಉಂಟಾಗದಂತೆ ಒಳ ಮೀಸಲಾತಿ ಜಾರಿ ಮಾಡಲು ಸಹಕರಿಸಬೇಕು. ಈಗ ಒಳ ಮೀಸಲಾತಿ ಜಾರಿಯಾಗದಿದ್ದರೆ ಮತ್ತಷ್ಟು ಕಾಲ ಮುಂದೆ ಹೋಗುತ್ತದೆ ಎಂದು ಪರಮೇಶ್ವರ್‌ ಅವರು ಎರಡೂ ಬಣದ ದಲಿತ ನಾಯಕರಿಗೆ ಎಚ್ಚರಿಕೆ ನೀಡಿದರು ಎಂದು ತಿಳಿದುಬಂದಿದೆ.

ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರ ಸದಾಶಿವನಗರ ನಿವಾಸದಲ್ಲಿ ಸಚಿವರಾದ ಕೆ.ಎಚ್.ಮುನಿಯಪ್ಪ, ಎಚ್.ಸಿ.ಮಹದೇವಪ್ಪ, ಶಿವರಾಜ್‌ ತಂಗಡಗಿ, ಆರ್.ಬಿ.ತಿಮ್ಮಾಪುರ ಹಾಗೂ ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಶಾಸಕರು ಹಾಗೂ ಪರಿಷತ್‌ ಸದಸ್ಯರು ಭಾಗವಹಿಸಿದ್ದರು.

101 ಜಾತಿ ಒಟ್ಟಾಗಿ ಹೋಗಲು ತೀರ್ಮಾನ: ಪರಂ

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ನ್ಯಾ.ನಾಗಮೋಹನ್ ದಾಸ್ ಅವರ ಆಯೋಗ ಸದ್ಯದಲ್ಲೇ ವರದಿ ನೀಡಲಿದೆ. ವರದಿ ಜಾರಿ ವೇಳೆ ಪರಿಶಿಷ್ಟ ಜಾತಿಯಲ್ಲಿರುವ 101 ಜಾತಿಗಳೂ ಒಟ್ಟಾಗಿ ಹೋಗಬೇಕು. ಇಲ್ಲವಾದರೆ ಒಳಮೀಸಲಾತಿ ಜಾರಿ ಮತ್ತೇ ಮುಂದೆ ಹೋಗುತ್ತದೆ ಎಂಬುದಾಗಿ ಚರ್ಚಿಸಿದ್ದೇವೆ ಎಂದು ಹೇಳಿದರು.

ಆಯೋಗದ ವರದಿ ಬಂದ ನಂತರ ಸ್ವಾಭಾವಿಕವಾಗಿ ಸಂಪುಟದ ತೀರ್ಮಾನಕ್ಕೆ ಹೋಗುತ್ತದೆ. ನಂತರ ಸರ್ಕಾರ ತೀರ್ಮಾನ ತೆಗೆದುಕೊಳ್ಳಲಿದೆ. ಈ ವೇಳೆ ಸಣ್ಣ ಸಮುದಾಯದವರಿಗೂ ನ್ಯಾಯ ಸಿಗಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಹೊಂದಾಣಿಕೆಯಿಂದ ಮುಂದೆ ಹೋಗಬೇಕು. ಯಾವುದೇ ಸಂಘರ್ಷ ಉಂಟಾಗದಂತೆ ಸಹಕರಿಸಬೇಕು ಎಂದು ತೀರ್ಮಾನಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಒಳ ಮೀಸಲಾತಿ ಜಾರಿಗೆ ಬದ್ಧ:

ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಮಾತನಾಡಿ, ದಲಿತ ಸಚಿವರು, ಶಾಸಕರು ಹಾಗೂ ಪರಿಷತ್‌ ಸದಸ್ಯರು ಪರಮೇಶ್ವರ್‌ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದ್ದೇವೆ. ಸಭೆಯ ಅಜೆಂಡಾ ಒಳ ಮೀಸಲಾತಿ ಮಾತ್ರ. ಎಸ್ಸಿ ಒಳ ಮೀಸಲಾತಿ ಜಾರಿ ಮಾಡುವುದಾಗಿ 2023ರ ಚುನಾವಣೆ ಪ್ರಣಾಳಿಕೆಯಲ್ಲೇ ನಾವು ಘೋಷಿಸಿದ್ದೆವು. ಈಗ ನಾವು ಜಾರಿಗೆ ಮುಂದಾಗಿದ್ದೇವೆ. ಇದರ ಹೊರತಾಗಿಯೂ ಬಿಜೆಪಿಯವರು ಪ್ರತಿಭಟನೆ ಮಾಡುತ್ತಾರೆ ಎಂದರೆ ಅವರನ್ನು ಏನನ್ನಬೇಕು? ಎಂದು ಪ್ರಶ್ನಿಸಿದರು.

ಒಟ್ಟಾಗಿ ಬಗೆಹರಿಸಿಕೊಳ್ಳಲು ತೀರ್ಮಾನ:

ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ಜನಸಂಖ್ಯೆ ಕಡಿಮೆ ಇರುವ ಸಮುದಾಯಗಳಿಗೂ ನ್ಯಾಯ ಸಿಗಬೇಕು ಎಂದು ತೀರ್ಮಾನಿಸಿದ್ದೇವೆ. ವರದಿ ಬಂದ ಮೇಲೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸೋಣ. ಏನೇ ಬರಲಿ ಒಟ್ಟಾಗಿದ್ದು ಬಗೆಹರಿಸಿಕೊಳ್ಳೋಣ. ನ್ಯಾಯಸಮ್ಮತವಾಗಿ ಸಿಗಬೇಕಾಗಿರುವ ಸೌಲಭ್ಯವನ್ನು ಎಲ್ಲರಿಗೂ ಸಿಗುವಂತೆ ಮಾಡೋಣ ಎಂದು ಚರ್ಚಿಸಿದ್ದೇವೆ ಎಂದರು.

ಕಾಂಗ್ರೆಸ್‌ ದಲಿತ ಶಾಸಕರಾದ ದೇವೇಂದ್ರಪ್ಪ, ಮಹೇಂದ್ರ ತಮ್ಮಣ್ಣನವರ್, ನರೇಂದ್ರ ಸ್ವಾಮಿ, ನಯನ ಮೋಟಮ್ಮ, ಎ.ಸಿ ಶ್ರೀನಿವಾಸ್. ಬಸವಂತಪ್ಪ, ವೆಂಕಟೇಶ್, ಧ್ರುವ ನಾರಾಯಣ, ಎಂ.ಶಿವಣ್ಣ, ಶ್ರೀನಿವಾಸ್, ನಾರಾಯಣಸ್ವಾಮಿ, ರೂಪಾ ಶಶಿಧರ್, ಕೃಷ್ಣಮೂರ್ತಿ, ಪರಿಷತ್ ಸದಸ್ಯರಾದ ತಮ್ಮಯ್ಯ, ಸುಧಾಮ್‌ದಾಸ್‌, ವಸಂತ್‌ ಕುಮಾರ್‌ ಹಾಜರಿದ್ದರು. ಸಚಿವರಾದ ಪ್ರಿಯಾಂಕ್ ಖರ್ಗೆ ಗೈರಾಗಿದ್ದರು.

ದಲಿತ ಸಿಎಂ ಚರ್ಚೆ ನಡೆದಿಲ್ಲ ಎಂದ ನಾಯಕರು

ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಕೂಗು ಶುರುವಾಗಿರುವ ವೇಳೆಯಲ್ಲೇ ದಲಿತ ಶಾಸಕರು, ಸಚಿವರು ಸಭೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ದಲಿತ ಮುಖ್ಯಮಂತ್ರಿ ಚರ್ಚೆ ನಡೆಯಲಿದೆ ಎಂದು ಹೇಳಲಾಗಿತ್ತು. ಆದರೆ, ಸಭೆಯಲ್ಲಿ ಭಾಗವಹಿಸಿದ್ದ ಹಿರಿಯ ಸಚಿವರು ದಲಿತ ಮುಖ್ಯಮಂತ್ರಿ ಕುರಿತು ಯಾವುದೇ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಕೇವಲ ಪರಿಶಿಷ್ಟ ಜಾತಿ ಶಾಸಕರು, ಸಚಿವರಲ್ಲದೆ ಪರಿಶಿಷ್ಟ ಪಂಗಡದ ಕೆ.ಎನ್‌. ರಾಜಣ್ಣ, ಸತೀಶ್ ಜಾರಕಿಹೊಳಿ ಅವರು ಸಹ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ವೇಳೆ ಮಹತ್ವದ ರಾಜಕೀಯ ಚರ್ಚೆಗಳು ನಡೆಯಲಿವೆ ಎಂದು ಹೇಳಲಾಗಿತ್ತು.

ಸಭೆಗೆ ಮೊದಲು ಇದಕ್ಕೆ ಪೂರಕವಾಗಿ ಮಾತನಾಡಿದ್ದ ಸಚಿವ ಸತೀಶ್ ಜಾರಕಿಹೊಳಿ, ನನಗೆ ಪರಮೇಶ್ವರ್‌ ನೇತೃತ್ವದ ಸಭೆಗೆ ಆಹ್ವಾನ ನೀಡಿಲ್ಲ. ಆದರೂ ಹೋಗುತ್ತೇನೆ. ಅಲ್ಲಿ ಸೇರಿದ ಮೇಲೆ ಕೇವಲ ಒಳ ಮೀಸಲಾತಿ ಬಗ್ಗೆ ಚರ್ಚೆಯಾಗುವುದಿಲ್ಲ. ಬೇರೆ ವಿಷಯಗಳೂ ಚರ್ಚೆಯಾಗುತ್ತವೆ ಅಲ್ಲವೇ? ಎಂದಿದ್ದರು. ಬಳಿಕ ಕೆ.ಎನ್‌. ರಾಜಣ್ಣ, ಸತೀಶ್ ಜಾರಕಿಹೊಳಿ ಅವರು ಸಭೆಯಿಂದ ದೂರ ಉಳಿದಿದ್ದರು. ಸಚಿವರ ಈ ನಡೆ ಕುತೂಹಲ ಮೂಡಿಸಿದೆ.

ದಲಿತ ಸಿಎಂ ಬಗ್ಗೆ ಸಭೇಲಿ ಚರ್ಚೆ ಇಲ್ಲ: ನಾಯಕರ ಸ್ಪಷ್ಟನೆ

ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಕೂಗು ಶುರುವಾಗಿರುವ ವೇಳೆಯಲ್ಲೇ ದಲಿತ ಶಾಸಕರು, ಸಚಿವರು ಸಭೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ದಲಿತ ಮುಖ್ಯಮಂತ್ರಿ ಚರ್ಚೆ ನಡೆಯಲಿದೆ ಎಂದು ಹೇಳಲಾಗಿತ್ತು. ಆದರೆ, ಸಭೆಯಲ್ಲಿ ಭಾಗವಹಿಸಿದ್ದ ಹಿರಿಯ ಸಚಿವರು ದಲಿತ ಮುಖ್ಯಮಂತ್ರಿ ಕುರಿತು ಯಾವುದೇ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ನಡುವೆ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದ್ದ ಸಚಿವರಾದ ಕೆ.ಎನ್‌. ರಾಜಣ್ಣ, ಸತೀಶ್ ಜಾರಕಿಹೊಳಿ ಅವರು ಸಭೆಯಿಂದ ದೂರ ಉಳಿದಿದ್ದರು. ಸಚಿವರ ಈ ನಡೆ ಕುತೂಹಲ ಮೂಡಿಸಿದೆ.