Asianet Suvarna News Asianet Suvarna News

ರಾಜಕೀಯ ಮನ್ವಂತರದತ್ತ ಪಂಚಮಸಾಲಿ ಸಮುದಾಯ

ಸಮುದಾಯದ ಶ್ರೇಯೋಭಿವೃದ್ಧಿಗೆ ಹೇಗೆ ನಾವು ರಾಜಕೀಯವಾಗಿ ಒಗ್ಗಟ್ಟಾಗಬೇಕು ಎನ್ನುವ ಅರಿವಾಗಿದೆ. ರಾಜಕೀಯ ಕ್ಷೇತ್ರದಲ್ಲಿ ಪಂಚಮಸಾಲಿಗಳ ಧ್ವನಿ ಈಗ ಹಿಂದೆಂದಿಗಿಂತಲೂ ಪ್ರಬಲವಾಗಿದೆ. ಈ ಸಮುದಾಯಕ್ಕೆ ರಾಜಕೀಯ ಪ್ರಾಬಲ್ಯ ಸಿಗಬೇಕು ಎನ್ನುವು ಸತ್ಯವೂ ಸರ್ಕಾರಗಳಿಗೆ ಅರ್ಥವಾಗಿದೆ.

Panchamasali community seeks more Representation in Politics hls
Author
Bengaluru, First Published Oct 16, 2020, 4:21 PM IST

ಬೆಂಗಳೂರು (ಅ. 16): ಸಮುದಾಯದ ಶ್ರೇಯೋಭಿವೃದ್ಧಿಗೆ ಹೇಗೆ ನಾವು ರಾಜಕೀಯವಾಗಿ ಒಗ್ಗಟ್ಟಾಗಬೇಕು ಎನ್ನುವ ಅರಿವಾಗಿದೆ. ರಾಜಕೀಯ ಕ್ಷೇತ್ರದಲ್ಲಿ ಪಂಚಮಸಾಲಿಗಳ ಧ್ವನಿ ಈಗ ಹಿಂದೆಂದಿಗಿಂತಲೂ ಪ್ರಬಲವಾಗಿದೆ. ಈ ಸಮುದಾಯಕ್ಕೆ ರಾಜಕೀಯ ಪ್ರಾಬಲ್ಯ ಸಿಗಬೇಕು ಎನ್ನುವು ಸತ್ಯವೂ ಸರ್ಕಾರಗಳಿಗೆ ಅರ್ಥವಾಗಿದೆ.

ಅದೊಂದು ಮಹಾ ಬೆಳಕು. ಆ ಬೆಳಕಿನ ಹೆಸರು ಜಗಜ್ಯೋತಿ ಬಸವಣ್ಣ. ಹನ್ನೆರಡನೇ ಶತಮಾನದ ಆರಂಭದಲ್ಲಿ ಜಗತ್ತಿನ ಬಹು ದೊಡ್ಡ ಆಶಯದಂತೆ ಉದಯಿಸಿದ ಸಮಾನತೆಯ ಸೂರ್ಯ ಬಸವಣ್ಣ. ಅವರ ಕೈಯಲ್ಲಿದ್ದ ಅಸ್ತ್ರವೆಂದರೆ ಅದು ವಚನಗಳು ಮಾತ್ರ. ಆ ವಚನಗಳ ಮೂಲಕವೇ ಅವರು ಜನಮಾನಸದಲ್ಲಿ ಅರಿವಿನ ಬೆಳಕು ಚೆಲ್ಲಿದರು. ರಾಜಕಾರಣಿಯಾಗಿದ್ದ, ತತ್ವಜ್ಞಾನಿಯಾಗಿದ್ದ ಬಸವಣ್ಣನವರು ಅಕ್ಕ ಮಹಾದೇವಿ, ಅಲ್ಲಮ ಪ್ರಭು, ಸಿದ್ದರಾಮೇಶ್ವರ ಮತ್ತು ಚನ್ನ ಬಸವೇಶ್ವರರಂಥ ಶರಣ ಸಂತರ ಜೊತೆ ಸೇರಿ ಭಕ್ತಿ ಚಳವಳಿಯ ಹುಟ್ಟಿಗೆ ಕಾರಣರಾದರು. ಶಿವನನ್ನು ಇಷ್ಟಲಿಂಗದ ಮೂಲಕ ಆರಾ​ಸುವ ಒಂದು ವಿಶಿಷ್ಟಸಂಪ್ರದಾಯವನ್ನ ಪ್ರಚುರಪಡಿಸಿದರು.

ಬಿಎಸ್‌ವೈ ಅವಧಿ ಮುಗಿದ ಬಳಿಕ ನಮ್ಮ ಸಮಾಜಕ್ಕೆ ಸಿಎಂ ಸ್ಥಾನ ನೀಡಿ : ಜಯ ಮೃತ್ಯುಂಜಯ ಸ್ವಾಮೀಜಿ

ಪಂಚಮಸಾಲಿ ಅಂದ್ರೆ ಕೃಷಿ

ಆ ಸಂಪ್ರದಾಯವನ್ನು ಅನುಸರಿಸಿದವರನ್ನೇ ನಾವು ಇಂದು ಶರಣರು, ಲಿಂಗಾಯತರು ಅಥವಾ ವೀರಶೈವರು ಅಂತ ಕರೆಯುವುದು. ಇವರೆಲ್ಲರನ್ನೂ ಒಳಗೊಂಡಂತೆ ಈ ಪಂಥದಲ್ಲಿ ಸುಮಾರು ತೊಂಬತ್ತೊಂಬತ್ತು ಉಪಪಂಥಗಳಿವೆ. ಆ ಪಂಥಗಳಲ್ಲಿ ಪಂಚಮಸಾಲಿ ಪಂಥಕ್ಕೆ ಸೇರಿದವರು ಶೇಕಡ 80ರಷ್ಟುಕೃಷಿಕರೇ ಇದ್ದಾರೆ. ನಿಮಗೆ ಗೊತ್ತಿರಲಿ, ಪಂಚಮಸಾಲಿ ಅಂದರೆ, ಕೃಷಿಯಲ್ಲಿನ 5 ಪ್ರಮುಖ ಪ್ರಕ್ರಿಯೆಗಳು. ಭೂಮಿಯನ್ನು ಉಳುವುದು, ಬೀಜ ಬಿತ್ತುವುದು, ಬೆಳೆಯನ್ನು ಪೋಷಿಸುವುದು, ಕಟಾವು ಮಾಡುವುದು ಮತ್ತು ಅದನ್ನು ಶೇಖರಿಸುವುದು.

ಪಂಚಮಸಾಲಿ ಸಮುದಾಯವು ಸಮಸ್ತರನ್ನೂ ಸಮಾನವಾಗಿ ಪರಿಭಾವಿಸುತ್ತದೆ. ಯಾವುದೇ ಒಂದು ಜಾತಿ, ಮತ, ಧರ್ಮದವರನ್ನು ಇತರರೆಂದು ಪರಿಗಣಿಸದೆ ಎಲ್ಲರನ್ನೂ ಒಳಗೊಳ್ಳುವ ‘ಇವ ನಮ್ಮವ ಇವ ನಮ್ಮವ’ ಅನ್ನುವ ಮಾನವೀಯತೆಯ ಸೂತ್ರದಲ್ಲಿ ನಂಬಿಕೆ ಇಟ್ಟುಕೊಂಡಿದೆ. ಜೊತೆಗೆ ಕಾಯಕ ಮತ್ತು ದಾಸೋಹದ ಮೂಲಕ ಪಂಚಮಸಾಲಿ ಸಮುದಾಯವು ಸರ್ವಧರ್ಮ ಸಮಾನತೆಯ ಆಶಯವನ್ನು ಪಸರಿಸುತ್ತಿದೆ.

ಶ್ರೀಮಂತಗೊಳಿಸಿದ ತತ್ವಜ್ಞಾನಿಗಳು

ಪಂಚಮಸಾಲಿ ಸಮುದಾಯ ಕಾಲಾಂತರದಿಂದಲೂ ಹಲವು ಪ್ರಮುಖ ರಾಜಕೀಯ ನಾಯಕರನ್ನು, ಹೋರಾಟಗಾರರನ್ನು, ಕವಿಗಳನ್ನು, ತತ್ವಜ್ಞಾನಿಗಳನ್ನು ನಾಡಿಗೆ ನೀಡಿದೆ. ಅದರಲ್ಲಿ ಶರಣ ಚಳವಳಿಯಲ್ಲಿ ವಚನಗಳಿಂದಲೇ ಜನರನ್ನ ಸುಧಾರಣೆಗೆ ಪ್ರೇರೇಪಿಸಿದ ಕವಯಿತ್ರಿ ಅಕ್ಕ ಮಹಾದೇವಿ, 16ನೇ ಶತಮಾನದಲ್ಲಿ ಮೊಗಲರ ದೊರೆಯಾಗಿದ್ದ ಔರಂಗಜೇಬನ ಸೈನ್ಯದ ವಿರುದ್ಧ ರಣ ಕಹಳೆಯನ್ನೇ ಮೊಳಗಿಸಿ, ವೀರಾವೇಶದಿಂದ ಹೋರಾಡಿದ ಕೆಳದಿಯ ರಾಣಿ ಚೆನ್ನಮ್ಮ, ಹದಿನೇಳನೇ ಶತಮಾನದಲ್ಲಿ ಶತ್ರುಗಳ ವಿರುದ್ಧ ಹೋರಾಡಲು ಮಹಿಳೆಯರ ಸೈನ್ಯವನ್ನೇ ಕಟ್ಟಿದ ಬೆಳವಡಿ ಮಲ್ಲಮ್ಮ, ಬ್ರಿಟಿಷರ ವಿರುದ್ಧ ತೊಡೆ ತಟ್ಟಿನಿಂತು ಸ್ವಾತಂತ್ರ್ಯ ಸಂಗ್ರಾಮಕ್ಕೆ ಮೊದಲ ಕಿಚ್ಚು ಹೊತ್ತಿಸಿದ ಕಿತ್ತೂರು ರಾಣಿ ಚೆನ್ನಮ್ಮ, 1930ರಲ್ಲಿ ಮಹಾತ್ಮಗಾಂಧಿ​ಯವರ ದಂಡಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದ ಹಾವೇರಿಯ ಶ್ರೀ ಮೈಲಾರ ಮಹಾದೇವ, ಬ್ರಿಟಿಷ್‌ ಆಡಳಿತದ ಮುಂಬೈ ಸರ್ಕಾರದಲ್ಲಿ (1930) ಶಿಕ್ಷಣ ಸಚಿವರಾಗಿ ಅದ್ವಿತೀಯ ಸಾಧನೆ ಮಾಡಿದ ಶ್ರೀ ಸಿದ್ದಪ್ಪ ಕಂಬಳಿಯವರೂ ಸೇರಿದಂತೆ ಎಲ್ಲರೂ ಪಂಚಮಸಾಲಿ ಸಮುದಾಯವನ್ನು ಶ್ರೀಮಂತ ಗೊಳಿಸಿದವರೆ.

'ಬೈಕ್ ಮೇಲೆ ಪ್ರಯೋಗಾಲಯ' ಯುವಾ ಬ್ರಿಗೇಡ್ ವಿನೂತನ ಯೋಜನೆ

1.5 ಕೋಟಿ ಪಂಚಮಸಾಲಿಗಳು

ಆದರೆ ಒಗ್ಗಟ್ಟಿನ ಕೊರತೆಯಿಂದಲೋ, ಸಮುದಾಯದವರಿಗೆ ತಮ್ಮ ಹಕ್ಕಿನ ಬಗ್ಗೆ ಇದ್ದ ಅರಿವಿನ ಕೊರತೆಯಿಂದಲೋ ಪಂಚಮಸಾಲಿ ಸಮುದಾಯದವರು ರಾಜ್ಯದೆಲ್ಲೆಡೆ ಹರಿದು ಹಂಚಿಹೋಗುವಂತೆ ಆಗಿತ್ತು. ಎಲ್ಲಿದ್ದಾರೆ, ಎಷ್ಟುಪ್ರಮಾಣದಲ್ಲಿದ್ದಾರೆ ಎನ್ನುವುದೇ ತಿಳಿಯದಾದಾಗ ಅವರನ್ನ ಗುರುತಿಸಿ ಪಂಚಮಸಾಲಿ ಸಮುದಾಯದ ಬಲ ಏನು ಅಂತ 1988ರಲ್ಲಿ ತೋರಿಸಿದವರು ಕೊಪ್ಪಳ ಜಿಲ್ಲೆಯ ಯಲಬುರ್ಗಾದ ಖ್ಯಾತ ಶಿಕ್ಷಣ ತಜ್ಞರಾಗಿದ್ದ ಬಿ. ಎಂ. ಹನುಮನಾಳ್‌ ಅವರು. ಸರ್ಕಾರ ಮತ್ತು ಹಲವು ಸಂಸ್ಥೆಗಳಲ್ಲಿ ಮರೆಯಾಗಿದ್ದ ಸಮುದಾಯದ ಬಗೆಗಿನ ಅಂಕಿಅಂಶಗಳ ಮಾಹಿತಿಯನ್ನು ಗುರುತಿಸಲು ಅವರು ಒಂದು ವಿಸ್ತೃತ ಸಂಶೋಧನೆಯನ್ನೇ ನಡೆಸಿದರು. 1990ರ ಸುಮಾರಿಗೆ ಮುಗಿದ ಹನುಮನಾಳ್‌ ಅವರ ಸಂಶೋಧನೆ 90 ಲಕ್ಷಕ್ಕಿಂತ ಹೆಚ್ಚಿನ ಪಂಚಮಸಾಲಿಗಳಿದಾರೆನ್ನುವ ಸತ್ಯವನ್ನು ಹೊರಹಾಕಿತ್ತು. ಈಗ ಅದು 1.5 ಕೋಟಿ ಮುಟ್ಟಿದೆ. ಕರ್ನಾಟಕದಲ್ಲಿ ಸುಮಾರು 85 ಲಕ್ಷ, ಮಹಾರಾಷ್ಟ್ರದಲ್ಲಿ 40 ಲಕ್ಷ , ನೆರೆಯ ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡು ಸೇರಿ ಸುಮಾರು 25 ಲಕ್ಷ ಪಂಚಮಸಾಲಿಗಳಿದ್ದಾರೆ.

ರಾಜಕೀಯ ಪ್ರಾತಿನಿಧ್ಯ ಇಲ್ಲ

ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ಎಸ್‌.ನಿಜಲಿಂಗಪ್ಪ ಮತ್ತು ಜೆ.ಎಚ್‌.ಪಟೇಲ್‌ ಪಂಚಮಸಾಲಿ ಸಮುದಾಯಕ್ಕೆ ಸೇರಿದ ಪ್ರಬಲ ನಾಯಕರಾಗಿದ್ದರು. ಹಾಗಿದ್ದರೂ ಪಂಚಮಸಾಲಿ ಸಮುದಾಯ ಆರ್ಥಿಕವಾಗಿ ಸಬಲವಾಗಲಿಲ್ಲ. ಸಾಮಾಜಿಕವಾಗಿ ಮುಂದೆ ಬರಲಿಲ್ಲ. ಅದಕ್ಕೆ ಕಾರಣ ರಾಜಕೀಯವಾಗಿ ಸಿಗಬೇಕಾದಷ್ಟುಪ್ರಾತಿನಿಧ್ಯ ಸಿಗದೇ ಇರುವುದು. ಇದಲ್ಲದೆ, ಸಮುದಾಯದ ಒಳಗಡೆ ಕೆಲವರ ಆಂತರಿಕ ಕಿತ್ತಾಟದಿಂದಾಗಿ ಸಮುದಾಯ 3ಬಿ ಕೆಟಗರಿಗೆ ಸೇರ್ಪಡೆಯಾಯಿತು.

ಅಂದರೆ ವೀರಶೈವ ಲಿಂಗಾಯತ ಸಮುದಾಯ ಜನರಲ್‌ ಕೆಟಗರಿಯಲ್ಲಿ ಗುರುತಿಸಲ್ಪಡುತ್ತದೆ. ಆದರೆ ಪಂಚಮಸಾಲಿ ಸಮುದಾಯದ ಆರ್ಥಿಕ ಮತ್ತು ಸಾಮಾಜಿಕ ಸ್ಥಾನಮಾನವನ್ನ ನೋಡಿದೆ ಅದು 2ಎ ಕೆಟಗರಿಯಲ್ಲಿ ಸೇರಬೇಕು. ಹಾಗಾಗಿಯೇ ಪಂಚಮಸಾಲಿ ಸಮುದಾಯಕ್ಕೆ ಆರ್ಥಿಕ ಕ್ಷೇತ್ರದಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ ಸಿಗಬೇಕಾದ ಹಕ್ಕು ಮತ್ತು ಮಾನ್ಯತೆ ಇದುವರೆಗೆ ಸರಿಯಾಗಿ ಸಿಕ್ಕಿಲ್ಲ.

ಇದೆಲ್ಲದರ ನಡುವೆ ಒಗ್ಗಟ್ಟಿನ ಕೊರತೆ ಇರುವುದೇ ಪಂಚಮಸಾಲಿ ಸಮುದಾಯ ಹಿಂದುಳಿದಿರುವುದಕ್ಕೆ ಕಾರಣ ಅಂತ ಮನಗಂಡ ಬಿ.ಎಂ.ಹನುಮನಾಳ್‌, 1994 ಆಗಸ್ಟ್‌ 8ರಂದು ಯಲಬುರ್ಗಾದಲ್ಲಿ ರಾಜ್ಯ ಮಟ್ಟದ ಪಂಚಮಸಾಲಿ ಸಮುದಾಯದ ಸಮ್ಮೇಳನವೊಂದನ್ನು ಆಯೋಜಿಸಿದರು. ಸುಮಾರು 3 ಲಕ್ಷಕ್ಕೂ ಹೆಚ್ಚು ಸಮುದಾಯದವರು ಅದರಲ್ಲಿ ಭಾಗವಹಿಸಿ ಒಗ್ಗಟ್ಟು ಪ್ರದರ್ಶಿಸಿದ್ದರು. ಅರಟಾಳ ರುದ್ರಗೌಡರು, ಪಿ.ಎಂ.ನಾಡಗೌಡರು ಮತ್ತು ಎಸ್‌.ಆರ್‌. ಕಾಶಪ್ಪನವರು ಪಂಚಮಸಾಲಿ ಸಮುದಾಯದ ರಾಜಕೀಯ ಪ್ರಾತಿನಿಧ್ಯಕ್ಕಾಗಿ ಶ್ರಮಿಸಿದ ಪ್ರಮುಖರು.

ಪಂಚಮಸಾಲಿ ಸಂಘದ ಉದಯ

1994 ಸೆಪ್ಟೆಂಬರ್‌ 2ರಂದು ‘ಪಂಚಮಸಾಲಿ ಸಂಘ’ದ ಉದಯವಾಯಿತು. ಅದರ ಅಧ್ಯಕ್ಷರಾಗಿ ಬಿ.ಎಂ.ಹನುಮನಾಳ್‌ ಆಯ್ಕೆಯಾದರು. ಹಾಗೆ ರಾಜ್ಯದೆಲ್ಲೆಡೆ ಜಿಲ್ಲಾ ಮಟ್ಟದಲ್ಲೂ ಸಂಘಟನೆಯನ್ನು ಬಲಪಡಿಸಲಾಯಿತು. 2003ರಲ್ಲಿ ದೇಶದ ಪ್ರಧಾನ ಮಂತ್ರಿಗಳಾಗಿದ್ದವರು ಅಟಲ್‌ ಬಿಹಾರಿ ವಾಜಪೇಯಿ. ಲಾಲ್‌ ಕೃಷ್ಣ ಅಡ್ವಾಣಿ ಉಪ ಪ್ರಧಾನಮಂತ್ರಿ ಆಗಿದ್ದರು. ಇದೇ ಸುಸೂತ್ರವಾದ ಸಮಯವೆಂದು ಮನಗಂಡ ಪಂಚಮಸಾಲಿ ಸಂಘದ ಸುಮಾರು 80 ಸದಸ್ಯರು ಪ್ರಧಾನಿ ಮತ್ತು ಉಪಪ್ರಧಾನಿಯವರನ್ನು ಭೇಟಿ ಆಗಿ ಕೇಂದ್ರ ಸರ್ಕಾರದ ಗೆಜೆಟಿನಲ್ಲಿ ಪಂಚಮಸಾಲಿ ಸಮುದಾಯವನ್ನು ಓಬಿಸಿ ಕೆಟಗರಿಯಲ್ಲಿ ಸೇರಿಸುವ ಕುರಿತು ಮನವಿ ಸಲ್ಲಿಸಿದ್ದರು.

ನಿಮಗೆ ಕನ್ನಡಿಗರು ಅಂದ್ರೆ ಇಷ್ಟವಿಲ್ವಾ? ಮೋದಿಗೆ ಪ್ರಶ್ನೆ

2 ಜಗದ್ಗುರು ಪೀಠಗಳಿವೆ

ಕರ್ನಾಟಕದಲ್ಲಿ ಪಂಚಮಸಾಲಿ ಸಮುದಾಯದ ಎರಡು ಪ್ರಮುಖ ಜಗದ್ಗುರು ಪೀಠಗಳಿವೆ. ಒಂದು ಹರಿಹರದಲ್ಲಿರುವ ಪಂಚಮಸಾಲಿ ಜಗದ್ಗುರು ಪೀಠ ಮತ್ತೊಂದು ಕೂಡಲಸಂಗಮದಲ್ಲಿರುವ ಪಂಚಮಸಾಲಿ ಜಗದ್ಗುರು ಪೀಠ. ಎರಡೂ ಪೀಠಗಳು ಪಂಚಮಸಾಲಿ ಸಮುದಾಯ ಸಂಘಟನೆಯ ಕಾಯಕದಲ್ಲಿ ತೊಡಗಿಕೊಂಡಿವೆ. ಹರಿಹರ ಪಂಚಮಸಾಲಿ ಜಗದ್ಗುರು ಪೀಠದ ಪೀಠಾಧ್ಯಕ್ಷರಾದ ಡಾ.ಮಹಾಂತ ಶಿವಾಚಾರ್ಯ ಮಹಾಸ್ವಾಮೀಜಿಯವರು ಲಿಂಗೈಕ್ಯರಾದ ನಂತರ ಪಂಚಮಸಾಲಿ ಜಗದ್ಗುರು ಪೀಠದ ಪೀಠಾಧ್ಯಕ್ಷರಾದವರೇ ಶ್ವಾಸಗುರುಗಳೆಂದೇ ಜಗದ್ವಿಖ್ಯಾತರಾದ ಶ್ರೀ ವಚನಾನಂದ ಸ್ವಾಮೀಜಿಗಳು. ವಚನಾನಂದ ಸ್ವಾಮೀಜಿ ಇನ್ನೂ ಯುವಕರು. ಚಿಕ್ಕ ವಯಸ್ಸಿಗೆ ಯೋಗದಲ್ಲಿ ಅಪ್ರತಿಮ ಸಾಧನೆ ಮಾಡಿ ಅಂತಾರಾಷ್ಟ್ರೀಯ ಮನ್ನಣೆ ಗಳಿಸಿಕೊಂಡವರು. ಅಪಾರವಾದ ಓದು, ಲೋಕಜ್ಞಾನ, ದೇಶವಿದೇಶಗಳ ಪ್ರವಾಸದಿಂದ ವಚನಾನಂದ ಸ್ವಾಮೀಜಿಗಳಿಗೆ ಅದ್ವಿತೀಯವಾದ ಪಾಂಡಿತ್ಯ ದೊರಕಿದೆ. ದೂರದೃಷ್ಟಿಇದೆ. ಸಮುದಾಯದ ಅಭಿವೃದ್ಧಿಯ ಬಗ್ಗೆ ಅಪಾರ ಒಲವಿದೆ. ಹಾಗಾಗಿ ಶ್ರೀಪೀಠಕ್ಕೊಂದು ಹೊಸ ಬೆಳಕು ಸಿಕ್ಕಂತಾಗಿದ್ದು.

ಈಗೊಂದು ಸಂಚಲನ

ವಚನಾನಂದ ಸ್ವಾಮೀಜಿಗಳು ಶ್ರೀಪೀಠಕ್ಕೆ ಅಧ್ಯಕ್ಷರಾದ ಮೇಲೆ ಸಮುದಾಯದಲ್ಲಿ ಒಂದು ಸಂಚಲನ ಮೂಡಿದೆ. ಒಗ್ಗಟ್ಟು ಬಂದಿದೆ. ‘ನಮ್ಮ ನಡಿಗೆ ಚನ್ನಮ್ಮನ ನಾಡಿಗೆ’ ಸಂಕಲ್ಪದೊಂದಿಗೆ ಹರಿಹರ ಪಂಚಮಸಾಲಿ ಜಗದ್ಗುರು ಪೀಠದಿಂದ ಬೈಲಹೊಂಗಲದಲ್ಲಿರುವ ವೀರರಾಣಿ ಕಿತ್ತೂರು ಚನ್ನಮ್ಮನ ಸಮಾ​ಧಿವರೆಗೆ ಸುಮಾರು 250 ಕಿಲೋಮೀಟರ್‌ ಪಾದಯಾತ್ರೆ ಮಾಡಿದ್ದಾರೆ. ಹರಿಹರದಲ್ಲಿ 2020 ಜನವರಿ 14ರಂದು ಬೃಹತ್‌ ‘ಹರ ಜಾತ್ರೆ’ ಮಹೋತ್ಸವವನ್ನು ಆಯೋಜಿಸುವ ಮೂಲಕ ಪಂಚಮಸಾಲಿ ಸಮುದಾಯದ ಒಗ್ಗಟ್ಟು ಪ್ರದರ್ಶಿಸಿದರು. ಇದರಿಂದ ರಾಷ್ಟ್ರಮಟ್ಟದಲ್ಲಿ ಪಂಚಮಸಾಲಿ ಸಮುದಾಯದ ಶಕ್ತಿ ಸಾಮರ್ಥ್ಯ ಬಿಂಬಿತವಾಯಿತು.

ಅದೇ ರೀತಿ ಕೂಡಲಸಂಗಮ ಪಂಚಮಸಾಲಿ ಜಗದ್ಗುರು ಪೀಠದ ಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ಜಯಮೃತ್ಯುಂಜಯ ಸ್ವಾಮೀಜಿಗಳು ತಮ್ಮ ಕ್ರೀಯಾಶೀಲ ವ್ಯಕ್ತಿತ್ವದಿಂದ ನಾಡಿನುದ್ದಕ್ಕೂ ಪ್ರವಾಸ ಮಾಡುತ್ತಾ ಹಳ್ಳಿಗೆ ಏಕರಾತ್ರಿ ಪಟ್ಟಣಕ್ಕೆ ಪಂಚರಾತ್ರಿ ಎಂಬಂತೆ ಪಂಚಮಸಾಲಿ ಸಮುದಾಯದ ಶ್ರೇಯೋಭಿವೃದ್ಧಿಗೆ ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಸಂಘಟನೆಯ ಸಂಚಲನ ಮೂಡಿಸುತ್ತಿದ್ದಾರೆ.

ಹಲವು ಅಭಿವೃದ್ಧಿ ಕಾರ‍್ಯಕ್ರಮಗಳು

ಪ್ರಸ್ತುತ ಹರಿಹರ ಮತ್ತು ಕೂಡಲಸಂಗಮ ಪಂಚಮಸಾಲಿ ಜಗದ್ಗುರುದ್ವಯರ ಸಮರ್ಥ ನಾಯಕತ್ವದ ಮೂಲಕ ಪಂಚಮಸಾಲಿ ಸಮುದಾಯಕ್ಕೆ ಸರ್ಕಾರದಿಂದ ಸಿಗಬೇಕಾದ ವಿವಿಧ ಪ್ರಯೋಜನಗಳನ್ನು ದೊರಕಿಸಿಕೊಡಲು ಹೋರಾಡುತ್ತಿದ್ದಾರೆ. ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಬಲವರ್ಧನೆಗಾಗಿ ಇಡೀ ಪಂಚಮಸಾಲಿ ಸಮುದಾಯವನ್ನು ಒಗ್ಗೂಡಿಸಿ ಜೊತೆಜೊತೆಯಾಗಿ ಕರೆದೊಯ್ಯುತ್ತಿದ್ದಾರೆ. ಇಷ್ಟೇ ಅಲ್ಲದೆ, ಜಗದ್ಗುರುದ್ವಯರು ಪಂಚಮಸಾಲಿ ಸಮುದಾಯದ ಧ್ಯೇಯಕ್ಕಾಗಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವವರಿದ್ದಾರೆ. ರೈತರಿಗೆ ವೈಜ್ಞಾನಿಕ ಕೃಷಿ ಪದ್ಧತಿಯಲ್ಲದೆ, ಸಮುದಾಯದ ಪುರುಷ ಮತ್ತು ಮಹಿಳೆಯರಲ್ಲಿ ಉದ್ಯಮಶೀಲಗುಣ ಹೆಚ್ಚಿಸಲು ಗಮನ ನೀಡುವತ್ತ ದಿಟ್ಟಹೆಜ್ಜೆ ಇಡುತ್ತಿದ್ದಾರೆ.

ತಮ್ಮ ಸಮುದಾಯದ ಶ್ರೇಯೋಭಿವೃದ್ಧಿಗೆ ಹೇಗೆ ನಾವು ರಾಜಕೀಯವಾಗಿ ಒಗ್ಗಟ್ಟಾಗಬೇಕು, ದನಿ ಎತ್ತಬೇಕು ಅನ್ನೋದರ ಅರಿವು ಈಗ ಪಂಚಮಸಾಲಿ ಸಮುದಾಯಕ್ಕಾಗಿದೆ. ರಾಜಕೀಯ ಕ್ಷೇತ್ರದಲ್ಲಿ ಪಂಚಮಸಾಲಿಗಳ ಧ್ವನಿ ಈಗ ಹಿಂದೆಂದಿಗಿಂತಲೂ ಪ್ರಬಲವಾಗಿದೆ. ಪಂಚಮಸಾಲಿ ಸಮುದಾಯಕ್ಕೆ ಹೆಚ್ಚಿನ ರಾಜಕೀಯ ಪ್ರಾಬಲ್ಯ ಸಿಗಬೇಕು ಅನ್ನೋ ಸತ್ಯವೂ ಸರ್ಕಾರಗಳಿಗೆ ಅರ್ಥವಾಗಿದೆ.

- ರವಿ ಅಜ್ಜೀಪುರ 

Follow Us:
Download App:
  • android
  • ios