ಕಲಬುರಗಿ ಮೇಯರ್‌ ಚುನಾವಣೆಗಿಂತ ನಮಗೆ 2023ರ ಸಾರ್ವತ್ರಿಕ ಚುನಾವಣೆ ಮುಖ್ಯ ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಮೈತ್ರಿ ಬಗ್ಗೆ ಸೂಕ್ತ ನಿರ್ಧಾರ ಎಂದ ಜೆಡಿಎಸ್ 

 ಬೆಂಗಳೂರು (ಸೆ.13): ಕಲಬುರಗಿ ಮೇಯರ್‌ ಚುನಾವಣೆಗಿಂತ ನಮಗೆ 2023ರ ಸಾರ್ವತ್ರಿಕ ಚುನಾವಣೆ ಮುಖ್ಯ. ಆ ನಿಟ್ಟಿನಲ್ಲಿ ಸೋಮವಾರ ನಮ್ಮ ಪಕ್ಷದ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚಿಸಿ ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಮೈತ್ರಿ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಜೆಡಿಎಸ್‌ ನಾಯಕ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಆರ್‌.ಅಶೋಕ್‌ ಅವರು ತಮ್ಮನ್ನು ಭೇಟಿ ಮಾಡಿದ ವೇಳೆ ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಸೇರಿದಂತೆ ಹಲವಾರು ವಿಚಾರಗಳನ್ನು ಚರ್ಚಿಸಿದ್ದಾರೆ. ನಮಗೆ ಕಲಬುರಗಿ ಮೇಯರ್‌ ಚುನಾವಣೆ ಮುಖ್ಯವಲ್ಲ. 2023ರ ಸಾರ್ವತ್ರಿಕ ಚುನಾವಣೆಯಲ್ಲಿ ನಾಡಿನ ಜನತೆ ಜೆಡಿಎಸ್‌ ಬೆಂಬಲಿಸುವಂತೆ ವಿಶ್ವಾಸ ಗಳಿಸುವುದು ನಮ್ಮ ಗುರಿಯಾಗಿದೆ. ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಮೈತ್ರಿ ವಿಚಾರವಾಗಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚಿಸಿ ನಂತರ ಜೆಡಿಎಸ್‌ನ ರಾಷ್ಟ್ರೀಯ ಅಧ್ಯಕ್ಷರಾದ ಎಚ್‌.ಡಿ.ದೇವೇಗೌಡ ಅವರೊಂದಿಗೆ ಸಮಾಲೋಚಿಸಿದ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

ಕಲಬುರಗಿ ಪಾಲಿಕೆ ಗದ್ದುಗೆ: ಸನ್ನಿವೇಶ ನೋಡ್ಕೊಂಡು ಎಚ್‌ಡಿಕೆ ತೀರ್ಮಾನ ಮಾಡ್ತಾರೆ, ದೇವೇಗೌಡ

ಇಡೀ ರಾಜ್ಯದಲ್ಲಿ ಜನರ ಭಾವನೆಗಳು ಅತ್ಯಂತ ಗುಪ್ತವಾದ ರೀತಿಯಲ್ಲಿ ಜೆಡಿಎಸ್‌ ಪರವಾಗಿ ಬದಲಾಗುತ್ತಿರುವುದನ್ನು ಗಮನಿಸಿದ್ದೇನೆ. ಬಹುಶಃ ಈ ಬೆಳವಣಿಗೆ ಜೆಡಿಎಸ್‌ ಮುಗಿಸಿ ಆಯಿತು ಎಂಬುದು ಸೇರಿದಂತೆ ನಮ್ಮ ಪಕ್ಷದ ಬಗ್ಗೆ ಲಘುವಾಗಿ ಮಾತನಾಡಿದ್ದವರಿಗೆ ಜನರು ಉತ್ತರ ಕೊಡುವ ಕಾಲ ದೂರ ಇಲ್ಲ ಎನ್ನುವುದನ್ನು ಗೋಚರಿಸುತ್ತಿದೆ ಎಂಬುದು ನನ್ನ ಅಭಿಪ್ರಾಯವಾಗಿದೆ ಎಂದು ಹೇಳಿದರು.

ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ ಅವರು, ಈ ಬಾರಿಯ ಅಧಿವೇಶನದಲ್ಲಿ ಜೆಡಿಎಸ್‌ನ ಎಲ್ಲ ಶಾಸಕರು ಸಕ್ರಿಯವಾಗಿ ಭಾಗವಹಿಸಿ ಕೋವಿಡ್‌, ನೆರೆ, ಬರ ಸೇರಿದಂತೆ ನಾಡಿನ ಜನರ ಜ್ವಲಂತ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುತ್ತೇವೆ ಎಂದು ತಿಳಿಸಿದರು.