Asianet Suvarna News Asianet Suvarna News

Pancharatna Rathayatra: ಕೋಲಾರಕ್ಕೆ ಯಾರೇ ಬಂದ್ರೂ ನಮ್ಮ ಅಭ್ಯರ್ಥಿ ಬದಲಿಲ್ಲ: ಎಚ್‌ಡಿಕೆ

ಕೋಲಾರ ಕ್ಷೇತ್ರಕ್ಕೆ ಯಾರೇ ಅಭ್ಯರ್ಥಿ ಬಂದರೂ ನಮ್ಮ ಅಭ್ಯರ್ಥಿಯ ಬದಲಾವಣೆ ಇಲ್ಲ. ಸಿಎಂಆರ್‌ ಶ್ರೀನಾಥ್‌ ಅವರೇ ಕಣದಲ್ಲಿ ಇರಲಿದ್ದಾರೆ. ಕಾಂಗ್ರೆಸ್‌, ಬಿಜೆಪಿ ಯಾರನ್ನೇ ಕಣಕ್ಕಿಳಿಸಲಿ ನಾವು ಎದುರಿಸಲು ಸಿದ್ಧ. 

Our candidate has not changed no matter who comes to Kolar Says HD Kumaraswamy gvd
Author
First Published Nov 23, 2022, 10:56 AM IST

ಕೋಲಾರ (ನ.23): ಕೋಲಾರ ಕ್ಷೇತ್ರಕ್ಕೆ ಯಾರೇ ಅಭ್ಯರ್ಥಿ ಬಂದರೂ ನಮ್ಮ ಅಭ್ಯರ್ಥಿಯ ಬದಲಾವಣೆ ಇಲ್ಲ. ಸಿಎಂಆರ್‌ ಶ್ರೀನಾಥ್‌ ಅವರೇ ಕಣದಲ್ಲಿ ಇರಲಿದ್ದಾರೆ. ಕಾಂಗ್ರೆಸ್‌, ಬಿಜೆಪಿ ಯಾರನ್ನೇ ಕಣಕ್ಕಿಳಿಸಲಿ ನಾವು ಎದುರಿಸಲು ಸಿದ್ಧ. ಈಗಾಗಲೇ ಕೋಲಾರ-ಚಿಕ್ಕಬಳ್ಳಾಪುರ ಕ್ಷೇತ್ರಗಳ 11 ಅಭ್ಯರ್ಥಿಗಳ ಹೆಸರು ಅಂತಿಮಗೊಂಡಿದೆ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು. ತಾಲೂಕಿನ ಕ್ಯಾಲನೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಈ ಬಾರಿ ಕನ್ನಡಿಗರಿಂದ ಕನ್ನಡಿಗರಿಗಾಗಿ ಜನತಾದಳದ ಸರ್ಕಾರ ಬರಬೇಕು ಹೀಗಾಗಿ, ಆರೋಗ್ಯವನ್ನೂ ಲೆಕ್ಕಿಸದೆ ಮುಂದಿನ ನೂರು ದಿನ ರಾಜ್ಯ ಪ್ರವಾಸ ಮಾಡುತ್ತೇನೆ, 

ಕೋಲಾರ ಕ್ಷೇತ್ರದ ರಥಯಾತ್ರೆ ವೇಳೆ ಲಕ್ಷಕ್ಕೂ ಅ​ಕ ಜನರನ್ನು ಭೇಟಿ ಮಾಡಿದ್ದೇನೆ. ಮಧ್ಯರಾತ್ರಿ 1 ಗಂಟೆಗೂ ಜನ ಸೇರಿದ್ದರು. ಜೆಡಿಎಸ್‌ ಸರ್ಕಾರ ರಚನೆ ಆಗಬೇಕೆಂಬುದು ಪ್ರತಿಯೊಬ್ಬರ ಭಾವನೆ. 2018ರಲ್ಲಿ ಕೋಲಾರ ಸಭೆಗೆ ಮಾಯಾವತಿ ಬಂದಿದ್ದರು, ನಾನೂ ಇದ್ದೆ. ಅದಕ್ಕಿಂತ ಹೆಚ್ಚು ಉತ್ಸಾಹ ಜನರಲ್ಲಿ ಇವತ್ತು ಕಾಣುತ್ತಿದೆ. ಇದಕ್ಕೆ ಜಿಲ್ಲೆಯಲ್ಲಿ ನಡೆದಿರುವ ಕೆಲ ಘಟನೆಗಳೂ ಕಾರಣ ಎಂದರು. ನನ್ನ ಸಭೆಗಳಲ್ಲಿ ಜನ ಸೇರುತ್ತಾರೆ. ಆದರೆ, ಮತ ಹಾಕುವುದಿಲ್ಲ ಎಂಬ ಭಾವನೆ ಹಿಂದೆ ಇತ್ತು. ಆದರೆ, ಈ ಬಾರಿ ನಾಡಿನ ಜನತೆ ಆ ಚರ್ಚೆಗೆ ಅಂತಿಮ ತೆರೆ ಎಳೆದು ಮತ ಹಾಕಲಿದ್ದಾರೆ, ಜಿಲ್ಲೆಯಲ್ಲಿ ರೈತ ಯುವಕರಿಗೆ ವಧು ಕೊರತೆ ಇದೆ ಎಂಬುದಾಗಿ ಧನಂಜಯ್‌ ಯುವಕ ಸಮಸ್ಯೆ ಹೇಳಿಕೊಂಡಿದ್ದಾರೆ. 

ಪಂಚರತ್ನ ಯಾತ್ರೆ: ಜೆಡಿಎಸ್‌ ಗೆದ್ರೆ ಮುಸ್ಲಿಂ ಸಿಎಂ, ಮಹಿಳೆಗೆ ಡಿಸಿಎಂ, ಕುಮಾರಸ್ವಾಮಿ

ಹೀಗಾಗಿಯೇ, ರೈತ ಚೈತನ್ಯ ಜಾರಿ ಮಾಡಲು ಯೋಜನೆ ರೂಪಿಸಿದ್ದೇನೆ. ರೈತರು ಸ್ವಾಭಿಮಾನದಿಂದ ಬದುಕಬೇಕು. ಸರ್ಕಾರ ರಚಿಸಿಯೂ ಆ ಕಾರ್ಯಕ್ರಮ ಜಾರಿಗೆ ತರದಿದ್ದರೆ ರಾಜೀನಾಮೆ ನೀಡುತ್ತೇನೆ ಎಂದು ತಿಳಿಸಿದರು. ನಾನು ಮತ್ತೆ ಮುಖ್ಯಮಂತ್ರಿಯಾಗಬೇಕೆಂದು ಸೋಮವಾರ ವಿದ್ಯಾರ್ಥಿನಿಯರು ಆಶಯ ವ್ಯಕ್ತಪಡಿಸಿದರು. ಮಂಗಳಾರತಿ ತಟ್ಟೆಗೆ ಹಣ ಹಾಕಿದರೂ ಆ ಮಕ್ಕಳು ತೆಗೆದುಕೊಳ್ಳಲಿಲ್ಲ. ಬದಲಾಗಿ ಉತ್ತಮ ಶಾಲೆ, ಶಿಕ್ಷಣ ಬೇಕೆಂದು ಕೋರಿದರು. ಜಿಲ್ಲೆಯ ಕೆಜಿಎಫ್‌ ತಾಲೂಕಿನಲ್ಲಿ ಡಿ.7ರಂದು ಸಂಜೆ ಕ್ಷೇತ್ರದಲ್ಲಿ ಸಮಾವೇಶ ಆಯೋಜಿಸಿದೆ. ಆ ಕ್ಷೇತ್ರದ ರಮೇಶ್‌ ಬಾಬು ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. 

ಡಿ.8ಕ್ಕೆ ಅಫ್ಜಲ್‌ಪುರದಲ್ಲಿ ಜೆಡಿಎಸ್‌ ಸಮಾವೇಶ ನಡೆಯಲಿದೆ. ಆ ಕ್ಷೇತ್ರದ ಶಿವಕುಮಾರ ನಾಟೇಕರ್‌ ತಿಂಗಳಿನಿಂದ ಕ್ಷೇತ್ರದಲ್ಲಿ ಪಾದಯಾತ್ರೆ ಮಾಡಿದ್ದು, ಸಮಾರೋಪ ಹಮ್ಮಿಕೊಂಡಿದ್ದಾರೆ. ಕಲಬುರಗಿ ಭಾಗದ ಪಕ್ಷದ 2 ಲಕ್ಷ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದರು. ಜಿಲ್ಲೆಯಲ್ಲಿ ವಿಷ ತಿನ್ನಿಸಿ ದುಡ್ಡು ಹೊಡೆದರು ನೆಹರೂ ಕುಟುಂಬದಿಂದ ಮೂರು ತಲೆಮಾರಿಗಾಗುವಷ್ಟುದುಡ್ಡು ಮಾಡಿಕೊಂಡಿದ್ದು, ಅವರ ನೆರವಿಗೆ ನಿಲ್ಲಬೇಕೆಂದು ಶ್ರೀನಿವಾಸಪುರದ ಶಾಸಕರು ಹೇಳಿದ್ದಾರೆ. 

ಕೆ.ಸಿ.ವ್ಯಾಲಿ ಮೂಲಕ ಜನರಿಗೆ ವಿಷ ತಿನ್ನಿಸಿ ದುಡ್ಡು ಹೊಡೆದಿದ್ದೇ ಮೂರು ತಲೆಮಾರಿಗಾಗುವಷ್ಟು ಮಾಡಿಕೊಂಡ ಸಾಧನೆ. ಎತ್ತಿನ ಹೊಳೆ ಜಾರಿಯಾಗಲಿಲ್ಲ ಹಣ ಮಾತ್ರ ಹರಿಯಿತು. ಈಗ ಅವರ ತಲೆ ಕೂದಲೂ ಉದುರಿ ಹೋಗಿದೆ ಎಂದು ಶ್ರೀನಿವಾಸಪುರ ಶಾಸಕ ರಮೇಶ್‌ಕುಮಾರ್‌ ಮೇಲೆ ವಾಗ್ದಾಳಿ ನಡೆಸಿದರು. ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ, ಎಂಎಲ್‌ಸಿಗಳಾದ ಬೋಜೇಗೌಡ, ಇಂಚರ ಗೋವಿಂದರಾಜು, ಮಾಜಿ ಎಂಎಲ್ಸಿಗಳಾದ ತೂಪಲ್ಲಿ ಚೌಡರೆಡ್ಡಿ, ರಮೇಶ್‌ ಗೌಡ, ಕೋಲಾರ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಸಿಎಂಆರ್‌ ಶ್ರೀನಾಥ್‌, ಮುಖಂಡರಾದ ವಕ್ಕಲೇರಿ ರಾಮು, ಕಲಾರಮೇಶ್‌ ಇದ್ದರು.

ಮುಸ್ಲಿಂ ಸಮುದಾಯಕ್ಕೆ ಆದ್ಯತೆ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ ಸ್ವತಂತ್ರವಾಗಿ ಅ​ಧಿಕಾರಕ್ಕೆ ಬಂದರೆ ಮುಸ್ಲಿಂ ಸಮುದಾಯಕ್ಕೆ ಮುಖ್ಯಮಂತ್ರಿ ಪಟ್ಟನೀಡುವ ಮುಕ್ತ ಅವಕಾಶಗಳೂ ನಮ್ಮ ಪಕ್ಷದಲ್ಲಿ ಇವೆ. ಕುಮಾರಸ್ವಾಮಿ ದೆಹಲಿಗೆ ಹೋದರೆ ತಾವೇ ಮುಖ್ಯಮಂತ್ರಿ ಆಗಬಹುದೆಂದು ಸಿ.ಎಂ. ಇಬ್ರಾಹಿಂ ಕೂಡ ಹೇಳಿದ್ದಾರೆ. ಈ ರೀತಿ ಚರ್ಚೆ ಮಾಡಲು ಅವಕಾಶ ಇರುವುದು ನಮ್ಮ ಪಕ್ಷದಲ್ಲಿ ಮಾತ್ರ. ಮುಸ್ಲಿಮರೂ ನಮ್ಮವರೇ ಅವರೂ ಕರ್ನಾಟಕದ ಪ್ರಜೆಗಳು, ಕನ್ನಡಿಗರು. ಹೀಗಾಗಿ, ಆ ಸಮುದಾಯದವರನ್ನು ಮುಖ್ಯಮಂತ್ರಿ ಮಾಡಬಾರದೆಂದೇನೂ ಇಲ್ಲ. ಒಬ್ಬ ವ್ಯಕ್ತಿಗೆ ಅವಕಾಶ ನೀಡುವ ಪ್ರಶ್ನೆ ಇದಲ್ಲ. ನನಗೆ ಆ ಸಮುದಾಯಗಳಲ್ಲಿನ ಸಮಸ್ಯೆಗೆ ಪರಿಹಾರಬೇಕು ಎಂದು ತಿಳಿಸಿದರು.

ದಲಿತರು ಹಾಗೂ ಮಹಿಳೆಯರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲು ಸಿದ್ಧನಿದ್ದೇನೆ. ಇದು ಸ್ವಯಂಪ್ರೇರಣೆಯಿಂದ ಮಾಡಿದ ಘೋಷಣೆ ಅಲ್ಲ. ದಲಿತ ಸಮುದಾಯದ ಯುವಕನೊಬ್ಬ ಆತ ಎದುರಿಸಿರುವ ಸಮಸ್ಯೆ ಹೇಳಿಕೊಂಡ. ಎಲ್ಲಾ ರಾಜಕೀಯ ಪಕ್ಷಗಳು ದಲಿತರನ್ನು ಅಸಡ್ಡೆಯಿಂದ ನೋಡುತ್ತಿರುವುದಾಗಿ ಬೇಸರ ವ್ಯಕ್ತಪಡಿಸಿದ. ದಲಿತರ ಮತ ಪಡೆಯಲು ಈ ಘೋಷಣೆ ಮಾಡಿಲ್ಲ. ಹಾಗೆಯೇ ಮಹಿಳೆಯರ ಕಷ್ಟಗಳನ್ನು ಯಾವುದೇ ಸರ್ಕಾರ ಆಲಿಸುತ್ತಿಲ್ಲ. ಮಹಿಳೆಯರ ರಕ್ಷಣೆಗಾಗಿ ಉಪಮುಖ್ಯಮಂತ್ರಿ ಅವಶ್ಯವೆಂದಾದರೆ ಅದಕ್ಕೂ ಸಿದ್ಧ ಎಂದು ನುಡಿದರು.

ಕಾಟಾಚಾರಕ್ಕೆ ಮಹಿಳಾ-ಮಕ್ಕಳ ಕಲ್ಯಾಣಕ್ಕೆ ಇದೆ: ಮಕ್ಕಳ ಪೌಷ್ಟಿಕಾಂಶದ ಆಹಾರದಲ್ಲೂ ದುಂಡು ನುಂಗಿದ್ದಾರೆ. ಇತ್ತ ಪ್ರಚಾರಕ್ಕೆ ಮಹಿಳಾ ಸಬಲೀಕರಣ ಅಂತಾರೆ, ಆದರೆ ಮಹಿಳೆಯರು ಇನ್ನೂ ಸಂಕಷ್ಟದಿಂದ ಪಾರಾಗಿಲ್ಲ. ಬೀದಿ ಬದಿ ಲಕ್ಷಾಂತರ ಹೆಣ್ಣು ಮಕ್ಕಳು ವ್ಯಾಪಾರ ಮಾಡಿ ಜೀವನ ಮಾಡುತ್ತಿದ್ದಾರೆ. ವೇದಿಕೆ ಮೇಲೆ ದೇವರಾಜ್‌ ಅರಸ್‌ ಬಿಟ್ರೆ ನಾನೆ ಉದ್ದಾರ ಮಾಡಿದ್ದು ಅಂತ ಭಾಷಣ ಮಾಡಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯಗೆ ಕುಮಾರಸ್ವಾಮಿ ಟಾಂಗ್‌ ನೀಡಿದರು.

ಪರಮೇಶ್ವರ್‌ ಅತ್ತು ಡಿಸಿಎಂ ಆದರು: ಕಾಂಗ್ರೆಸ್‌ ಹಿರಿಯ ನಾಯಕ, ಶಾಸಕ ಪರಮೇಶ್ವರ್‌ ಅತ್ತು ಕರೆದು ಡಿಸಿಎಂ ಆದರು, ಅ​ಧಿಕಾರ ಚಲಾವಣೆ ಮಾಡೋಕೆ ಆಗಲಿಲ್ಲ. ಕಾರಜೋಳದು ಅದೇ ಪರಿಸ್ಥಿತಿಯಾಗಿದೆ, ದೆಹಲಿಯಿಂದ ಲಕೋಟೆ ಬರಬೇಕು ಎಂದು ಕುಮಾರಸ್ವಾಮಿ ಅಭಿಪ್ರಾಯಪಟ್ಟರು.

ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಸ್ತ್ರೀ ಶಕ್ತಿ ಸಾಲ ಮನ್ನಾ: ಎಚ್‌ಡಿಕೆ ಭರವಸೆ

ಮಂಗಳೂರು ಬಾಂಬ್‌ ಸ್ಫೋಟದ ಕುರಿತು ಗೃಹ ಇಲಾಖೆ ವೈಫಲ್ಯ ಇಲ್ಲ ಅಂತ ಹೇಳಿಲ್ಲ: ಮಂಗಳೂರು ಬಾಂಬ್‌ ಸ್ಫೋಟದ ಬಗ್ಗೆ ಗೃಹ ಇಲಾಖೆ ವೈಫಲ್ಯ ಇಲ್ಲ ಅಂತ ಹೇಳಿಲ್ಲ. ವಿಶ್ವಗುರು ಅಂತ ಎನಿಸಿಕೊಳ್ಳುವ ಮೋದಿ ಕಾಲದಲ್ಲಿ ಪುಲ್ವಾಮ ದಾಳಿ ಆಯ್ತು. ಇದೇನ ನಿಮ್ಮ ಆಡಳಿತನಾ ಎಂದು ಹೇಳಿದ್ದೆ. ನೀವೊಂದು ಸಮಾಜಕ್ಕೆ ಪ್ರೇರಪೆಣೆ ಕೊಟ್ಟರೆ ಇನ್ನೊಬ್ಬರು ಬೇರೊಂದು ಸಮಾಜಕ್ಕೆ ಪ್ರೇರಣೆ ಕೊಡ್ತಾರೆ. ಇದೇನ ನಿಮ್ಮ ಆಡಳಿತ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅಭಿಪ್ರಾಯಪಟ್ಟರು.

ಪಂಚರತ್ನಯಾತ್ರೆ ಮತ ಪಡೆಯಲು ಅಲ್ಲ: ಪಂಚರತ್ನ ಶುರು ಮಾಡಿದ್ದು ಮತವನ್ನು ಪಡೆಯಲು ಅಲ್ಲ, ನಾನು ವೈಯಕ್ತಿಕವಾಗಿ ಎಷ್ಟುಅಂತ ಸಹಾಯ ಮಾಡಲು ಸಾಧ್ಯ? ಮನೆ ಬಳಿ ಸಮಸ್ಯೆ ಅಂತ ಸಾಕಷ್ಟು ಜನ ಬರುತ್ತಾರೆ, ವೈಯಕ್ತಿಕವಾಗಿ ಸಹಾಯ ಮಾಡಲು 50 ಲಕ್ಷದಿಂದ ಒಂದು ಕೋಟಿ ಹಣ ಬೇಕು. ಅದಕ್ಕೆ ಅ​ಧಿಕಾರಕ್ಕೆ ಬಂದ್ರೆ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕೊಡಲು ಸಾಧ್ಯ ಎಂದು ಕುಮಾರಸ್ವಾಮಿ ನುಡಿದರು.

Follow Us:
Download App:
  • android
  • ios