ಪಂಢರಾಪುರಕ್ಕೆ 600 ಕಾರುಗಳ ಸೇನೆಯ ಜತೆ ಹೋದ ಕೆಸಿಆರ್: ಚಂದ್ರಶೇಖರ್ ರಾವ್ ವಿರುದ್ಧ ಬಿಜೆಪಿ, ಶಿವಸೇನೆ, ಎನ್‌ಸಿಪಿ ಆಕ್ರೋಶ
ಪಂಢರಾಪುರದ ಪ್ರಸಿದ್ಧ ವಿಠ್ಠಲ ರುಕ್ಮಿಣಿ ದೇಗುಲಕ್ಕೆ ಭೇಟಿ ನೀಡಿದ್ದರು. ಹೀಗೆ ಭೇಟಿ ನೀಡಲು ಆಗಮಿಸಿದ ವೇಳೆ ಕೆಸಿಆರ್ ಅವರ ವಾಹನವನ್ನು 600 ಕಾರುಗಳು ಹಿಂಬಾಲಿಸಿದವು.
ಸೊಲ್ಲಾಪುರ (ಜೂನ್ 29, 2023): ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಸೋಮವಾರ ಮಹಾರಾಷ್ಟ್ರದ ಪಂಢರಾಪುರಕ್ಕೆ 600 ಬೆಂಗಾವಲು ಕಾರಿನೊಂದಿಗೆ ಆಗಮಿಸಿದ್ದು ಭಾರೀ ವಿವಾದಕ್ಕೆ ಕಾರಣವಾಗಿದೆ. ಮಹಾರಾಷ್ಟ್ರದಲ್ಲಿ ತಮ್ಮ ಭಾರತ್ ರಾಷ್ಟ್ರೀಯ ಸಮಿತಿ ಪಕ್ಷಕ್ಕೆ ನೆಲೆ ನೀಡಲು ಯತ್ನಿಸುತ್ತಿರುವ ರಾವ್ ಅವರ ಈ ಶಕ್ತಿ ಪ್ರದರ್ಶನ, ವಿಪಕ್ಷಗಳ ಕಟು ಟೀಕೆಗೆ ಗುರಿಯಾಗಿದೆ. ರಸ್ತೆ, ಸೇತುವೆ ನಿರ್ಮಿಸಲಾಗದ ಸಿಎಂ ರಾವ್, ಜನರ ತೆರಿಗೆ ದುಡ್ಡಲ್ಲಿ ಪಕ್ಷದ ಪರ ಪ್ರಚಾರ ಮಾಡುತ್ತಿದ್ದಾರೆ ಎಂದು ಬಿಜೆಪಿ, ಶಿವಸೇನೆ, ಎನ್‌ಸಿಪಿ ನಾಯಕರು ಕಿಡಿಕಾರಿದ್ದಾರೆ.
ಕಾರ್ ರ‍್ಯಾಲಿ
ಮಹಾರಾಷ್ಟ್ರದಲ್ಲೂ ಪಕ್ಷವನ್ನು ನೆಲೆಯೂರಿಸಲು ಯತ್ನಿಸುತ್ತಿರುವ ಕೆಸಿಆರ್, ಇದರ ಭಾಗವಾಗಿ ಸೋಮವಾರ ಸೊಲ್ಲಾಪುರ ಜಿಲ್ಲೆಯ ಸರ್ಕೋಲಿಯಲ್ಲಿ ಬೃಹತ್ ರ‍್ಯಾಲಿ ಹಮ್ಮಿಕೊಂಡಿದ್ದರು. ಅದಕ್ಕೂ ಮುನ್ನ ಅವರು ಪಂಢರಾಪುರದ ಪ್ರಸಿದ್ಧ ವಿಠ್ಠಲ ರುಕ್ಮಿಣಿ ದೇಗುಲಕ್ಕೆ ಭೇಟಿ ನೀಡಿದ್ದರು. ಹೀಗೆ ಭೇಟಿ ನೀಡಲು ಆಗಮಿಸಿದ ವೇಳೆ ಕೆಸಿಆರ್ ಅವರ ವಾಹನವನ್ನು 600 ಕಾರುಗಳು ಹಿಂಬಾಲಿಸಿದವು. ಇದರಲ್ಲಿ ಪಕ್ಷದ ಎಲ್ಲ ಸಂಸದರು, ಶಾಸಕರು, ಪಕ್ಷದ ನಾಯಕರು, ಬೆಂಬಲಿಗರು ಸೇರಿದ್ದರು.
ಇದನ್ನು ಓದಿ: ಮೋದಿಯನ್ನು ಕ್ಷಮೆಯ ವ್ಯಾಪಾರಿ ಎಂದ ತೆಲಂಗಾಣ ಸಿಎಂ ಕೆಸಿಆರ್: ಕೇಜ್ರಿವಾಲ್‌ಗೆ ಬೆಂಬಲ ಘೋಷಿಸಿ ಪ್ರಧಾನಿಗೆ ಕಟುಟೀಕೆ
ಹೀಗೆ ಒಮ್ಮೆಗೆ 600ಕ್ಕೂ ಹೆಚ್ಚು ಕಾರುಗಳು ರಸ್ತೆಯಲ್ಲಿ ಸಂಚರಿಸಿದ ಕಾರಣ ಹಲವು ಕಡೆ ಪ್ರಯಾಣಿಕರ ಸಂಚಾರಕ್ಕೆ ಅಡ್ಡಿಯಾಗಿತ್ತು. ಜೊತೆಗೆ ಜನರು ಕೂಡಾ ರಸ್ತೆ ಬದಿ ನಿಂತು ಅಚ್ಚರಿಯಿಂಂದ ಈ ಕಾರ್ ರ‍್ಯಾಲಿ ವೀಕ್ಷಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಎನ್‌ಸಿಪಿ ನಾಯಕ ಶರದ್ ಪವಾರ್, ‘ನೆರೆಯ ರಾಜ್ಯದ ಸಿಎಂ ಒಬ್ಬರು ದೇವಸ್ಥಾನಕ್ಕೆ ಬಂದರೆ ಅದಕ್ಕೆ ಯಾವುದೇ ಆಕ್ಷೇಪವಿಲ್ಲ. ಆದರೆ ಬೃಹತ್ ಸಂಖ್ಯೆಯ ವಾಹನಗಳ ಮೂಲಕ ಶಕ್ತಿ ಪ್ರದರ್ಶಿಸುವ ಪ್ರಯತ್ನ ಕಳವಳಕಾರಿಯಾಗಿದೆ’ ಎಂದಿದ್ದಾರೆ. ಇನ್ನು ಶಿವಸೇನೆ (ಉದ್ಧವ್ ಬಣ) ಸಂಜಯ್ ರಾವುತ್ ಪ್ರತಿಕ್ರಿಯಿಸಿ, ರಾವ್ ಇಂಥ ನಾಟಕ ಮಾಡಲು ಹೋದರೆ ತೆಲಂಗಾಣದಲ್ಲೂ ಅಧಿಕಾರ ಕಳೆದುಕೊಳ್ಳಲಿದ್ದಾರೆ ಎಂದು ಕಿಡಿಕಾರಿದ್ದಾರೆ. ಮತ್ತೊಂದೆಡೆ, ರಸ್ತೆ ಹಾಗೂ ಸೇತುವೆ ನಿರ್ಮಿಸಲಾಗದ ತೆಲಂಗಾಣ ಸಿಎಂ 600 ಕಾರಿನಲ್ಲಿ ಬಂದು ದಾಖಲೆ ಸೃಷ್ಟಿಗೆ ಯತ್ನಿಸುತ್ತಿದ್ದಾರೆ. ಜನರ ತೆರಿಗೆ ದುಡ್ಡು ಪೋಲು ಮಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕರು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಜೆಡಿಎಸ್ ಪರ ಪ್ರಚಾರಕ್ಕೆ ಕೆಸಿಆರ್ ಪಕ್ಷದ 50 ಜನರ ತಂಡ ರವಾನೆ: ಚುನಾವಣಾ ದಿನಾಂಕ ಘೋಷಣೆ ಬಳಿಕ ಪ್ರಚಾರ ಶುರು..!