ಮೋದಿಯನ್ನು ಕ್ಷಮೆಯ ವ್ಯಾಪಾರಿ ಎಂದ ತೆಲಂಗಾಣ ಸಿಎಂ ಕೆಸಿಆರ್: ಕೇಜ್ರಿವಾಲ್‌ಗೆ ಬೆಂಬಲ ಘೋಷಿಸಿ ಪ್ರಧಾನಿಗೆ ಕಟುಟೀಕೆ
ಕೇಂದ್ರ ಸರ್ಕಾರದ ಸುಗ್ರೀವಾಜ್ಞೆ ವಿರುದ್ಧ ವಿಪಕ್ಷಗಳ ಆಡಳಿತದ ರಾಜ್ಯಗಳ ಬೆಂಬಲ ಪಡೆಯಲು ದೇಶವ್ಯಾಪಿ ಪ್ರವಾಸ ಕೈಗೊಂಡಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಶನಿವಾರ ರಾಷ್ಟ್ರ ರಾಜಧಾನಿಯಲ್ಲಿ ಕೆ. ಚಂದ್ರಶೇಖರ ರಾವ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಬಳಿಕ ಕೆಸಿಆರ್ ಈ ಹೇಳಿಕೆ ನೀಡಿದ್ದಾರೆ.
ನವದೆಹಲಿ (ಮೇ 28, 2023): ಆಡಳಿತದ ಮೇಲಿನ ಅಧಿಕಾರಕ್ಕಾಗಿ ದೆಹಲಿ ಮೇಲೆ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದ್ದನ್ನು ಕಟುವಾಗಿ ಟೀಕಿಸಿರುವ ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್, ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಾಫಿ ಕಾ ಸೌದಾಗರ್ (ಕ್ಷಮೆಯ ವ್ಯಾಪಾರಿ) ಎಂದು ಟೀಕಿಸಿದ್ದಾರೆ. ಜೊತೆಗೆ ಕೇಂದ್ರ ಸರ್ಕಾರ, ಈ ಹಿಂದಿನ ಪ್ರಕರಣಗಳಲ್ಲಿ ಎಚ್ಚೆತ್ತುಕೊಂಡು ಕೃಷಿ ಕಾಯ್ದೆ ಮತ್ತು ಭೂಸ್ವಾಧೀನ ಕಾಯ್ದೆ ಹಿಂಪಡೆದಂತೆ ದೆಹಲಿ ಮೇಲಿನ ಸುಗ್ರೀವಾಜ್ಞೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸರ್ಕಾರದ ಸುಗ್ರೀವಾಜ್ಞೆ ವಿರುದ್ಧ ವಿಪಕ್ಷಗಳ ಆಡಳಿತದ ರಾಜ್ಯಗಳ ಬೆಂಬಲ ಪಡೆಯಲು ದೇಶವ್ಯಾಪಿ ಪ್ರವಾಸ ಕೈಗೊಂಡಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಶನಿವಾರ ರಾಷ್ಟ್ರ ರಾಜಧಾನಿಯಲ್ಲಿ ಕೆ. ಚಂದ್ರಶೇಖರ ರಾವ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಬಳಿಕ ಕೆಸಿಆರ್ ಈ ಹೇಳಿಕೆ ನೀಡಿದ್ದಾರೆ.
ಇದನ್ನು ಓದಿ: ಅಧಿಕಾರಿಗಳ ವರ್ಗಾವಣೆ, ನೇಮಕಾತಿಗೆ ಕೇಂದ್ರದ ಸುಗ್ರೀವಾಜ್ಞೆ: ಮತ್ತೆ ಸುಪ್ರೀಂ ಮೆಟ್ಟಿಲೇರಲಿರೋ ಕೇಜ್ರಿವಾಲ್
‘ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಮೋದಿ ಸರ್ಕಾರ ದೆಹಲಿ ಜನರನ್ನು ಅವಮಾನಿಸಿದೆ. ಮಿಸ್ಟರ್ ಮೋದಿ, ಸುಗ್ರೀವಾಜ್ಞೆಯನ್ನು ಹಿಂಪಡೆಯಿರಿ. ಇದು ಒಳ್ಳೆಯದಲ್ಲ. ನೀವು ತುರ್ತು ಪರಿಸ್ಥಿತಿಯನ್ನು ಮರಳಿ ತರುತ್ತಿದ್ದೀರಿ. ತುರ್ತು ಪರಿಸ್ಥಿತಿ ಹೇರುವ ಮೊದಲು ದೇಶದಲ್ಲಿ ಇದೇ ರೀತಿಯ ಪರಿಸ್ಥಿತಿ ಇತ್ತು.
ಸಂವಿಧಾನ ತಿದ್ದುಪಡಿ ಮೂಲಕ ಸುಗ್ರೀವಾಜ್ಞೆ ತಂದರೂ ನೀವೂ ಇದೇ ಹಾದಿಯಲ್ಲಿದ್ದಿರಿ. ‘ತುರ್ತು ಪರಿಸ್ಥಿತಿಯು ಕರಾಳ ದಿನಗಳು’ ಎಂದು ಬಿಜೆಪಿ ನಾಯಕರು ಕಿರುಚುತ್ತಲೇ ಇರುತ್ತಾರೆ. ಹಾಗಾದರೆ ಇದೇನು ಅಚ್ಚೇ ದಿನ್ ಎಮರ್ಜನ್ಸಿಯೇ?. ಮೋದಿ ನೇತೃತ್ವದ ಸರ್ಕಾರವು ಜನರಿಂದ ಚುನಾಯಿತವಾದ ಸರ್ಕಾರಕ್ಕೆ ಕೆಲಸ ಮಾಡಲು ಬಿಡುತ್ತಿಲ್ಲ.
ಇದನ್ನೂ ಓದಿ: ದಿಲ್ಲಿ ಮದ್ಯ ಹಗರಣ: ಇಬ್ಬರಿಗೆ ಜಾಮೀನು, ಮೇಲ್ನೋಟಕ್ಕೆ ಆರೋಪ ಸತ್ಯವಲ್ಲ ಎಂದ ದಿಲ್ಲಿ ಕೋರ್ಟ್
ನೀವು ಸುಪ್ರೀಂ ಕೋರ್ಟ್ ತೀರ್ಪನ್ನು ಗೌರವಿಸಿಲ್ಲ. ತೀರ್ಪು ಗೌರವಿಸುವುದು ಎಂದರೆ ನಿಮ್ಮ ಪಯಣ ತುರ್ತು ಪರಿಸ್ಥಿತಿಯತ್ತ. ನೀವಾಗಿಯೇ ಸುಗ್ರೀವಾಜ್ಞೆ ಹಿಂಪಡೆಯಿರಿ. ಇಲ್ಲದಿದ್ದರೆ ನಾವೆಲ್ಲರೂ ಕೇಜ್ರಿವಾಲ್‌ರನ್ನು ಬೆಂಬಲಿಸುತ್ತೇವೆ.ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ನಮ್ಮೆಲ್ಲ ಶಕ್ತಿ ಬಳಸಿ ಸುಗ್ರೀವಾಜ್ಞೆಯನ್ನು ಸೋಲಿಸುತ್ತೇವೆ. ಸುಗ್ರೀವಾಜ್ಞೆ ಪ್ರಜಾಪ್ರಭುತ್ವ ವಿರೋಧಿ ಮತ್ತು ಅಸಂವಿಧಾನಿಕವಾಗಿದೆ’ ಎಂದು ಕೆಸಿಆರ್ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಮನೆ ನವೀಕರಣಕ್ಕೆ 45 ಕೋಟಿ ರೂ. ಖರ್ಚು ಮಾಡಿದ ‘ಆಮ್ ಆದ್ಮಿ’ ಸಿಎಂ ಕೇಜ್ರಿವಾಲ್!