ಬೆಂಗಳೂರು(ನ. 04) ಬಿಎಸ್ ಯಡಿಯುರಪ್ಪ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಸದ್ಯ ಕರ್ನಾಟಕ ರಾಜಕಾರಣದ ವಿಷಯ ವಸ್ತು. ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಜಟಾಪಟಿಗೆ ಅದರಲ್ಲೂ ಸಿದ್ದರಾಮಯ್ಯ ಮತ್ತು ಬಿಜೆಪಿ ನಡುವಿನ ವಾಕ್ಸಮರಕ್ಕೆ ಆಡಿಯೋ ಕಾರಣವಾಗಿದೆ. ಸಿದ್ದರಾಮಯ್ಯ ಟ್ವಿಟರ್ ಮೂಲಕ ಆಗಾಗ ಏಟು ನೀಡುತ್ತಲೇ ಇದ್ದಾರೆ. ಸ್ಪಷಟನೆ, ಉತ್ತರ, ಪ್ರಶ್ನೆ ಎಲ್ಲವೂ ಇದರಲ್ಲಿ ಇದೆ.

ಸೋಮವಾರ ಮಧ್ಯಾಹ್ನ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಮತ್ತೆ ಪ್ರಶ್ನೆಗಳ ಬಾಣ ಎಸೆದಿದ್ದಾರೆ. ಮೊದಲು ಆಡಿಯೋದಲ್ಲಿನ ಹೇಳಿಕೆ ತಮ್ಮದೇ ಎಂದು ಒಪ್ಪಿಕೊಂಡಿದ್ದ ಬಿಎಸ್ ಯಡಿಯೂರಪ್ಪ ಅಮಿತ್ ಶಾ ತರಾಟೆಗೆ ತಗೊಂಡ ಮೇಲೆ ವರಸೆ ಬದಲಿಸಿದ್ದಾರೆ. ಇದರಿಂದಾಗಿಯೇ ಅಮಿತ್ ಶಾ ನಿರ್ದೇಶನದಂತೆಯೇ ಸರ್ಕಾರವನ್ನು ಬೀಳಿಸಲಾಗಿದೆ ಎಂಬ ಯಡಿಯೂರಪ್ಪನವರ ಹೇಳಿಕೆ ಸತ್ಯ ಎಂದು ಸಾಬೀತಾಗಿದೆ.

ಸಿದ್ದರಾಮಯ್ಯ ವಿರುದ್ಧ 62 ಕೇಸುಗಳು

ಶ್ರೀಮಂತ ಪಾಟೀಲ್ ಹೃದಯದ ಕಾಯಿಲೆ ಎಂದು ಸುಳ್ಳು ಹೇಳಿ 300 ಕಿ.ಮೀ ದೂರದ ಚೆನ್ನೈಗೆ ಹೋಗಿದ್ದರು. ಕೊನೆಗೆ ಅಲ್ಲಿಂದ ಹೃದ್ರೋಗ ತಜ್ಞರೇ ಇಲ್ಲದ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಈ ನಾಟಕಗಳೆಲ್ಲ ಆಪರೇಷನ್ ಕಮಲದ ಭಾಗವಲ್ಲವೇ? ಇದಕ್ಕೂ ಬಿಜೆಪಿಗೂ ಸಂಬಂಧವಿಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ

ಬಿಜೆಪಿ ಪಕ್ಷದಲ್ಲೇ ಮುಖ್ಯಮಂತ್ರಿ ಯಡಿಯೂರಪ್ಪ  ಅವರಿಗೆ ಬಹಳ ಜನ ಶತ್ರುಗಳಿದ್ದಾರೆ. ಅವರಲ್ಲೇ ಯಾರೋ ಆಡಿಯೋ ರೆಕಾರ್ಡ್ ಮಾಡಿ, ಮಾಧ್ಯಮಗಳಿಗೆ ಕೊಟ್ಟಿದ್ದಾರೆ. ಇದ್ದ ಮೂರ್ ಜನದಲ್ಲಿ ಕದ್ದವರ‌್ಯಾರು ಅಂತ ನಮ್ಮನ್ನ ಕೇಳಿದ್ರೆ ಹೇಗಪ್ಪ? ಎಂದು ಟ್ವಿಟರ್ ಮೂಲಕ ಬಿಎಸ್ ವೈ ಟವರನ್ನು ಕುಟುಕಿದ್ದಾರೆ.

ಇದೇ ವಿಚಾರ ಭಾನುವಾರ ಸಿದ್ದರಾಮಯ್ಯ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನಡುವಿನ ತಿಕ್ಕಾಟಕ್ಕೆ ಕಾರಣವಾಗಿತ್ತು. ಒಬ್ಬರ ಮೇಲೆ ಒಬ್ಬರು ಹೇಳಿಕೆ ನೀಡಿದ್ದರು.