ಕೋಲಾರದಿಂದಲೇ ಸಿದ್ದರಾಮಯ್ಯ ಸ್ಪರ್ಧೆ: ಶಾಸಕ ಯತೀಂದ್ರ
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮೈಸೂರಿನ ವರುಣ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ. ಅವರು ಕೋಲಾರ ವಿಧಾನಸಭಾ ಕ್ಷೇತ್ರದಿಂದಲೇ ಸ್ವರ್ಧಿಸುತ್ತಾರೆ ಎಂದು ವರುಣ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಸಿದ್ದರಾಮಯ್ಯರ ಪುತ್ರ ಡಾ.ಯತೀಂದ್ರ ಸ್ಪಷ್ಟಪಡಿಸಿದರು.
ಕೋಲಾರ (ಜ.31): ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮೈಸೂರಿನ ವರುಣ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ. ಅವರು ಕೋಲಾರ ವಿಧಾನಸಭಾ ಕ್ಷೇತ್ರದಿಂದಲೇ ಸ್ವರ್ಧಿಸುತ್ತಾರೆ ಎಂದು ವರುಣ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಸಿದ್ದರಾಮಯ್ಯರ ಪುತ್ರ ಡಾ.ಯತೀಂದ್ರ ಸ್ಪಷ್ಟಪಡಿಸಿದರು. ಸೋಮವಾರ ಕೋಲಾರಕ್ಕೆ ಭೇಟಿ ನೀಡಿ ಸಿದ್ದರಾಮಯ್ಯ ಅವರಿಗಾಗಿ ಬಸವನತ್ತ ಗ್ರಾಮದಲ್ಲಿ ಬಾಡಿಗೆಗೆ ಪಡೆದಿರುವ ಮನೆ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಕಾಂಗ್ರೆಸ್ ಹೈಮಾಂಡ್ ಯಾವ ಕ್ಷೇತ್ರದಲ್ಲಿ ಕಣಕ್ಕಿಳಿಯುವಂತೆ ಟಿಕೆಟ್ ನೀಡುತ್ತದೋ ಅದೇ ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ಸಿದ್ದರಾಮಯ್ಯ ತಿಳಿಸಿರುವುದು ಪಕ್ಷದ ಸಂಪ್ರದಾಯದ ಪಾಲನೆ. ಕೋಲಾರದಿಂದ ಸ್ಪರ್ಧಿಸಲು ಹೈಕಮಾಂಡ್ ಸಮ್ಮತಿ ಸಿಗಲಿದೆ. ಇದರಲ್ಲಿ ಯಾವುದೇ ಸಂಶಯ ಬೇಡ ಎಂದು ತಿಳಿಸಿದರು. ವರುಣದಿಂದ ಸ್ಪರ್ಧಿಸುವಂತೆ ನಾನು ನಮ್ಮ ತಂದೆಗೆ ಆಹ್ವಾನ ನೀಡಿದ್ದೆ. ಆದರೆ ಅವರು ಕೋಲಾರದಿಂದ ಸ್ಪರ್ಧೆಗೆ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದರು.
ನನ್ನ ಹೆಣವೂ ಬಿಜೆಪಿ, ಆರೆಸ್ಸೆಸ್‌ಗೆ ಹೋಗಲ್ಲ: ಸಿದ್ದರಾಮಯ್ಯ
ಕೋಲಾರ ಕ್ಷೇತ್ರದಿಂದಲೇ ಸ್ಪರ್ಧೆ: ಬಾದಾಮಿ ಕ್ಷೇತ್ರದ ಜನ ಸಹ ಚುನಾವಣೆಗೆ ಸ್ಪರ್ಧಿಸುವಂತೆ ಸಿದ್ದರಾಯಯ್ಯರನ್ನು ಆಹ್ವಾನಿಸುತ್ತಿದ್ದಾರೆ. ಕಾಪ್ಟರ್ ಅನ್ನು ನಾವೇ ಕೊಡಿಸುತ್ತೇವೆ, ಚುನಾವಣೆ ವೆಚ್ಚವನ್ನೂ ನಾವೇ ಭರಿಸುತ್ತೇವೆ. ನೀವು ನಾಮಪತ್ರ ಸಲ್ಲಿಸಿ ಸಾಕು ಎಂದು ಒತ್ತಾಯಿಸಿದರು. ಆದರೆ ಸಿದ್ದರಾಮಯ್ಯ ಕೋಲಾರದ ಜನತೆ ತೋರುತ್ತಿರುವ ಅಭಿಮಾನದಿಂದಾಗಿ ಇಲ್ಲಿಂದಲೇ ಸ್ಪರ್ಧಿಸಲು ತೀರ್ಮಾನಿಸಿದ್ದಾರೆ. ಕೋಲಾರ ಕಾಂಗ್ರೆಸ್‌ನ ಭದ್ರಕೋಟೆ. ಇಲ್ಲಿಂದಲೇ ನಮ್ಮ ತಂದೆ ಸ್ಪರ್ಧೆಗೆ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದರು.
ದೈವವಾಣಿ ಅದೊಂದು ಆಕಸ್ಮಿಕ: ಮುಂಬರುವ ಚುನಾವಣೆಯಲ್ಲಿ ಸಿದ್ದರಾಮಯ್ಯ ಎರಡು ಕಡೆ ಸ್ಪರ್ಧಿಸಬೇಕೆಂದು ದೈವವಾಣಿ ಹೇಳಿರುವುದಕ್ಕೆ ಸಂಬಂಧಿಸಿದ ಪ್ರಶ್ನೆಗೆ, ನಾವು ಅಲ್ಲಿಗೆ ಹೋಗಿದ್ದು ಆಕ್ಮಸಿಕ. ಅಲ್ಲದೆ ಅದು ನಮ್ಮ ಮನೆ ದೇವರಲ್ಲ. ಅದು ನಮ್ಮ ದೈವವಾಣಿಯೂ ಅಲ್ಲ. ನಾವು ಅಲ್ಲಿ ಏನನ್ನೂ ಕೇಳಲಿಲ್ಲ. ಅದೊಂದು ಆಕಸ್ಮಿಕವಾಗಿ ಆದ ಪ್ರಕರಣ. ಅದರ ಬಗ್ಗೆ ನಾವು ಅಷ್ಟೇನೂ ಮಾನ್ಯತೆ ನೀಡಿಲ್ಲ ಎಂದು ಉತ್ತರಿಸಿದರು. 40 ವರ್ಷಗಳಿಂದ ನಮ್ಮ ತಂದೆ ಶೋಷಿತರ ಪರ ಕೆಲಸ ಮಾಡುತ್ತಿದ್ದಾರೆ. ಅದಕ್ಕಾಗಿ ಶ್ರೀಮಂತರು, ಮೇಲ್ವರ್ಗದವರು ಮತ್ತು ವಿರೋಧ ಪಕ್ಷದವರು ಒಟ್ಟಾಗಿ ನಮ್ಮ ತಂದೆ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.
ಸಾಮಾಜಿಕ ನ್ಯಾಯಕ್ಕಾಗಿ ಸಿದ್ದು ಆಯ್ಕೆ ಮಾಡಿ: ರಾಜ್ಯದಲ್ಲಿ ಸಮಸಮಾಜ ನಿರ್ಮಾಣಕ್ಕೆ, ಸರ್ವಧರ್ಮಗಳಿಗೂ ಸಾಮಾಜಿಕ ನ್ಯಾಯ ಸಿಗಬೇಕಾದರೆ ಮಾಜಿ ಸಿಎಂ ಸಿದ್ದರಾಮಯ್ಯರನ್ನು ಆಯ್ಕೆ ಮಾಡಿ ರಾಜ್ಯದ ಆಡಳಿತದ ಚುಕ್ಕಾಣಿ ನೀಡಲೇಬೇಕಾಗಿದೆ ಎಂದು ವರುಣ ಕ್ಷೇತ್ರದ ಶಾಸಕ ಡಾ.ಯತೀಂದ್ರ ತಿಳಿಸಿದರು. ಡಾ.ಯತೀಂದ್ರ ಕೋಲಾರಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿ ತಾಲೂಕಿನ ಬಸವನತ್ತ ಬಳಿ ಮನೆ ವೀಕ್ಷಿಸಿದ ನಂತರ ಕೋಡಿರಾಮಸಂದ್ರ, ಕಳ್ಳಿಪುರ, ಹೊನ್ನೇನಹಳ್ಳಿ ಬೂತ್ ಕಮಿಟಿಗಳಿಗೆ ಚಾಲನೆ ನೀಡಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಹೇಳುವುದೆಲ್ಲಾ ಸುಳ್ಳಾಗುತ್ತೆ: ಸಚಿವ ಸುಧಾಕರ್
ಕಳೆದ 40 ವರ್ಷಗಳ ರಾಜಕಾರಣದಲ್ಲಿ ಶೋಷಿತರ-ಜನಪರ ಧ್ವನಿಯಾಗಿ ಕೆಲಸ ಮಾಡಿದ್ದಾರೆ ಎಂದು ಹೇಳಿದರು. ಕಳೆದ ಚುನಾವಣೆಯಲ್ಲಿ ಪಟ್ಟಭದ್ರಹಿತಾಸಕ್ತರ ಪಿತೂರಿಗಳನ್ನು ಅರಿಯದೆ ಮೋಸ ಹೋಗಿದ್ದರಿಂದ ಸೋಲನ್ನಪ್ಪಬೇಕಾಯಿತು, ಆದರೆ ಈ ಬಾರಿ ಅಪಪ್ರಚಾರಗಳಿಗೆ ಅವಕಾಶ ನೀಡದಂತೆ ಕಾರ್ಯಕರ್ತರು ಜನತೆಗೆ ಸತ್ಯಾಂಶ ತಲುಪಿಸುವ ಕೆಲಸ ಮಾಡಬೇಕಾಗಿದೆ ಎಂದರು.