ಬೆಂಗಳೂರು, (ಸೆ.09):  ರಾಜ್ಯದ ಆರ್ಥಿಕ ಪರಿಸ್ಥಿತಿ, ಪ್ರವಾಹ, ರೈತರ ಬೆಳೆ ನಷ್ಟ, ಕೊರೋನಾ, ಡಿ.ಜಿ ಹಳ್ಳಿ ಗಲಭೆ ಪ್ರಕಣ, ಡ್ರಗ್ಸ್ ದಂಧೆ ಇಟ್ಟುಕೊಂಡು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಿದ್ದರಾಮಯ್ಯ ಮಹಾ ಪ್ಲಾನ್ ಮಾಡಿದ್ದಾರೆ. 

ಈ ಹಿನ್ನೆಲೆಯಲ್ಲಿ ಇದೇ ತಿಂಗಳ 21ರಿಂದ  ನಡೆಸಲು ಉದ್ದೇಶಿಸಿರುವ ವಿಧಾನಸಭೆ ಕಲಾಪದ ಅವಧಿಯನ್ನು ಅಕ್ಟೋಬರ್ 15ರವರೆಗೆ ವಿಸ್ತರಿಸುವಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ತಿಂಗಳ 21ರಿಂದ 30ರವರೆಗೆ ಅಂದ್ರೆ 10 ದಿನಗಳ ಕಾಲ ಅಧಿವೇಶನ ನಡೆಸಲು ತೀರ್ಮಾನಿಸಲಾಗಿದೆ. ಆದ್ರೆ, ಇದೀಗ ಸಿದ್ದರಾಮಯ್ಯ ಅವರು  ಮಹತ್ವದ ಹಲವು ವಿಚಾರಗಳ ಬಗ್ಗೆ ಸಮಗ್ರವಾಗಿ ಚರ್ಚೆ ನಡೆಯುವ ಅಗತ್ಯವಿರುವುದರಿಂದ ಅ.15ರ ವರೆಗೆ ಅಧಿವೇಶನ ನಡೆಸುವಂತೆ ವಿಧಾನಸಭೆ ಸ್ಪೀಕರ್ ಹಾಗೂ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದಾರೆ. ಈ ಮೂಲಕ ಹೆಚ್ಚುವರಿ ಅವಧಿಯಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ತಂತ್ರ ರೂಪಿಸಿದ್ದಾರೆ.

ಇತ್ತ ಸಿಎಂ ಸಚಿವರ ಸಭೆ ನಡೆಸಿದ ಬೆನ್ನಲ್ಲೇ ಕಾಂಗ್ರೆಸ್ ಶಾಸಕಾಂಗ ಸಭೆ ಕರೆದ ಸಿದ್ದರಾಮಯ್ಯ

ಸಿದ್ದರಾಮಯ್ಯ ಪತ್ರ
15ನೇ ವಿಧಾನಸಭೆಯ 7ನೇ ಅಧಿವೇಶನದ ಕಾರ್ಯಕಲಾಪಗಳನ್ನು ನಡೆಸಲು ಪ್ರಕಟಣೆ ಹೊರಡಿಸಲಾಗಿದೆ. ಈ ಪ್ರಕಟಣೆಯಂತೆ ಸೆ.21, 22, 23, 24, 25, 28, 29 ಮತ್ತು 30 ರವರೆಗೆ ಅಧಿವೇಶನವನ್ನು ನಡೆಸಲು ಉದ್ದೇಶಿಸಲಾಗಿದೆ. ಅಧಿವೇಶನದಲ್ಲಿ ಸುಮಾರು 20 ಕ್ಕಿಂತ ಹೆಚ್ಚು ಸುಗ್ರಿವಾಜ್ಞೆಗಳನ್ನು ಒಳಗೊಂಡಂತೆ 35 ಕ್ಕಿಂತ ಹೆಚ್ಚು ಮಸೂದೆಗಳನ್ನು ಮಂಡಿಸಲಾಗುತ್ತಿದೆ ಎಂಬ ಮಾಹಿತಿ ತಿಳಿದು ಬಂದಿದೆ.

ಅಧಿವೇಶನದ ಸಮಯ ಮಾತ್ರ ಯಾವುದಕ್ಕೂ ಸಾಕಾಗುವುದಿಲ್ಲ. ಜನರ ಮೇಲೆ ಕಾಳಜಿ ಇಲ್ಲದೆ ನೆಪ ಮಾತ್ರಕ್ಕೆ ಅಧಿವೇಶನ ನಡೆಸಲು ಉದ್ದೇಶಿಸುವಂತೆ ಕಾಣಿಸುತ್ತಿದೆ. ಹಲವು ಜನ ವಿರೋಧಿಯಾದ ಸುಗ್ರಿವಾಜ್ಞೆಗಳನ್ನು ಚರ್ಚೆಯನ್ನೇ ನಡೆಸದೆ ಅಂಗೀಕಾರ ಪಡೆಯಲು ಯತ್ನಿಸುತ್ತಿರುವುದು ಅತ್ಯಂತ ಜನ ದ್ರೋಹಿಯಾದ, ಬೇಜವಾಬ್ದಾರಿಯುತವಾದ ಮತ್ತು ದುಷ್ಟತನದ ಪರಮಾವಧಿಯಂತೆ ಕಾಣುತ್ತಿದೆ. ಸರ್ಕಾರ ಈ ವಿಚಾರದಲ್ಲಿ ಅತ್ಯಂತ ಅಸಂವಿಧಾನಿಕವಾಗಿ ನಡೆದುಕೊಳ್ಳುತ್ತಿದೆ ಎಂದು ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.