ಇತ್ತ ಸಿಎಂ ಸಚಿವರ ಸಭೆ ನಡೆಸಿದ ಬೆನ್ನಲ್ಲೇ ಕಾಂಗ್ರೆಸ್ ಶಾಸಕಾಂಗ ಸಭೆ ಕರೆದ ಸಿದ್ದರಾಮಯ್ಯ
ಕೊರೋನಾ ನಿಯಂತ್ರಣದ ವೈಫಲ್ಯ, ಕೆಜಿಹಳ್ಳಿ, ಡಿಜೆಹಳ್ಳಿ ಗಲಭೆ, ಡ್ರಗ್ಸ್ ಜಾಲ, ನೆರೆ ಸಂತ್ರಸ್ತರಿಗೆ ಪುನರ್ ವಸತಿ ಕಲ್ಪಿಸುವಲ್ಲಿನ ವಿಫಲತೆಗಳು ಸೇರಿದಂತೆ ಹಲವಾರು ವಿಷಯಗಳನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರವನ್ನು ಬಿಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಂತ್ರ ರೂಪಿಸುತ್ತಿದ್ದಾರೆ.
ಬೆಂಗಳೂರು, (ಸೆ.07): ಅತ್ತ ಸಿಎಂ ಬಿಎಸ್ ಯಡಿಯೂರಪ್ಪ ಅವರು ತಮ್ಮ ಸಚಿವರ ಮೀಟಿಂಗ್ ಕರೆಯುತ್ತಿದ್ದಂತೆಯೇ ಇತ್ತ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸೆಪ್ಟೆಂಬರ್ 16ರಂದು ಕಾಂಗ್ರೆಸ್ ಶಾಸಕಾಗ ಪಕ್ಷದ ಸಭೆ ಕರೆದಿದ್ದಾರೆ.
ಇದೇ ಸೆ.21 ರಿಂದ 30ರವರೆಗೆ ವಿಧಾನಮಂಡಲ ಅಧಿವೇಶನ ನಡೆಯುವುದರಿಂದ ಪ್ರತಿಪಕ್ಷಗಳ ಪ್ರಶ್ನೆಗಳಿಗೆ ಹೇಗೆಲ್ಲಾ ಎದುರಿಸಬೇಕೆನ್ನುವುದರ ಬಗ್ಗೆ ಸಿಎಂ ಸಚಿವರೊಂದಿಗೆ ಚರ್ಚಿಸಲು ಸಭೆ ನಡೆಸಿದರು.
ದಿಢೀರ್ ಸಚಿವರ ಸಭೆ ಕರೆದ ಸಿಎಂ: ಕಡ್ಡಾಯ ಹಾಜರಿಗೆ ಸೂಚನೆ, ಕುತೂಹಲ ಮೂಡಿಸಿದ ಬಿಎಸ್‌ವೈ ನಡೆ
ಇನ್ನು ಹಲವಾರು ವಿಷಯಗಳನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರವನ್ನು ಬಿಕ್ಕಟ್ಟಿಗೆ ಸಿಲುಕಿಸಲು ಸಿದ್ದರಾಮಯ್ಯ ತಂತ್ರ ರೂಪಿಸಲು ಶಾಸಕಾಂಗ ಸಭೆ ಕರೆದಿದ್ದಾರೆ. ಇದರಿಂದ ರಾಜ್ಯ ರಾಜಕಾರಣ ಚಟುವಟಿಕೆಗಳು ಬಿರುಸುಗೊಂಡಿವೆ.
ಸಿದ್ದರಾಮಯ್ಯ ಸುದ್ದಿಗೋಷ್ಠಿ
ವಿಧಾನಮಂಡಲ ಅಧಿವೇಶನ ಆರಂಭವಾಗುತ್ತಿರುವ ಕಾರಣ, ಇದೇ ತಿಂಗಳ (ಸೆಪ್ಟೆಂಬರ್) 16ರಂದು ಕಾಂಗ್ರೆಸ್ ಶಾಸಕಾಗ ಪಕ್ಷದ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಸದನದಲ್ಲಿ ಕೈಗೆತ್ತಿಕೊಳ್ಳಬೇಕಾದ ವಿಷಯಗಳ ಬಗ್ಗೆ ಉಭಯ ಸದನದ ಪಕ್ಷದ ಸದಸ್ಯರ ಜೊತೆ ಚರ್ಚಿಸಲಾಗುವುದು ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಇಂದು (ಸೋಮವಾರ) ಪಕ್ಷದ ಶಾಸಕರ ಜೊತೆ ಆನ್‌ಲೈನ್ ಸಂವಾದ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೋವಿಡ್ ಉಪಕರಣಗಳ ಖರೀದಿಯಲ್ಲಿ ನಡೆದಿರುವ ಅವ್ಯವಹಾರ, ಸರ್ಕಾರದಲ್ಲಿ ನಡೆದಿರುವ ಭ್ರಷ್ಟಾಚಾರ, ಡ್ರಗ್ ಮಾಫಿಯಾ, ಡಿ.ಜೆ. ಹಳ್ಳಿ ಘಟನೆ, ಜಿಎಸ್‍ಟಿ ಮತ್ತು ವಿವಿಧ ಮಸೂದೆಗಳ ಬಗ್ಗೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಮಾಲೋಚನೆ ನಡೆಸುತ್ತೇವೆ ಎಂದರು.
ಡ್ರಗ್ ಮಾಫಿಯಾ: 'ನಮ್ಮ ಸರ್ಕಾರದ ಸಮಯದಲ್ಲಿ ಡ್ರಗ್ ಮಾಫಿಯಾಕ್ಕೆ ಕಡಿವಾಣ ಹಾಕುವ ಪ್ರಯತ್ನ ನಡೆದಿತ್ತು. ಎನ್‍ಸಿಬಿಯವರು ಈಗ ತನಿಖೆ ಕೈಗೆತ್ತಿಕೊಂಡಿದ್ದಾರೆ. ಸಿಸಿಬಿಯೂ ತನಿಖೆಯಲ್ಲಿ ಕೈ ಜೋಡಿಸಿದೆ. ವಿದ್ಯಾರ್ಥಿಗಳು, ಸಿನಿಮಾ ನಟರು, ರಾಜಕಾರಣಿಗಳು, ಅವರ ಮಕ್ಕಳು ಸೇರಿದಂತೆ ಈ ಮಾಫಿಯಾದಲ್ಲಿ ಯಾರೇ ಭಾಗಿಯಾಗಿದ್ದರೂ ಶಿಕ್ಷೆಯಾಗಲಿ. ತಪ್ಪು ಮಾಡಿದವರು ಶಿಕ್ಷೆ ಅನುಭವಿಸಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಿ. ಅದಕ್ಕೆ ನಮ್ಮ ಸಹಕಾರವಿದೆ' ಎಂದು ಹೇಳಿದರು.