ಜೆಡಿಎಸ್‌ನ ಮಾಜಿ ಸಚಿವ ಪುಟ್ಟರಾಜುಗೆ ಕಾಂಗ್ರೆಸ್ ಗಾಳ?: ಮಂಡ್ಯ ಎಂಪಿ ಟಿಕೆಟ್ ಆಫರ್ ಸಾಧ್ಯತೆ
ಮುಂಬರುವ ಲೋಕಸಭಾ ಚುನಾವಣೆಯನ್ನು ಗುರಿಯಾಗಿಸಿಕೊಂಡಿರುವ ಕಾಂಗ್ರೆಸ್ ಜಿಲ್ಲೆಯೊಳಗೆ ಜೆಡಿಎಸ್‌ನ ಸರ್ವಶಕ್ತ ನಾಯಕ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರನ್ನು ಪಕ್ಷಕ್ಕೆ ಸೆಳೆದುಕೊಳ್ಳಲು ಗಾಳ ಹಾಕಿದೆ.
ಮಂಡ್ಯ (ಆ.20): ಮುಂಬರುವ ಲೋಕಸಭಾ ಚುನಾವಣೆಯನ್ನು ಗುರಿಯಾಗಿಸಿಕೊಂಡಿರುವ ಕಾಂಗ್ರೆಸ್ ಜಿಲ್ಲೆಯೊಳಗೆ ಜೆಡಿಎಸ್‌ನ ಸರ್ವಶಕ್ತ ನಾಯಕ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರನ್ನು ಪಕ್ಷಕ್ಕೆ ಸೆಳೆದುಕೊಳ್ಳಲು ಗಾಳ ಹಾಕಿದೆ. ಚುನಾವಣಾ ಸೋಲಿನ ಬಳಿಕ ರಾಜಕೀಯ ಚಟುವಟಿಕೆಗಳಿಂದ ದೂರವೇ ಉಳಿದಿರುವ ಅವರಿಗೆ ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡುವ ಭರವಸೆಯನ್ನು ನೀಡಿದೆ. ಜಿಲ್ಲೆಯೊಳಗೆ ದಳದ ಪ್ರಾಬಲ್ಯವನ್ನು ಕುಗ್ಗಿಸುವ ಸಲುವಾಗಿ ಪ್ರಬಲ ನಾಯಕನಿಗೆ ಕಾಂಗ್ರೆಸ್ ಬಲೆ ಬೀಸಿದೆ.
ತಮ್ಮ ಜೊತೆಯಲ್ಲೇ ರಾಜಕೀಯ ಪ್ರವೇಶಿಸಿರುವ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರನ್ನು ಕೈ ಪಾಳಯಕ್ಕೆ ಕರೆತರುವುದಕ್ಕೆ ಸಚಿವ ಚಲುವರಾಯಸ್ವಾಮಿ ಪ್ರಯತ್ನ ನಡೆಸುತ್ತಿದ್ದಾರೆ. ಆದರೂ, ಇನ್ನೂ ಸ್ಪಷ್ಟಚಿತ್ರಣ ಸಿಗದಂತಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಗಾಗಲೇ ಪಕ್ಷ ಸೇರುವಂತೆ ಸಿ.ಎಸ್.ಪುಟ್ಟರಾಜು ಅವರಿಗೆ ಆಹ್ವಾನ ನೀಡಿದ್ದಾರೆ ಎನ್ನಲಾಗಿದ್ದು, ಪಕ್ಷ ಸೇರಿದರೆ ಮಂಡ್ಯ ಲೋಕಸಭೆ ಟಿಕೆಟ್ ನೀಡುವ ಆಫರ್ ಕೊಟ್ಟಿದ್ದಾರೆ. 2023ರ ಚುನಾವಣಾ ಸೋಲಿನಿಂದ ಹತಾಶರಾಗಿರುವಂತೆ ಕಂಡುಬಂದಿರುವ ಪುಟ್ಟರಾಜು ಅವರು ಕಾಂಗ್ರೆಸ್ ಸೇರಿದರೆ ರಾಜಕೀಯವಾಗಿ ಆಗಬಹುದಾದ ಅನುಕೂಲ-ಅನಾನುಕೂಲಗಳ ಬಗ್ಗೆಯೂ ಅಳೆದು ತೂಗಿ ನೋಡುತ್ತಿದ್ದಾರೆ.
ನಾನು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ: ಶಾಸಕ ಜಿ.ಟಿ.ದೇವೇಗೌಡ
ಆತುರದ ನಿರ್ಧಾರ ಮಾಡುತ್ತಿಲ್ಲ: ಮೇಲುಕೋಟೆ ಕ್ಷೇತ್ರದೊಳಗೆ ದಳದ ಪ್ರಾಬಲ್ಯವಿದೆ. ಮುಖಂಡರು-ಕಾರ್ಯಕರ್ತರ ದೊಡ್ಡ ಪಡೆಯೇ ಇದೆ. ಜೆಡಿಎಸ್ ವರಿಷ್ಠರ ಪೈಕಿ ಎಚ್.ಡಿ.ಕುಮಾರಸ್ವಾಮಿ ಅವರಿಗಿಂತಲೂ ಹೆಚ್.ಡಿ.ದೇವೇಗೌಡ ಅವರೊಂದಿಗೆ ಉತ್ತಮ ಬಾಂಧವ್ಯವಿದೆ. ಹಿರಿಯ ನಾಯಕರಾಗಿರುವ ಅವರಿಗೆ ಪಕ್ಷದೊಳಗೆ ಗೌರವ-ಮರ್ಯಾದೆಗಳಿವೆ. ಎಚ್.ಡಿ.ದೇವೇಗೌಡರ ಮಾನಸಪುತ್ರರೆಂದೇ ಹೆಸರಾಗಿದ್ದಾರೆ. ಪಕ್ಷ ಅವರಿಗೆ ಶಾಸಕ, ಸಂಸದ, ಸಚಿವ ಹುದ್ದೆ ನೀಡಿ ಗೌರವದಿಂದ ನಡೆಸಿಕೊಂಡಿದೆ. ಅದಲ್ಲದೆ, ಎಚ್.ಡಿ.ದೇವೇಗೌಡರು ಇರುವವರೆಗೂ ಜೆಡಿಎಸ್‌ನಲ್ಲೇ ಇರುವುದಾಗಿ ಹಲವಾರು ಬಾರಿ ಪುಟ್ಟರಾಜು ಬಹಿರಂಗವಾಗಿಯೇ ಹೇಳಿದ್ದಾರೆ. ಇವೆಲ್ಲದರ ನಡುವೆ ಒಮ್ಮೆ ಈಗ ಪಕ್ಷ ತ್ಯಜಿಸಿದರೆ ಜೆಡಿಎಸ್ ಮುಖಂಡರು-ಕಾರ್ಯಕರ್ತರು ತಮ್ಮೊಂದಿಗೆ ಬರುವರೇ ಎಂಬ ಅನುಮಾನವೂ ಅವರನ್ನು ಕಾಡುತ್ತಿದೆ. ಆತುರವಾಗಿ ನಿರ್ಧಾರ ಕೈಗೊಂಡರೆ ಮುಂದಿನ ರಾಜಕೀಯ ಭವಿಷ್ಯ ಮಸುಕಾಗಬಹುದೆಂಬ ಆತಂಕವೂ ಅವರನ್ನು ತೀವ್ರವಾಗಿ ಬಾಧಿಸುತ್ತಿರುವಂತೆ ಕಂಡುಬರುತ್ತಿದ್ದಾರೆ.
ಎಲ್ಲ ರೀತಿಯಿಂದ ಲೆಕ್ಕಾಚಾರ: 2015ರ ಲೋಕಸಭಾ ಚುನಾವಣೆ ನಡೆದ ಸಮಯದಲ್ಲಿ ಜೆಡಿಎಸ್‌ನಲ್ಲಿ ಎನ್.ಚಲುವರಾಯಸ್ವಾಮಿ ಇದ್ದರು. ಕಾಂಗ್ರೆಸ್‌ನೊಳಗೆ ಅಂಬರೀಶ್ ಇದ್ದರು. ಇವರ ಸಹಕಾರ-ಬೆಂಬಲವನ್ನು ಪಡೆದುಕೊಂಡು ಸಿ.ಎಸ್.ಪುಟ್ಟರಾಜು ಲೋಕಸಭೆಗೆ ಆಯ್ಕೆಯಾಗಿದ್ದು ಎಲ್ಲರಿಗೂ ತಿಳಿದಿರುವ ಬಹಿರಂಗ ಸತ್ಯ. ಪ್ರಸ್ತುತ ಸನ್ನಿವೇಶದಲ್ಲಿ ಸಿ.ಎಸ್.ಪುಟ್ಟರಾಜು ಅವರಿಗೆ ಜೆಡಿಎಸ್ ಪಕ್ಷವೇ ಮಂಡ್ಯ ಲೋಕಸಭೆ ಟಿಕೆಟ್ ನೀಡಿದರೂ ಗೆಲುವು ಸುಲಭವಾಗಿಲ್ಲ ಎನ್ನುವುದೂ ಅವರಿಗೆ ತಿಳಿದಿದೆ. ಜೊತೆಗೆ ಈಗ ಕಾಂಗ್ರೆಸ್ ಸೇರಿ ಆ ಪಕ್ಷದ ಮುಖಂಡರು-ಕಾರ್ಯಕರ್ತರು ಒಳೇಟು ಕೊಟ್ಟು ಸೋಲಿಸಿದರೆ ರಾಜಕೀಯವಾಗಿ ಮೂಲೆಗುಂಪಾಗಬಹುದು ಎಂಬ ಭೀತಿಯೊಂದಿಗೆ ಎಲ್ಲಾ ರೀತಿಯಲ್ಲೂ ರಾಜಕೀಯ ಲೆಕ್ಕಾಚಾರ ಹಾಕುತ್ತಿದ್ದಾರೆ ಎಂದು ಹೇಳಲಾಗಿದೆ.
ಒಳಗೊಳಗೆ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ: ಕಾಂಗ್ರೆಸ್ ಪಕ್ಷದೊಳಗೂ ಎನ್.ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ ಅವರಂತಹ ಪ್ರಬಲ ನಾಯಕರು ಜಿಲ್ಲೆಯಲ್ಲಿದ್ದಾರೆ. ಇವರೊಳಗೆ ತಾವು ಬಂದು ಸೇರಿಕೊಂಡರೆ ರಾಜಕೀಯ ಅಧಿಕಾರ, ಸ್ಥಾನ-ಮಾನಗಳು ಸಿಗಲಿದೆಯೇ ಎಂಬ ನಿಟ್ಟಿನಲ್ಲೂ ಆಲೋಚಿಸುತ್ತಿದ್ದಾರೆ. ಒಂದು ಮೂಲದ ಪ್ರಕಾರ ಸಿ.ಎಸ್.ಪುಟ್ಟರಾಜು ಜೆಡಿಎಸ್ ಬಿಡುವುದಾದರೆ ಬಿಡಲಿ. ನಾವು ದಳದಲ್ಲೇ ಉಳಿಯುವುದಾಗಿ ಬಹುತೇಕ ಮುಖಂಡರು-ಕಾರ್ಯಕರ್ತರು ಆಡುತ್ತಿರುವ ಮಾತುಗಳು ಸಿ.ಎಸ್.ಪುಟ್ಟರಾಜು ಕಿವಿಗೂ ಬಿದ್ದಿದೆ ಎನ್ನಲಾಗಿದೆ. ಹೀಗಾಗಿ ಪಕ್ಷ ಬಿಡುವ ವಿಚಾರದಲ್ಲಿ ತುಟಿಬಿಚ್ಚದೆ ಮೌನವಾಗಿದ್ದಾರೆ ಎಂದು ತಿಳಿದುಬಂದಿದೆ.
ಜಿಲ್ಲೆಯೊಳಗೆ ತಮ್ಮ ವಿರುದ್ಧ ರಾಜಕೀಯ ದ್ವೇಷ ಸಾಧಿಸುತ್ತಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಸೇಡು ತೀರಿಸಿಕೊಳ್ಳಲು ಸಚಿವ ಎನ್.ಚಲುವರಾಯಸ್ವಾಮಿ ಕೂಡ ಸಮಯ ಕಾಯುತ್ತಿದ್ದಾರೆ. ಸಿ.ಎಸ್.ಪುಟ್ಟರಾಜು ಅವರೊಬ್ಬರನ್ನು ಪಕ್ಷಕ್ಕೆ ಸೇರಿಸಿಕೊಂಡರೆ ದಳ ದುರ್ಬಲವಾಗುವುದು ಶತಃಸ್ಸಿದ್ಧ ಎಂದೇ ಕಾಂಗ್ರೆಸ್ಸಿಗರು ಭಾವಿಸಿದ್ದಾರೆ. ಆದರೆ, ಪುಟ್ಟರಾಜು ಈ ವಿಷಯದಲ್ಲಿ ಅಷ್ಟುಸುಲಭವಾಗಿ ನಿರ್ಧಾರಕ್ಕೆ ಬರದೆ ದೂರದಿಂದಲೇ ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದಾರೆ ಎಂದು ಗೊತ್ತಾಗಿದೆ.
ಲೋಕಸಭೆ ಚುನಾವಣೆ ಮೇಲೂ ಕಣ್ಣು: 2023ರ ವಿಧಾನಸಭಾ ಚುನಾವಣಾ ಸೋಲಿನಿಂದ ತೀವ್ರ ಬೇಸರಗೊಂಡಿರುವ ಸಿ.ಎಸ್.ಪುಟ್ಟರಾಜು ಅವರಿಗೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಆಸೆಯೇನೋ ಇದೆ. ಸದಾ ರಾಜಕೀಯದಲ್ಲಿ ಕ್ರಿಯಾಶೀಲರಾಗಿರಬೇಕೆಂಬ ಆಸೆಯನ್ನು ಅವರು ಹೊಂದಿದ್ದಾರೆ. 2013ರ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದ ಸಿ.ಎಸ್.ಪುಟ್ಟರಾಜು, 2014ರಲ್ಲಿ ನಡೆದ ಲೋಕಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ವಿರುದ್ಧ ಸೋಲನುಭವಿಸಿ, ಮತ್ತೆ 2015ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕೈ ಅಭ್ಯರ್ಥಿಯಾಗಿದ್ದ ರಮ್ಯಾ ಅವರನ್ನು ಸೋಲಿಸಿ ಸೇಡು ತೀರಿಸಿಕೊಂಡಿದ್ದು ಈಗ ಇತಿಹಾಸ. ಅದೇ ಮಾದರಿಯಲ್ಲಿ ಲೋಕಸಭಾ ಚುನಾವಣೆ ಎದುರಿಸುವುದಕ್ಕೆ ಸಿ.ಎಸ್.ಪುಟ್ಟರಾಜು ಚಿಂತನೆ ನಡೆಸಿದ್ದಾರೆ. ಆದರೆ, ಅವರಿಗೆ ಪೂರಕವಾಗಿರುವಂತಹ ರಾಜಕೀಯ ವಾತಾವರಣ ಸೃಷ್ಟಿಯಾಗದಿರುವುದರಿಂದ ಸ್ಪಷ್ಟತೀರ್ಮಾನ ಕೈಗೊಳ್ಳುವುದಕ್ಕೆ ಅವರಿಂದ ಸಾಧ್ಯವಾಗುತ್ತಿಲ್ಲವೆಂಬ ಮಾತುಗಳು ಕೇಳಿಬರುತ್ತಿವೆ.
ಸಚಿವ ಎಂ.ಸಿ.ಸುಧಾಕರ್ ಅಭಿವೃದ್ದಿಯ ಹರಿಕಾರ: ಸಂಸದ ಮುನಿಸ್ವಾಮಿ
ಸಿ.ಎಸ್.ಪುಟ್ದರಾಜು ಅವರು ಪಕ್ಷ ಬಿಡುತ್ತಾರೆ ಎನ್ನುವುದು ಕೇವಲ ವದಂತಿಯಷ್ಟೇ. ಕಳೆದ ಚುನಾವಣೆ ಸಮಯದಲ್ಲೂ ಇದೇ ರೀತಿಯ ವದಂತಿಗಳು ಹಬ್ಬಿದ್ದವು. ಸಾಮಾಜಿಕ ಜಾಲ ತಾಣಗಳಲ್ಲಿ ಈ ಸಂಬಂಧ ಸುದ್ದಿ ಹರಿದಾಡುವುದು ಬರೀ ಸುಳ್ಳು. ಎಂದಿಗೂ ಅವರು ಅಂತಹ ತಪ್ಪು ನಿರ್ಧಾರ ಮಾಡುವುದಿಲ್ಲ. ಹೆಚ್.ಡಿ.ದೇವೇಗೌಡರ ಬಗ್ಗೆ ಅಪಾರ ಅಭಿಮಾನ, ನಿಷ್ಠೆಯನ್ನು ಹೊಂದಿರುವ ಪುಟ್ಟರಾಜು ಜೆಡಿಎಸ್ ಬಿಟ್ಟು ಹೋಗಲಾರರು.
- ಡಿ.ರಮೇಶ್, ಜಿಲ್ಲಾಧ್ಯಕ್ಷರು, ಜೆಡಿಎಸ್