ಬೆಂಗಳೂರಿನ ಬನಶಂಕರಿ 5ನೇ ಹಂತದ ಹಲಗೆವಡೇರಹಳ್ಳಿ ವ್ಯಾಪ್ತಿಯ 2 ಎಕರೆ 24 ಗುಂಟೆ ಜಮೀನು ಅಕ್ರಮವಾಗಿ ಡಿ-ನೋಟಿಫಿಕೇಷನ್ ಆರೋಪಕ್ಕೆ ಸಂಬಂಧಿಸಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ವಿಚಾರಣೆ ರದ್ದುಪಡಿಸಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ. 

ಬೆಂಗಳೂರು (ಫೆ.26): ಬೆಂಗಳೂರಿನ ಬನಶಂಕರಿ 5ನೇ ಹಂತದ ಹಲಗೆವಡೇರಹಳ್ಳಿ ವ್ಯಾಪ್ತಿಯ 2 ಎಕರೆ 24 ಗುಂಟೆ ಜಮೀನು ಅಕ್ರಮವಾಗಿ ಡಿ-ನೋಟಿಫಿಕೇಷನ್ ಆರೋಪಕ್ಕೆ ಸಂಬಂಧಿಸಿ ಕೇಂದ್ರ ಬೃಹತ್‌ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ವಿಚಾರಣೆ ರದ್ದುಪಡಿಸಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ. ತನ್ಮೂಲಕ ಡಿ-ನೋಟಿಫಿಕೇಶನ್‌ ಸಂಬಂಧಿಸಿ ವಿಶೇಷ ನ್ಯಾಯಾಲಯದ ವಿಚಾರಣೆ ಎದುರಿಸುವುದು ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಅನಿವಾರ್ಯವಾಗಿದೆ ಹಾಗೂ ಡಿ-ನೋಟಿಫಿಕೇಷನ್ ಸಂಕಷ್ಟ ಎದುರಾಗಿದೆ.

ಅಕ್ರಮ ಡಿ-ನೋಟಿಫಿಕೇಷನ್ ಪ್ರಕರಣದ ವಿಚಾರಣೆಗೆ ಹಾಜರಾಗಲು ಸೂಚಿಸಿ ವಿಶೇಷ ನ್ಯಾಯಾಲಯ ತಮಗೆ ಜಾರಿಗೊಳಿಸಿದ್ದ ಸಮನ್ಸ್ ರದ್ದುಪಡಿಸಲು ನಿರಾಕರಿಸಿ 2020ರಲ್ಲಿ ಹೈಕೋರ್ಟ್‌ ಹೊರಡಿಸಿದ್ದ ತೀರ್ಪು ಪ್ರಶ್ನಿಸಿ ಎಚ್.ಡಿ. ಕುಮಾರಸ್ವಾಮಿ ಅವರು ಸುಪ್ರಿಂ ಕೋರ್ಟ್‌ಗೆ ವಿಶೇಷ ಮೇಲ್ಮನವಿ (ಕ್ರಿಮಿನಲ್‌) ಸಲ್ಲಿಸಿದ್ದರು. ಈ ಮೇಲ್ಮನವಿಯನ್ನು ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ದೀಪಂಕರ್‌ ದತ್‌ ಮತ್ತು ನ್ಯಾಯಮೂರ್ತಿ ರಾಜೇಶ್‌ ಬಿಂದಲ್‌ ಅವರಿದ್ದ ವಿಭಾಗೀಯ ಪೀಠ, ಪ್ರಕರಣ ಕುರಿತ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ತಿಳಿಸಿದೆ.

ವರದಿ ಹಿಡಿದು ಅಳ್ಳಾಡಿಸುತ್ತಿದ್ದೀರಾ: ಸಿದ್ದರಾಮಯ್ಯಗೆ ಕುಮಾರಸ್ವಾಮಿ ಟಾಂಗ್‌

ದಶಕದ ಪ್ರಕರಣ: ನಗರದ ಹಲಗೆವಡೇರಹಳ್ಳಿ ಸರ್ವೇ ನಂ.128ರಲ್ಲಿ 1 ಎಕರೆ 10 ಗುಂಟೆ ಮತ್ತು ಸರ್ವೇ ನಂಬರ್‌ 137ರಲ್ಲಿನ 1 ಎಕರೆ 14 ಗುಂಟೆ ಜಮೀನು ಪದ್ಮ ಎಂಬುವರಿಗೆ ಸೇರಿತ್ತು. ಈ ಜಮೀನನ್ನು ಬನಶಂಕರಿ 5ನೇ ಹಂತದ ಬಡಾವಣೆ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಳ್ಳಲು 1997ರ ಸೆ.12ರಂದು ಬಿಡಿಎ ಅಂತಿಮ ಅಧಿಸೂಚನೆ ಹೊರಡಿಸಿತ್ತು. ಸರ್ವೇ ನಂ.128ರಲ್ಲಿನ ಜಮೀನಿಗೆ 1998ರ ಸೆ.28ರಂದು ಮತ್ತು ಸರ್ವೇ ನಂ.137ರಲ್ಲಿನ ಜಮೀನಿಗೆ 1998ರ ಮೇ 4ರಂದು ಬಿಡಿಎ ಪರಿಹಾರ ಸಹ ಪ್ರಕಟಿಸಿತ್ತು. ನಂತರ 1999ರ ಸೆ.29ರಂದು ಈ ಜಮೀನನ್ನು ಸ್ವಾಧೀನ ಪಡಿಸಿಕೊಂಡಿತ್ತು.

ಇದಾದ ನಂತರ ಮೂರನೇ ವ್ಯಕ್ತಿಯ ಹೆಸರಿಗೆ ಪದ್ಮ ಅವರು ಅಕ್ರಮವಾಗಿ ಈ ಜಮೀನು ಮಾರಾಟ ಮಾಡಿ ಕ್ರಯ ಮಾಡಿಕೊಟ್ಟಿದ್ದರು. ಜಮೀನು ಸಹ ಖರೀದಿದಾರರ ಹೆಸರಿಗೆ ವರ್ಗಾವಣೆಯಾಗಿತ್ತು. ಜಮೀನನ್ನು ಡಿ-ನೋಟಿಫೈ ಮಾಡುವಂತೆ ಕೋರಿ ಪದ್ಮ ಅವರು 2005ರ ಡಿ.30ರಂದು ಅಂದಿನ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದರು. ಆದರೆ, ಇದು ವಿಶೇಷ ಪ್ರಕರಣವೆಂದು ಪರಿಗಣಿಸಿ ಜಮೀನನ್ನು ಡಿ-ನೋಟಿಫಿಕೇಷನ್‌ ಮಾಡಲು 2007ರ ಅ.25ರಂದು ಅಂದಿನ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ ಆದೇಶಿಸಿದ್ದರು.

ಈ ಕುರಿತು ಆರ್‌ಟಿಐ ಕಾರ್ಯಕರ್ತ ಎಂ.ಎಸ್. ಮಹದೇವಸ್ವಾಮಿ, 2012ರಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ-1998 ಅಡಿ ಖಾಸಗಿ ದೂರು ದಾಖಲಿಸಿದ್ದರು. ಕುಮಾರಸ್ವಾಮಿ ತಮ್ಮ ಅಧಿಕಾರ ಹಾಗೂ ಹುದ್ದೆ ದುರ್ಬಳಕೆ ಮಾಡಿಕೊಂಡು ವಿವಾದಿತ ಜಮೀನನ್ನು ಅಕ್ರಮವಾಗಿ ಡಿ-ನೋಟಿಫೈ ಮಾಡಿದ್ದಾರೆ. ಈ 2 ಎಕರೆ 24 ಗುಂಟೆ ಜಮೀನನ್ನು 4.14 ಕೋಟಿ ರು.ಗೆ ಮಾರಾಟ ಮಾಡಲಾಗಿದೆ. ಡಿ-ನೋಟಿಫೈ ಮಾಡಲು ಕುಮಾರಸ್ವಾಮಿ ಹಣಕಾಸು ಲಾಭ ಪಡೆದಿದ್ದಾರೆ ಎಂದು ಆರೋಪಿಸಿದ್ದರು.

ಪ್ರಕರಣದ ತನಿಖೆ ನಡೆಸುವಂತೆ ಲೋಕಾಯುಕ್ತ ಪೊಲೀಸರಿಗೆ ವಿಶೇಷ ನ್ಯಾಯಾಲಯವು 2012ರ ಜು.4ರಂದು ಆದೇಶಿಸಿತ್ತು. ಅದರಂತೆ ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು 2019ರಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದರು. ಅದನ್ನು ಆಕ್ಷೇಪಿಸಿ ದೂರುದಾರ ಮಹದೇವಸ್ವಾಮಿ ಅವರು ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಅದನ್ನು ಪುರಸ್ಕರಿಸಿದ್ದ ವಿಶೇಷ ನ್ಯಾಯಾಲಯ, ಬಿ ರಿಪೋರ್ಟ್ ತಿರಸ್ಕರಿಸಿ 2019ರ ಅ.4ರಂದು ವಿಚಾರಣೆಗೆ ಖುದ್ದು ಹಾಜರಾಗುವಂತೆ ಎಚ್‌.ಡಿ.ಕುಮಾರಸ್ವಾಮಿ ಸೇರಿ ಪ್ರಕರಣದ 19 ಆರೋಪಿಗಳಿಗೆ ಸಮನ್ಸ್ ಜಾರಿಗೊಳಿಸಿತ್ತು. ಸಮನ್ಸ್ ಹಾಗೂ ವಿಶೇಷ ನ್ಯಾಯಾಲಯದ ವಿಚಾರಣೆ ರದ್ದುಕೋರಿ ಕುಮಾರಸ್ವಾಮಿ ಹೈಕೋರ್ಟ್‌ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು. ಅದನ್ನು 2019ರ ಅ.1ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್, ವಿಶೇಷ ನ್ಯಾಯಾಲಯದ ವಿಚಾರಣೆಗೆ ಖುದ್ದು ಹಾಜರಾತಿಯಿಂದ ಕುಮಾರಸ್ವಾಮಿಗೆ ವಿನಾಯಿತಿ ನೀಡಿತ್ತು. ಅಂತಿಮವಾಗಿ 2020ರ ಅ.14ರಂದು ಅರ್ಜಿ ವಜಾಗೊಳಿಸಿತ್ತು. ಈ ತೀರ್ಪು ಪ್ರಶ್ನಿಸಿ ಕುಮಾರಸ್ವಾಮಿ ಸುಪ್ರೀಂ ಕೋರ್ಟ್‌ಗೆ ವಿಶೇಷ ಮೇಲ್ಮನವಿ ಸಲ್ಲಿಸಿದ್ದರು.

ಏನಿದು ಪ್ರಕರಣ?
-ಪದ್ಮಾ ಎಂಬುವವರ 2 ಎಕರೆ ಜಮೀನನ್ನು ಬಿಡಿಎ, ಬಡಾವಣೆಗಾಗಿ ಸ್ವಾಧೀನ ಮಾಡಿಕೊಂಡಿತ್ತು
-ಸ್ವಾಧೀನದ ಬಳಿಕವೂ ಅವರು ಬೇರೊಬ್ಬರ ಹೆಸರಿಗೆ ಅಕ್ರಮವಾಗಿ ಜಮೀನು ಕ್ರಮ ಮಾಡಿದ್ದರು
-ಇದಾದ ಬಳಿಕ ಡಿ ನೋಟಿಫಿಕೇಷನ್‌ ಕೋರಿ ಸರ್ಕಾರಕ್ಕೆ ಪದ್ಮಾ ಮನವಿ. ಅದಕ್ಕೆ ಎಚ್‌ಡಿಕೆ ಸಮ್ಮತಿ
-ಪ್ರಕರಣದಲ್ಲಿ ಎಚ್‌ಡಿಕೆಗೆ ಹಣಕಾಸು ಲಾಭ ಎಂದು ದೂರು. ಈ ಕುರಿತು ಲೋಕಾ ತನಿಖೇಲಿ ಕ್ಲೀನ್‌ಚಿಟ್‌
-ಕ್ಲೀನ್‌ಚಿಟ್‌ ಪ್ರಶ್ನಿಸಿ ಜನಪ್ರತಿನಿಧಿ ನ್ಯಾಯಾಲಯಕ್ಕೆ ದೂರು. ಅರ್ಜಿದಾರರ ವಾದಕ್ಕೆ ಪುರಸ್ಕಾರ
-ಈ ಪ್ರಕರಣದ ವಿಚಾರಣೆ ಕೈಬಿಡುವಂತೆ ಸುಪ್ರೀಂಕೋರ್ಟ್‌ಗೆ ಎಚ್‌ಡಿಕೆ ಅರ್ಜಿ. ಮನವಿ ತಿರಸ್ಕಾರ

ನನ್ನನ್ನು ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ನೇಮಕ ಬಗ್ಗೆ ಚರ್ಚೆ ನಡೆದಿಲ್ಲ: ನಿಖಿಲ್ ಕುಮಾರಸ್ವಾಮಿ

ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಅದು ಅಂಥ ದೊಡ್ಡ ಸಮಸ್ಯೆಯೇನಲ್ಲ. ಕಾನೂನು ವ್ಯಾಪ್ತಿಯಲ್ಲಿ ವಕೀಲರು ಹೋರಾಟ ಮಾಡುತ್ತಾರೆ.
-ಎಚ್‌.ಡಿ.ಕುಮಾರಸ್ವಾಮಿ, ಕೇಂದ್ರ ಕೈಗಾರಿಕಾ ಸಚಿವ