ದೇಶದಲ್ಲಿ ಮತಚೋರಿ ಹಾವಳಿ ತೀವ್ರಗೊಂಡಿದ್ದು ಈ ಕಾರಣದಿಂದಲೇ ಕಾಂಗ್ರೆಸ್ ಪಕ್ಷಕ್ಕೆ ಸೋಲಾಗಿದ್ದು,ಎನ್ಡಿಎಗೆ ಗೆಲುವಾಗಿದೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ತಿಳಿಸಿದರು.

ದೇವದುರ್ಗ (ನ.17): ದೇಶದಲ್ಲಿ ಮತಚೋರಿ ಹಾವಳಿ ತೀವ್ರಗೊಂಡಿದ್ದು ಈ ಕಾರಣದಿಂದಲೇ ಕಾಂಗ್ರೆಸ್ ಪಕ್ಷಕ್ಕೆ ಸೋಲಾಗಿದ್ದು,ಎನ್ಡಿಎಗೆ ಗೆಲುವಾಗಿದೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ತಿಳಿಸಿದರು. ಪಟ್ಟಣದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಾಗ ಪ್ರವಾಸಿ ಮಂದಿರದಲ್ಲಿ ಭಾನುವಾರ ಮಾತನಾಡಿದರು. ಮಹಾರಾಷ್ಟ್ರ ರಾಜ್ಯದ ಚುನಾವಣೆ ಯಲ್ಲಿ ಇದೇ ಕಾರಣದಿಂದ ಗೆಲುವಾಗಿದೆ.ಅನೇಕ ಕಡೆ ಸಾಬೀತಾಗಿದೆ.ಮತಚೋರಿ ವಿರುದ್ಧ ಪಕ್ಷದ ವರಿಷ್ಠರಾದ ರಾಹುಲ್ ಗಾಂಧಿ ಸಮರವನ್ನೇ ಸಾರಿದ್ದಾರೆ. ಹೋರಾಟ ದೇಶಾದ್ಯಂತ ತೀವ್ರಗೊಳ್ಳಲಿದೆ.

ಅಭಿವೃದ್ಧಿಗೆ ತಿಲಾಂಜಲಿ ಇಟ್ಟಿರುವ ಮೋದಿ ನೇತೃತ್ವದ ಕೇಂದ್ರ ಸರಕಾರ ಅಡ್ಡ ದಾರಿಗಳಿಂದ ಅಧಿಕಾರ ಪಡೆಯಲು ಹವಣಿಸುತ್ತಿದೆ. ಇಡಿ,ಆದಾಯ ತೆರಿಗೆಯಂತಹ ಇಲಾಖೆಗಳಿಂದ ಅಧಿಕಾರದ ದುರ್ಬಳಕೆ ಮಾಡಿಕೊಂಡು ಕಾಂಗ್ರೇಸ್ ಪಕ್ಷವನ್ನು ಒಡೆಯುವ ತಂತ್ರಗಾರಿಕೆ ನಡೆಸಿದೆ. ಪ್ರಮುಖ ನಾಯಕರನ್ನು ಟಾರ್ಗೆಟ್ ಮಾಡುತ್ತಾ ಹೊರಟಿದೆ. ಐತಿಹಾಸಿಕ ಹಿನ್ನೆಲೆಯುಳ್ಳ ಕಾಂಗ್ರೆಸ್ ಪಕ್ಷ ಇಂತಹ ಕುತಂತ್ರ ರಾಜಕಾರಣಕ್ಕೆ ಅಂಜುವುದಿಲ್ಲ. ಹೋರಾಟದ ಮೂಲಕ ಜನಜಾಗೃತಿಗೊಳಿಸಿ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳಿಗೆ ತಕ್ಕ ಸಮಯದಲ್ಲಿ ತಕ್ಕ ಪಾಠ ಕಲಿಸಲಿದೆ.

ನಾನೇನು ಹೇಳಲಾರೆ

ರಾಜ್ಯದಲ್ಲಿ ಸಚಿವ ಸಂಪುಟದ ಬದಲಾವಣೆ ಕುರಿತು ಈಗಾಗಲೇ ಸಿಎಂ ಸಿದ್ದರಾಮಯ್ಯ ತಮ್ಮ ಚಿಂತನೆಯನ್ನು ಪ್ರಕಟಿಸಿದ್ದಾರೆ. ಈ ಕುರಿತು ನಾನೇನು ಹೇಳಲಾರೆ. ಪಕ್ಷದ ಹೈಕಮಾಂಡ ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಸಚಿವ ಎನ್.ಎಸ್.ಬೋಸರಾಜು ಪ್ರತಿಕ್ರಿಯಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ರವಿ ಪಾಟೀಲ್,ರಾಮಣ್ಣ ಇರಬಗೇರಾ,ರಾಜಶೇಖರ ನಾಯಕ, ಆದನಗೌಡ ಪಾಟೀಲ್ ಬುಂಕಲದೊಡ್ಡಿ, ಶಿವರಾಜ ಗೆಜ್ಜೆಬಾವಿ, ಶರಣಗೌಡ ಬಕ್ರಿ ಗೌರಂಪೇಟ ಹಾಗೂ ಇತರರು ಇದ್ದರು.