ನಾಯಕತ್ವ ಬದಲಾವಣೆ, ಸಂಪುಟ ಪುನರ್‌ರಚನೆ ಬಗ್ಗೆ ಯಾರೊಬ್ಬರೂ ಹೇಳಿಕೆ ನೀಡಬಾರದು. ಹೈಕಮಾಂಡ್ ಆದೇಶ ಪಾಲಿಸಿ ಎಲ್ಲರೂ ಬಾಯ್ಮುಚ್ಚಿಕೊಂಡು ಇರಬೇಕು ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ತೀಕ್ಷ್ಣವಾಗಿ ಹೇಳಿದ್ದಾರೆ.
ಬೆಂಗಳೂರು (ಅ.30): ‘ನಾಯಕತ್ವ ಬದಲಾವಣೆ, ಸಂಪುಟ ಪುನರ್‌ರಚನೆ ಬಗ್ಗೆ ಯಾರೊಬ್ಬರೂ ಹೇಳಿಕೆ ನೀಡಬಾರದು. ಹೈಕಮಾಂಡ್ ಆದೇಶ ಪಾಲಿಸಿ ಎಲ್ಲರೂ ಬಾಯ್ಮುಚ್ಚಿಕೊಂಡು ಇರಬೇಕು. ಹೈಕಮಾಂಡ್ ಆದೇಶ ಪಾಲಿಸುವವರು ಮಾತ್ರ ಪಕ್ಷದಲ್ಲಿರಬೇಕು’ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ತೀಕ್ಷ್ಣವಾಗಿ ಹೇಳಿದ್ದಾರೆ. ಇದೇ ವೇಳೆ ಕೈಯಿಂದ ಕತ್ತರಿ ಸನ್ನೆ ಮಾಡುತ್ತಾ, ‘ಹೈಕಮಾಂಡ್ ಆದೇಶ ಪಾಲಿಸದಿದ್ದರೆ ಏನು ಮಾಡುತ್ತೇವೆ ಎಂದು ಈಗಾಗಲೇ ಹೈಕಮಾಂಡ್ ತೋರಿಸಿಲ್ಲವೇ’ ಎಂದು ಪರೋಕ್ಷವಾಗಿ ಕೆ.ಎನ್.ರಾಜಣ್ಣ ಅವರನ್ನು ಸಂಪುಟದಿಂದ ವಜಾಗೊಳಿಸಿರುವ ಬಗ್ಗೆ ಪ್ರಸ್ತಾಪಿಸಿ ಎಚ್ಚರಿಕೆಯನ್ನೂ ನೀಡಿದ್ದಾರೆ.
ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ನಾಯಕತ್ವ ಬದಲಾವಣೆ ಸಂಪುಟ ಪುನಾರಚನೆ ಬಗ್ಗೆ ಯಾರೂ ಮಾತಾಡಬಾರದು. ಹೈಕಮಾಂಡ್ ಆದೇಶ ಪಾಲಿಸಿ ಎಲ್ಲರೂ ಬಾಯಿ ಮುಚ್ಚಿಕೊಂಡಿರಬೇಕು. ಹೈಕಮಾಂಡ್ ಆದೇಶ ಪಾಲಿಸುವವರು ಮಾತ್ರ ಪಕ್ಷದಲ್ಲಿರಬೇಕು ಎಂದು ಹೇಳಿದ್ದಾರೆ. ಪ್ರತಿಯೊಬ್ಬರೂ ಹೇಳಿಕೆಗೆ ಪ್ರತಿ ಹೇಳಿಕೆ ನೀಡುತ್ತಾ ಹೋದರೆ ಹೇಗೆ? ಎಲ್ಲರೂ ಮಾತನಾಡುತ್ತಿದ್ದರೆ ಬಿಜೆಪಿ ರೀತಿ ಆಗುತ್ತೇವೆ.
ಬಿಜೆಪಿಯಲ್ಲಿ ವಿಜಯೇಂದ್ರ, ಪ್ರಹ್ಲಾದ್ ಜೋಶಿ, ಆರ್.ಅಶೋಕ್ ಎಂದು ಮೂರು ಬಾಗಿಲು ಆಗಿವೆ. ಇಂತಹ ಅಶಿಸ್ತಿನ ನಡೆಗಳನ್ನು ಹೈಕಮಾಂಡ್ ಸಹಿಸುವುದಿಲ್ಲ ಎಂದರು. ಹೈಕಮಾಂಡ್ ಸುಮ್ಮನಿದೆಯಲ್ಲಾ ಎಂಬ ಪ್ರಶ್ನೆಗೆ, ಹೈಕಮಾಂಡ್ ಸಹ ಸುಮ್ಮನಿಲ್ಲ. ಒಂದು ಸಮಯ ಬರುವ ತನಕ ಕಾಯುತ್ತದೆ. ಸಮಯ ಬಂದಾಗ ನಿರ್ಧಾರ ಮಾಡುತ್ತದೆ. ಏನು ಮಾಡಬೇಕು ಎಂದು ಈಗಾಗಲೇ ಹೈಕಮಾಂಡ್ ತೋರಿಸಲ್ಲವೇ ಎಂದು ಕತ್ತರಿ ಸನ್ಹೆ ಮಾಡಿದರು.
ಸಿದ್ದರಾಮಯ್ಯ ಜೀವನಪೂರ್ತಿ ರಾಜಕಾರಣದಲ್ಲಿರಲಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವುದೇ ಕಾರಣಕ್ಕೂ ರಾಜಕೀಯದಿಂದ ನಿವೃತ್ತಿಯಾಗಬಾರದು. ಅವರು ಜೀವನಪೂರ್ತಿ ರಾಜಕಾರಣದಲ್ಲಿ ಇದ್ದುಕೊಂಡು ಜನರ ಸೇವೆ ಮಾಡಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ ಎಂದು ಸಚಿವ ಸಂತೋಷ ಲಾಡ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ದೇವರು ಸಿದ್ದರಾಮಯ್ಯ ಅವರಿಗೆ ದೀರ್ಘಾಯುಷ್ಯ ನೀಡಬೇಕು.
ಅವರು ಸುದೀರ್ಘವಾಗಿ ರಾಜಕೀಯ ಜೀವನದಲ್ಲಿ ಮುಂದುವರೆಯಬೇಕು. ಮುಂದಿನ ಎಲ್ಲ ಚುನಾವಣೆಗಳಲ್ಲಿಯೂ ಅವರು ಸ್ಪರ್ಧಿಸಬೇಕೆಂದು ಮನವಿ ಮಾಡುತ್ತೇನೆ ಎಂದರು. ಸಚಿವ ಸಂಪುಟ ವಿಸ್ತರಣೆ ಸಹಜ ಪ್ರಕ್ರಿಯೆ. ಅದರಲ್ಲಿ ಯಾವ ಕ್ರಾಂತಿಯೂ ಇಲ್ಲ. ಎಲ್ಲ ಸರ್ಕಾರಗಳು ಮಂತ್ರಿಮಂಡಲ ರಚಿಸುತ್ತವೆ. ಪುನಾರಚನೆ, ವಿಸ್ತರಣೆ ಎಂದ ಮೇಲೆ ಕೆಲವರನ್ನು ಸಚಿವ ಸ್ಥಾನದಿಂದ ಕೈಬಿಡುವುದು, ಕೆಲವರನ್ನು ಸೇರಿಸಿಕೊಳ್ಳುವುದು ಸಾಮಾನ್ಯ. ರಾಜಕಾರಣಕ್ಕೆ ಬಂದಮೇಲೆ ಎಲ್ಲರೂ ತ್ಯಾಗಕ್ಕೆ ಸಿದ್ಧರಿರಬೇಕು ಎಂದರು.
