Asianet Suvarna News Asianet Suvarna News

ಕೊನೆ​ಗೂ ರಾಯ​ಚೂ​ರಿಗೆ ಒಲಿದ ಸಚಿವ ಸ್ಥಾನ; ಅಭಿಮಾನಿಗಳ ಸಂಭ್ರಮಾಚರಣೆ

ಅಂತೂ ಇಂತು ರಾಯ​ಚೂರು ಜಿಲ್ಲೆಗೆ ಸಿದ್ದ​ರಾ​ಮಯ್ಯ ನೇತೃ​ತ್ವ​ದಲ್ಲಿ ಸಚಿವ ಸ್ಥಾನ ಸಿಕ್ಕಿದ್ದು, ಜಿಲ್ಲೆಯ ಬಹು​ದಿ​ನ​ಗಳ ಬೇಡಿ​ಕೆಯು ಈಡೇ​ರಿ​ದಂತಾ​ಗಿದೆ. ರಾಯಚೂರು ಜಿಲ್ಲೆಗೆ ಎರಡನೇ  ಬಾರಿ ಸಚಿವ ಸ್ಥಾನ ಒಲಿದು ಬಂದಿದೆ.

NS Bosaraju as new minister of tourism and science and Technology at raichur rav
Author
First Published May 28, 2023, 4:37 AM IST

ರಾಮ​ಕೃಷ್ಣ ದಾಸರಿ

ರಾಯ​ಚೂರು (ಮೇ.28) : ಅಂತೂ ಇಂತು ರಾಯ​ಚೂರು ಜಿಲ್ಲೆಗೆ ಸಿದ್ದ​ರಾ​ಮಯ್ಯ ನೇತೃ​ತ್ವ​ದಲ್ಲಿ ಸಚಿವ ಸ್ಥಾನ ಸಿಕ್ಕಿದ್ದು, ಜಿಲ್ಲೆಯ ಬಹು​ದಿ​ನ​ಗಳ ಬೇಡಿ​ಕೆಯು ಈಡೇ​ರಿ​ದಂತಾ​ಗಿದೆ. ಕಳೆದ ಮೂರು ಅವ​ಧಿ​ಯಲ್ಲಿ ಯಾವುದೇ ಸರ್ಕಾರ ಬಂದರೂ ಜಿಲ್ಲೆಗೆ ಸಚಿವ ಸ್ಥಾನ ಗೌಣ​ವಾ​ಗಿತ್ತು. ಕಳೆದ ಕಾಂಗ್ರೆ​ಸ್‌-ಜೆಡಿ​ಎಸ್‌ ಸಮ್ಮಿಶ್ರ ಸರ್ಕಾ​ರ​ದಲ್ಲಿ ಜೆಡಿ​ಎ​ಸ್‌ನ ವೆಂಕ​ಟ​ರಾವ್‌ ನಾಡ​ಗೌಡ ಸಚಿ​ವ​ರಾ​ಗಿ​ದ್ದರೂ ಬಹು​ಕಾಲ ಉಳಿ​ಯದ ಕಾರ​ಣಕ್ಕೆ ಜಿಲ್ಲೆಗೆ ಸಚಿವ ಸ್ಥಾನ ನೀಡ​ಬೇಕು ಎನ್ನುವ ಬೇಡಿಕೆ ಬಲ​ವಾಗಿ ಕೇಳಿ ​ಬ​ರು​ತ್ತಿ​ತ್ತು.

ತೀವ್ರ ಕುತೂ​ಹಲ ಕೆರ​ಳಿ​ಸಿ​ರುವ ಕಾಂಗ್ರೆಸ್‌ ಹೊಸ ಸರ್ಕಾ​ರದ ಸಚಿವ ಸಂಪುಟ ರಚನೆ ಕರ​ಸ​ತ್ತಿ​ನಲ್ಲಿ ಕೈ ನಾಯ​ಕರ ಕೃಪೆ​ಯಿಂದ ರಾಯ​ಚೂರು ಜಿಲ್ಲೆಗೆ ಸಚಿವ ಸ್ಥಾನದ ಗ್ಯಾರಂಟಿ ಲಭಿ​ಸಿದಂತಾ​ಗಿ​ದೆ. ಮೊನ್ನೆ ತನಕ ಸಚಿವರ ಸಂಭ​ವ​ನೀಯ ಪಟ್ಟಿ​ಯಲ್ಲಿ ರಾಯ​ಚೂರು ಜಿಲ್ಲೆ ಹೆಸರೇ ಕಣ್ಮ​ರೆ​ಯಾ​ಗಿತ್ತು. ಆದರೆ, ಶುಕ್ರ​ವಾರ ದಿಢೀ​ರ್‌ ಎಐ​ಸಿಸಿ ಕಾರ್ಯ​ದರ್ಶಿ ಎನ್‌.​ಎ​ಸ್‌.​ಬೋ​ಸ​ರಾಜು ಹೆಸರು ಸಂಭ​ವ​ನೀಯ ಪಟ್ಟಿ​ಯಲ್ಲಿ ಸೇರ್ಪ​ಡೆ​ಯಾಗಿ ಶನಿ​ವಾರ 24 ಜನ ಜನರ ಜೊತೆಗೆ ಬೋಸ​ರಾಜು(NS Boaraju) ಸಹ ಸಚಿ​ವ​ರಾಗಿ ಪ್ರಮಾಣ ವಚ​ನ​ ಸ್ವೀಕ​ರಿ​ಸು​ವು​ದರ ಮುಖಾಂತರ ಅಚ್ಚ​ರಿಯ ಜೊತೆಗೆ ಆನಂದ​ವ​ನ್ನುಂಟು ಮಾಡಿ​ದೆ.

ರಾಯಚೂರು: ಟಿಕೆಟ್ ಕೈ ತಪ್ಪಿದರೂ ಸಚಿವ ಸ್ಥಾನ ಗಿಟ್ಟಿಸಿ ಅಚ್ಚರಿ ಮೂಡಿಸಿದ ಎನ್‌ಎಸ್‌ ಬೋಸರಾಜು!

ನಾಲ್ಕು ಜನ ಶಾಸ​ಕ​ರಿಲ್ಲ ಸ್ಥಾನ:

ಇತ್ತೀ​ಚೆಗೆ ನಡೆದ ವಿಧಾ​ನ​ಸಭೆ ಚುನಾ​ವ​ಣೆ​ಯಲ್ಲಿ ಜಿಲ್ಲೆ ಏಳು ಕ್ಷೇತ್ರ​ಗಳ ಪೈಕಿ ಕಾಂಗ್ರೆ​ಸ್‌ನಿಂದ ನಾಲ್ಕು ಜನ ಶಾಸ​ಕ​ರಾಗಿ ಆಯ್ಕೆ​ಯಾ​ಗಿ​ದ್ದಾರೆ. ರಾಯ​ಚೂರು ಗ್ರಾಮೀಣ ಕ್ಷೇತ್ರದ ಬಸ​ನ​ಗೌಡ ದದ್ದಲ್‌, ಮಾನ್ವಿಯ ಜಿ.ಹಂಪಯ್ಯ ನಾಯಕ, ಸಿಂಧ​ನೂ​ರಿನ ಹಂಪ​ನ​ಗೌಡ ಬಾದರ್ಲಿ ಮತ್ತು ಮಸ್ಕಿಯ ಆರ್‌.​ಬ​ಸ​ನ​ಗೌಡ ತುರ್ವಿ​ಹಾಳ ಅವರು ಜಾತಿ ಬಲ ಮತ್ತು ಅನು​ಭವ ಹೊಂದಿ​ರುವ ಸಹ ಸಚಿವ ಸಂಪು​ಟ​ದ​ಲ್ಲಿ ಸ್ಥಾನ​ವನ್ನು ಪಡೆ​ದಿಲ್ಲ. ಆದರೆ, ಶಾಸ​ಕ​ರ​ಲ್ಲದ, ಎಂಎ​ಲ್ಸಿಯೂ ಆಗದ ಎನ್‌.​ಎ​ಸ್‌.​ಬೋ​ಸ​ರಾಜು ಅವ​ರನ್ನು ಸಚಿ​ವ​ರ​ನ್ನಾಗಿ ಮಾಡಿ​ರು​ವು​ದು ಹಾಲಿ ಶಾಸ​ಕರು ಸೇರಿ ಮತ್ತೆ ಕೆಲ​ವ​ರಿಗೆ ಎಲ್ಲಿ​ಲ್ಲದ ಕಸಿ​ವಿ​ಸಿ​ಯನ್ನು ತಂದೊ​ಡ್ಡಿದೆ.

ಪ್ರಬ​ಲ​ರಿಗೆ ಹೈಕ​ಮಾಂಡ್‌ ಮಣೆ:

ಮಾಜಿ ಶಾಸಕ, ಮಾಜಿ ಎಂಎಲ್ಸಿ, ಕೆಪಿ​ಸಿಸಿ ಪ್ರಧಾನ ಕಾರ್ಯ​ದರ್ಶಿಯಾಗಿದ್ದ, ಪ್ರಸ್ತುತ ಎಐ​ಸಿಸಿ ಕಾರ್ಯ​ದರ್ಶಿ ಜೊತೆ​ಗೆ ತೆಲಂಗಾಣ ಉಸ್ತು​ವಾರಿ ಜವಾ​ಬ್ದಾ​ರಿ​ ವಹಿ​ಸಿ​ಕೊಂಡಿ​ರುವ, ಪಕ್ಷ​ದಲ್ಲಿ ಪ್ರಬ​ಲ​ತೆ​ಯನ್ನು ಹೊಂದಿ​ರು​ವ ಎನ್‌.​ಎ​ಸ್‌.​ಬೋ​ಸ​ರಾಜು ಅವ​ರನ್ನು ಸಚಿ​ವ​ರ​ನ್ನಾ​ಗಿ​ಸಲು ಪಕ್ಷದ ಹೈಕ​ಮಾಂಡ್‌, ಅದ​ರ​ಲ್ಲಿಯೂ ನಾಯಕ ರಾಹುಲ್‌ ಗಾಂಧಿ ಅವರ ಶಿಫಾ​ರಸ್ಸಿನ ಫಲವು ಕೂಡಿದೆ ಎಂದು ಪಕ್ಷ​ದಲ್ಲಿ ಚರ್ಚೆ​ಗಳು ಸಾಗಿ​ವೆ. ಈ ಹಿಂದೆ ಭಾರತ್‌ ಜೋಡೋ ಯಾತ್ರೆ ರಾಯ​ಚೂರು ಜಿಲ್ಲೆಗೆ ಆಗ​ಮಿ​ಸಿದ್ದ ಸಮ​ಯ​ದಲ್ಲಿ ಅವರು ಶಕ್ತಿ ಪ್ರದ​ರ್ಶನ ತೋರಿ​ದ್ದ​ರು. ರಾಯ​ಚೂರು ನಗರ ಕ್ಷೇತ್ರ​ದಲ್ಲಿ ಪ್ರಬಲ ಟಿಕೆಟ್‌ ಆಕಾಂಕ್ಷಿ​ಯಾ​ಗಿ​ದ್ದರು ಕೊನೆ ಕ್ಷಣ​ದಲ್ಲಿ ಅಲ್ಪ​ಸಂಖ್ಯಾ​ತ​ರಿಗೆ ಟಿಕೆಟ್‌ ತ್ಯಾಗ ಮಾಡಿ, ರಾಯ​ಚೂರು ನಗರ ಮತ್ತು ಮಾನ್ವಿ ಕ್ಷೇತ್ರ​ಗ​ಳಲ್ಲಿ ಅಭ್ಯ​ರ್ಥಿ​ಗ​ಳ ಪರ​ವಾಗಿ ಹೆಗ​ಲನ್ನು ಕೊಟ್ಟು ದುಡಿದಿದ್ದರು. ಮೊದ​ಲಿ​ನಿಂದಲೂ ಸಹ ಬೋಸ​ರಾಜು ಹೈಕ​ಮಾಂಡ್‌​ನೊಂದಿಗೆ ನಿಕಟ ಸಂಪರ್ಕ ಹೊಂದಿ​ರು​ವುದು, ಇದ​ರೊ​ಟ್ಟಿಗೆ ತೆಲಂಗಾ​ಣ ಚುನಾ​ವ​ಣೆ ದೃಷ್ಟಿ​ಯ​ಲ್ಲಿ​ಟ್ಟು​ಕೊಂಡು ಬೋಸ​ರಾಜುಗೆ ಉನ್ನತ ಸ್ಥಾನ-ಮಾನ​ವನ್ನು ನೀಡ​ಲಾ​ಗಿದೆ ಎಂದು ವಿಶ್ಲೇ​ಷಿ​ಸ​ಲಾ​ಗು​ತ್ತಿದೆ.

ಸಂಪುಟ ದರ್ಜೆ ಸಚಿವರಾಗಿ ಬೋಸರಾಜು: ಸಂಭ್ರ​ಮಾ​ಚ​ರ​ಣೆ

ಮಾನ್ವಿ ಎಐಸಿಸಿ ಕಾರ್ಯದರ್ಶಿ ಹಾಗೂ ಮಾಜಿಶಾಸಕ ಎನ್‌.ಎಸ್‌.ಬೋಸರಾಜು ಶನಿವಾರ ಸಂಪುಟದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಹಾಗೂ ಪ್ರವಾಸೋಧ್ಯಮ, ವಿಜ್ಞಾನ, ತಂತ್ರಜ್ಞಾನ ಖಾತೆ ಸಚಿವರಾಗಿ ನೇಮಕಗೊಳ್ಳುತ್ತಿದ್ದಂತೆಯೇ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಮಾನ್ವಿ ಪಟ್ಟಣದ ಬಸವವೃತ್ತ, ವಾಲ್ಮೀಕಿವೃತ್ತ, ಅಂಬೇಡ್ಕರ್‌ವೃತ್ತದ ಬಳಿ ಪಟಾಕಿಗಳನ್ನು ಸಿಡಿಸಿ ಸಾರ್ವಜನಿಕರಿಗೆ ಸಿಹಿಯನ್ನು ಹಂಚಿ ಸಂಭ್ರಮಾಚರಣೆ ಮಾಡಿದರು.

ರಾಯಚೂರು ಜಿಲ್ಲೆಯ ಪ್ರಭಾವಿ ನಾಯಕರಾಗಿರುವ ಎನ್‌.ಎಸ್‌. ಬೋಸರಾಜು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡು ಮಾನ್ವಿ ಕ್ಷೇತ್ರದಿಂದ ಎರಡು ಶಾಸಕರಾಗಿ ಆಯ್ಕೆ ಹಾಗೂ ವಿಧಾನಪರಿಷತ್‌ ಸದಸ್ಯರಾಗಿ, ಕಾಡಾ ಅಧ್ಯಕ್ಷರಾಗಿ, ಎಚ್‌ಕೆಡಿಬಿ ಅಧ್ಯಕ್ಷ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಜೊತೆಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಎಐಸಿಸಿ ಕಾರ್ಯಾದರ್ಶಿಯಾಗಿ ಮತ್ತು ತೆಲಂಗಾಣಾ ಉಸ್ತುವಾರಿಯಾಗಿ ಕಾಂಗ್ರೆಸ್‌ನಲ್ಲಿ 50 ವರ್ಷಗಳಿಂದ ಗುರತಿಸಿಕೊಂಡಿದ್ದಾರೆ. ಕಾಂಗ್ರೆಸ್‌ನ್ನು ಸತತ 20 ವರ್ಷ ಗೆಲ್ಲಿಸಿಕೊಂಡು ಬಂದಿರುವ ಕೀರ್ತಿ ಇವರಿಗೆ ಸಲ್ಲುತ್ತದೆ.

ಮಾನ್ವಿ ಕ್ಷೇತ್ರಕ್ಕೆ 2ನೇ ಸಚಿವ:

ಈ ಹಿಂದೆ ಮಾನ್ವಿ ವಿಧಾನಸಭಾ ಕ್ಷೇತ್ರದ ಶಾಸಕಿಯಾಗಿ 3 ಬಾರಿ ಆಯ್ಕೆಯಾಗಿದ್ದ ಬಸವರಾಜೇಶ್ವರಿ ಸಚಿವರಾಗಿ ಬಿಟ್ಟರೆ, ಇದುವರೆಗೂ ಕ್ಷೇತ್ರದಲ್ಲಿ ಯಾರು ಸಚಿವರಾಗಿಲ್ಲ ಮಾನ್ವಿ ಕ್ಷೇತ್ರಕ್ಕೆ ಎನ್‌.ಎಸ್‌ ಬೋಸರಾಜುರಿಂದ ಮತ್ತೇ ಸಚಿವ ಸ್ಥಾನ ಸಿಕ್ಕಂತಾಗಿದೆ.

ರಾಯಚೂರು: ಬಿಸಿಲುನಾಡಿನ ಯುವಕ ಐಎಎಸ್‌ಗೆ ಸೆಲೆಕ್ಟ್..!

ಎರಡು ಬಾರಿ ಶಾಸಕರಾಗಿ, ಒಂದು ಬಾರಿ ಎಂಎಲ್ಸಿ ಆಗಿದ್ದ ಎನ್‌.ಎಸ್‌ ಬೋಸರಾಜು ಅವರಿಗೆ ಈವರೆಗೆ ಮಂತ್ರಿಸ್ಥಾನ ದೊರಕಿರಲಿಲ್ಲ. ಇದೀಗ 2023ರ ಸಾರ್ವತ್ರಿಕ ಚುನಾವಣೆಯಲ್ಲಿ ರಾಯಚೂರು ನಗರ ವಿಧಾನಸಭಾ ಕ್ಷೇತ್ರದ ಪ್ರಬಲ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಆದರೆ ಪಕ್ಷ ಅಲ್ಪಸಂಖ್ಯಾತ ಸಮುದಾಯದವರಿಗೆ ಮಣೆಹಾಕಿತ್ತು.

ಮಾನ್ವಿ ಕ್ಷೇತ್ರದ ತಮ್ಮ ಶಿಷ್ಯ ಹಂಪಯ್ಯನಾಯಕರಿಗೆ ಟಿಕೆಟ್‌ ಕೊಡಿಸಿ, ಅವರನ್ನು ಗೆಲಿಸುವ ಮೂಲಕ ತಮ್ಮ ಸಾಮರ್ಥ್ಯವನ್ನು ಹೈಕಮಾಂಡ್‌ಗೆ ರವಾನೆ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಸರ್ಕಾರ ರಚನೆ ವೇಳೆ ಸೂಕ್ತ ಸ್ಥಾನಮಾನದ ಭರವಸೆ ನೀಡಿದಂತೆ ಹೈಕಮಾಂಡ್‌ ಸಚಿವ ಸ್ಥಾನ ನೀಡಿದೆ.

Follow Us:
Download App:
  • android
  • ios