Assembly Election: ಚಾಮುಂಡೇಶ್ವರಿಯಿಂದ ಸ್ಪರ್ಧಿಸುವುದಿಲ್ಲ- ಸಿದ್ದರಾಮಯ್ಯ
ನನ್ನ ಸೋಲಿಗೆ ಕಾರಣವಾದ ಚಾಮುಂಡೇಶ್ವರಿ ಕ್ಷೇತ್ರದಿಂದ ನಾನು ಸ್ಪರ್ಧಿಸುವುದಿಲ್ಲ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಮೈಸೂರು (ನ.16) : ನನ್ನ ಸೋಲಿಗೆ ಕಾರಣವಾದ ಚಾಮುಂಡೇಶ್ವರಿ ಕ್ಷೇತ್ರದಿಂದ ನಾನು ಸ್ಪರ್ಧಿಸುವುದಿಲ್ಲ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಮೈಸೂರು ತಾಲೂಕು ಹಳೇ ಕಾಮನಕೊಪ್ಪಲು ಗ್ರಾಮದ ಬಳಿ ಇಲವಾಲ ಭಾಗದ ಕಾಂಗ್ರೆಸ್ ಕಾರ್ಯಕರ್ತರು ಸ್ವಾಗತಿಸಿ, ಚಾಮುಂಡೇಶ್ವರಿ ಕ್ಷೇತ್ರದಿಂದಲೇ ನೀವು ಸ್ಪರ್ಧಿಸಬೇಕು. ಈ ಬಾರಿ ಗೆದ್ದೇ ಗೆಲ್ಲಿಸುತ್ತೇವೆ ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಚಾಮುಂಡೇಶ್ವರಿ ಕ್ಷೇತ್ರ ನನ್ನನ್ನು ಮುಖ್ಯಮಂತ್ರಿ ಆಗುವವರೆಗೆ ಬೆಳೆಸಿದೆ. ಈ ಕ್ಷೇತ್ರ ಜನರ ಋುಣವನ್ನು ಈ ಜನ್ಮದಲ್ಲಿ ತೀರಿಸಲು ಸಾಧ್ಯವಿಲ್ಲ. ನಿಮ್ಮ ಅಭಿಮಾನಕ್ಕೆ ನಾನು ಋುಣಿಯಾಗಿದ್ದೇನೆ. ಈ ಬಾರಿ ಚಾಮುಂಡೇಶ್ವರಿ ಕ್ಷೇತ್ರದಿಂದ ನಾನು ಸ್ಪರ್ಧಿಸುವುದಿಲ್ಲ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ. ನೀವೆಲ್ಲರೂ ಪಕ್ಷ ನಿರ್ಧರಿಸಿದ ಅಭ್ಯರ್ಥಿಗೆ ಬೆಂಬಲ ನೀಡಿ. ಒಗ್ಗಟ್ಟಿನಿಂದ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಮನವಿ ಮಾಡಿದರು.
ಜಿಪಂ ಮಾಜಿ ಅಧ್ಯಕ್ಷ ಕೆ. ಮರೀಗೌಡ, ಮಾಜಿ ಸದಸ್ಯ ಅರುಣ್‌ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್‌ಕುಮಾರ್, ತಾಪಂ ಮಾಜಿ ಸದಸ್ಯ ಸಿ.ಎಂ. ಸಿದ್ಧರಾಮೇಗೌಡ, ಕಾಮನಕೊಪ್ಪಲು ಕರೀಗೌಡ, ಮೈದನಹಳ್ಳಿ ಶಿವಣ್ಣ, ಶಿವೇಗೌಡ, ನಾಗವಾಲ ಮಹೇಶ, ಆನಂದೂರು ರಾಮೇಗೌಡ, ವೈ.ಸಿ. ಸ್ವಾಮಿ, ರವಿ, ರಾಮು, ಪಾಷ, ಮಂಜುನಾಥ್, ನಾಗೇಶ್, ರಾಜೇಶ್ ಮೊದಲಾದವರು ಇದ್ದರು.
’ಸಿದ್ದರಾಮಯ್ಯ ನಾಲಾಯಕ್ ಎಂದೇ ಚಾಮುಂಡೇಶ್ವರಿಯಿಂದ ಬದಾಮಿಗೆ ಓಡಿಸಿದ್ದಾರೆ’