ಲೋಕಸಭಾ ಚುನಾವಣೆ 2024: ಕರ್ನಾಟಕದ 14 ಕ್ಷೇತ್ರಕ್ಕೆ 358 ಅಭ್ಯರ್ಥಿಗಳ ನಾಮಪತ್ರ
ನಾಮಪತ್ರ ಸಲ್ಲಿಕೆಗೆ ಕಡೆ ದಿನವಾದ ಗುರುವಾರ ಘಟಾನುಘಟಿಗಳು ಸೇರಿದಂತೆ 183 ಅಭ್ಯರ್ಥಿಗಳಿಂದ 224 ನಾಮ ಪತ್ರಗಳು ಸಲ್ಲಿಕೆಯಾಗಿವೆ. ಇಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಸಂಜೆ ಬಳಿಕ ಕ್ರಮಬದ್ಧವಾದ ಹಾಗೂ ತಿರಸ್ಕೃತಗೊಂಡ ನಾಮಪತ್ರಗಳ ಮಾಹಿತಿಯನ್ನು ಪ್ರಕಟಿಸಲಾಗುತ್ತದೆ.
ಬೆಂಗಳೂರು(ಏ.05): ಲೋಕಸಭಾ ಸಾರ್ವತ್ರಿಕ ಚುನಾವಣೆ ಯಡಿ ರಾಜ್ಯದ ಮೊದಲ ಹಂತದ 14 ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯವಾಗಿದ್ದು, ಇನ್ನೇನಿದ್ದರೂ ರಾಜಕೀಯ ಪಕ್ಷಗಳ ಪ್ರಚಾರದ ಅಬ್ಬರ ಶುರುವಾಗಲಿದೆ.
ನಾಮಪತ್ರ ಸಲ್ಲಿಕೆಗೆ ಕಡೆ ದಿನವಾದ ಗುರುವಾರ ಘಟಾನುಘಟಿಗಳು ಸೇರಿದಂತೆ 183 ಅಭ್ಯರ್ಥಿಗಳಿಂದ 224 ನಾಮ ಪತ್ರಗಳು ಸಲ್ಲಿಕೆಯಾಗಿವೆ. ಶುಕ್ರವಾರ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಸಂಜೆ ಬಳಿಕ ಕ್ರಮಬದ್ಧವಾದ ಹಾಗೂ ತಿರಸ್ಕೃತಗೊಂಡ ನಾಮಪತ್ರಗಳ ಮಾಹಿತಿಯನ್ನು ಪ್ರಕಟಿಸಲಾಗುತ್ತದೆ.
ಅಧಿಸೂಚನೆ ಪ್ರಕಟಗೊಂಡ ಬಳಿಕ ಈವರೆಗೆ ಒಟ್ಟು 358 ಅಭ್ಯರ್ಥಿಗಳಿಂದ 492 ಉಮೇದುವಾರಿಕೆ ಸಲ್ಲಿಕೆಯಾಗಿವೆ. ರೋಡ್ ಶೋ, ಬಹಿರಂಗ ಸಮಾವೇಶಗಳ ಮೂಲಕ ಚುನಾವಣೆಯ ಕಣ ರಂಗೇರಿದೆ. ಗುರುವಾರ ಕೊನೆ ದಿನವಾದ್ದರಿಂದ ನಾಮಪತ್ರಗಳ ಸಲ್ಲಿಕೆಗಳ ಭರಾಟೆಯೂ ಜೋರಾಗಿತ್ತು.
ಎಚ್‌ಡಿಕೆ ಬಳಿ ಇದೆ ಕೋಟ್ಯಂತರ ರೂಪಾಯಿ ಆಸ್ತಿ! ಪತಿಗಿಂತ ಪತ್ನಿಯೇ ಶ್ರೀಮಂತೆ! ಒಟ್ಟು ಆಸ್ತಿ ವಿವರ ಇಲ್ಲಿದೆ
ಮಂಡ್ಯ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ಡಾ.ಸಿ.ಎನ್.ಮಂಜುನಾಥ್, ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ಸಂಸದ ತೇಜಸ್ವಿ ಸೂರ್ಯ, ಕರ್ನಾಟಕ ಚಳವಳಿ ವಾಟಾಳ್ ಪಕ್ಷದಿಂದ ವಾಟಾಳ್ ನಾಗರಾಜ್, ತುಮಕೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಸ್.ಪಿ.ಮುದ್ದಹನುಮೇಗೌಡ, ಹಾಸನ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ, ಚಿತ್ರದುರ್ಗದಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ಮಾಜಿ ಸಚಿವ ಗೋವಿಂದ ಕಾರಜೋಳ, ಕೋಲಾರದಲ್ಲಿ ಎನ್‌ಡಿಎ ಅಭ್ಯರ್ಥಿ ಮಲ್ಲೇಶ್ ಬಾಬು ಸೇರಿ ಹಲವು ಅಭ್ಯರ್ಥಿ ಗಳು ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆಗೂ ಮುನ್ನ ಕೆಲವು ಅಭ್ಯರ್ಥಿಗಳು ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಮತ್ತೆ ಕೆಲವರು ರೋಡ್ ಶೋ ನಡೆಸುವ ಮೂಲಕ ಶಕ್ತಿ ಪ್ರದರ್ಶನಮಾಡಿದರು.ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳು ಸೇರಿದಂತೆ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ವೇಳೆ ಆಯಾ ಪಕ್ಷಗಳ ಪ್ರಮುಖ ಉಪಸ್ಥಿತರಿದ್ದರು.
171 ಪುರುಷರು, 12 ಮಹಿಳೆಯರು ಸೇರಿ 183 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದಾರೆ.ಸಲ್ಲಿಕೆಯಾದ224 ನಾಮಪತ್ರಗಳ ಪೈಕಿ 210 ಪುರುಷರ ಮತ್ತು 14 ಮಹಿಳೆಯರ ನಾಮಪತ್ರಗಳಾಗಿವೆ. ಕಾಂಗ್ರೆಸ್ 21, ಬಿಜೆಪಿ 17, ಬಿಎಸ್‌ಪಿ 5, ಜೆಡಿಎಸ್ 8, ಮಾನ್ಯತೆ ಪಡೆಯದ ನೋಂದಾಯಿತ ರಾಜಕೀಯ ಪಕ್ಷಗಳು 71, ಪಕ್ಷೇತರು 102 ನಾಮಪತ್ರಗಳು ಸಲ್ಲಿಕೆಯಾಗಿವೆ. ಅಧಿಸೂಚನೆ ಪ್ರಕಟಗೊಂಡ ಬಳಿಕ ಈವರೆಗೆ 358 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ಪೈಕಿ 333 ಪುರುಷರು, 25 ಮಹಿಳೆಯರಾಗಿದ್ದಾರೆ. ಸಲ್ಲಿಕೆ ಯಾಗಿರುವ 492 ಉಮೇದು ವಾರಿಕೆಯಲ್ಲಿ 453 ಪುರುಷರು, 39 ಮಹಿಳೆಯರ ನಾಮಪತ್ರ ಗಳಾಗಿವೆ. ಒಟ್ಟು ಕಾಂಗ್ರೆಸ್ 50, ಬಿಜೆಪಿ 41, ಜೆಡಿಎಸ್ 10, ಬಿಎಸ್‌ಪಿ 18, ಸಿಪಿಐಎಂ 1, ಮಾನ್ಯತೆ ಪಡೆಯದ ನೋಂದಾಯಿತ ರಾಜಕೀಯ ಪಕ್ಷಗಳಿಂದ 161 ಮತ್ತು ಪಕ್ಷೇತರರಿಂದ 211 ನಾಮಪತ್ರಗಳು ಸಲ್ಲಿಕೆಯಾಗಿವೆ.