Karnataka Politics: ಸಿಎಂ ಬದಲಾವಣೆ ಬಿಜೆಪಿ ಜನ್ಮ ನಕ್ಷತ್ರದಲ್ಲಿದೆ: ಬಿ.ಕೆ.ಹರಿಪ್ರಸಾದ್
* ಈಗಾಗಲೇ ಸಿಎಂಗೆ ಬುದ್ಧಿ ಕಲಿಸಿದ ಸ್ವಕ್ಷೇತ್ರದ ಜನರು
* ಬಿಜೆಪಿಗೆ ಮತದಾರರು ತಕ್ಕ ಪಾಠ ಕಲಿಸ್ತಾರೆ
* ರೈತನ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಮುಂದಾಗಬೇಕು
ಹುಬ್ಬಳ್ಳಿ(ಡಿ.03): ಮುಖ್ಯಮಂತ್ರಿ(Chief Minister) ಬದಲಾವಣೆ ಮಾಡುವುದು ಬಿಜೆಪಿಯ ಜನ್ಮ ನಕ್ಷತ್ರದಲ್ಲಿಯೇ ಬರೆದಿದೆ ಎಂದು ಧಾರವಾಡ ವಿಧಾನಸಭಾ ಕ್ಷೇತ್ರದ ಚುನಾವಣೆ ವೀಕ್ಷಕ, ಎಂಎಲ್‌ಸಿ ಬಿ.ಕೆ. ಹರಿಪ್ರಸಾದ(BK Hariprasad) ವ್ಯಂಗ್ಯವಾಡಿದ್ದಾರೆ.
ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ(BJP) ಹಿಂದೆ ಮೂರು ಬಾರಿ ಮುಖ್ಯಮಂತ್ರಿ ಸ್ಥಾನ ಬದಲಾಗಿತ್ತು. ಈ ಬಾರಿ ಎರಡನೇ ಸಿಎಂ ನೋಡುತ್ತಿದ್ದೇವೆ. ಅವಧಿ ಮುಗಿಯುವುದರೊಳಗೆ ಇನ್ನೂ ಇಬ್ಬರು ಸಿಎಂಗಳಾದರೆ ಆಶ್ಚರ್ಯ ಪಡಬೇಕಾಗಿಲ್ಲ ಎಂದರು.
ಉಪಚುನಾವಣೆಯಲ್ಲಿ(Byelection) ಬಿಜೆಪಿ ಹಣ, ಅಧಿಕಾರ, ತೋಳ್ಬಲ ಪ್ರದರ್ಶನ ಮಾಡಿದ್ದರೂ ಹಾನಗಲ್ಲಿನಲ್ಲಿ ಸೋತರು. ಈ ಚುನಾವಣೆಯಲ್ಲಿಯೂ ಗ್ರಾಮೀಣ ಮಟ್ಟದಲ್ಲಿ ಆಮಿಷಗಳನ್ನು ಒಡ್ಡುತ್ತಿದ್ದಾರೆ. ಅದಕ್ಕೆ ಮಣಿಯದಿದ್ದರೆ ಭಯ ಹುಟ್ಟಿಸುವ ಕೆಲಸವನ್ನು ಸಿಎಂ ಬಸವರಾಜ ಬೊಮ್ಮಯಿ(Basavaraj Bommai) ನೇತೃತ್ವದ ಸರ್ಕಾರ ಮಾಡುತ್ತಿದೆ. ಅದರಲ್ಲೂ ಧಾರವಾಡ(Dharwad) ಜಿಲ್ಲೆಯಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ ಎಂದು ಆರೋಪಿಸಿದರು.
ಈಗಾಗಲೇ ಜನರು ಸಿಎಂಗೆ ತಮ್ಮ ಸ್ವಕ್ಷೇತ್ರದಲ್ಲಿ ಬುದ್ಧಿ ಕಲಿಸಿದ್ದಾರೆ. ರಾಜೀವ್ ಗಾಂಧಿ ಅವರು ಸಂವಿಧಾನಕ್ಕೆ 73 ಹಾಗೂ 74 ನೇ ತಿದ್ದುಪಡಿ ಮಾಡಿ ಸ್ಥಳೀಯ ಸಂಸ್ಥೆಗಳಿಗೆ ಅಧಿಕಾರ ಕೊಡುವ ಕೆಲಸ ಮಾಡಿದ್ದರು. ಆ ಅಧಿಕಾರ ಉಳಿಸುವ ಸಲುವಾಗಿ ಎಲ್ಲರೂ ಪಂಚಾಯತ್ ರಾಜ್ ವ್ಯವಸ್ಥೆ ಬಲಿಷ್ಠಗೊಳಿಸಲು ಮುಂದಾಗಬೇಕು ಎಂದರು.
Karnataka Politics: ನೋ ಡೌಟ್ ಜೆಡಿಎಸ್ ಬಿಜೆಪಿಯ ಬಿ-ಟೀಮೇ: ಸಿದ್ದರಾಮಯ್ಯ
ರೈತರ(Farmers) ಬೇಡಿಕೆಗಳನ್ನು ಹತ್ತಿಕ್ಕುವ ಕೇಂದ್ರದ ಹುನ್ನಾರಕ್ಕೆ ತಡೆ ಬಿದ್ದಿದೆ. ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ರೈತ ವಿರೋಧಿ ಕಾಯ್ದೆಗಳನ್ನು ಯಾವುದೇ ಚರ್ಚೆ ಮಾಡದೆ ಹಿಂದಕ್ಕೆ ತೆಗೆದುಕೊಂಡಿದ್ದಾರೆ. ಅತಿವೃಷ್ಟಿಯಿಂದಾಗಿ ರೈತರ ಬೆಳೆಗಳು ಸಂಪೂರ್ಣವಾಗಿ ನಾಶವಾಗಿದೆ. ಸರ್ಕಾರದ ಮಂತ್ರಿಗಳು ಪರಿಹಾರ ಕೊಡುವಲ್ಲಿ ಮೀನಾಮೇಷ ಎಣಿಸುತ್ತಿದ್ದಾರೆ. ರಾಷ್ಟ್ರದ ಬೆನ್ನೆಲುಬು ರೈತನ ಬೇಡಿಕೆಗಳನ್ನು ಸರ್ಕಾರ ಮುಂದಾಗಬೇಕು ಎಂದರು. ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ ಮಾತನಾಡಿ, ಕಾಂಗ್ರೆಸ್‌ಗೆ(Congress) ಹೆಚ್ಚಿನ ಮತ ನೀಡಿ ಅಭ್ಯರ್ಥಿ ಸಲೀಂ ಅಹ್ಮದ್(Saleem Ahmed) ಅವರಿಗೆ ಗೆಲುವು ದೊರಕಿಸಿಕೊಡಿ ಎಂದರು.
ಶಾಸಕರಾದ ಪ್ರಸಾದ್ ಅಬ್ಬಯ್ಯ, ಕುಸುಮಾವತಿ ಶಿವಳ್ಳಿ, ಹುಧಾ ಗ್ರಾಮೀಣ ಜಿಲ್ಲಾಧ್ಯಕ್ಷ ಅನಿಲಕುಮಾರ್ ಪಾಟೀಲ…, ಶಿವಾನಂದ ಕರಿಗಾರ, ಸತೀಶ್ ಮೆಹರವಾಡೆ, ಎಂ.ಎಸ್. ಅಕ್ಕಿ, ಪ್ರಕಾಶ ಬುರಬುರೆ, ಅನೀಲ ಸಾವಂತ್, ರಫೀಕ್ ಸಾವಂತ್ ಇದ್ದರು.
ಬಿಜೆಪಿಗೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ
ಗ್ರಾಪಂ, ತಾಪಂನಂತಹ ಸ್ಥಳೀಯ ಸಂಸ್ಥೆಗಳನ್ನು ಹತ್ತಿಕ್ಕುತ್ತಿರುವ ಬಿಜೆಪಿಗೆ ಪರಿಷತ್ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಯುವ ಕಾಂಗ್ರೆಸ್ ಕಾರ್ಯದರ್ಶಿ ಸ್ವಾತಿ ಮಾಳಗಿ(Swamti Malagi) ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಮೂರು ವರ್ಷಗಳಿಂದ ತಾಲೂಕು ಮಟ್ಟದ ಅಧಿಕಾರಿಗಳು ಸ್ಥಳೀಯ ಪಂಚಾಯಿತಿ ಸದಸ್ಯರಿಗೆ ಸೂಕ್ತ ಸ್ಪಂದನೆ ನೀಡುತ್ತಿಲ್ಲ. 2004ರಲ್ಲಿ ಕಾಂಗ್ರೆಸ್ ಆಡಳಿತದಲ್ಲಿ ಧಾರವಾಡ ತಾಲೂಕಿನ ಬೇಲೂರು ಗ್ರಾಮದಲ್ಲಿ ಪಂಚಾಯತ್ ರಾಜ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಸಮಾವೇಶ ನಡೆದಿತ್ತು. ಆಗ ಗ್ರಾಪಂ ಬಲಪಡಿಸುವ ನಿಟ್ಟಿನಲ್ಲಿ ಆಡಳಿತ ವಿಕೇಂದ್ರೀಕರಣ ಮಾಡುವ ಕುರಿತು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿತ್ತು. ಆದರೆ ಬಳಿಕ ಅಧಿಕಾರಕ್ಕೆ ಬಂದ ಬಿಜೆಪಿ ಗ್ರಾಪಂಗಳನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ ಎಂದರು.
Karnataka Politics: ನನ್ನ ಶರೀರ ಇರೋವರೆಗೂ ಕೈ, ಕಮಲ ಸೇರಲ್ಲ: ದೇವೇಗೌಡ
ಮಹಿಳೆಯರಿಗೆ(Woman) ರಕ್ಷಣೆ ಇಲ್ಲದ ಪಕ್ಷದ ಅಭ್ಯರ್ಥಿಗೆ ಮಹಿಳಾ ಗ್ರಾಪಂ ಸದಸ್ಯರು ಪರಿಷತ್ ಚುನಾವಣೆಯಲ್ಲಿ ಮತ ಹಾಕದೇ, ತಕ್ಕ ಉತ್ತರ ನೀಡಬೇಕು. ವಿಧಾನಪರಿಷತ್ ಚುನಾವಣೆಯಲ್ಲಿ(Vidhan Parishat Election) ಕಾಂಗ್ರೆಸ್ ಅಭ್ಯರ್ಥಿ ಸಲಿಂ ಅಹ್ಮದ್ ಅವರಿಗೆ ಮತ ನೀಡುವ ಮೂಲಕ ಸ್ಥಳೀಯ ಸಂಸ್ಥೆಗಳನ್ನು ಬಲಪಡಿಸಬೇಕು ಎಂದರು.
ಯುತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಇಮ್ರಾನ್ ಎಲಿಗಾರ, ಎಲ್ಲೆಡೆ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ಪರ ಅಲೆ ಇದ್ದು, ಅತಿ ಹೆಚ್ಚು ಮತಗಳ ಅಂತರದಿಂದ ಅವರು ಜಯ ಗಳಿಸಲಿದ್ದಾರೆ. ಬಿಜೆಪಿಯಲ್ಲಿ ಗುರುತಿಸಿಕೊಂಡ ಗ್ರಾಪಂ ಸದಸ್ಯರು ಕೂಡ ಸಲೀಂ ಅವರ ಪರವಾಗಿ ಮತ ಹಾಕಲಿದ್ದಾರೆ ಎಂದರು. ಕಲಾವತಿ ಗಿರಿಯಣ್ಣನವರ, ಚಂದನರಾಣಿ ದೊಡಮನಿ, ಪ್ರವೀಣ ಶಲವಡಿ ಇದ್ದರು.