ಹುಬ್ಬಳ್ಳಿ [ಅ.27]:  ನಗರದ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ನಡೆದ ಬಿಜೆಪಿಯ ಕೋರ್‌ ಕಮಿಟಿ ಸಭೆಯಲ್ಲಿ ಶಾಸಕ ಉಮೇಶ ಕತ್ತಿ ಅಕ್ಷರಶಃ ಏಕಾಂಗಿಯಾಗಿದ್ದರು.

ಉತ್ತರ ಕರ್ನಾಟಕ ಭಾಗದ 7 ಕ್ಷೇತ್ರಗಳಲ್ಲಿ ನಡೆಯಲಿರುವ ಉಪ ಚುನಾವಣೆ ಹಾಗೂ ವಿಧಾನ ಪರಿಷತ್‌ ಅಭ್ಯರ್ಥಿಗಳ ಆಯ್ಕೆ ಸಂಬಂಧ ಶನಿವಾರ ನಡೆದ ಸಭೆಯಲ್ಲಿ ಉಮೇಶ್‌ ಕತ್ತಿ ಒಬ್ಬರೇ ಒಂಟಿಯಾಗಿ, ಹಿಂದೆ ಕುಳಿತುಕೊಂಡಿದ್ದರು. ಹೀಗೆ ಒಬ್ಬರೇ ಕುಳಿತಿದ್ದ ಕತ್ತಿ ಅವರನ್ನು ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಹಾಗೂ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಇಡೀ ಸಭೆಯುದ್ದಕ್ಕೂ ಕಣ್ಣೆತ್ತಿಯೂ ನೋಡಲಿಲ್ಲ.

ಬೆಳಗ್ಗೆ 10.30ಕ್ಕೆ ಸಭೆ ಆರಂಭವಾಯಿತು. ವೇದಿಕೆ ಮೇಲೆ ಮುಖ್ಯಮಂತ್ರಿ ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು, ಡಿಸಿಎಂಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಸಚಿವ ಜಗದೀಶ ಶೆಟ್ಟರ್‌, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಸೇರಿದಂತೆ ಹಲವರು ಆಸೀನರಾಗಿದ್ದರು. ವೇದಿಕೆ ಮುಂಭಾಗದಲ್ಲಿ ಶಾಸಕರು, ಸಂಸದರು ಕುಳಿತ್ತಿದ್ದರು. ಎಲ್ಲರನ್ನೂ ರಾಜ್ಯಾಧ್ಯಕ್ಷ ಕಟೀಲು ಮುಂದೆ ಬನ್ನಿ ಕುಳಿತುಕೊಳ್ಳಿ ಎಂದು ಹೆಸರನ್ನು ಹೇಳಿ ಕರೆದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆದರೆ, ಉಮೇಶ ಕತ್ತಿ ಹಿಂದಿನ ಸಾಲಿನಲ್ಲಿ ಒಬ್ಬರೇ ಕುಳಿತ್ತಿದ್ದರೂ, ಅವರನ್ನು ಕಟೀಲು ಕರೆಯಲೇ ಇಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಕತ್ತಿಯನ್ನು ಕರೆಯುವ ಗೋಜಿಗೆ ಹೋಗಲಿಲ್ಲ. ಇಬ್ಬರೂ ಮುಖಂಡರು ಕತ್ತಿ ಅವರನ್ನು ನೋಡಿಯೂ ನೋಡದಂತೆ ವರ್ತಿಸಿದ್ದು ಸಾಕಷ್ಟುಕುತೂಹಲಕ್ಕೆ ಕಾರಣವಾಗಿತ್ತು.