ನಾನು ನನ್ನ ಕೆಲಸ ಮಾಡುತ್ತಿದ್ದೇನೆ. ನಾನು, ಪಕ್ಷ, ಹೈಕಮಾಂಡ್ ಉಂಟು. ಮಾಧ್ಯಮದವರು ಯಾರೋ ಹೇಳಿದ ಸುಳ್ಳನ್ನು ನಂಬಬೇಡಿ. ಶಿವಕುಮಾರ್ ಅವರಿವರನ್ನು ಭೇಟಿ ಮಾಡಿದರು, ಪಕ್ಷದಲ್ಲಿ ಬಂಡಾಯವಿದೆ ಎಂದೆಲ್ಲಾ ಹೇಳಬೇಡಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ 

ಬೆಳಗಾವಿ(ಜ.21):  ಕಾಂಗ್ರೆಸ್‌ ಪಕ್ಷದಲ್ಲಿನ ಬಂಡಾಯ, ಬೇಗುದಿಯ ಆರೋಪಗಳಿಗೆ ತೆರೆ ಎಳೆದಿರುವ ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು, ನನಗೆ ಯಾರ ಜೊತೆಯೂ ಭಿನ್ನಾಭಿಪ್ರಾಯವಿಲ್ಲ. ಕಾರ್ಯಕರ್ತರ ರಕ್ಷಣೆ ಮಾಡುವುದು ನನ್ನ ಮೊದಲ ಕರ್ತವ್ಯ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ ಸಮಾವೇಶದ ಹಿನ್ನೆಲೆಯಲ್ಲಿ ಸೋಮವಾರ ಬಿಡುವಿಲ್ಲದ ಕಾರ್ಯಕ್ರಮಗಳ ಮಧ್ಯವೇ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ನನ್ನ ಕೆಲಸ ಮಾಡುತ್ತಿದ್ದೇನೆ. ನಾನು, ಪಕ್ಷ, ಹೈಕಮಾಂಡ್ ಉಂಟು. ಮಾಧ್ಯಮದವರು ಯಾರೋ ಹೇಳಿದ ಸುಳ್ಳನ್ನು ನಂಬಬೇಡಿ. ಶಿವಕುಮಾರ್ ಅವರಿವರನ್ನು ಭೇಟಿ ಮಾಡಿದರು, ಪಕ್ಷದಲ್ಲಿ ಬಂಡಾಯವಿದೆ ಎಂದೆಲ್ಲಾ ಹೇಳಬೇಡಿ ಎಂದು ಕಿಡಿಯಾದರು.

ಸತೀಶ್ ಜಾರಕಿಹೊಳಿ Vs ಡಿಕೆ ಶಿವಕುಮಾರ ಬಣ ಬಡಿದಾಟ; ದುಬೈ ಟೂರ್ ಹೊರಟಿದ್ದ ಕೈ ಶಾಸಕ ಆಸೀಫ್ ಸೇಠ್ ಡಿಕೆಶಿ ಕ್ಲಾಸ್!

ಕಾಂಗ್ರೆಸ್ ಪಕ್ಷದಲ್ಲಿ ಯಾವ ಬಂಡಾಯವೂ ಇಲ್ಲ. ಯಾರ ಜೊತೆಯೂ ನನಗೆ ವೈಯಕ್ತಿಕ ಭಿನ್ನಾಭಿಪ್ರಾಯವಿಲ್ಲ. ನಾನು ಎಲ್ಲರನ್ನು ಸಮಾನವಾಗಿ ಕಾಣುವ ಪಕ್ಷದ ಅಧ್ಯಕ್ಷ ಸ್ಥಾನದಲ್ಲಿದ್ದೇನೆ ಎಂದು ಹೇಳಿದರು.

ಸುಳ್ಳನ್ನು ನಂಬಬೇಡಿ:

ರಣದೀಪ್ ಸುರ್ಜೇವಾಲಾ ಅವರನ್ನೇ ಬದಲಾವಣೆ ಮಾಡಬೇಕೆಂದು ಕೆಲವು ಸಚಿವರು ರಾಹುಲ್ ಗಾಂಧಿಗೆ ದೂರು ನೀಡುತ್ತಿದ್ದಾರೆಂಬ ಬಗ್ಗೆ ಪ್ರತಿಕ್ರಿಯಿಸಿ, ಯಾರೋ ಸುಳ್ಳು ಮಾಹಿತಿ ನೀಡಿ ಮಾಧ್ಯಮಗಳ ಘನತೆ ಹಾಳು ಮಾಡುತ್ತಿದ್ದಾರೆ. ನಾನು ಭಾನುವಾರ ಹಿರಿಯ ಶಾಸಕ ಫಿರೋಜ್ ಸೇಠ್ ಮನೆಗೆ ಭೇಟಿ ನೀಡಿದ್ದೆ. ಬೆಳಗಾವಿಯಲ್ಲಿ ಸಮಾವೇಶದ ರಾಜ್ಯ ಸಮಿತಿ ಸದಸ್ಯರನ್ನಾಗಿ ಅವರನ್ನು ನೇಮಕ ಮಾಡಲಾಗಿದೆ. ಸಂಘಟನೆ ದೃಷ್ಟಿಯಿಂದ ಜಿಲ್ಲಾ ಅಧ್ಯಕ್ಷರ ಜತೆ ಹೋಗಿ ಭೇಟಿ ಮಾಡಿದ್ದೆ. ಆದರೆ, ಮಾಧ್ಯಮಗಳು ಏನೇನೋ ವರದಿ ಬಿತ್ತರ ಮಾಡಿದವು. ಯಾರೋ ಸ್ಟೋರಿ ಪ್ಲಾಂಟ್ ಮಾಡಿದ್ದನ್ನು ನಂಬಿ ಮಾಧ್ಯಮಗಳು ತಮ್ಮ ಘನತೆಯನ್ನು ಹಾಳು ಮಾಡಿಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.

ಡರ್ಟಿ ಪಾಲಿಟಿಕ್ಸ್‌ ಬಗ್ಗೆ ಕೇಳಿದ್ರೆ ಹೇಗೆ?: 

ಕಾಂಗ್ರೆಸ್‌ನ 60 ಜನ ಶಾಸಕರು ಬಿಜೆಪಿಗೆ ಬರುತ್ತಾರೆ ಎನ್ನುವ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿ, ಇಂತಹ ನೀಚ (ಡರ್ಟಿ ಪೊಲಿಟಿಕ್ಸ್‌) ರಾಜಕಾರಣದ ಬಗ್ಗೆ ನೀವು ಪ್ರಶ್ನೆ ಮಾಡಿದರೆ ಹೇಗೆ? ಇಂತಹ ಪ್ರಶ್ನೆಗಳಿಗೆ ನಾನು ಉತ್ತರಿಸುವುದಿಲ್ಲ ಎಂದರು. 2023ರ ಚುನಾವಣೆಯಲ್ಲಿ ಫಿರೋಜ್ ಸೇಟ್‌ಗೆ ಟಿಕೆಟ್ ಸಿಗದಿದ್ದಕ್ಕೆ ಸತೀಶ್‌ ಜಾರಕಿಹೊಳಿ ಕಾರಣವೇ ಎಂಬ ಪ್ರಶ್ನೆಗೆ, ನನಗೆ ಈ ವಿಚಾರದ ಬಗ್ಗೆ ಗೊತ್ತಿಲ್ಲ ಎಂದು ತಿಳಿಸಿದರು.

ಕೈ ಕೋಟೆಯೊಳಗೆ ಬಿರುಗಾಳಿ ಎಬ್ಬಿಸಿದ ಯಾದವೀ ಕಲಹ: ಅಧ್ಯಕ್ಷರ ಅಭಯ ಯಾರಿಗೆ ಸಿದ್ದುಗಾ, ಡಿಕೆಗಾ?

ಸಮಾವೇಶ: 

ಮಂಗಳವಾರ ಬೆಳಗಾವಿಯಲ್ಲಿ ನಡೆಯುವ ಸಮಾವೇಶಕ್ಕೆ ಸುಮಾರು 60ಕ್ಕೂ ಅಧಿಕ ರಾಷ್ಟ್ರೀಯ ಮಟ್ಟದ ನಾಯಕರು, ಅತಿಥಿಗಳು, ಸಂಸದರು, ಕಾರ್ಯಕಾರಿ ಸಮಿತಿ ಸದಸ್ಯರು ಆಗಮಿಸುತ್ತಿದ್ದಾರೆ. ಸಚಿವರು, ಶಾಸಕರು, ಹಿರಿಯ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ದೆಹಲಿ ಚುನಾವಣೆ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸಿಎಂ ಹೆಸರಿರದ ಬಗ್ಗೆ ಪ್ರತಿಕ್ರಿಯಿಸಿ, ನಾನೇ ಖುದ್ದಾಗಿ ದೆಹಲಿಗೆ ಹೋಗಿ ಮಹಿಳೆಯರಿಗೆ ತಿಂಗಳಿಗೆ ₹2,500 ನೀಡುವ ಪ್ಯಾರಿ ದೀದಿ ಯೋಜನೆ ಘೋಷಣೆ ಮಾಡಿ ಬಂದಿದ್ದೇನೆ. ಸಿದ್ದರಾಮಯ್ಯ ಅವರು ಬಜೆಟ್ ತಯಾರಿಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಎಐಸಿಸಿ ಸಮಯ ನೀಡಿದೆ. ಸ್ಟಾರ್‌ ಪ್ರಚಾರಕ ಪಟ್ಟಿಯಲ್ಲಿ ನನ್ನ ಹೆಸರಿದೆ ಎಂದು ತಿಳಿಸಿದರು.