ಸೋನಿಯಾ ಗಾಂಧಿ-ಗುಲಾಂ ನಬಿ ಅಜಾದ್ ಭೇಟಿ ಅಂತ್ಯ, ನಾಯಕತ್ವದ ಬಗ್ಗೆ ಪ್ರಶ್ನೆಯಿಲ್ಲ ಎಂದ ಆಜಾದ್!
ಹಿರಿಯ ನಾಯಕ ಗುಲಾಂ ನಬಿ ಅಜಾದ್ ಭೇಟಿ ಮಾಡಿದ ಸೋನಿಯಾ ಗಾಂಧಿ
ನಾಯಕತ್ವದ ಕುರಿತಾಗಿ ಎಂದಿಗೂ ಪ್ರಶ್ನೆ ಮಾಡಿಲ್ಲ ಎಂದ ಆಜಾದ್
ಒಗ್ಗಟ್ಟಿನಿಂದ ಹೋರಾಟ ನಡೆಸುವ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದ ಹಿರಿಯ ನಾಯಕ
ನವದೆಹಲಿ (ಮಾ.18): ಇನ್ನೇನು ಕಾಂಗ್ರೆಸ್ (Congress) ಪಕ್ಷದ ಬಂಡಾಯ ಭುಗಿಲೇಳಲಿದೆ ಎನ್ನುವ ಸಮಯದಲ್ಲಿ ಸಮಸ್ಯೆ ಇತ್ಯರ್ಥಪಡಿಸಲು ಇಳಿದಿದ್ದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ (Congress president Sonia Gandhi ) ಈ ನಿಟ್ಟಿನಲ್ಲಿ ಅಲ್ಪ ಯಶಸ್ಸು ಕಂಡಿರುವ ಸಾಧ್ಯತೆ ಕಾಣುತ್ತಿದೆ. ಶನಿವಾರ ಪಕ್ಷದ ನಾಯಕ ಗುಲಾಂ ನಬಿ ಆಜಾದ್ (Ghulam Nabi Azad ) ಅವರನ್ನು ಭೇಟಿಯಾಗಿ ಸೋನಿಯಾ ಗಾಂಧಿ ಮಾತುಕತೆ ನಡೆಸಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕರ ಕೋರ್ ಗ್ರೂಪ್ ಆಗಿರುವ ಜಿ.23 (Senior Leaders Core Group G23), ಪಂಚ ರಾಜ್ಯ ಚುನಾವಣೆಯಲ್ಲಿ ಪಕ್ಷದ ಸೋಲಿನ ಬಳಿಕ ಸತತ ಮೂರು ಸಭೆಗಳನ್ನು ನಡೆಸಿದ ಬೆನ್ನಲ್ಲಿಯೇ ಈ ಭೇಟಿ ಮಹತ್ವ ಪಡೆದುಕೊಂಡಿತ್ತು.
"ಸೋನಿಯಾ ಗಾಂಧಿಯವರೊಂದಿಗಿನ ಸಭೆಯು ಉತ್ತಮವಾಗಿತ್ತು. ಕಾಂಗ್ರೆಸ್ ಪಕ್ಷದ ಎಲ್ಲಾ ಸದಸ್ಯರು ಅವರು ಅಧ್ಯಕ್ಷರಾಗಿ ಮುಂದುವರಿಯಬೇಕೆಂದು ಸರ್ವಾನುಮತದಿಂದ ನಿರ್ಧರಿಸಿದ್ದಾರೆ. ನಾವು ಕೆಲವು ಸಲಹೆಗಳನ್ನು ಹಂಚಿಕೊಂಡಿದ್ದೇವೆ," ಎಂದು ಗುಲಾಂ ನಬಿ ಆಜಾದ್ ಸಭೆಯ ಬಳಿಕ ಹೇಳಿದ್ದಾರೆ. ಆ ಮೂಲಕ ಪಕ್ಷದೊಳಗಿನ ಬಂಡಾಯದ ಮಾತುಗಳನ್ನು ತಳ್ಳಿಹಾಕಿದ್ದಾರೆ. ಐದು ರಾಜ್ಯಗಳಲ್ಲಿನ ಸೋಲಿಗೆ ಕಾರಣಗಳ ಕುರಿತು ಕಾರ್ಯಕಾರಿ ಸಮಿತಿಗೆ ಸಲಹೆಗಳನ್ನು ಕೇಳಲಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಹೋರಾಡಲು ಚರ್ಚೆ ನಡೆಸಲಾಗಿದೆ... ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ," ಎಂದು ಹೇಳಿದರು.
ಆಜಾದ್ ಮತ್ತು ಇತರ ಭಿನ್ನಮತೀಯ ನಾಯಕರು ಬುಧವಾರದಿಂದ ಸರಣಿ ಸಭೆಗಳನ್ನು ನಡೆಸಿದ್ದಾರೆ, ಪಕ್ಷದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಭಾನುವಾರದ ಸಭೆಯಲ್ಲಿ ಗಾಂಧಿ-ಕುಟುಂಬದ ನಿಷ್ಠಾವಂತರ ನಿಲುವಿನಿಂದ ಇವರು ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗಿದೆ. ಸಾಲು ಸಾಲು ಚುನಾವಣೆಗಳಲ್ಲಿ ಸೋಲು ಕಂಡ ಹೊರತಾಗಿಯೂ ಇನ್ನೂ ಗಾಂಧಿ ಕುಟುಂಬದ ನಾಯಕತ್ವ ಮುಂದುವರಿಸಲು ಒಪ್ಪಿರುವುದಕ್ಕೆ ಹಿರಿಯ ನಾಯಕರು ಬೇಸರ ವ್ಯಕ್ತಪಡಿಸಿದ್ದಾರೆ.
ಕಳೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ, ಸೋನಿಯಾ ಗಾಂಧಿ, ತಮ್ಮ ಮಕ್ಕಳಾದ ರಾಹುಲ್ ಗಾಂಧಿ (Rahul Gandhi) ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಅವರು ಪಕ್ಷದೊಂದಿಗಿನ ಎಲ್ಲಾ ಪ್ರಮುಖ ಹುದ್ದೆಗಳಿಂದ ಕೆಳಗಿಳಿಯುವ ಸೋನಿಯಾ ಗಾಂಧಿಯವರ ಪ್ರಸ್ತಾಪವನ್ನು ಪಕ್ಷದ ನಾಯಕರು ತಿರಸ್ಕರಿಸಿದ್ದರು. ಸತತವಾಗಿ ಚುನಾವಣೆಯಲ್ಲಿ ಎದುರಿಸಿದ ಸೋಲುಗಳ ನಂತರ, ಜಿ23 ನಾಯಕರು 2020ರಲ್ಲಿ ಸೋನಿಯಾ ಗಾಂಧಿಗೆ ಪತ್ರ ಬರೆದು ಕಾಂಗ್ರೆಸ್ ಪಕ್ಷದ ಪುನರ್ ರಚನೆಯ ಅಗತ್ಯವಿದೆ ಎಂದು ಒತ್ತಾಯಿಸಿದ್ದರು. ಅಂದಿನಿಂದಲೂ ಸತತವಾಗಿ ಕಾಂಗ್ರೆಸ್ ನಾಯಕತ್ವದಲ್ಲಿ ಬದಲಾವಣೆ ಆಗಬೇಕು ಎಂದು ಜಿ23 ಪ್ರಯತ್ನಿಸುತ್ತಿದೆ. ಆದರೆ, ಇವರ ಮಾತಿಗೆ ಬೆಲೆ ಸಿಗದ ಕಾರಣ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಪಂಜಾಬ್ ನಲ್ಲಿ ದಯನೀಯ ಸೋಲು ಕಂಡರೆ, ಉತ್ತರ ಪ್ರದೇಶ ಹಾಗೂ ಇತರ ರಾಜ್ಯಗಳಲ್ಲಿ ಬಹುತೇಕವಾಗಿ ಕಾಂಗ್ರೆಸ್ ನಾಮಾವಶೇಷವಾಗಿದೆ.
ಬಿಕ್ಕಟ್ಟು ಶಮನಕ್ಕೆ Sonia Gandhi ಎಂಟ್ರಿ, ಗುಲಾಂ ನಬಿ ಆಜಾದ್ ಜೊತೆ ಇಂದು ಮಾತುಕತೆ!
ಗುರುವಾರ ಜಿ23 ಸಭೆಯಲ್ಲಿ ಭಾಗವಹಿಸಿದ್ದ ಹರಿಯಾಣ ಮಾಜಿ ಮುಖ್ಯಮಂತ್ರಿ ಭೂಪೇಂದರ್ ಸಿಂಗ್ ಹೂಡಾ (Bhupender Singh Hooda) ಅವರನ್ನು ರಾಹುಲ್ ಗಾಂಧಿ ಭೇಟಿ ಮಾಡಿದ್ದರು. ಈ ಮಾತುಕತೆಯ ವೇಳೆ ಹೂಡಾ ಪಕ್ಷದಲ್ಲಿ ಯಾರು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂಬುದರ ಕುರಿತು ಸ್ಪಷ್ಟನೆ ಕೇಳಿದರು ಎಂದು ಮೂಲಗಳು ತಿಳಿಸಿವೆ. ಸಾಮೂಹಿಕವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಗತ್ಯವನ್ನು ಒತ್ತಿಹೇಳಿರುವ ಹೂಡಾ, ಮುಖಂಡರು ಪಕ್ಷದ ನಿರ್ಧಾರಗಳ ಬಗ್ಗೆ ಪತ್ರಿಕೆಗಳಿಂದ ಆಗಾಗ್ಗೆ ತಿಳಿದುಕೊಳ್ಳುತ್ತಾರೆ ಎಂದು ರಾಹುಲ್ ಗಾಂಧಿಗೆ ತಿಳಿಸಿದರು.
G-23: ಆಜಾದ್ ಮನೆಯಲ್ಲಿ 2ನೇ ಸಾರಿ ಸಭೆ ಸೇರಿದ ನಾಯಕರು, ಕೈ ಪಟ್ಟ ಬದಲು?
ಇದೇ ವೇಳೆ ಜಿ-23 ನಾಯಕರು ಯಾವುದೇ "ಪಕ್ಷ ವಿರೋಧಿ ಚಟುವಟಿಕೆಗಳನ್ನು" ಮಾಡಿಲ್ಲ ಎಂದು ಭೂಪೇಂದರ್ ಸಿಂಗ್ ಹೂಡಾ ಹೇಳಿದರು, ಸೋನಿಯಾ ಗಾಂಧಿ ಅವರಿಗೆ ತಿಳಿಸಿದ ನಂತರವೇ ಬಣದ ಸಭೆ ನಡೆಸಲಾಗಿದೆ ಎಂದು ರಾಹುಲ್ ಗಾಂಧಿ ಅವರಿಗೆ ಹೇಳಿದ್ದಾರೆ.