ಪ್ರಜ್ವಲ್ ರೇವಣ್ಣರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ: ಸಚಿವ ಜೋಶಿ
ಪ್ರಜ್ವಲ್‌ರನ್ನು ಎಸ್ಐಟಿ ವಶಕ್ಕೆ ನೀಡಲಾಗಿದೆ. ಸರಿಯಾದ ರೀತಿಯಲ್ಲಿ ತನಿಖೆಯಾಗಬೇಕು. ಭಾರತದಲ್ಲಿ ಮಹಿಳೆಯರನ್ನು ನಾವು ಗೌರವದಿಂದ ಕಾಣುತ್ತೇವೆ. ಈ ರೀತಿಯ ಘಟನೆ ನಡೆದಿರುವುದು ಖಂಡನೀಯ. ಇದನ್ನು ಅತ್ಯಂತ ಕಟ್ಟುನಿಟ್ಟಾಗಿ ತನಿಖೆಗೆ ಒಳಪಡಿಸಬೇಕು. ತ್ವರಿತಗತಿಯಲ್ಲಿ ತನಿಖೆ ಮುಗಿಸಿ ಗರಿಷ್ಠ ಶಿಕ್ಷೆ ಕೊಡುವಂತಾಗಬೇಕು. ಈ ನಿಟ್ಟಿನಲ್ಲಿ ನ್ಯಾಯಾಂಗ ವ್ಯವಸ್ಥೆ ಸೂಕ್ತ ಕ್ರಮಕೈಗೊಳ್ಳಲಿದೆ ಎನ್ನುವ ಭರವಸೆಯಿದೆ ಎಂದರ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಹುಬ್ಬಳ್ಳಿ(ಜೂ.02): ಸಂಸದ ಪ್ರಜ್ವಲ್ ರೇವಣ್ಣ ಕ್ಷಮಿಸಲಾರದಂಥ ಅಪರಾಧ ಮಾಡಿದ್ದಾರೆ. ಹೀಗಾಗಿ ಅವರು ಕ್ಷಮೆಗೆ ಅರ್ಹರಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಜ್ವಲ್‌ರನ್ನು ಎಸ್ಐಟಿ ವಶಕ್ಕೆ ನೀಡಲಾಗಿದೆ. ಸರಿಯಾದ ರೀತಿಯಲ್ಲಿ ತನಿಖೆಯಾಗಬೇಕು. ಭಾರತದಲ್ಲಿ ಮಹಿಳೆಯರನ್ನು ನಾವು ಗೌರವದಿಂದ ಕಾಣುತ್ತೇವೆ. ಈ ರೀತಿಯ ಘಟನೆ ನಡೆದಿರುವುದು ಖಂಡನೀಯ. ಇದನ್ನು ಅತ್ಯಂತ ಕಟ್ಟುನಿಟ್ಟಾಗಿ ತನಿಖೆಗೆ ಒಳಪಡಿಸಬೇಕು. ತ್ವರಿತಗತಿಯಲ್ಲಿ ತನಿಖೆ ಮುಗಿಸಿ ಗರಿಷ್ಠ ಶಿಕ್ಷೆ ಕೊಡುವಂತಾಗಬೇಕು. ಈ ನಿಟ್ಟಿನಲ್ಲಿ ನ್ಯಾಯಾಂಗ ವ್ಯವಸ್ಥೆ ಸೂಕ್ತ ಕ್ರಮಕೈಗೊಳ್ಳಲಿದೆ ಎನ್ನುವ ಭರವಸೆಯಿದೆ ಎಂದರು.
ಶಿಕ್ಷೆ ಆಗಲೇಬೇಕು:
ಪ್ರಜ್ವಲ್ ರಾಜ್ಯದ ಕ್ಷಮೆ ಕೇಳಿದ ವಿಚಾರಕ್ಕೆ ಉತ್ತರಿಸಿದ ಜೋಶಿ, ಆರೋಪಿ ಸ್ಥಾನದಲ್ಲಿದ್ದವರು ಕ್ಷಮೆ ಕೇಳಿದ ಕೂಡಲೇ ಬಿಟ್ಟುಬಿಡಲು ಆಗುತ್ತದೆಯೇ? ಏಕೆ ಕ್ಷಮೆ ಕೇಳಿದರು ಎಂಬುದನ್ನು ಉತ್ತರಿಸಲಿ. ಕ್ಷಮೆ ಕೇಳುವುದಿದ್ದರೆ ಸಂತ್ರಸ್ತೆಯರ ಬಳಿ ಕ್ಷಮೆ ಕೇಳಲಿ. ಪ್ರಜ್ವಲ್ ಕ್ಷಮೆಗೆ ಅರ್ಹರಲ್ಲ. ಅವರಿಗೆ ಶಿಕ್ಷೆ ಆಗಲೇ ಬೇಕು ಎಂದರು.
ಪೆನ್‌ಡ್ರೈವ್ ಪ್ರಕರಣದಲ್ಲಿ ಕಂಪ್ಲೀಟ್ ಫ್ಯಾಮಿಲಿ ಲಾಕ್..? ತಾಯಿ ಭವಾನಿ, ಮಗ ಪ್ರಜ್ವಲ್‌ಗೆ ‘ಬ್ಯಾಡ್ ಫ್ರೈಡೆ’..!
ತೆಲಂಗಾಣ ಚುನಾವಣೆಗೆ ಬಳಕೆ:
ವಾಲ್ಮೀಕಿ ನಿಗಮದಲ್ಲಿ ಬಹುದೊಡ್ಡ ಹಗರಣವಾಗಿದೆ. ಸರ್ಕಾರದ ಹಸ್ತಕ್ಷೇಪವಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಯಾವ ಕಾರಣಕ್ಕೆ ನಿಗಮದ ಹಣ ಬೇರೆ ಖಾತೆಗೆ ವರ್ಗಾವಣೆಯಾಯಿತು ಎಂದು ಸರ್ಕಾರ ಹೇಳಿಲ್ಲ. ಈ ಹಣವನ್ನು ತೆಲಂಗಾಣ ಚುನಾವಣೆಗೆ ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿದ ಅವರು, ಅಧಿಕಾರಿ ಆತ್ಮಹತ್ಯೆ ಮಾಡಿಕೊಳ್ಳದೆ ಇದ್ದಲ್ಲಿ ಈ ಹಗರಣ ಮುಚ್ಚಿ ಹೋಗುತ್ತಿತ್ತು. ಇದು ದಪ್ಪ ಚರ್ಮದ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.
ಸಂತೋಷ್ ಪಾಟೀಲ ಮಾದರಿಯಲ್ಲಿ ಆತ್ಮಹತ್ಯೆಯಾಗಿದೆ. ಮತ್ತೊಂದು ಕಡೆ ಚೆಕ್ ಮೂಲಕ ಭ್ರಷ್ಟಾಚಾರವಾಗಿದೆ. ಇದಕ್ಕಿಂತ ಗಂಭೀರತೆ ಏನು ಬೇಕು. ಈ ಹಿಂದೆ ಇಂದಿರಾಗಾಂಧಿ ಕಾಲದಲ್ಲಿ ನಗರವಾಲಾ ಪ್ರಕರಣ ಆಗಿತ್ತು. ಇದು ಅದಕ್ಕೆ ಹೋಲುತ್ತದೆ ಎಂದರು.
ಕೇರಳದಲ್ಲಿ ನನ್ನ ಹಾಗೂ ಸಿಎಂ ನಾಶಕ್ಕಾಗಿ ಶತ್ರು ಭೈರವಿ ಯಾಗ ಮಾಡುತ್ತಿದ್ದಾರೆ ಎಂಬ ಡಿಸಿಎಂ ಡಿ.ಕೆ. ಶಿವಕುಮಾರ ಆರೋಪಕ್ಕೆ ತಿರುಗೇಟು ನೀಡಿದ ಜೋಶಿ, ನೀವು ಸರಿಯಾಗಿದ್ದರೆ ಯಾಕೆ ಆಗುತ್ತೆ. ದೇವರು ಇರುವುದು ಆಶೀರ್ವಾದ ಮಾಡಲು, ಯಾವುದೇ ಕೆಡಕು ಮಾಡಲು ಅಲ್ಲ. ನಾನು ಗೆಲ್ಲಲಿ ಎಂದು ಪೂಜೆ ಮಾಡುತ್ತೇನೆ. ಮತ್ತೊಬ್ಬರು ಸೋಲಲಿ ಎಂದು ಪೂಜೆ ಮಾಡಿದರೆ ದೇವರು ಮಾನ್ಯ ಮಾಡುವುದಿಲ್ಲ ಎಂದರು.