ಹೈಕೋರ್ಟ್ ತೀರ್ಪಿನಿಂದ ಸಿಎಂ ಸಿದ್ದರಾಮಯ್ಯ, ಸರ್ಕಾರಕ್ಕೆ ತೊಂದರೆ ಇಲ್ಲ: ಸಚಿವ ಸತೀಶ್ ಜಾರಕಿಹೊಳಿ
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್ ತನಿಖೆಗೆ ಅನುಮತಿ ನೀಡಿದೇ ಅಷ್ಟೇ. ಆದರೆ, ಹೈಕೋರ್ಟ್ ತೀರ್ಪಿನಿಂದ ಸಿಎಂ ಸಿದ್ದರಾಮಯ್ಯ ಮತ್ತು ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಬೆಳಗಾವಿ (ಸೆ.25): ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್ ತನಿಖೆಗೆ ಅನುಮತಿ ನೀಡಿದೇ ಅಷ್ಟೇ. ಆದರೆ, ಹೈಕೋರ್ಟ್ ತೀರ್ಪಿನಿಂದ ಸಿಎಂ ಸಿದ್ದರಾಮಯ್ಯ ಮತ್ತು ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್ ತನಿಖೆಗೆ ಅನುಮತಿ ನೀಡಿದೇ ಅಷ್ಟೇ. ಈ ಕುರಿತು ಸುಪ್ರೀಂಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ತನಿಖೆಯಾಗಲಿ. ತಪ್ಪು ಕಂಡುಬಂದರೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕಾಗುತ್ತದೆ ಎಂದರು.
ಎಲ್ಲಾ ಶಾಸಕರು, ಸಚಿವರು, ಹೈಕಮಾಂಡ್ ಕೂಡ ಸಿಎಂ ಸಿದ್ದರಾಮಯ್ಯ ಅವರ ಪರ ಇದ್ದು, ಸಿಎಂ ಆಗಿ ಸ್ಥಾನದಲ್ಲಿ ಅವರೇ ಮುಂದುವರಿಯುತ್ತಾರೆ. ರಾಜೀನಾಮೆ ನೀಡುವ ಪ್ರಶ್ನೆಯೇ ಬರಲ್ಲ. ಹೈಕೋರ್ಟ್ ತನಿಖೆ ಮುಂದುವರಿಸಬೇಕೆಂದು ಆದೇಶಿಸಿದೆ. ತನಿಖೆಯಾಗಲಿ, ತನಿಖೆಗೆ ಯಾರದ್ದೂ ಅಡ್ಡಿ ಇಲ್ಲ. ಮುಂದೆ ಯಾವ ರೀತಿಯ ಹೋರಾಟ ಮಾಡಬೇಕೆಂದು ಸಿಎಂ ಸಿದ್ದರಾಮಯ್ಯನವರೇ ನಿರ್ಧರಿಸುತ್ತಾರೆ ಎಂದು ತಿಳಿಸಿದರು. ಬಿಜೆಪಿಯವರು ಬೀದಿಯಲ್ಲಿ ಪ್ರತಿಭಟನೆ ಮಾಡಿ ಸಿಎಂ ಸಿದ್ದರಾಮಯ್ಯನವರು ರಾಜೀನಾಮೆ ನೀಡಿ ಎಂದರೆ ರಾಜೀನಾಮೆ ನೀಡಲು ಆಗಲ್ಲ. ಸರ್ಕಾರದ ಹಣ ದುರ್ಬಳಕೆ ಆಗಿದ್ದರೆ ರಾಜೀನಾಮೆ ಕೇಳಬಹುದಿತ್ತು.
ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಮುಡಾ ನಿವೇಶನ ಕೊಟ್ಟಿದ್ದಾರೆ. ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಈ ಹಿಂದಿನ ರಾಜ್ಯಪಾಲರು ಯಾರೂ ಸರ್ಕಾರಕ್ಕೆ ಎರಡು ದಿನಕ್ಕೊಂದು ಮಾಹಿತಿ ಕೇಳಿಲ್ಲ. ಕಾಂಗ್ರೆಸ್ ಸರ್ಕಾರ ಇರುವ ರಾಜ್ಯದಲ್ಲಿ ಬಿಜೆಪಿಯು ರಾಜ್ಯಪಾಲರನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ. ರಾಜಭವನದ ದುರ್ಬಳಕೆ ಮೂಲಕ ವಿರೋಧ ಪಕ್ಷಗಳು ಸರ್ಕಾರವನ್ನು ಹಣಿಯುವ ಸಂಚನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶಾದ್ಯಂತ ನಡೆಸುತ್ತಿದೆ ಎಂದು ಗಂಭೀರ ಆರೋಪ ಮಾಡಿದರು. ಸಿಎಂ ಸಿದ್ದರಾಮಯ್ಯ ಅವರು ಸೆ.25ರಂದು ಶಾಸಕಾಂಗ ಸಭೆ ಕರೆದಿದ್ದಾರೆ. ಹಾಗಾಗಿ, ಬೆಂಗಳೂರಿಗೆ ಬುಲಾವ್ ಬಂದಿದೆಯೇ ಹೊರತು ದೆಹಲಿಗೆ ಅಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ರಾಜ್ಯಪಾಲರ ಷಡ್ಯಂತ್ರಕ್ಕೆ ನಾವು ಬಲಿಯಾಗಲ್ಲ: ಸಚಿವ ಆರ್.ಬಿ.ತಿಮ್ಮಾಪುರ
25 ಕೇಂದ್ರ ಸಚಿವರ ಮೇಲೆ ಭ್ರಷ್ಟಾಚಾರ ಆರೋಪವಿದೆ: ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಸಾಕಷ್ಟು ಜನಪ್ರತಿನಿಧಿಗಳ ಬಗ್ಗೆ ಭ್ರಷ್ಟಾಚಾರದ ಆರೋಪ ಮಾಡಿ ನಂತರ ಅವರಿಗೆ ಅವಶ್ಯಕತೆ ಇದ್ದಾಗ ಅವರನ್ನೇ ತಮ್ಮ ಪಕ್ಕದಲ್ಲಿ ಕುರಿಸಿಕೊಂಡು ರಾಜಕಾರಣ ಮಾಡುತ್ತಿರುವ ಉದಾಹರಣೆಗಳು ಸಾಕಷ್ಟಿವೆ. ಕೇಂದ್ರದ 25 ಸಚಿವರ ಮೇಲೆ ಭ್ರಷ್ಟಾಚಾರ ಆರೋಪಗಳಿವೆ. ಅವರೆಲ್ಲರೂ ಅಧಿಕಾರದಲ್ಲಿ ಇದ್ದಾರೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಗಮನ ಹರಿಸಬೇಕು ಎಂದು ಸಚಿವ ಸತೀಶ ತಿರುಗೇಟು ನೀಡಿದರು.