ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ, ಕಾಂಗ್ರೆಸ್ ನೆಲಸಮ ಮಾಡಲು ಹೋಗಬೇಡಿ: ಸುರ್ಜೇವಾಲಾ
ಅಧಿಕಾರ ಹಂಚಿಕೆ, ಬಣ ರಾಜಕೀಯ ಹಾಗೂ ಜಾತಿಗಣತಿ ವರದಿಗಳ ಕುರಿತು ಬಹಿರಂಗ ಹೇಳಿಕೆ ನೀಡುತ್ತಿರುವವರ ಬಗ್ಗೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ
ಬೆಂಗಳೂರು(ಜ.14): 'ಕೆಲ ನಾಯಕರಲ್ಲಿ ಶಿಸ್ತಿಲ್ಲ, ನಾಯಕರೇ ಶಿಸ್ತು ಮೈಗೂಡಿಸಿಕೊಳ್ಳದಿದ್ದರೆ ಕಾರ್ಯಕರ್ತರು ಶಿಸ್ತಾಗಿ ಇರಲು ಹೇಗೆ ಸಾಧ್ಯ? ಪಕ್ಷಕ್ಕಿಂತ ದೊಡ್ಡವರೆಂದು ಭಾವಿಸಬಾರದು. ಪಕ್ಷ ನೆಲಸಮ ಮಾಡಲು ಹೋಗಬೇಡಿ' ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ರಾಜ್ಯ ನಾಯಕರಿಗೆ ನೀಡಿರುವ ಖಡಕ್ ಎಚ್ಚರಿಕೆ ಇದು.
ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಅಧಿಕಾರ ಹಂಚಿಕೆ, ಬಣ ರಾಜಕೀಯ ಹಾಗೂ ಜಾತಿಗಣತಿ ವರದಿಗಳ ಕುರಿತು ಬಹಿರಂಗ ಹೇಳಿಕೆ ನೀಡುತ್ತಿರುವವರ ಬಗ್ಗೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಿಎಂ ಬದಲಾವಣೆ ಬಗ್ಗೆ ಬಾಯಿ ಬಿಟ್ರೆ ಹುಷಾರ್: ರಣದೀಪ್ ಸಿಂಗ್ ಸುರ್ಜೇವಾಲಾ
ಶಾಸಕರು, ಸಚಿವರು, ನಾಯಕರು ಯಾರೂ ಪಕ್ಷದ ಶಿಸ್ತು ಮೀರಬಾರದು. ಪಕ್ಷ ತಾಯಿ ಇದ್ದಂತೆ ಸರ್ಕಾರ ಮಗು ಇದ್ದಂತೆ. ಯಾವ ನಾಯಕರೂ ಪಕ್ಷ ವನ್ನು ನೆಲಸಮ ಮಾಡುವ ಕೆಲಸಕ್ಕೆ ಕೈ ಹಾಕಬಾರದು. ಪಕ್ಷವನ್ನು ನೆಲಸಮ ಮಾಡಲು ಮುಂದಾದರೆ ನಾವು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ನಮ್ಮ ನಾಯಕರಲ್ಲಿ ಕೆಲವರಿಗೆ ಶಿಸ್ತು ಇಲ್ಲ. ಪಕ್ಷಕ್ಕಿಂತ ನಾವು ದೊಡ್ಡವರು ಎಂಬ ಭಾವನೆ ಕೆಲವರಲ್ಲಿ ಇದ್ದಂತಿದೆ. ಈಗಲೂ ನಾನು ಮನವಿ ಮಾಡುತ್ತೇನೆ. ಶಾಸಕರು, ನಾಯಕರು, ಸಚಿವರು ಯಾರೂ ಶಿಸ್ತು ಮೀರಬಾರದು. ಕಾರ್ಯಕರ್ತರನ್ನು ಗೌರವಯುತ ವಾಗಿ ಕಾಣಬೇಕು ಎಂದು ಮನವಿ ಮಾಡಿದರು.
ಜಾತಿಗಣತಿ ಪರ ಸಂದೇಶ ರವಾಣೆ: ಜಾತಿಗಣತಿ ವರದಿ ಬಗ್ಗೆ ಮಾತನಾಡಿದ ಅವರು, ಜಾತಿಗಣತಿ ವರದಿ ಯಾರ ವಿರುದ್ದವೂ ಅಲ್ಲ. ಎಲ್ಲರಿಗೂ ಅವರ ಹಕ್ಕುಗಳು ದೊರೆಯಬೇಕು. ಸಣ್ಣ ಸಮುದಾಯ ಗಳಿಗೂ ಹಕ್ಕುಗಳು ಸಿಗಬೇಕು ಎಂಬ ಕಾರಣಕ್ಕೆ ಮಾಡಲಾಗಿದೆ. ಇದು ಎಚ್.ಕೆ.ಪಾಟೀಲ್ ವಿರುದ್ಧವೋ ಅಥವಾ ಡಿ.ಕೆ.ಶಿವಕುಮಾರ್ ವಿರುದ್ಧವೋ ಅಲ್ಲ ಎಂದು ಹೇಳಿದರು. ತನ್ಮೂಲಕ ಪರೋಕ್ಷವಾಗಿ ಜಾತಿಗಣತಿ ಲಿಂಗಾಯತ, ಒಕ್ಕಲಿಗ ಸಮುದಾಯ ವಿರುದ್ಧವಲ್ಲ ಎಂಬ ಸಂದೇಶ ರವಾನಿಸಿದರು.
ರಾಹುಲ್, ಖರ್ಗೆ, ಸಿದ್ದು, ಡಿಕೆಶಿ ಇರುವವರೆಗೂ ಗ್ಯಾರಂಟಿ ಕಸಿಯುವ ಮಗ ಹುಟ್ಟಲ್ಲ: ಸುರ್ಜೇವಾಲಾ
ಪಕ್ಷ ಸಂಘಟನೆಗೆ ಕೆಲಸ ಮಾಡಿ:
2025ನ್ನು ಪಕ್ಷ ಸಂಘಟನೆ ವರ್ಷ ಎಂದು ಘೋಷಿಸಿದ್ದೇವೆ. ಜ.21 ರಂದು ಬೆಳಗಾವಿಯಲ್ಲಿ ನಡೆಯಲಿರುವ ಜೈ ಬಾವು, ಜೈ ಭೀಮ್, ಜೈ ಸಂವಿಧಾನ ಸಮಾವೇಶ ಯಶಸ್ವಿಗೊಳಿಸಿ. ಇದರ ಜತೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಚರ್ಚೆ ಮಾಡಿ ರಾಜ್ಯದಲ್ಲಿ 100 ಗಾಂಧಿ ಭಾರತ ಕಚೇರಿಗಳನ್ನು ನಿರ್ಮಿಸಲು ತೀರ್ಮಾನಿಸಿದ್ದಾರೆ.
ಸಭೆಗೆ ರಾಜಣ್ಣ, ಪರಂ ಗೈರು
ಸರ್ವ ಸದಸ್ಯರು ಹಾಗೂ ಪದಾಧಿಕಾರಿಗಳ ಸಭೆಗೆ ಸಚಿವರಾದ ಕೆ.ಎನ್.ರಾಜಣ್ಣ, ಡಾ.ಜಿ. ಪರಮೇಶ್ವರ್ ಅವರು ಗೈರಾಗಿದ್ದರು. ಬಳಿಕ ಸಿಎಲ್‌ಪಿ ಸಭೆಯಲ್ಲಿ ಡಾ.ಜಿ.ಪರಮೇಶ್ವರ್ ಅವರು ಪಾಲ್ಗೊಂಡಿದ್ದರು. ಈ ಬಗ್ಗೆ ಮಾತನಾಡಿದ ಸುರ್ಜೆವಾಲಾ, ಪರಮೇಶ್ವರ್ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದವರು. ಪಕ್ಷವನ್ನು ಮುನ್ನಡೆಸಿದ್ದ ಅವರಿಗೆ ತಿಸ್ತಿನ ಬಗ್ಗೆ ಅರಿವಿದೆ ಎಂದಷ್ಟೇ ಹೇಳಿದರು.