ವಿಧಾನಪರಿಷತ್‌ಗೆ ಸರ್ಕಾರದಿಂದ ಸದಸ್ಯರ ನಾಮನಿರ್ದೇಶನ ವಿಚಾರವಾಗಿ ಯಾವುದೇ ವಿವಾದ ಸೃಷ್ಟಿಯಾಗಿಲ್ಲ. ಹೀಗಾಗಿ ಈ ವಿಚಾರದಲ್ಲಿ ಅಲ್ಪಸಂಖ್ಯಾತರಿಗೆ ಅನ್ಯಾಯ ಎಂಬುದು ಸರಿಯಲ್ಲ ಎಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್‌ 

ಬೆಂಗಳೂರು(ಆ.07): ಸರ್ಕಾರದಿಂದ ರಾಜ್ಯಪಾಲರಿಗೆ ಮನ್ಸೂರ್‌ ಅಲಿ ಖಾನ್‌ ಸೇರಿದಂತೆ ಯಾವ ಹೆಸರುಗಳನ್ನೂ ಶಿಫಾರಸು ಮಾಡಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್‌ ಹೇಳಿದ್ದಾರೆ.

ಭಾನುವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಪರಿಷತ್‌ಗೆ ಸರ್ಕಾರದಿಂದ ಸದಸ್ಯರ ನಾಮನಿರ್ದೇಶನ ವಿಚಾರವಾಗಿ ಯಾವುದೇ ವಿವಾದ ಸೃಷ್ಟಿಯಾಗಿಲ್ಲ. ಹೀಗಾಗಿ ಈ ವಿಚಾರದಲ್ಲಿ ಅಲ್ಪಸಂಖ್ಯಾತರಿಗೆ ಅನ್ಯಾಯ ಎಂಬುದು ಸರಿಯಲ್ಲ ಎಂದರು.

ಮೋದಿ ಮ್ಯಾಜಿಕ್‌ ರಾಜ್ಯದಲ್ಲಿ ನಡೆಯಲ್ಲ, ಬೊಮ್ಮಾಯಿ ರಿಮೋಟ್‌ ಕಂಟ್ರೋಲ್‌ ಸಿಎಂ: ಸಲೀಂ ಅಹಮದ್‌

ರಾಜ್ಯಪಾಲರ ಕಚೇರಿಯು ಸ್ಪಷ್ಟನೆ ಕೇಳಿರುವ ಬಗ್ಗೆ ಮಾಧ್ಯಮಗಳಲ್ಲಿ ನೋಡಿದ್ದೇನೆ. ಆದರೆ ಸರ್ಕಾರ ಮನ್ಸೂರ್‌ ಅಲಿ ಖಾನ್‌ ಸೇರಿದಂತೆ ಯಾವ ಹೆಸರನ್ನೂ ಇನ್ನೂ ಶಿಫಾರಸು ಮಾಡಿಲ್ಲ. ಅಲ್ಪಸಂಖ್ಯಾತ ಸಮುದಾಯದಿಂದಲೂ ಯಾರ ಹೆಸರನ್ನೂ ಸೂಚಿಸಿಲ್ಲ. ನಾಮನಿರ್ದೇಶನದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ರಾಜ್ಯಪಾಲರಿಗೆ ಪತ್ರ ಬರೆದಿಲ್ಲ. ಹೀಗಾಗಿ ಸಮುದಾಯಕ್ಕೆ ಅನ್ಯಾಯ ಎಂಬುದು ಅಪ್ರಸ್ತುತ ಎಂದರು.

ಎಂಎಲ್‌ಸಿ ನಾಮನಿರ್ದೇಶನದ ಶಿಫಾರಸು ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಇದರಲ್ಲಿ ಯಾವ ವಿವಾದವೂ ಇಲ್ಲ. ಹೈಕಮಾಂಡ್‌ ಈ ಬಗ್ಗೆ ನಿರ್ಧಾರ ಮಾಡಲಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.