Asianet Suvarna News Asianet Suvarna News

ರೈಲು ಟಿಕೆಟ್‌ಗೂ ಪಕ್ಷದಲ್ಲಿ ಹಣವಿಲ್ಲ: ಸೋನಿಯಾ, ರಾಹುಲ್‌, ಖರ್ಗೆ ಅಳಲು..!

ಪಕ್ಷದ ಎಲ್ಲಾ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ. ಈ ಕ್ರಮವು ಕಾಂಗ್ರೆಸ್ ಮೇಲೆ ಮಾತ್ರವಲ್ಲದೆ ಭಾರತದ ಪ್ರಜಾಪ್ರಭುತ್ವದ ಮೇಲೂ ಪರಿಣಾಮ ಬೀರಿದೆ, ನಾವು ಯಾವುದೇ ಪ್ರಚಾರ ಕಾರ್ಯವನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಚುನಾವಣೆಯಲ್ಲಿ ಹೋರಾಡುವ ನಮ್ಮ ಸಾಮರ್ಥ್ಯಕ್ಕೆ ಧಕ್ಕೆಯಾಗಿದೆ ಎಂಬುದು ಕಾಂಗ್ರೆಸ್‌ ನಾಯಕರ ಆರೋಪ 

No Money in the Party even for Train Tickets Says Congress Leaders grg
Author
First Published Mar 22, 2024, 5:33 AM IST

ನವದೆಹಲಿ(ಮಾ.22):  ಕಾಂಗ್ರೆಸ್‌ ಅನ್ನು ಆರ್ಥಿಕವಾಗಿ ದುರ್ಬಲಗೊಳಿಸಲು ಪ್ರಧಾನಿ ನರೇಂದ್ರ ಮೋದಿ ವ್ಯವಸ್ಥಿತ ಪ್ರಯತ್ನ ನಡೆಸುತ್ತಿದ್ದಾರೆ. ಲೋಕಸಭೆ ಚುನಾವಣೆ ಆರಂಭದ ಹೊತ್ತಿನಲ್ಲಿ ಕಾಂಗ್ರೆಸ್‌ ಬ್ಯಾಂಕ್‌ ಖಾತೆಗಳ ಮೇಲೆ ನಿರ್ಬಂಧ ಹೇರಿಸುವ ಮೂಲಕ ಅವರು ಇಂಥ ಕೃತ್ಯಗಳಲ್ಲಿ ತೊಡಗಿದ್ದಾರೆ ಎಂದು ಸೋನಿಯಾ ಗಾಂಧಿ ಅವರು ಗುರುವಾರ ಆರೋಪಿಸಿದ್ದಾರೆ.

ಸೋನಿಯಾ ಜತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರೂ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಕ್ಷದ ಎಲ್ಲಾ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ. ಈ ಕ್ರಮವು ಕಾಂಗ್ರೆಸ್ ಮೇಲೆ ಮಾತ್ರವಲ್ಲದೆ ಭಾರತದ ಪ್ರಜಾಪ್ರಭುತ್ವದ ಮೇಲೂ ಪರಿಣಾಮ ಬೀರಿದೆ, ನಾವು ಯಾವುದೇ ಪ್ರಚಾರ ಕಾರ್ಯವನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಚುನಾವಣೆಯಲ್ಲಿ ಹೋರಾಡುವ ನಮ್ಮ ಸಾಮರ್ಥ್ಯಕ್ಕೆ ಧಕ್ಕೆಯಾಗಿದೆ ಎಂದು ಆರೋಪಿಸಿದ್ದಾರೆ. ತೆರಿಗೆ ಕಟ್ಟಿಲ್ಲ ಎಂಬ ಕಾರಣಕ್ಕೆ ಇತ್ತೀಚೆಗೆ ಐಟಿ ಇಲಾಖೆ ಕಾಂಗ್ರೆಸ್‌ಗೆ 100 ಕೋಟಿ ರು. ದಂಡ ಹೇರಿ, 115 ಕೋಟಿ ರು.ಗಳನ್ನು ಜಪ್ತಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಕೆಂಡಾಮಂಡಲವಾಗಿದೆ.

Breaking: ಕಾಂಗ್ರೆಸ್‌ನ 2ನೇ ಪಟ್ಟಿ ಪ್ರಕಟ, ರಾಜ್ಯದ 17 ಅಭ್ಯರ್ಥಿಗಳ ಲಿಸ್ಟ್‌ ಔಟ್‌

ಸೋನಿಯಾ ಕಿಡಿ:

ಸೋನಿಯಾ ಗಾಂಧಿ ಮಾತನಾಡಿ, ‘ವಿಷಯ ತುಂಬಾ ಗಂಭೀರವಾಗಿದೆ ಮತ್ತು ಕಾಂಗ್ರೆಸ್‌ನ ಮೇಲೆ ಪರಿಣಾಮ ಬೀರುತ್ತದೆ. ಅದರ ಜತೆಗೆ ನಮ್ಮ ಪ್ರಜಾಪ್ರಭುತ್ವದ ಮೇಲೂ ಮೂಲಭೂತವಾಗಿ ಪರಿಣಾಮ ಬೀರುತ್ತಿದೆ. ಕಾಂಗ್ರೆಸ್ ಅನ್ನು ಆರ್ಥಿಕವಾಗಿ ದುರ್ಬಲಗೊಳಿಸಲು ಪ್ರಧಾನ ಮಂತ್ರಿಯಿಂದ ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ. ಸಾರ್ವಜನಿಕರಿಂದ ಸಂಗ್ರಹಿಸಿದ ಹಣವನ್ನು ಸ್ಥಗಿತಗೊಳಿಸಲಾಗುತ್ತಿದೆ ಮತ್ತು ನಮ್ಮ ಖಾತೆಗಳಿಂದ ಹಣವನ್ನು ಬಲವಂತವಾಗಿ ತೆಗೆದುಕೊಳ್ಳಲಾಗುತ್ತಿದೆ’ ಎಂದು ಕಿಡಿಕಾರಿದರು.

ಆದಾಗ್ಯೂ, ‘ಈ ಅತ್ಯಂತ ಸವಾಲಿನ ಸಂದರ್ಭಗಳಲ್ಲಿ ನಮ್ಮ ಚುನಾವಣಾ ಪ್ರಚಾರ ಕಾಪಾಡಿಕೊಳ್ಳಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇವೆ’ ಎಂದು ಸೋನಿಯಾ ನುಡಿದರು. ‘ಒಂದೆಡೆ, ಚುನಾವಣಾ ಬಾಂಡ್ ವಿವಾದವಿದೆ, ಇದನ್ನು ಸುಪ್ರೀಂ ಕೋರ್ಟ್ ಅಸಂವಿಧಾನಿಕ ಎಂದು ಘೋಷಿಸಿದೆ. ಚುನಾವಣಾ ಬಾಂಡ್‌ಗಳು ಬಿಜೆಪಿಗೆ ಭಾರಿ ಲಾಭವನ್ನುಂಟುಮಾಡಿದೆ, ಮತ್ತೊಂದೆಡೆ, ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಹಣಕಾಸು ನಿಧಿ ಮೇಲೆ ಆಕ್ರಮಣ ನಡೆದಿದೆ. ಇದು ಕಂಡು ಕೇಳರಿಯದಂಥದ್ದು’ ಎಂದರು.

ಖಾತೆ ನಿರ್ಬಂಧ ತೆರವು ಮಾಡಿ - ಖರ್ಗೆ:

ಮುಕ್ತ ಮತ್ತು ನ್ಯಾಯಸಮ್ಮತವಾದ ಚುನಾವಣೆಗಳು ಬೇಕಾದರೆ ಕಾಂಗ್ರೆಸ್‌ಗೆ ಬ್ಯಾಂಕ್‌ ಖಾತೆಗಳನ್ನು ಬಳಸಲು ಅವಕಾಶ ನೀಡಬೇಕು. ನ್ಯಾಯಯುತ ಚುನಾವಣೆ ನಡೆಸುವುದು ಅತ್ಯಗತ್ಯ. ಆದರೆ ಚುನಾವಣಾ ಹೋರಾಟದಲ್ಲಿ ಅಡೆತಡೆಗಳನ್ನು ಸೃಷ್ಟಿಸಲು ಕಾಂಗ್ರೆಸ್‌ನ ಖಾತೆಗಳನ್ನು ಫ್ರೀಜ್ ಮಾಡಲಾಗಿದೆ ಎಂದು ಖರ್ಗೆ ಆರೋಪಿಸಿದರು. ಅಧಿಕಾರದಲ್ಲಿರುವವರು ಸಾಂವಿಧಾನಿಕ ಸಂಸ್ಥೆಗಳ ಮೇಲೆ ಪ್ರತ್ಯಕ್ಷ ಅಥವಾ ಪರೋಕ್ಷ ನಿಯಂತ್ರಣ ಹೊಂದಿರಬಾರದು, ಅಧಿಕಾರದಲ್ಲಿರುವವರು ಸಂಪನ್ಮೂಲಗಳ ಮೇಲೆ ಏಕಸ್ವಾಮ್ಯ ಹೊಂದಿರಬಾರದು ಎಂದು ಅವರು ಹೇಳಿದರು.

ರೈಲು ಟಕೆಟ್‌ಗೂ ಹಣವಿಲ್ಲ- ರಾಹುಲ್‌:

ಖಾತೆಗಳ ಸ್ಥಗಿತವು ಪ್ರಧಾನಿ ಮತ್ತು ಗೃಹ ಸಚಿವರ ಕಾಂಗ್ರೆಸ್ ವಿರುದ್ಧದ ಕ್ರಿಮಿನಲ್ ಕ್ರಮ ಎಂದು ಬಣ್ಣಿಸಿದ ರಾಹುಲ್ ಗಾಂಧಿ, ‘ಇಂದು ಭಾರತದಲ್ಲಿ ಪ್ರಜಾಪ್ರಭುತ್ವವಿಲ್ಲ ಮತ್ತು ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಎಂಬ ಕಲ್ಪನೆಯು ಸಂಪೂರ್ಣ ಸುಳ್ಳು. ಪ್ರಜಾಪ್ರಭುತ್ವದ ಚೌಕಟ್ಟನ್ನು ರಕ್ಷಿಸಬೇಕಾದ ಸಂಸ್ಥೆಗಳಿವೆ. ಆದರೆ ಅವುಗಳಿಂದ ಏನೂ ಆಗುತ್ತಿಲ್ಲ’ ಎಂದು ಹೇಳಿದರು.

‘ಖಾತೆ ಸ್ಥಗಿತದಿಂದ ಯಾವುದೇ ಪ್ರಚಾರ ಚಟುವಟಿಕೆಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ. ಪಕ್ಷದ ವತಿಯಿಂದ ನಾಯಕರಿಗೆ ರೈಲು ಟಿಕೆಟ್ ಖರೀದಿಸಲು ಹಣವಿಲ್ಲದ ಕಾರಣ ದೇಶಾದ್ಯಂತ ಸಂಚರಿಸಲು ಸಾಧ್ಯವಾಗುತ್ತಿಲ್ಲ’ ಎಂದು ರಾಹುಲ್‌ ಅಳಲು ತೋಡಿಕೊಂಡರು.

Lok sabha election 2024: ಉತ್ತರ ಕನ್ನಡದಿಂದ ಅಂಜಲಿ ನಿಂಬಾಳ್ಕರ್‌ ಸ್ಪರ್ಧೆಗೆ ಕಾಂಗ್ರೆಸ್‌ನಲ್ಲೇ ವಿರೋಧ!

ಕಾಂಗ್ರೆಸ್‌ ವಕ್ತಾರ ಅಜಯ್‌ ಮಾಕನ್‌ ಮಾತನಾಡಿ, ‘ಜನಸಾಮಾನ್ಯರು ಕಾಂಗ್ರೆಸ್ ಪಕ್ಷಕ್ಕೆ ದೇಣಿಗೆ ನೀಡಿದ್ದರು. ಆದರೆ ಬಿಜೆಪಿಯವರು ನಮ್ಮ ಖಾತೆಗಳನ್ನು ಸ್ಥಗಿತಗೊಳಿಸಿ ಅವರಿಂದ 115.32 ಕೋಟಿ ರು.ಗಳನ್ನು ಬಲವಂತವಾಗಿ ಹಿಂಪಡೆಯುವ ಮೂಲಕ ಲೂಟಿ ಮಾಡಿದ್ದಾರೆ’ ಎಂದು ಆರೋಪಿಸಿದರು.

ಹಗರಣದ ಹಣ ಬಳಸಿ: ನಡ್ಡಾ ತಿರುಗೇಟು

‘ಐಟಿ ಇಲಾಖೆಯು ಸೂಕ್ತ ತೆರಿಗೆ ಕಟ್ಟದ ಕಾಂಗ್ರೆಸ್‌ಗೆ ದಂಡ ಹೇರಿದೆ. ಇಲಾಖೆ ತನ್ನ ಕೆಲಸವನ್ನು ತಾನು ಮಾಡಿದೆ. ಆದರೆ ಐತಿಹಾಸಿಕ ಸೋಲಿನ ಭೀತಿಯು ಕಾಂಗ್ರೆಸ್‌ಗೆ ಗೋಚರಿಸಿದೆ. ಹೀಗಾಗಿ ಜನರ ಗಮನ ಬೇರೆಡೆ ಸೆಳೆಯಲು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದೆ. ಈಗ ಖಾತೆಯಲ್ಲಿ ಹಣವಿಲ್ಲ ಎನ್ನುತ್ತಿರುವ ಕಾಂಗ್ರೆಸ್ಸಿಗರು, ಈ ಹಿಂದೆ ಹಗರಣ ನಡೆಸಿದಾಗ ಕೂಡಿಟ್ಟ ದುಡ್ಡು ಬಳಸಬಹುದು‘ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ತಿರುಗೇಟು ನೀಡಿದ್ದಾರೆ.

Follow Us:
Download App:
  • android
  • ios