ರಾಜ್ಯದಲ್ಲಿ ಅಸಂಘಟಿತ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ಕೊಡಲು ನಮ್ಮ ಇಲಾಖೆಯಲ್ಲಿ ದುಡ್ಡಿಲ್ಲ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.
ಬಾಗಲಕೋಟೆ (ಜು.24): ರಾಜ್ಯದಲ್ಲಿ ಅಸಂಘಟಿತ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ಕೊಡಲು ನಮ್ಮ ಇಲಾಖೆಯಲ್ಲಿ ದುಡ್ಡಿಲ್ಲ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಅಸಂಘಟಿತ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ನೀಡುವ ಕುರಿತಾಗಿ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಮಹಿಳೆಯರಿಗೆ ಬಸ್ ಸಂಚಾರ ಉಚಿತವಾಗಿದೆ. ಹೀಗಾಗಿ, ಕಾರ್ಮಿಕರಿಗೆ ಫ್ರೀ ಮಾಡೋದು ಬಹಳ ಕಷ್ಟ ಇದೆ. ನಮ್ಮ ಇಲಾಖೆಯಲ್ಲಿ ಅಸಂಘಟಿತ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ಕೊಡಲು ದುಡ್ಡಿಲ್ಲ ಎಂದು ಹೇಳಿದರು.
ಧನಕರ್ ರಾಜೀನಾಮೆ ಬಗ್ಗೆ ಬಿಜೆಪಿ ಅವರನ್ನೇ ಕೇಳಿ: ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರಿಗೆ ರಾಜೀನಾಮೆ ಕುರಿತು ಒತ್ತಡ ಏಕೆ ಬಂದಿದೆ? ಎಂಬ ಪ್ರಶ್ನೆಯನ್ನು ಬಿಜೆಪಿ ನಾಯಕರನ್ನೇ ಕೇಳಿ ಎಂದು ಹೇಳಿದ್ದಾರೆ. ನಗರದಲ್ಲಿ ಈ ದೇಶದ ವ್ಯವಸ್ಥೆಯಲ್ಲಿ ಯಾಕೆ ರಾಜೀನಾಮೆ ಕೊಡಿಸಿದರು? ಧನಕರ್ ಅವರಿಗೆ ಒತ್ತಡ ಯಾಕೆ ಬಂದಿದೆ? ಸ್ವ ಇಚ್ಛೆಯಿಂದ ಯಾಕೆ ರಾಜೀನಾಮೆ ಕೊಟ್ಟರು? ಎಂದು ಬಿಜೆಪಿಯವರನ್ನು ಕೇಳಿ. ರಾಷ್ಟ್ರದಲ್ಲಿ ಪ್ರಜಾಪ್ರಭುತ್ವ ಇಲ್ಲ ಎನ್ನುವುದು ಉಪರಾಷ್ಟ್ರಪತಿ ಅವರಿಗೆ ಈಗ ಅರ್ಥವಾಗಿದೆ ಎಂದು ಮಾರ್ಮಿಕವಾಗಿ ಹೇಳಿದರು.
ಐಸಿಯುನಲ್ಲಿ ಕೇಂದ್ರ ಸರ್ಕಾರ: ಆಂಧ್ರಪ್ರದೇಶದ ಚಂದ್ರಬಾಬು ನಾಯ್ಡು ಅವರು ಕೇಂದ್ರ ಎನ್‌ಡಿಎ ಸರ್ಕಾರಕ್ಕೆ ನೀಡಿರುವ ಬೆಂಬಲ ಹಿಂಪಡೆದರೆ ಕೇಂದ್ರ ಸರ್ಕಾರಕ್ಕೆ ಏನಾಗುತ್ತದೆ ಎಂಬುವುದರ ಬಗ್ಗೆ ಬಿಜೆಪಿ ನಾಯಕರು ಏಕೆ ಮಾತನಾಡುತ್ತಿಲ್ಲವೆಂದು ಪ್ರಶ್ನಿಸಿರುವ ಲಾಡ್, ಕೇಂದ್ರ ಸರ್ಕಾರ ಐಸಿಯುನಲ್ಲಿದೆ. ಆದರೂ ಸಹ ಬಿಜೆಪಿ ನಾಯಕರು ರಾಜ್ಯದಲ್ಲಿ ಸಿಎಂ ಬದಲಾವಣೆ ಆಗುತ್ತಿದೆ ಎಂದು ಹೇಳುತ್ತಿದ್ದಾರೆಂದು ಕಿಡಿಕಾರಿದರು. ಬಿಜೆಪಿ ನಾಯಕರು ಸಿಎಂ ಬದಲಾವಣೆ ಸೇರಿದಂತೆ ರಾಜ್ಯ ಸರ್ಕಾರದ ಕುರಿತು ಮಾತನಾಡುವುದನ್ನು ಬಿಡಲಿ.
ಅದನ್ನು ಕಾಂಗ್ರೆಸ್ ಹೈಕಮಾಂಡ್ ನೋಡಿಕೊಳ್ಳುತ್ತದೆ. ರಾಜ್ಯದಲ್ಲಿ 136 ಶಾಸಕರೊಂದಿಗೆ ಸರ್ಕಾರ ಸುಭದ್ರವಾಗಿದೆ ಎಂದರು. ಸಿಎಂ ಬದಲಾವಣೆ ಕುರಿತು ಹೈಕಮಾಂಡ್ ಮಾತನಾಡದಂತೆ ಹೇಳಿರುವುದರಿಂದ ನಾನೇನು ಮಾತನಾಡುವುದಿಲ್ಲ ಎಂದ ಅವರು, ಸುಖಾಸುಮ್ಮನೇ ಸಿಎಂ ಬದಲಾವಣೆ, ರಾಜ್ಯ ಉಸ್ತುವಾರಿ ಸುರ್ಜೇವಾಲ ಸೂಪರ್ ಸಿಎಂ ಎಂದೆಲ್ಲ ಆಡಿಕೊಳ್ಳುವುದನ್ನು ಬಿಡಬೇಕು. ತಮ್ಮ ಪಕ್ಷದಲ್ಲಿ ಏನೇನು ಆಗುತ್ತಿದೆ ಎನ್ನುವುದನ್ನು ಮೊದಲು ತಿಳಿದುಕೊಂಡು ಮಾತನಾಡಲಿ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.
