ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಮುಗಿದ ಅಧ್ಯಾಯ. ಮಾಧ್ಯಮಗಳು ಇದನ್ನು ಕೇಳೋದನ್ನು ಬಿಟ್ಟರೆ ಸರಿ ಇರುತ್ತದೆ. ಕಾಂಗ್ರೆಸ್‌ನಲ್ಲಿ ಯಾವುದೇ ಗೊಂದಲ ಇಲ್ಲ. ಬಿಜೆಪಿಯಲ್ಲೇ ಪ್ರಧಾನಿ ಬದಲಾವಣೆ ಕುರಿತು ಗೊಂದಲ ಇದೆ ಎಂದು ಸಚಿವ ಸಂತೋಷ್ ಎಸ್.ಲಾಡ್ ಹೇಳಿದ್ದಾರೆ.
ಹೊಸಪೇಟೆ (ಜು.05): ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಮುಗಿದ ಅಧ್ಯಾಯ. ಮಾಧ್ಯಮಗಳು ಇದನ್ನು ಕೇಳೋದನ್ನು ಬಿಟ್ಟರೆ ಸರಿ ಇರುತ್ತದೆ. ಕಾಂಗ್ರೆಸ್‌ನಲ್ಲಿ ಯಾವುದೇ ಗೊಂದಲ ಇಲ್ಲ. ಬಿಜೆಪಿಯಲ್ಲೇ ಪ್ರಧಾನಿ ಬದಲಾವಣೆ ಕುರಿತು ಗೊಂದಲ ಇದೆ ಎಂದು ಸಚಿವ ಸಂತೋಷ್ ಎಸ್.ಲಾಡ್ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರು ಶಾಸಕರನ್ನು ಕರೆದು ಮಾತನಾಡಿದ್ದು, ಕೆಲ ದೂರು, ಅಹವಾಲು ಆಲಿಸಿದ್ದಾರೆ.
ಸಮಸ್ಯೆಗಳ ಕುರಿತು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ನಾವು ಇಲ್ಲಿ ಹೇಳಲು ಆಗುವುದಿಲ್ಲ. ಆದರೆ, ಸಿಎಂ ಬದಲಾವಣೆ ವಿಚಾರ ಮುಗಿದ ಅಧ್ಯಾಯವಾಗಿದೆ ಎಂದರು. ಬಿಜೆಪಿಗೆ ಪ್ರಧಾನಿ ನರೇಂದ್ರ ಮೋದಿ ಕಂಟಕವಾಗಿದ್ದು, ಅದನ್ನು ಬಿಜೆಪಿ ಹೇಳುತ್ತಿಲ್ಲ. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಪ್ರಧಾನಿ ಮಾಡಬೇಕಿದೆ. ಬಿಜೆಪಿಯಲ್ಲೇ ಪ್ರಧಾನಿ ಬಗ್ಗೆ ಗೊಂದಲ ಇದೆ. ಮಾಧ್ಯಮ ಪ್ರಚಾರ ಬಿಟ್ರೆ, ಮೋದಿ ಅವರಿಂದ ದೇಶಕ್ಕೆ ಏನು ಕೊಡುಗೆ ಇದೆ? ಎಂದರು.
ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸಿ: ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಜಾರಿಗೆ ತಂದ ಯೋಜನೆಗಳನ್ನು ಪ್ರತಿಯೊಬ್ಬ ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು. ನಗರದ ಬೆಂಗೇರಿಯ ಸಂತೆ ಮೈದಾನದಲ್ಲಿ ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ಸಾರಿಗೆ ಇಲಾಖೆ, ಜಿಲ್ಲಾ ಆಡಳಿತ ಮತ್ತು ಜಿಪಂ ಆಶ್ರಯದಲ್ಲಿ ಆಯೋಜಿಸಿದ್ದ ಧಾರವಾಡ ಜಿಲ್ಲೆಯ ವಿವಿಧ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣಾ ಮತ್ತು ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರದ ಇ-ಶ್ರಮ ಪೋರ್ಟಲ್‌ನಲ್ಲಿ ಸುಮಾರು 1.80 ಕೋಟಿ ಅಧಿಕ ಜನರು ನೋಂದಣಿಯಾಗಿದ್ದಾರೆ. ಸುಮಾರು 1.60 ಕೋಟಿ ಅಸಂಘಟಿತ ವಲಯದ ಕುಟುಂಬಗಳು ನೋಂದಣಿಯಾಗಿವೆ. ಅದರಲ್ಲಿ ಸುಮಾರು 35 ರಿಂದ 40 ಲಕ್ಷ ಕಟ್ಟಡ ಕಾರ್ಮಿಕರಿದ್ದು, ಸಾರಿಗೆ ಕಾರ್ಮಿಕರನ್ನು ಸಹ ಅಸಂಘಟಿತ ವಲಯಕ್ಕೆ ಸೇರ್ಪಡೆ ಮಾಡಲಾಗಿದೆ ಎಂದರು. ಧಾರವಾಡ ಜಿಲ್ಲೆಯಲ್ಲಿ ಈವರೆಗೆ 43 ಅಪಘಾತ ಪ್ರಕರಣಗಳಲ್ಲಿ ಒಟ್ಟು ₹1.82 ಕೋಟಿ ಪರಿಹಾರ ವಿತರಿಸಲಾಗಿದೆ. ಅಲ್ಲದೇ 29 ವಿದ್ಯಾರ್ಥಿಗಳಿಗೆ ₹2.90 ಲಕ್ಷ ಶೈಕ್ಷಣಿಕ ಧನಸಹಾಯ ಪಾವತಿ ಮಾಡಲಾಗಿದೆ ಎಂದರು,
ಈವರೆಗೆ ರಾಜ್ಯಾದ್ಯಂತ 10,50,095 ಕಾರ್ಮಿಕರು ನೋಂದಣಿಯಾಗಿದ್ದು, ಧಾರವಾಡ ಜಿಲ್ಲೆಗೆ ಸಂಬಂಧಿಸಿದಂತೆ 1,51,675 ಕಾರ್ಮಿಕರನ್ನು ನೋಂದಾಯಿಸಿ ಸ್ಮಾರ್ಟ್‌ಕಾರ್ಡ್ ವಿತರಿಸಲಾಗುತ್ತಿದೆ ಎಂದರು. ಸ್ವಿಗ್ಗಿ, ಜೊಮ್ಯಾಟೊ, ರ್‍ಯಾಪಿಡೋ ಸೇರಿದಂತೆ ವಿವಿಧ ಇ-ಕಾಮರ್ಸ್ ವಲಯದ ಕಾರ್ಮಿಕರಿಗೆ ಯೋಜನೆ ರೂಪಿಸಲಾಗುತ್ತಿದೆ. ಗಿಗ್ ಕಾರ್ಮಿಕರಿಗೆ ತಲಾ ₹2 ಲಕ್ಷ ಅಪಘಾತ ಪರಿಹಾರ ಹಾಗೂ ಜೀವ ವಿಮಾ ಸೌಲಭ್ಯ ಸೇರಿದಂತೆ ಒಟ್ಟು ₹4 ಲಕ್ಷ ವಿಮಾ ಸೌಲಭ್ಯ ಒದಗಿಸಲಾಗುವುದು. 30,266 ಕಾರ್ಮಿಕರನ್ನು ನೋಂದಾಯಿಸಲಾಗಿದ್ದು, ಧಾರವಾಡ ಜಿಲ್ಲೆಗೆ ಸಂಬಂಧಿಸಿದಂತೆ 1,377 ಕಾರ್ಮಿಕರನ್ನು ನೋಂದಾಯಿಸಿ ಸ್ಮಾರ್ಟ್‌ಕಾರ್ಡ್ ವಿತರಿಸಲಾಗುತ್ತಿದೆ ಎಂದರು.
