Asianet Suvarna News Asianet Suvarna News

Karnataka Cabinet Expansion: ಇನ್ನೂ 1 ತಿಂಗಳು ಸಚಿವ ಸಂಪುಟ ಕಸರತ್ತು ಇಲ್ಲ?

*   ರಾಜ್ಯಸಭೆ, ಪರಿಷತ್‌ ಚುನಾವಣೆ ಹಿನ್ನೆಲೆ
*  ಸಂಪುಟ ವಿಳಂಬಕ್ಕೆ ಬಿಜೆಪಿ ಇಂಗಿತ
*  ಸಚಿವ ಸ್ಥಾನ ವಂಚಿತರಿಂದ ಚುನಾವಣೆ ಮೇಲೆ ದುಷ್ಪರಿಣಾಮವಾಗುವ ಆತಂಕ
 

No Karnataka Cabinet Expansion for Next 1 Month Yet grg
Author
Bengaluru, First Published May 15, 2022, 4:24 AM IST

ಬೆಂಗಳೂರು(ಮೇ.15):  ರಾಜ್ಯಸಭೆ ಮತ್ತು ವಿಧಾನ ಪರಿಷತ್ತಿನ ವಿವಿಧ ಸ್ಥಾನಗಳಿಗೆ ಚುನಾವಣೆ ಎದುರಾಗಿರುವ ಹಿನ್ನೆಲೆಯಲ್ಲಿ ಬಹುನಿರೀಕ್ಷಿತ ಸಂಪುಟ ಸರ್ಜರಿ(Cabinet Expansion) ಬಹುತೇಕ ಸುಮಾರು ಒಂದು ತಿಂಗಳ ಕಾಲ ಮುಂದೂಡಿಕೆ ಆದಂತಾಗಿದೆ.

ಈ ಚುನಾವಣೆಗಳು(Elections) ಮುಗಿದ ಬಳಿಕವೇ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಕೈಗೆತ್ತಿಕೊಳ್ಳುವ ಬಗ್ಗೆ ಆಡಳಿತಾರೂಢ ಬಿಜೆಪಿ(BJP) ನಾಯಕರು ಇಂಗಿತ ವ್ಯಕ್ತಪಡಿಸಿದ್ದಾರೆ. ಹಾಗೆ ನೋಡಿದರೆ ರಾಜ್ಯಸಭೆ ಮತ್ತು ಪರಿಷತ್‌ (ಪದವೀಧರ ಮತ್ತು ಶಿಕ್ಷಕ ಕ್ಷೇತ್ರ ಹೊರತುಪಡಿಸಿ) ಚುನಾವಣೆಗಳಿಗೆ ವಿಧಾನಸಭೆಯ ಸದಸ್ಯರೇ ಮತದಾರರು. ಸಚಿವ ಸ್ಥಾನದ ಆಕಾಂಕ್ಷಿಗಳ ಸಂಖ್ಯೆಯೂ ದೊಡ್ಡದಿದೆ. ಈಗ ಸಂಪುಟ ಸರ್ಜರಿ ಕೈಗೊಂಡರೆ ಅವಕಾಶ ಸಿಗದ ಆಕಾಂಕ್ಷಿಗಳು ಮುನಿಸಿಕೊಳ್ಳಬಹುದು. ಅದರ ಪರಿಣಾಮ ಈ ಚುನಾವಣೆಗಳ ಮತದಾನದ ಮೇಲೆ ಉಂಟಾಗಬಹುದು ಎಂಬ ಆತಂಕವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಸೇರಿದಂತೆ ಪಕ್ಷದ ಹಿರಿಯ ನಾಯಕರು ಹೊರಹಾಕಿದ್ದಾರೆ ಎಂದು ತಿಳಿದು ಬಂದಿದೆ.

ಸುಮಲತಾ, ರಮ್ಯಾ ಬಂದರೆ ಪಕ್ಷಕ್ಕೆ ಸೇರಿಸಿಕೊಳ್ಳಲು ರೆಡಿ: ಸಚಿವ ಕೆ.ಸಿ.ನಾರಾಯಣಗೌಡ

ಸ್ಪಷ್ಟವಾಗಿ ಹೇಳದ ವರಿಷ್ಠರು:

ಇದೇ ವೇಳೆ ಪಕ್ಷದ ವರಿಷ್ಠರು ಕೂಡ ಇದುವರೆಗೆ ಸಂಪುಟ ಸರ್ಜರಿ ಬಗ್ಗೆ ಸ್ಪಷ್ಟವಾದ ನಿಲುವು ತಿಳಿಸಿಲ್ಲ. ರಾಜ್ಯಕ್ಕೆ ಪ್ರತ್ಯೇಕವಾಗಿ ಆಗಮಿಸಿದ್ದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ(JP Nadda) ಹಾಗೂ ಕೇಂದ್ರದ ಗೃಹ ಸಚಿವ ಅಮಿತ್‌ ಶಾ(Amit Shah) ಅವರು ದೆಹಲಿಗೆ ತೆರಳಿದ ಬಳಿಕ ಚರ್ಚಿಸಿ ತಿಳಿಸುವುದಾಗಿ ಹೇಳಿದ್ದಷ್ಟೇ ಬಂತು ಹೊರತು ಯಾವುದೇ ನಿರ್ಧಾರ ಕೈಗೊಳ್ಳಲಿಲ್ಲ. ‘ಹೇಗಿದ್ದರೂ ಈಗ ವಿಳಂಬವಾಗಿದೆ. ಇನ್ನಷ್ಟುಕಾಲ ವಿಳಂಬವಾದರೆ ಏನೂ ದೊಡ್ಡ ಸಮಸ್ಯೆ ಆಗುವುದಿಲ್ಲ’ ಎಂಬ ಅಭಿಪ್ರಾಯವನ್ನು ಬೊಮ್ಮಾಯಿ ಅವರು ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಹಿನ್ನೆಲೆಯಲ್ಲಿ ಬೊಮ್ಮಾಯಿ ಅವರು ಪಕ್ಷದ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌(Arun Singh) ಸೇರಿದಂತೆ ಇತರ ಹಿರಿಯ ನಾಯಕರೊಂದಿಗೆ ಮಾತುಕತೆ ನಡೆಸಿ, ‘ಚುನಾವಣೆ ಮುಗಿಯುವವರೆಗೆ ಸಂಪುಟ ಕಸರತ್ತು ಕೈಬಿಡುವುದು ಸೂಕ್ತ. ಚುನಾವಣೆ ಮುಗಿದ ಬಳಿಕ ವಿಸ್ತರಣೆ ಅಥವಾ ಪುನಾರಚನೆ, ಯಾವುದು ಸೂಕ್ತ ಎನಿಸುತ್ತದೆಯೋ ಅದನ್ನು ಮಾಡಬಹುದು’ ಎಂದಿದ್ದಾರೆ ಎನ್ನಲಾಗಿದೆ.

ಸಭಾಪತಿ ಹುದ್ದೆಗೆ ನಾಳೆ ಹೊರಟ್ಟಿ ರಾಜೀನಾಮೆ ನಾಡಿದ್ದು ಬಿಜೆಪಿಗೆ

ವಿಧಾನ ಪರಿಷತ್‌ನ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ(Basavaraj Horatti) ಅವರು ಮೇ 16ರಂದು ರಾಜೀನಾಮೆ ನೀಡಿ, ಮೇ 17ಕ್ಕೆ ವಿಧ್ಯುಕ್ತವಾಗಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಶನಿವಾರ ಬಿಜೆಪಿ ಕಚೇರಿಯಲ್ಲಿ ನಡೆದ ಕೋರ್‌ ಕಮಿಟಿ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಲಾಗಿದೆ. ಸೋಮವಾರ ರಾಜೀನಾಮೆ ಸಲ್ಲಿಸಿ, ಮಂಗಳವಾರ ಬಿಜೆಪಿಗೆ ಸೇರಲಿದ್ದಾರೆ. ನಂತರ ಶಿಕ್ಷಕರ ಕ್ಷೇತ್ರದಿಂದ ಅಭ್ಯರ್ಥಿಯನ್ನಾಗಿ ಅವರನ್ನು ಬಿಜೆಪಿ ಘೋಷಣೆ ಮಾಡಲಿದೆ.

ಆಪರೇಷನ್​ ಕಮಲದ ಸುಳಿವು ನೀಡಿದ ಸಚಿವ, ಘಟಾನುಘಟಿ ನಾಯಕರು ಬಿಜೆಪಿ ಸೇರ್ತಾರಾ?

ಹೊರಟ್ಟಿ ಅವರು ಈ ಮೊದಲು ಮೇ 18ರಂದು ಸಭಾಪತಿ(Speaker) ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಪ್ರಕಟಿಸಿದ್ದರು. ಆದರೆ ಈಗ ಕೋರ್‌ ಕಮಿಟಿ ಸಭೆಯ ನಿರ್ಧಾರದ ಹಿನ್ನೆಲೆಯಲ್ಲಿ ಎರಡು ದಿನ ಮೊದಲೇ ರಾಜೀನಾಮೆ ನೀಡಲಿದ್ದಾರೆ. ಈವರೆಗೆ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್‌(JDS) ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದರು. ಇದೀಗ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದಾರೆ.

ಸದ್ಯ ಪರಿಷತ್ತಿನಲ್ಲಿ ಉಪಸಭಾಪತಿ ಸ್ಥಾನ ಖಾಲಿ ಇರುವುದರಿಂದ ಪರಿಷತ್‌ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ಸಲ್ಲಿಸಬೇಕಾಗಿದೆ. ಕಾರ್ಯದರ್ಶಿಗಳು ಸಂಸದೀಯ ಇಲಾಖೆ ಮೂಲಕ ರಾಜ್ಯಪಾಲರಿಗೆ ರಾಜೀನಾಮೆ ಪತ್ರ ರವಾನೆಯಾಗಲಿದೆ. ನಂತರ ರಾಜ್ಯಪಾಲರು ರಾಜೀನಾಮೆ ಪತ್ರವನ್ನು ಅಂಗೀಕರಿಸಲಿದ್ದಾರೆ.
 

Follow Us:
Download App:
  • android
  • ios