ಆಪರೇಷನ್ ಕಮಲದ ಸುಳಿವು ನೀಡಿದ ಸಚಿವ, ಘಟಾನುಘಟಿ ನಾಯಕರು ಬಿಜೆಪಿ ಸೇರ್ತಾರಾ?
* ಎರಡನೇ ಹಂತದ ಆಪರೇಷನ್ ಕಮಲ ಶುರು
* ಸ್ಫೋಟಕ ಸುಳಿವು ನೀಡಿದ ಸಚಿವ ಸೋಮಶೇಖರ್
* ಕ್ಷೇತ್ರ ತ್ಯಾಗಕ್ಕೂ ಸಿದ್ಧ ಎಂದು ಬಿಜೆಪಿ ಶಾಸಕ
ಮೈಸೂರು, (ಮೇ.14): ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೇವಲ ಒಂದು ವರ್ಷ ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಶತಾಯಗತಾಯವಾಗಿ ಅಧಿಕಾರ ಹಿಡಿಯಲು ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸಿದೆ. ಇದಕ್ಕೆ ಪೂರಕವೆಂಬಂತೆ ಪಕ್ಷ ಸಂಘಟನೆಯಲ್ಲಿ ತೊಡಗಿದ್ದು, ಎಲ್ಲಿ ಬಿಜೆಪಿ ಹವಾ ಇಲ್ಲವೋ ಅಲ್ಲಿ ಆಪರೇಷನ್ ಕಮಲ (Operation Kamala) ಮಾಡುತ್ತಿದೆ.
ಅದರಲ್ಲೂ ಪ್ರಮುಖವಾಗಿ ಈ ಬಾರಿ ಬಿಜೆಪಿ ಹಳೇ ಮೈಸೂರು (Old Mysuru) ಭಾಗಕ್ಕೆ ಹೆಚ್ಚು ಒತ್ತು ನೀಡಿದ್ದು, ಈ ಭಾಗದಲ್ಲಿ ಪ್ರಮುಖ ಬೇರೆ ಪಕ್ಷದ ನಾಯಕರನ್ನು ಸೆಳೆಯಲು ಬಿಜೆಪಿ (BJP) ನಾಯಕರು ಪ್ರಯತ್ನಿಸುತ್ತಿದ್ದಾರೆ.
ಆಪರೇಷನ್ ಕಮಲದ ಸುಳಿವು ನೀಡಿದ ಸಚಿವ
ಹೌದು....ಹಳೇ ಮೈಸೂರು ಭಾಗದಲ್ಲಿ ಆಪರೇಷನ್ ಕಮಲದ ಬಗ್ಗೆ ಸ್ವತಃ ಸಚಿವ ಎಸ್‌ಟಿ ಸೋಮಶೇಖರ್ ಸುಳಿವು ನೀಡಿದ್ದು, 2ನೇ ಹಂತದ ಆಪರೇಷನ್ಗೆ ಕಮಲ ಫಿಕ್ಸ್ ಆಗಿದ್ದು, ಶೀಘ್ರದಲ್ಲೇ ಈ ಭಾಗದ ಘಟಾನುಘಟಿ ನಾಯಕರು ಬಿಜೆಪಿಗೆ ಸೇರ್ಪಡೆಯಾಲಿದ್ದಾರೆ ಎಂದಿದ್ದಾರೆ.
Asianet Suvarna Special: ಒಕ್ಕಲಿಗ ಕೋಟೆ ಭೇದಿಸಲು ಬಿಜೆಪಿ M2H ಪ್ಲಾನ್..!
ಕಾಂಗ್ರೆಸ್, ಜೆಡಿಎಸ್ನ ಪ್ರಮುಖ ನಾಯಕರು ಬಿಜೆಪಿ ಸೇರಲಿದ್ದಾರೆ. ಆ ನಾಯಕರು ಯಾರೆಂದು ಈಗಲೇ ಹೇಳಲಾಗಲ್ಲ. ಅಂತಹ ನಾಯಕರ ಜೊತೆ ಕೊನೆ ಹಂತದ ಮಾತುಕತೆ ನಡೆಯುತ್ತಿದೆ. ಯಾವುದೇ ಷರತ್ತುಗಳಿಲ್ಲದೇ ಪಕ್ಷ ಸೇರಲು ನಾಯಕರು ಒಪ್ಪಿದ್ದಾರೆ. ಪಕ್ಷ ಸೇರಲು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರ ಅನುಮತಿ ಬಾಕಿಯಿದೆ ಎಂದು ಹೇಳಿದರು.
ಕ್ಷೇತ್ರ ಬಿಟ್ಟುಕೊಡಲು ಸಿದ್ಧ ಎಂದ ಬಿಜೆಪಿ ಶಾಸಕ
ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಬಿಜೆಪಿಗೆ ಬಂದರೆ ಸ್ವಾಗತಿಸುತ್ತೇವೆ ಎಂದು ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಹೇಳಿದ್ದಾರೆ. ಅಲ್ಲದೇ ಜಿಟಿಡಿ ಪುತ್ರನಿಗೆ ಕ್ಷೇತ್ರ ಬಿಟ್ಟುಕೊಡುವುದಾಗಿ ತಿಳಿಸಿದ್ದಾರೆ.
ಜಿಟಿಡಿ ಪುತ್ರನಿಗೆ ಟಿಕೆಟ್ ನೀಡಲು ಹೈಕಮಾಂಡ್ ನಿರ್ಧರಿಸಿದರೆ ಚಾಮರಾಜ ಕ್ಷೇತ್ರ ಬಿಟ್ಟುಕೊಡಲು ಸಿದ್ಧ/ ಬಿಜೆಪಿ ಬಂದು ಈ ಭಾಗದಲ್ಲಿ 8 ಸ್ಥಾನ ಗೆಲ್ಲಿಸೋದಾದ್ರೆ, ಪಕ್ಷಕ್ಕಾಗಿ ಕ್ಷೇತ್ರ ಸೇರಿದಂತೆ ಯಾವುದೇ ತ್ಯಾಗಕ್ಕೂ ನಾನು ಸಿದ್ಧ. ಬಿಜೆಪಿಗೆ ಘಟಾನುಘಟಿ ನಾಯಕರು ಸೇರುತ್ತಾರೆ ಎಂದು ಸಚಿವ ಸೋಮಶೇಖರ್ ಹೇಳಿಕೆಗೆ ಶಾಸಕ ನಾಗೇಂದ್ರ ಪುಷ್ಟಿ ನೀಡಿದ್ದಾರೆ.
ಘಟಾನುಘಟಿ ನಾಯಕರ ಮೇಲೆ ಬಿಜೆಪಿ ಕಣ್ಣು
ಯೆಸ್.. ಹಳೇ ಮೈಸೂರು ಭಾಗದ ಘಟಾನುಘಟಿ ನಾಯಕರ ಮೇಲೆ ಈಗಾಗಲೇ ಬಿಜೆಪಿ ಕಣ್ಣು ಬಿದ್ದಿದ್ದು, ಮಾತುಕತೆಗಳನ್ನ ಸಹ ನಡೆಯುತ್ತಿವೆ. ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹಾಗೂ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಸೇರಿದಂತೆ ಇನ್ನೂ ಪ್ರಮುಖ ನಾಯಕರನ್ನು ಸೆಳೆಯಲು ಬಿಜೆಪಿ ಪ್ಲಾನ್ ಮಾಡಿದ್ದು, ಅದು ಅಂತಿಮ ಹಂತಕ್ಕೆ ಬಂದು ನಿಂತಿದೆ. ತಮಗೂ ಸೇರಿ ತಮ್ಮ ಪುತ್ರನಿಗೂ ಟಿಕೆಟ್ ಫಿಕ್ಸ್ ಆದ್ರೆ ಜಿಟಿ ದೇವೇಗೌಡ ಬಿಜೆಪಿ ಸೇರ್ಪಡೆ ಖಚಿತವಾಗಿದೆ. ಈ ಬಗ್ಗೆ ರಾಜ್ಯ ನಾಯಕರು ಹೈಕಮಾಂಡ್ ಜೊತೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಮೊದಲನೇ ಹಂತದ ಆಪರೇಷನ್ ಕಮಲ
ಈಗಾಗಲೇ ಮೊದಲನೇ ಹಂತದ ಆಪರೇಷನ್ ಕಮಲ ಮುಗಿದಿದ್ದು, ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ವರ್ತೂರ್ ಪ್ರಕಾಶ್ ಮಾಜಿ ಶಾಸಕ ಮಂಜುನಾಥ್ ಸೇರಿದಂತೆ ಹಲವು ನಾಯಕರನ್ನು ಸೆಳೆಯುವಲ್ಲಿ ಬಿಜೆಪಿ ನಾಯಕರು ಯಶಸ್ವಿಯಾಗಿದೆ. ಅಲ್ಲದೇ ಮಂಡ್ಯದಲ್ಲೂ ಸಹ ಆಪರೇಷನ್ ಕಮಲ ಸಕ್ಸಸ್ ಆಗಿದ್ದು, ಇನ್ನಷ್ಟು ಬಾಕಿ ಇದೆ ಎನ್ನುವ ಮಾಹಿತಿ ತಿಳಿದುಬಂದಿದೆ.