ಬೆಂಗಳೂರು(ಸೆ.25): ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸರ್ಕಾರವು ಸದನದ ವಿಶ್ವಾಸ ಕಳೆದುಕೊಂಡಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್‌ ಅವಿಶ್ವಾಸ ನಿರ್ಣಯ ಮಂಡಿಸಿದ್ದು, ಈ ಅವಿಶ್ವಾಸ ಪ್ರಸ್ತಾಪಕ್ಕೆ ಅನುಮತಿ ಸಿಕ್ಕಿದೆ.

ಕೋವಿಡ್‌ನಿಂದಾಗಿ ಆಡಳಿತಾರೂಢ ಬಿಜೆಪಿಯ ಹಲವು ಸಚಿವರು ಹಾಗೂ ಶಾಸಕರು ಸದನಕ್ಕೆ ಆಗಮಿಸುವುದು ಕಷ್ಟವಿರುವುದರಿಂದ ಈ ನಿರ್ಣಯ ಎದುರಿಸಿ ಗೆಲ್ಲುವುದು ಸಹಜವಾಗಿಯೇ ಸರ್ಕಾರಕ್ಕೆ ಪ್ರತಿಷ್ಠೆಯ ವಿಷಯವಾಗಿ ಪರಿಣಮಿಸಿದೆ.

ಗುರುವಾರ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸರ್ಕಾರ ವಿಶ್ವಾಸ ಕಳೆದುಕೊಂಡಿರುವ ಬಗ್ಗೆ ನೋಟಿಸ್‌ ನೀಡಲಾಗಿದ್ದು, ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದು ಸಭಾಧ್ಯಕ್ಷರಲ್ಲಿ ಮನವಿ ಮಾಡಿದರು. ಅಗತ್ಯ ಸಂಖ್ಯೆ ಇಲ್ಲದಿದ್ದರೂ ಕಾಂಗ್ರೆಸ್‌ ಪಕ್ಷವು ಅವಿಶ್ವಾಸ ನಿರ್ಣಯ ಮಂಡಿಸಿದ್ದಕ್ಕೆ ಆಡಳಿತ ಪಕ್ಷದ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಅಂತಿಮವಾಗಿ ಗುರುವಾರವೇ ತಮ್ಮ ನಿರ್ಣಯದ ಬಗ್ಗೆ ಚರ್ಚೆಗೆ ಅವಕಾಶ ಕೊಡಬೇಕು ಎಂಬ ಕಾಂಗ್ರೆಸ್‌ ಸದಸ್ಯರ ಬೇಡಿಕೆಯನ್ನು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿರಸ್ಕರಿಸಿದರು.

ಪ್ರತಿಪಕ್ಷದ ನಾಯಕರು ನೀಡಿರುವ ಪ್ರಸ್ತಾಪದ ಪರವಾಗಿರುವವರು ಎದ್ದು ನಿಲ್ಲಬೇಕು ಎಂದು ಸಭಾಧ್ಯಕ್ಷರು ತಿಳಿಸಿದಾಗ ಸಿದ್ದರಾಮಯ್ಯ ಅವರು ಪ್ರಸ್ತಾಪದ ಪರವಾಗಿ ಕನಿಷ್ಠ 23 ಸದಸ್ಯರು ಇದ್ದರೆ ಸಾಕು. ನಾವು ಅದಕ್ಕಿಂತ ಹೆಚ್ಚಿದ್ದೇವೆ ಎಂದರು. ಆಗ ಕಂದಾಯ ಸಚಿವ ಆರ್‌.ಅಶೋಕ್‌, ಹೆಚ್ಚಾದರೆ ಅಮೃತವೂ ವಿಷವಾಗುತ್ತದೆ ಎಂದು ಛೇಡಿಸಿದರು. ಸಭಾಧ್ಯಕ್ಷರು ಗಂಭೀರ ವಿಷಯ ಪ್ರಸ್ತಾಪವಾಗಿದ್ದು, ಚರ್ಚೆಯ ದಿನಾಂಕ ಮತ್ತು ಸಮಯವನ್ನು ಶುಕ್ರವಾರ ಅಥವಾ ಶನಿವಾರ ನಿಗದಿ ಮಾಡುವುದಾಗಿ ಹೇಳಿದರು.

ಕೊರೋನಾ ಲಾಕ್ಡೌನ್‌ಗೆ 6 ತಿಂಗಳು : ತೆರವಿನ ಬಳಿಕ ತಾರಕಕ್ಕೇರಿದ ಸೋಂಕು

ಈ ವೇಳೆ ಸಚಿವ ಆಶೋಕ್‌ ಮಾತನಾಡಿ, ಕಾಂಗ್ರೆಸ್‌ ಪಕ್ಷಕ್ಕೆ ರಾಜ್ಯ ಮತ್ತು ದೇಶದಲ್ಲಿಯೂ ಬಹುಮತ ಇಲ್ಲ. ರಾಜಕೀಯ ಗಿಮಿಕ್‌ಗಾಗಿ ಅವಿಶ್ವಾಸ ನಿರ್ಣಯ ಪ್ರಸ್ತಾಪ ಮಂಡಿಸಿದೆ. ಮತಕ್ಕೆ ಹಾಕಿದರೆ ಸೋಲುವುದು ಖಚಿತ ಎಂದರು. ಇದಕ್ಕೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಪ್ರಸ್ತಾಪವಾಗಿದೆ. ಇದಕ್ಕೆ ಸದನದ ಒಪ್ಪಿಗೆ ಸಿಕ್ಕಿದೆ. ಹೀಗಿರುವಾಗ ಆಡಳಿತದ ಕುರ್ಚಿಯಲ್ಲಿ ಕೂರಲು ನಿಮಗೆ ಅರ್ಹತೆ ಇಲ್ಲ. ರಾಜೀನಾಮೆ ನೀಡಿ ಮನೆಗೆ ಹೋಗಬೇಕು. ಅವಿಶ್ವಾಸ ನಿರ್ಣಯ ಪ್ರಸ್ತಾಪ ಮಂಡಿಸಿರುವ ವೇಳೆ ಸರ್ಕಾರ ಮಸೂದೆ ಮಂಡನೆಯಂತಹ ಯಾವುದೇ ಮಹತ್ವದ ನಿರ್ಣಯ ಕೈಗೊಳ್ಳಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು.

ಇಂದು ಬಿಜೆಪಿ ಶಾಸಕಾಂಗ ಸಭೆ

ಸರ್ಕಾರದ ವಿರುದ್ಧ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್‌ ಅವಿಶ್ವಾಸ ನಿರ್ಣಯ ಮಂಡಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಆಡಳಿತಾರೂಢ ಬಿಜೆಪಿ ಶಾಸಕರ ವಿಶ್ವಾಸ ಗಳಿಸುವ ಉದ್ದೇಶದಿಂದ ಶುಕ್ರವಾರ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ಸಂಜೆ 6 ಗಂಟೆಗೆ ವಿಧಾನಸೌಧದ ಬಳಿಯ ಕ್ಯಾಪಿಟಲ್‌ ಹೋಟೆಲ್‌ನಲ್ಲಿ ಸಭೆ ಕರೆಯಲಾಗಿದ್ದು, ಶಾಸಕರ ಅಹವಾಲನ್ನು ಆಲಿಸಲಿದ್ದಾರೆ. ಬಳಿಕ ಭೋಜನವನ್ನೂ ಏರ್ಪಡಿಸಲಾಗಿದೆ.

ತಮ್ಮ ಕ್ಷೇತ್ರದ ಸಮಸ್ಯೆಗಳ ಕುರಿತಂತೆ ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಶಾಸಕರು ಕಳೆದ ಹಲವು ತಿಂಗಳುಗಳಿಂದ ಒತ್ತಾಯಿಸುತ್ತಲೇ ಇದ್ದರು. ಸಾಮಾನ್ಯವಾಗಿ ವಿಧಾನಮಂಡಲ ಅಧಿವೇಶನ ಆರಂಭವಾಗುವ ಹಿಂದಿನ ದಿನ ಅಥವಾ ಮೊದಲ ದಿನ ಶಾಸಕಾಂಗ ಪಕ್ಷದ ಸಭೆ ಕರೆದು ಚರ್ಚೆ ನಡೆಸಲಾಗುತ್ತಿತ್ತು. ಈ ಬಾರಿ ಕರೆಯಲೇ ಇಲ್ಲ. ಇದೀಗ ಅವಿಶ್ವಾಸ ನಿರ್ಣಯದ ಪರಿಣಾಮವೋ ಎಂಬಂತೆ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ.

ಅವಿಶ್ವಾಸ ಮಂಡನೆ ಏಕೆ?

ರಾಜ್ಯ ಸರ್ಕಾರವು ಕೊರೋನಾ ನಿಯಂತ್ರಣವನ್ನು ಸರಿಯಾಗಿ ನಿರ್ವಹಿಸಿಲ್ಲ. ಕೊರೋನಾ ಸಂಬಂಧಿಸಿದ ವಸ್ತುಗಳ ಖರೀದಿಯಲ್ಲಿ ಅಪಾರ ಭ್ರಷ್ಟಾಚಾರ ನಡೆದಿದೆ. ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ಹೀಗಾಗಿ ಬಿಜೆಪಿ ಸರ್ಕಾರದ ಬಗ್ಗೆ ತಮಗೆ ವಿಶ್ವಾಸವಿಲ್ಲ. ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿವೆ.

ಸರ್ಕಾರ ಸೇಫಾ?

ಕಾಂಗ್ರೆಸ್‌ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದರೂ ಸದನದ ಬಲಾಬಲಗಳ ಪ್ರಕಾರ ಬಿಜೆಪಿ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಸರ್ಕಾರಕ್ಕೆ ಯಾವುದೇ ಅಪಾಯ ಇಲ್ಲ. ಆದರೆ ಕೋರೋನಾ ಸೋಂಕಿನಿಂದ ಆಡಳಿತ ಪಕ್ಷ ಮತ್ತು ವಿಪಕ್ಷದ ಹಲವು ಶಾಸಕರು ಸದನಕ್ಕೆ ಗೈರು ಹಾಜರಾಗಿದ್ದಾರೆ. ಹೀಗಾಗಿ ನಿರ್ಣಯವನ್ನು ಮತಕ್ಕೆ ಹಾಕಿದಾಗ ಸದನದಲ್ಲಿ ಶಾಸಕರು ಎಷ್ಟು ಜನ ಇರಲಿದ್ದಾರೆ ಎಂಬ ಆಧಾರದ ಮೇಲೆ ಸರ್ಕಾರದ ಭವಿಷ್ಯ ನಿಂತಿದೆ.