Asianet Suvarna News Asianet Suvarna News

ಕಾಂಗ್ರೆಸ್-ಜೆಡಿಎಸ್‌ ದೋಸ್ತಿಗಳಲ್ಲಿ ಇನ್ನೂ ಟಿಕೆಟ್‌ ಗೊಂದಲ

- ಮಂಡ್ಯ ಅಭ್ಯರ್ಥಿ ಆಯ್ಕೆ ಬಗ್ಗೆ ಜೆಡಿಎಸ್‌ ಗಲಿಬಿಲಿ - ಶಿವಮೊಗ್ಗ, ಬಳ್ಳಾರಿ ಅಭ್ಯರ್ಥಿಗಾಗಿ ‘ಕೈ’ ಪರದಾಟ - 5ರಲ್ಲಿ 2 ಕ್ಷೇತ್ರಗಳಿಗಷ್ಟೇ ಅಭ್ಯರ್ಥಿಗಳು ಅಂತಿಮ - ನಾಡಿದ್ದು ಟಿಕೆಟ್‌ ಅಂತಿಮ, ಘೋಷಣೆ ಸಾಧ್ಯತೆ

No conclusion among JDS and Congress for Karnataka Byelection
Author
Bengaluru, First Published Oct 13, 2018, 8:47 AM IST
  • Facebook
  • Twitter
  • Whatsapp

ಬೆಂಗಳೂರು: ಮೂರು ಲೋಕಸಭೆ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಸಂಬಂಧಿಸಿದಂತೆ ಅಭ್ಯರ್ಥಿಗಳು ಯಾರು ಎಂಬುದು ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಜೆಡಿಎಸ್‌ನಲ್ಲಿ ಇನ್ನೂ ಅಸ್ಪಷ್ಟವಾಗಿಯೇ ಮುಂದುವರೆದಿದ್ದು, ಮೈತ್ರಿ ಕುರಿತ ಗೊಂದಲವೂ ಬಗೆಹರಿದಿಲ್ಲ.

ಆಡಳಿತಾರೂಢ ಪಕ್ಷಗಳಿಗೆ ಹೋಲಿಸಿದರೆ ಬಿಜೆಪಿಯಲ್ಲಿ ಅಷ್ಟಾಗಿ ಗೊಂದಲವಿಲ್ಲ. ಐದು ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳನ್ನು ಹೆಚ್ಚೂ ಕಡಮೆ ಅಂತಿಮಗೊಳಿಸಿದೆ. ನಾಮಪತ್ರ ಸಲ್ಲಿಸಲು ಇದೇ ತಿಂಗಳ 16 ಕೊನೆಯ ದಿನವಾಗಿದೆ.

ಲೋಕಸಭಾ ಕ್ಷೇತ್ರಗಳಾದ ಮಂಡ್ಯ, ಶಿವಮೊಗ್ಗ, ಬಳ್ಳಾರಿ ಹಾಗೂ ವಿಧಾನಸಭಾ ಕ್ಷೇತ್ರಗಳಾದ ಜಮಖಂಡಿ, ರಾಮನಗರ ಕ್ಷೇತ್ರಗಳು ಉಪಚುನಾವಣೆ ಎದುರಿಸುತ್ತಿವೆ. ಈ ಪೈಕಿ ಮಂಡ್ಯ, ರಾಮನಗರದಲ್ಲಿ ಜೆಡಿಎಸ್‌ ಮತ್ತು ಶಿವಮೊಗ್ಗ, ಬಳ್ಳಾರಿ, ಜಮಖಂಡಿಯಲ್ಲಿ ಕಾಂಗ್ರೆಸ್‌ ಪಕ್ಷ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಒಗ್ಗಟ್ಟಿನಿಂದ ಚುನಾವಣೆ ಎದುರಿಸುವ ಬಗ್ಗೆ ಉಭಯ ಪಕ್ಷಗಳ ನಾಯಕರು ಸುದೀರ್ಘ ಸಭೆ ನಡೆಸಿ ತೀರ್ಮಾನಿಸಿದ್ದರು. ಆ ತೀರ್ಮಾನವನ್ನು ನಂತರ ಬಹಿರಂಗವಾಗಿಯೂ ಪ್ರಕಟಿಸಿದ್ದರು.

ಆದರೆ, ಹಾಗೆ ಚುನಾವಣಾ ಮೈತ್ರಿ ಘೋಷಿಸಿದ ಬಳಿಕ ಉಭಯ ಪಕ್ಷಗಳಲ್ಲಿ ಗೊಂದಲ ಆರಂಭವಾಯಿತು. ಮಂಡ್ಯ ಮತ್ತು ರಾಮನಗರ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದರ ಬಗ್ಗೆ ಕಾಂಗ್ರೆಸ್ಸಿನ ಸ್ಥಳೀಯ ಮುಖಂಡರು ತೀವ್ರ ಅಸಮಾಧಾನ ಹೊರಹಾಕಿದರು. ಇದಕ್ಕೆ ತಿರುಗೇಟು ನೀಡಲು ಮುಂದಾದ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರು ಕಾಂಗ್ರೆಸ್ಸಿಗೆ ಬಿಟ್ಟುಕೊಡಲು ಒಪ್ಪಿಕೊಂಡಿದ್ದ ಶಿವಮೊಗ್ಗದಲ್ಲಿ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸುಳಿವು ನೀಡಿದರು.

ಇದೀಗ ಜೆಡಿಎಸ್‌ನಿಂದ ರಾಮನಗರ ಕ್ಷೇತ್ರದಿಂದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಪತ್ನಿ ಅನಿತಾ ಅವರು ಕಣಕ್ಕಿಳಿಯುವುದು ಪಕ್ಕಾ ಆಗಿದೆ. ಆದರೆ, ಮಂಡ್ಯದಲ್ಲಿ ಸ್ಥಳೀಯರಿಗೇ ಟಿಕೆಟ್‌ ನೀಡುವುದಾಗಿ ಹೇಳಿದ್ದರೂ ಇದುವರೆಗೆ ಜೆಡಿಎಸ್‌ ನಾಯಕರಿಗೆ ಅಭ್ಯರ್ಥಿಯನ್ನು ಅಂತಿಮಗೊಳಿಸಲು ಸಾಧ್ಯವಾಗಿಲ್ಲ. ನಿವೃತ್ತ ಅಧಿಕಾರಿ ಲಕ್ಷ್ಮಿ ಅಶ್ವಿನ್‌ಗೌಡ ಮತ್ತು ಮಾಜಿ ಸಂಸದ ಎಲ್‌.ಆರ್‌.ಶಿವರಾಮೇಗೌಡ ಅವರಿಬ್ಬರ ನಡುವೆ ಪೈಪೋಟಿ ನಡೆದಿದೆ.

ಅದೇ ರೀತಿ ಕಾಂಗ್ರೆಸ್ಸಿನಲ್ಲಿ ಜಮಖಂಡಿ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಘೋಷಿಸಿದ್ದು ಬಿಟ್ಟರೆ ಬಳ್ಳಾರಿ ಮತ್ತು ಶಿವಮೊಗ್ಗದಿಂದ ಯಾರು ಅಭ್ಯರ್ಥಿಯಾಗಬೇಕು ಎಂಬುದನ್ನೇ ನಿರ್ಧರಿಸಲು ಸಾಧ್ಯವಾಗುತ್ತಿಲ್ಲ. ಶಿವಮೊಗ್ಗದಲ್ಲಿ ಕಾಗೋಡು ತಿಮ್ಮಪ್ಪ ಅವರು ಹಿಂದೇಟು ಹಾಕಿರುವುದರಿಂದ ಮಾಜಿ ಸಚಿವ ಕಿಮ್ಮನೆ ರತ್ನಾಕರ, ಪಕ್ಷದ ಮುಖಂಡ ಸುಂದರೇಶ್‌ ಅವರ ಹೆಸರು ಬಲವಾಗಿ ಕೇಳಿಬಂದಿವೆ. ಇನ್ನೂ ಅಂತಿಮಗೊಂಡಿಲ್ಲ.

ಬಳ್ಳಾರಿ ಅಭ್ಯರ್ಥಿ ಆಯ್ಕೆ ಮಾಡುವುದು ಕಾಂಗ್ರೆಸ್‌ ಪಕ್ಷಕ್ಕೆ ಸವಾಲಾಗಿ ಪರಿಣಮಿಸಿದೆ. ಹಾಲಿ ಶಾಸಕ ನಾಗೇಂದ್ರ ಅವರ ಸಹೋದರ ವೆಂಕಟೇಶ್‌ ಪ್ರಸಾದ್‌ ಹಾಗೂ ಪಕ್ಷದ ಮುಖಂಡ ದೇವೇಂದ್ರಪ್ಪ ಅವರ ಹೆಸರುಗಳು ಮುಂಚೂಣಿಯಲ್ಲಿವೆ. ಸೋಮವಾರದ ವೇಳೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಸ್ಪಷ್ಟಚಿತ್ರಣ ಹೊರಬೀಳುವ ನಿರೀಕ್ಷೆಯಿದೆ ಎನ್ನಲಾಗಿದೆ.

Follow Us:
Download App:
  • android
  • ios