ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಜತೆಗೆ ಮೈತ್ರಿ ಇಲ್ಲ: ಓವೈಸಿ
ಕಳೆದ ಬಾರಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪರ ಕೇವಲ ಕ್ಯಾಂಪೇನ್ ಮಾಡಿದ್ದೆವು. ಆದರೆ, ಈ ಬಾರಿ ಜೆಡಿಎಸ್ ಜೊತೆಗೆ ಮೈತ್ರಿಯ ಮಾತಿಲ್ಲ: ಅಸಾದುದ್ದೀನ್ ಓವೈಸಿ
ವಿಜಯಪುರ(ಅ.26): ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಜೊತೆಗೆ ಮೈತ್ರಿ ಸಾಧ್ಯವೇ ಇಲ್ಲ, ನಾವು ಬಿಜೆಪಿಯ ಬಿ ಟೀಂ ಕೂಡ ಅಲ್ಲ ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ. ನಗರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆಗೆ ಮಾತನಾಡಿ, ಕಳೆದ ಬಾರಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪರ ಕೇವಲ ಕ್ಯಾಂಪೇನ್ ಮಾಡಿದ್ದೆವು. ಆದರೆ, ಈ ಬಾರಿ ಜೆಡಿಎಸ್ ಜೊತೆಗೆ ಮೈತ್ರಿಯ ಮಾತಿಲ್ಲ. ಮುಂಬರುವ ಚುನಾವಣೆಯಲ್ಲಿ ಎಐಎಂಐಎಂ ಪಕ್ಷ ಸ್ವತಂತ್ರವಾಗಿ ಕಣಕ್ಕಿಳಿಯಲಿದೆ. ನಾವು ನಮ್ಮ ಕೆಲಸ ಮಾಡುತ್ತೇವೆ, ಜೆಡಿಎಸ್‌ನವರು ಅವರ ಕೆಲಸ ಮಾಡಲಿ ಎಂದರು.
ಇದೇ ವೇಳೆ ಎಐಎಂಐಎಂ ‘ಬಿಜೆಪಿಯ ಬಿಟೀಂ’ ಎಂಬ ಕಾಂಗ್ರೆಸ್ ಟೀಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಓವೈಸಿ, ನಾವು ಬಿಜೆಪಿ ಬಿ ಟೀಂ ಅಲ್ಲ. ಕಾಂಗ್ರೆಸ್ಸಿನ ಸದ್ಯದ ಪರಿಸ್ಥಿತಿಗೆ ಅವರ ನಾಯಕರೇ ಕಾರಣರು. ಕಾಂಗ್ರೆಸ್ ಸರ್ಟಿಫಿಕೆಟ್ ಬೇಕಾಗಿಲ್ಲ ಎಂದರು.
AIMIM ಸದಸ್ಯತ್ವ ಹೆಚ್ಚಿಸಿಕೊಳ್ಳಲು Owaisi ಪಕ್ಷದಿಂದ Biryani ಆಫರ್!
ಗಡ್ಡ, ಟೋಪಿಗೂ ತೊಂದರೆ: ಬಿಜೆಪಿಯಿಂದ ಮುಸ್ಲಿಮರ ಗಡ್ಡ, ಟೋಪಿ ಹಾಗೂ ಊಟಕ್ಕೂ ತೊಂದರೆ ಇದೆ. ಅಸಲಿಗೆ ಬಿಜೆಪಿಯು ಮುಸ್ಲಿಮರ ವಿರೋಧಿಯಾಗಿದೆ. ನಮ್ಮ ಹಲಾಲ್ ಮಾಂಸವನ್ನು ಬಿಜೆಪಿ ಕೆಟ್ಟದಾಗಿ ನೋಡುತ್ತದೆ ಎಂದರು. ಪದೇ ಪದೇ ಪಾಕಿಸ್ತಾನ ಹೆಸರು ಹೇಳಬೇಕು ಎಂದು ಪ್ರಧಾನಿ ಮೋದಿ ಅವರು ಶಾಸಕ ಯತ್ನಾಳರಿಗೆ ಹೇಳಿಕೊಟ್ಟಿರಬಹುದು. ಅದಕ್ಕಾಗಿಯೇ ಅವರು ಪದೇ ಪದೆ ಪಾಕಿಸ್ತಾನ ಹೆಸರು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ಸರ್ಕಾರದಲ್ಲಿ ಕಮಿಷನ್ ದಂಧೆ ನಡೆದಿದೆ. ಈ ಭ್ರಷ್ಟಾಚಾರದ ಬಗ್ಗೆ ಶಾಸಕ ಯತ್ನಾಳ ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ನಾವು ಪಾಕಿಸ್ತಾನ ಹೆಸರು ಕೂಡ ಹೇಳುವುದಿಲ್ಲ. ಆದರೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪದೇ ಪದೆ ಪಾಕಿಸ್ತಾನದ ಹೆಸರು ಉಲ್ಲೇಖಿಸುತ್ತಾರೆ. ಪಾಕಿಸ್ತಾನ ಮೇಲೆ ಅವರಿಗೆ ಪ್ರೀತಿ ಇದೆ. ಯಾಕೆ ಅಷ್ಟೊಂದು ಪ್ರೀತಿ ಎಂಬುದು ಅವರಿಗೇ ಗೊತ್ತು ಎಂದು ವಾಗ್ದಾಳಿ ನಡೆಸಿದರು.