ಒಳ ಒಪ್ಪಂದ ಮಾಡಿಕೊಳ್ಳುವಂತಿದ್ದರೆ ಡಿ.ಕೆ.ಶಿವಕುಮಾರ್‌ ಎದುರು ಅಶೋಕ್‌ ಅವರನ್ನು, ಸಿದ್ದರಾಮಯ್ಯ ವಿರುದ್ಧ ಸೋಮಣ್ಣ ಅವರನ್ನು ಏಕೆ ನಿಲ್ಲಿಸುತ್ತಿದ್ದೆವು? ಚುನಾವಣೆ ಸಂದರ್ಭದಲ್ಲಿ ಯಾವ ರೀತಿಯ ಹೋರಾಟ ಮಾಡಬೇಕಿತ್ತೋ ಅದನ್ನು ಮಾಡಿದ್ದೇವೆ: ಕಟೀಲ್‌

ಬಳ್ಳಾರಿ(ಜೂ.25): ರಾಜ್ಯ ವಿಧಾನಸಭಾ ಚುನಾವಣೆ ವೇಳೆ ಯಾವುದೇ ಒಳ ಒಪ್ಪಂದಗಳಾಗಿಲ್ಲ. ಈ ಕುರಿತು ಹೇಳಿಕೆ ನೀಡಿದವರನ್ನು ಕರೆದು ವಿವರಣೆ ಕೇಳಿದ್ದೇವೆ. ಅವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಬಿಜೆಪಿಯ ಕೆಲ ನಾಯಕರ ಹೊಂದಾಣಿಕೆ ರಾಜಕೀಯದಿಂದ ಚುನಾವಣೆಯಲ್ಲಿ ಸೋಲಾಯಿತು ಎಂಬ ಸಂಸದ ಪ್ರತಾಪ ಸಿಂಹ, ಸಿ.ಟಿ.ರವಿ, ಸುನೀಲ್‌ ಕುಮಾರ್‌ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಒಳ ಒಪ್ಪಂದ ಮಾಡಿಕೊಳ್ಳುವಂತಿದ್ದರೆ ಡಿ.ಕೆ.ಶಿವಕುಮಾರ್‌ ಎದುರು ಅಶೋಕ್‌ ಅವರನ್ನು, ಸಿದ್ದರಾಮಯ್ಯ ವಿರುದ್ಧ ಸೋಮಣ್ಣ ಅವರನ್ನು ಏಕೆ ನಿಲ್ಲಿಸುತ್ತಿದ್ದೆವು? ಚುನಾವಣೆ ಸಂದರ್ಭದಲ್ಲಿ ಯಾವ ರೀತಿಯ ಹೋರಾಟ ಮಾಡಬೇಕಿತ್ತೋ ಅದನ್ನು ಮಾಡಿದ್ದೇವೆ. ಚುನಾವಣೆಯಲ್ಲಿ ಸೋಲು-ಗೆಲುವು ಇರುತ್ತದೆ. ಒಂದೊಂದು ಚುನಾವಣೆಯಲ್ಲಿ ಫಲಿತಾಂಶಗಳು ಒಂದೊಂದು ರೀತಿಯಲ್ಲಿ ಬರುತ್ತವೆ ಎಂದರು.

ನಳಿನ್‌ ಕುಮಾರ್‌ ಕಟೀಲ್‌ ಮನೆಗೆ ಮಾರಿ, ಪರರಿಗೆ ಉಪಕಾರಿ: ಸಚಿವ ದಿನೇಶ್‌ ಗುಂಡೂರಾವ್‌

ಲಿಂಗಾಯತ ಸಿಎಂಗೆ ಮತ್ತೆ ಬಿಜೆಪಿ ಬರಬೇಕು:

ಬಿಜೆಪಿ ಯಾವತ್ತೂ ಲಿಂಗಾಯಿತರನ್ನು ಕಡೆಗಣಿಸಿಲ್ಲ. ಲಿಂಗಾಯತ ನಾಯಕರಾದ ಯಡಿಯೂರಪ್ಪ ನೇತೃತ್ವದಲ್ಲಿಯೇ ಚುನಾವಣೆ ಎದುರಿಸಿದ್ದೇವೆ. ಬಿಎಸ್‌ವೈ ಹಾಗೂ ಬೊಮ್ಮಾಯಿ ಲಿಂಗಾಯತರು. ಲಿಂಗಾಯತರ ಬಗ್ಗೆ ನಮಗೆ ಅಪಾರ ಗೌರವವಿದೆ. ಬಿಜೆಪಿ ಮೂವರು ಲಿಂಗಾಯತರನ್ನು ಮುಖ್ಯಮಂತ್ರಿ ಮಾಡಿದೆ. ರಾಜ್ಯದಲ್ಲಿ ಮತ್ತೆ ಲಿಂಗಾಯತರು ಮುಖ್ಯಮಂತ್ರಿಯಾಗಬೇಕಾದರೆ ಬಿಜೆಪಿ ಸರ್ಕಾರವೇ ಅಧಿಕಾರಕ್ಕೆ ಬರಬೇಕು ಎಂದರು.

ಸೋಮಣ್ಣ ಅಧ್ಯಕ್ಷ ಸ್ಥಾನ ಕೇಳಿದ್ದು ತಪ್ಪಲ್ಲ

ಮಾಜಿ ಸಚಿವ ಸೋಮಣ್ಣ ಅವರು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಹಾಲಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಅವರು ಆಕಾಂಕ್ಷಿಯಾಗಿರುವುದರಲ್ಲಿ ತಪ್ಪಿಲ್ಲ. ಈ ಬಗ್ಗೆ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಪಕ್ಷದ ವರಿಷ್ಠರು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.