ದಾಂಪತ್ಯಕ್ಕೆ ಕಾಲಿಡುವುದರ ಜತೆಗೆ ನಿಖಿಲ್ ಹೊಸ ರಾಜಕೀಯ ಜೀವನ ಆರಂಭ
ನಿಖಿಲ್ ಕುಮಾರಸ್ವಾಮಿ ಅವರು ಸದ್ಯ ಮದ್ವೆ ಖುಷಿಯಲ್ಲಿದ್ದು, ದಾಂಪತ್ಯ ಜೀವನಕ್ಕೆ ಕಾಲಿಡುವುದರ ಜತೆಗೆ ಹೊಸ ರಾಜಕೀಯ ಜೀವನವನ್ನ ಆರಂಭಿಸಲಿದ್ದಾರೆ. ಹೀಗಂತ ಸ್ವತಃ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಭವಿಷ್ಯ ನುಡಿದಿದ್ದಾರೆ. ಹಾಗಾದ್ರೆ, ಮಂಡ್ಯದಿಂದ ಶಿಫ್ಟ್ ಆಗಲಿರುವ ನಿಖಿಲ್ ಕುಮಾರಸ್ವಾಮಿಯ ಮುಂದಿನ ರಾಜಕೀಯ ನಿಲ್ದಾಣ ಯಾವುದು..?
ರಾಮನಗರ, [ಮಾ.03]: ಸದ್ಯ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ಮದುವೆಯ ಖುಷಿಯಲ್ಲಿದ್ದಾರೆ. ಇದರ ಮಧ್ಯೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ನಿಖಿಲ್ ಕುಮಾರಸ್ವಾಮಿಯ ಮುಂದಿನ ರಾಜಕೀಯ ಭವಿಷ್ಯವನ್ನ ಹೇಳಿದ್ದಾರೆ.
ಇಂದು [ಮಂಗಳವಾರ] ರಾಮನಗರದಲ್ಲಿ ನಿಖಿಲ್-ರೇವತಿ ಮದುವೆ ಸ್ಥಳ ವೀಕ್ಷಣೆ ಬಳಿಕ ಮಾತನಾಡಿದ ದೇವೇಗೌಡ್ರು, ಮಂಡ್ಯ ಲೋಕಸಭಾ ಚುನಾವಣೆ ಸೋಲಿನ ಕಹಿ ಬಳಿಕ ನಿಖಿಲ್ ಕುಮಾರಸ್ವಾಮಿ ರಾಜಕೀಯ ಭವಿಷ್ಯ ಈಗ ಮದುವೆ ಮೂಲಕ ರಾಮನಗರ ಕ್ಷೇತ್ರದಿಂದ ಪುನರ್ ಆರಂಭವಾಗಲಿದೆ ಭವಿಷ್ಯ ನುಡಿದರು.
ನಿಖಿಲ್ ಮದುವೆ ಸ್ಥಳದಲ್ಲಿ ವಾಸ್ತು ಪ್ರಕಾರ ಮಂಟಪ
ಹಾಸನದಲ್ಲಿ ರೇವಣ್ಣ ಬಳಿಕ ಪ್ರಜ್ವಲ್ ರೇವಣ್ಣ ರಾಜಕೀಯ ನೆಲೆ ಕಂಡುಕೊಂಡರು. ರಾಮನಗರ ನನಗೆ ಹಾಗೂ ಕುಮಾರಸ್ವಾಮಿಗೆ ಕರ್ಮಭೂಮಿ ಆಯಿತು. ಈಗ ಇದೇ ಭೂಮಿ ನಿಖಿಲ್ಗೆ ರಾಜಕೀಯ ನೆಲೆ ನೀಡುವ ಭರವಸೆ ಇದೆ ಎಂದು ತಮ್ಮ ಮನದ ಮಾತುಗಳನ್ನ ಹೊರಹಾಕಿದರು.
ನಿಖಿಲ್ ರಾಜಕೀಯದಲ್ಲಿ ದೈವದ ಆಟ ನಡೆಯಿತು. ಅವನ ರಾಜಕೀಯ ಮಂಡ್ಯದಿಂದ ಆರಂಭಿಸಬೇಕು ಎಂಬ ಉದ್ದೇಶವಿರಲಿಲ್ಲ. ಆಕಸ್ಮಿಕವಾಗಿ ಆತ ಅಲ್ಲಿ ನಿಂತ. ಮತ್ತೆ ಈಗ ಆ ತಪ್ಪು ಮಾಡುವುದಿಲ್ಲ. ಮಂಡ್ಯದಲ್ಲಿ ನಾವು ಪಕ್ಷವನ್ನು ಮಾತ್ರ ಕಟ್ಟುತ್ತೇವೆ. ರಾಮನಗರದಿಂದಲೇ ಹೊಸದಾಗಿ ಆತ ವೈವಾಹಿಕ ಜೀವನದ ಜೊತೆ ರಾಜಕೀಯ ಭವಿಷ್ಯ ಉದಯವಾಗಲಿದೆ ಎಂದು ಹೇಳಿದರು.
ಮಗನ ಮದುವೆ ಬಗ್ಗೆ ನನ್ನದೊಂದು ಕನಸಿದೆ: ಕುಮಾರಸ್ವಾಮಿ
ರಾಮನಗರ ನನಗೆ, ಕುಮಾರಸ್ವಾಮಿಗೆ ರಾಜಕೀಯ ಶಕ್ತಿಕೊಟ್ಟ ಸ್ಥಳ. ಇಲ್ಲಿಂದಲೇ ನಾನು ಸಿಎಂ ಆಗಿ ಪ್ರಧಾನಿಯಾದೆ. ನಮ್ಮ ವಂಶಕ್ಕೆ ರಾಜಕೀಯದಲ್ಲಿ 2ನೇ ಶಕ್ತಿ ಕೊಟ್ಟ ಸ್ಥಳವಿದು. ಇಲ್ಲಿಂದಲೇ ನಿಖಿಲ್ ಕೂಡ ರಾಜಕೀಯವಾಗಿ ಬೆಳೆಯಬೇಕು ಎಂಬುದು ನಮ್ಮ ಉದ್ದೇಶ ಎಂದರು.
ಒಟ್ಟಿನಲ್ಲಿ 2019ರ ಲೋಕಸಭೆ ಚುನಾವಣೆಯಲ್ಲಿ ಸೋಲಿನ ಬಳಿಕ ಇದೀಗ ಮಂಡ್ಯದಲ್ಲಿ ನಮಗೆ ನೆಲೆ ಇಲ್ಲ ಎನ್ನುವುದನ್ನ ದೇವೇಗೌಡರಿಗೆ ಸಿಕ್ಸ್ ಸೆನ್ಸ್ ಹೇಳಿದಂತಿದೆ. ಈ ಹಿನ್ನೆಲೆಯಲ್ಲಿ ಮೊಮ್ಮಗ ನಿಖಿಲ್ ಕುಮಾರಸ್ವಾಮಿಯನ್ನ ರಾಮನಗರಕ್ಕೆ ಶಿಫ್ಟ್ ಮಾಡುತ್ತಿದ್ದಾರೆ.
ಇದೀಗ ರಾಮನಗರದಲ್ಲಿ ಮದುವೆ ಮಾಡುವ ಮೂಲಕ ಮಗನ ರಾಜಕೀಯ ಭವಿಷ್ಯಕ್ಕೆ ಕುಮಾರಸ್ವಾಮಿ ಮತ್ತು ದೇವೇಗೌಡ್ರು ಭದ್ರ ಬುನಾದಿ ಹಾಕುತ್ತಿದ್ದಾರೆ ಎನ್ನುವುದು ಈಗ ಖಾತರಿ ಆದಂತಾಯ್ತು.