ದೊಡ್ಡಕುರಬರಹಳ್ಳಿ ಶ್ರೀ ಬಿಸಿಲು ಮಾರಮ್ಮ ದೇವಸ್ಥಾನಕ್ಕೆ ನಿಖಿಲ್ ಕುಮಾರಸ್ವಾಮಿ ಭೇಟಿ ನೀಡುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಕಾಂಗ್ರೆಸ್ ಸರ್ಕಾರ ಉದ್ದೇಶಪೂರ್ವಕವಾಗಿ ವಿದ್ಯುತ್ ಕಡಿತ ಮಾಡಿದೆ ಎಂದು ಜೆಡಿಎಸ್ ಆರೋಪಿಸಿದೆ.

ರಾಮನಗರ (ನ.29): ಈ ಮೊದಲು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ(Nikhil Kumaraswamy, State President of the JDS Youth Wing) ಬರುತ್ತಾರೆಂಬ ಕಾರಣಕ್ಕೆ ದೇವಸ್ಥಾನಕ್ಕೆ ಬೀಗ ಹಾಕಿದ್ದರು. ಅದರೆ ಇಂದು ನ.29 ಮತ್ತೆ ಗ್ರಾಮಕ್ಕೆ ನಿಖಿಲ್ ಭೇಟಿ ನೀಡುತ್ತಿರುವುದರಿಂದ ವಿದ್ಯುತ್ ಕಡಿತ ಮಾಡಿದ್ದಾರೆ. ಇದು ಕಾಂಗ್ರೆಸ್‌ನ ಹಿಂದೂ ವಿರೋಧಿ ಧೋರಣೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಜಯಮುತ್ತು ವಾಗ್ದಾಳಿ ನಡೆಸಿದರು.

ಇಂದು ಬಿಸಿಲು ಮಾರಮ್ಮ ದೇವಸ್ಥಾನಕ್ಕೆ ನಿಖಿಲ್ ಕುಮಾರಸ್ವಾಮಿ ಭೇಟಿ

ನಗರದ ಜೆಡಿಎಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾರೋಹಳ್ಳಿ ತಾಲೂಕು ದೊಡ್ಡಕುರಬರಹಳ್ಳಿ ಶ್ರೀ ಬಿಸಿಲು ಮಾರಮ್ಮ ದೇವಸ್ಥಾನಕ್ಕೆ ನಿಖಿಲ್ ಕುಮಾರಸ್ವಾಮಿ ಅವರ ಭೇಟಿಗೆ ಅಡ್ಡಿಪಡಿಸಲು ಕಾಂಗ್ರೆಸ್ ಸರ್ಕಾರ(Congress government) ಮತ್ತು ಸ್ಥಳೀಯ ಶಾಸಕರು ವಿದ್ಯುತ್ ಕಡಿತಗೊಳಿಸಲು ಮುಂದಾಗಿದ್ದಾರೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ನಿರ್ವಹಣಾ ಕಾಮಗಾರಿ’ ಎಂಬ ನೆಪವೊಡ್ಡಿ ವಿದ್ಯುತ್ ಕಟ್?

ನ.29ರಂದು ಬೆಳಗ್ಗೆ 11:30 ಗಂಟೆಗೆ ನಿಖಿಲ್ ಕುಮಾರಸ್ವಾಮಿ ಅವರು ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ. ಆದರೆ, ಈ ಕಾರ್ಯಕ್ರಮಕ್ಕೆ ಹೇಗಾದರೂ ಮಾಡಿ ಅಡ್ಡಿಪಡಿಸಬೇಕೆಂಬ ದುರುದ್ದೇಶದಿಂದ, ಭಾನುವಾರ 10 ರಿಂದ ಸಂಜೆ 5 ಗಂಟೆಯವರೆಗೆ ‘ನಿರ್ವಹಣಾ ಕಾಮಗಾರಿ’ ಎಂಬ ನೆಪವೊಡ್ಡಿ ಇದೇ ಭಾಗದಲ್ಲಿ ಉದ್ದೇಶಪೂರ್ವಕವಾಗಿ ವಿದ್ಯುತ್ ಕಡಿತ ಮಾಡಲಾಗುತ್ತಿದೆ ಎಂದು ದೂರಿದರು.

ಕಳೆದ ನ.14ರಂದು ದೇವಸ್ಥಾನಕ್ಕೆ ದರ್ಶನಕ್ಕೆ ತೆರಳಿದ್ದ ನಿಖಿಲ್ ಕುಮಾರಸ್ವಾಮಿ ಅವರನ್ನು, ಕಾಂಗ್ರೆಸ್ ಕಾರ್ಯಕರ್ತರು ದೇವಸ್ಥಾನದ ಬಾಗಿಲಿಗೆ ಬೀಗ ಹಾಕಿ ತಡೆದಿದ್ದ ಘಟನೆ ಇಡೀ ರಾಜ್ಯಾದ್ಯಂತ ತೀವ್ರ ಚರ್ಚೆ ಹಾಗೂ ಆಕ್ರೋಶಕ್ಕೆ ಕಾರಣವಾಗಿತ್ತು.