ಮಂಡ್ಯ, (ಫೆ.26): ಜೆಡಿಎಸ್ ಭದ್ರಕೋಟೆ ಮಂಡ್ಯದಿಂದ ದೇವೇಗೌಡರ ಮತ್ತೊಬ್ಬ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸುತ್ತಾರೆ ಅನ್ನೋ ಮಾತುಗಳು ಬಲವಾಗಿ ಕೇಳಿ ಬರುತ್ತಿವೆ.

ಸಮಲತಾ ಅಂಬರೀಶ್ ಅವರು ಕಾಂಗ್ರೆಸ್‌ನಿಂದ ಮಂಡ್ಯ ಚುನಾವಣೆ ಅಖಾಡಕ್ಕಿಳಿಯುವ ಇಂಗಿತ ವ್ಯಕ್ತಪಡಿಸಿದ್ದರು. ಆದ್ರೆ, ನಿನ್ನೆ (ಸೋಮವಾರ) ಡಿಕೆಶಿ ಹೇಳಿಕೆ ಗಮನಿಸಿದ್ರೆ ಮಂಡ್ಯ ಜೆಡಿಎಸ್ ಪಾಲಾಗಿದೆ.

ಮಂಡ್ಯ ಮ್ಯಾಚ್ ಫಿಕ್ಸ್, ಸುಮಲತಾ ಅಂಬರೀಶ್‌ಗೆ ಟಿಕೇಟ್ ಇಲ್ಲ, ಡಿಕೆಶಿ ಸುಳಿವು..!

ಸಿಎಂ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಲು ಜೆಡಿಎಸ್ ನಾಯಕರು ತೆರೆಮರೆಯ ಕಸರತ್ತು ನಡೆಸಿದ್ದಾರೆ.

ಇನ್ನು ಈ ಬಗ್ಗೆ ಮಂಡ್ಯದಲ್ಲಿ ಪ್ರತಿಕ್ರಿಯಸಿದ ನಿಖಿಲ್​ ಕುಮಾರ್​, ಜಿಲ್ಲೆಯ ಜನರ ಭಾವನೆಗಳನ್ನು ಅರ್ಥೈಸಿಕೊಂಡು ಇಲ್ಲಿನ ಶಾಸಕರು, ಸಂಸದರು ಹಾಗೂ ಸ್ಥಳೀಯ ಮುಖಂಡರ ಅಭಿಪ್ರಾಯ ಪಡೆದು, ನಂತರ ನಮ್ಮ ಪಕ್ಷದ ನಾಯಕರು  ಲೋಕಸಭೆ ಅಭ್ಯರ್ಥಿಯನ್ನು ಘೋಷಣೆ  ಮಾಡುತ್ತಾರೆ ಎಂದು ಪರೋಕ್ಷವಾಗಿ ಚುನಾವಣಾ ಅಖಾಡಕ್ಕಿಳಿಯುವ ಮುನ್ಸೂಚನೆ ನೀಡಿದರು.

ಈಗಾಗಲೇ ಸ್ಥಳೀಯ ಜೆಡಿಎಸ್ ಮುಖಂಡರು ನಿಖಿಲ್​​ರನ್ನೇ ಅಭ್ಯರ್ಥಿ ಮಾಡಬೇಕೆಂದು ಒತ್ತಡ ಹೇರುತ್ತಿದ್ದಾರೆ. ಹಾಗಾಗಿ, ಪಕ್ಷ ಯಾವುದೇ ತೀರ್ಮಾನ ಕೈಗೊಂಡರೂ ನಾನು ಬದ್ಧನಾಗಿರುತ್ತೇನೆ. 

ನಿಖಿಲ್ ಕುಮಾರ್ ರಾಜಕೀಯ ಪ್ರವೇಶದ ಕುರಿತು ಶಾಸಕಿ ಅನಿತಾ ಕುಮಾರಸ್ವಾಮಿ ಹರಕೆ ಹೊತ್ತ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಅಮ್ಮನಿಗೆ ದೇವರನ್ನ ಕಂಡರೆ ಬಹಳ ಭಕ್ತಿ. ದೇವಸ್ಥಾನಕ್ಕೆ ಹೋಗುವ ಬಗ್ಗೆ ನನಗೆ ಹೇಳಿದ್ದರು. ಮಗನಿಗೆ ಒಳ್ಳೆಯದಾಗಲಿ ಎಂದು ಹರಕೆ ಕಟ್ಟಿಕೊಂಡಿದ್ದಾರೆ ಎಂದು ತಿಳಿಸಿದರು.

ಡಿಕೆಶಿ ಆ ಮಾತು ಹಾಗೂ ಅನಿತಾ ಕುಮಾರಸ್ವಾಮಿ ದೇವರ ಮೊರೆ ಹೋಗಿರುವುದನ್ನು ನೋಡಿದ್ರೆ ನಿಖಿಲ್ ಕುಮಾರಸ್ವಾಮಿ ಅವರಿಗೆ ಮಂಡ್ಯ ಟಿಕೇಟ್ ಸಿಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ದೇವರ ಮೊರೆ ಹೋದ ಅನಿತಾ ಕುಮಾರಸ್ವಾಮಿ
ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಿಂದ ನಿಖಿಲ್​ ​ಕುಮಾರಸ್ವಾಮಿಗೆ ಟಿಕೆಟ್​​ ಸಿಗಲಿ, ಚುನಾವಣೆಯಲ್ಲಿ ಗೆಲುವು ಸಾಧಿಸಲಿ ಎಂದು ಪುತ್ರನಿಗಾಗಿ ನಾಲ್ಕಾಣೆ ಹರಕೆಯನ್ನು ಶಾಸಕಿ ಅನಿತಾ ಕುಮಾರಸ್ವಾಮಿ ಕಟ್ಟಿದ್ದಾರೆ.

ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣದ ಹೊರ ವಲಯದಲ್ಲಿರುವ ಹೊಳೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಹರಕೆ ಹೊತ್ತು, ಅನಿತಾ ಕುಮಾರಸ್ವಾಮಿ ವಿಶೇಷ ಪೂಜೆ ಸಲ್ಲಿಸಿದರು.