ಬೆಂಗಳೂರು, (ಫೆ.25): ಮಂಡ್ಯ ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್ ತನ್ನ ಮಿತ್ರ ಪಕ್ಷ ಜೆಡಿಎಸ್‌ಗೆ ಬಿಟ್ಟುಕೊಡುವುದು ಪಕ್ಕಾ ಆಗಿದೆ. ಈ ಬಗ್ಗೆ ಸ್ವತಃ ಸಚಿವ ಡಿ.ಕೆ.ಶಿವಕುಮಾರ್ ಸುಳಿವು ನೀಡಿದ್ದಾರೆ. 

ಈ ಮೂಲಕ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಹಿಂಗಿತ ವ್ಯಕ್ತಪಡಿಸಿದ್ದ ಸುಮಲತಾ ಅಂಬರೀಶ್ ಅವರಿಗೆ ನಿರಾಸೆಯಾಗಿದೆ. 

 ಮಂಡ್ಯದಿಂದ ಸ್ಪರ್ಧೆ ಘೋಷಿಸಿದ ಸುಮಲತಾ ಅಂಬರೀಶ್

ಮಂಡ್ಯದಲ್ಲಿ ಸುಮಲತಾ ಅಂಬರೀಶ್​ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಸಚಿವ ಡಿ.ಕೆ.ಶಿವಕುಮಾರ್, ಈಗಾಗಲೇ ಮಂಡ್ಯದಲ್ಲಿ ಬೇರೆ ನಿರ್ಧಾರ ಮಾಡಲಾಗಿದೆ. 

ಆದ್ರೆ ಮಂಡ್ಯದ ಕೆಲ ಕಾರ್ಯಕರ್ತರು ಸುಮಲತಾರನ್ನ ಒತ್ತಾಯಿಸಿದ್ದಾರೆ. ನಾವು ಸುಮಲತಾ ಅವರ ಮನವೊಲಿಸುವ ಕೆಲಸ ಮಾಡುತ್ತೇವೆ.  ಕಾರ್ಯಕರ್ತರಿಗೂ ತಿಳಿಸಿ ಹೇಳುತ್ತೇವೆ. ಸುಮಲತಾ ಅವರಿಗೂ ಪರಿಸ್ಥಿತಿ ವಿವರಿಸಿದ್ದೇವೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. 

ಮಂಡ್ಯ ಸೀಟು ಸಮರ ತಾರಕಕ್ಕೆ; ಜೆಡಿಎಸ್‌ಗೆ ಅಂಬೀ ಫ್ಯಾನ್ಸ್ ಸವಾಲ್!

ಸುಮಲತಾ ರಾಜಕೀಯಕ್ಕೆ ಬರುವುದಾದರೆ ಬರಲಿ. ಬೇರೆ ರೀತಿಯಲ್ಲಿ ಸಾಕಷ್ಟು ಅವಕಾಶಗಳಿದ್ದು, ನಾವೆಲ್ಲ ಅವರಿಗೆ ಸಹಕಾರ ಕೊಡುತ್ತೇವೆ ಎಂದು ಹೇಳಿದರು.

ಡಿಕೆಶಿ ಈ ಮಾತಿನ ಅರ್ಥ ನೋಡಿದ್ರೆ, ಮಂಡ್ಯ ಕ್ಷೇತ್ರ ಜೆಡಿಎಸ್‌ಗೆ ಬಿಟ್ಟುಕೊಡಲಾಗಿದೆ ಎಂದು ಮೇಲ್ನೋಟಕ್ಕೆ ಸ್ಪಷ್ಟವಾಗಿ ತಿಳಿಯುತ್ತೆ.

ಮಂಡ್ಯದಿಂದ ಅದೂ ಕಾಂಗ್ರೆಸ್ ಪಕ್ಷದಿಂದ ರಾಜಕೀಯಕ್ಕೆ ಎಂಟ್ರಿಕೊಡಬೇಕೆಂದು ಸುಮಲತಾ ಅಂಬರೀಶ್ ಅವರು ಇಂಗಿತ ವ್ಯಕ್ತಪಡಿಸಿದ್ದರು. ಆದ್ರೆ ಡಿ.ಕೆ.ಶಿವಕುಮಾರ್ ಅವರ ಈ ಹೇಳಿಕೆ ಸುಮಲತಾ ಅವರಿಗೆ ಟಿಕೇಟ್ ಕೈತಪ್ಪುವುದು ಸ್ಪಷ್ಟವಾಗಿದೆ.

ಒಂದು ವೇಳೆ ಜೆಡಿಎಸ್ ಪಾಲಾದ್ರೆ ಮಂಡ್ಯದಿಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸುವ ಸಾಧ್ಯತೆಗಳು ಹೆಚ್ಚಿವೆ.

ಮಂಡ್ಯ ಕ್ಷೇತ್ರ ಅಂಬರೀಶ್ ಅಭಿಮಾನಿ ಹಾಗೂ ಜೆಡಿಎಸ್‌ಗೆ ಪ್ರತಿಷ್ಠೆಯಾಗಿದ್ದರಿಂದ ಸುಮಲತಾ ಅಂಬರೀಶ್ ಅವರು ಕೊನೆಗಳಿಗೆಯಲ್ಲಿ ಸ್ವತಂತ್ರವಾಗಿ ಅಥವಾ ಬಿಜೆಪಿಯಿಂದ ಸ್ಪರ್ಧಿಸಿದರೂ ಆಶ್ಚರ್ಯ ಪಡಬೇಕಿಲ್ಲ.